ಸಭಾತ್ಯಾಗ ಮಾಡಿದ ಪಾಲಿಕೆ ಆಯುಕ್ತ!

7
ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರಕ್ಕೆ ಕುಮ್ಮಕ್ಕು, ಮೊಬೈಲ್‌ನಲ್ಲಿ ಕಲಾಪ ರೆಕಾರ್ಡ್‌ ಮಾಡಿದ ಆರೋಪ

ಸಭಾತ್ಯಾಗ ಮಾಡಿದ ಪಾಲಿಕೆ ಆಯುಕ್ತ!

Published:
Updated:
ಸಭಾತ್ಯಾಗ ಮಾಡಿದ ಪಾಲಿಕೆ ಆಯುಕ್ತ!

ಹುಬ್ಬಳ್ಳಿ: ಗುತ್ತಿಗೆ ಪೌರಕಾರ್ಮಿಕರನ್ನು ತಮ್ಮ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆಂದು ಪಾಲಿಕೆ ಆಯುಕ್ತ ಮೇಜರ್‌ ಸಿದ್ಧಲಿಂಗಯ್ಯ ಹಿರೇಮಠ ವಿರುದ್ಧ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಸಾಮಾನ್ಯ ಸಭೆಯಲ್ಲಿ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದರು. ಇದರಿಂದ ಬೇಸತ್ತ ಆಯುಕ್ತರು ತಮಗೆ ಅವಮಾನವಾಗಿದೆ ಎಂದು ಹೇಳಿ ಸಭೆಯಿಂದ ಹೊರ ನಡೆದರು.

ಇತ್ತೀಚೆಗೆ ಆಯುಕ್ತರು ವರ್ಗವಾಗಿದ್ದು, ಇದು ಅವರ ಕೊನೆ ಸಭೆ ಕೂಡ ಆಗಿತ್ತು. ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕರ್ತವ್ಯದ ಮೇಲೆ ಇದ್ದ ಆಯುಕ್ತರನ್ನು ಸಭೆಗೆ ಬಲವಂತದಿಂದ ಕರೆಸಿಕೊಂಡ ಪಾಲಿಕೆ ಸದಸ್ಯರು, ಒಬ್ಬರ ನಂತರ ಮತ್ತೊಬ್ಬರು ಟೀಕಾಸ್ತ್ರ ಬಿಟ್ಟರು.

ಗುತ್ತಿಗೆ ಪೌರ ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೂರು ದಿನಗಳಿಂದ ಪಾಲಿಕೆ ಕಚೇರಿ ಮುಂದೆ ಮುಷ್ಕರ ನಡೆಸುತ್ತಿದ್ದಾರೆ. ಈ ಕುರಿತು ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಡಾ.ಪಾಂಡುರಂಗ ಪಾಟೀಲ, ‘ಇದಕ್ಕೆಲ್ಲ ಆಯುಕ್ತರೇ ಹೊಣೆ. ಅವರ ಕುಮ್ಮಕ್ಕಿಲ್ಲದೆ ಇದೆಲ್ಲ ನಡೆಯುವುದಿಲ್ಲ’ ಎಂದು ನೇರ ಆರೋಪ ಮಾಡಿದರು.

ಇಷ್ಟೇ ಅಲ್ಲದೇ, ‘ಆಯುಕ್ತರು ತಮ್ಮ ಮೊಬೈಲ್‌ ಪೋನ್‌ನಲ್ಲಿ ಕಲಾಪವನ್ನು ರೆಕಾರ್ಡ್‌ ಮಾಡಿ, ಪ್ರತಿಭಟನಾ ನಿರತ ಗುತ್ತಿಗೆ ಪೌರಕಾರ್ಮಿಕರ ಮುಖಂಡರಿಗೆ ರವಾನಿಸುವ ಮೂಲಕ ಸದಸ್ಯರ ವಿರುದ್ಧ ಹೋರಾಟಗಾರರನ್ನು ಎತ್ತಿಕಟ್ಟುತ್ತಿದ್ದಾರೆ’ ಎಂದೂ ಆರೋಪಿಸಿದರು. ಅಲ್ಲದೇ, ಟೇಬಲ್‌ ಮೇಲೆ ಇದ್ದ ಆಯುಕ್ತರ ಮೊಬೈಲ್‌ ಅನ್ನು ಪಾಂಡುರಂಗ ಪಾಟೀಲ ತೆಗೆದುಕೊಂಡು, ಪರಿಶೀಲಿಸಿದರು.

ಸದಸ್ಯರ ಈ ನಡೆಯಿಂದ ಬೇಸತ್ತ ಆಯುಕ್ತರು, ‘ನನಗೆ ಗೌರವ ಸಿಗದ ಈ ಸಭೆಯಲ್ಲಿ ಭಾಗವಹಿಸಲು ಇಷ್ಟವಿಲ್ಲ. ಹೊರ ಹೋಗುತ್ತೇನೆ’ ಎಂದರು. ‘ಕಲಾಪವನ್ನು ನಾನು ರೆಕಾರ್ಡ್‌ ಮಾಡುತ್ತಿದ್ದೇನೆ ಎಂಬ ಸದಸ್ಯರ ಆರೋಪ ಸುಳ್ಳು. ಯಾರು ಬೇಕಾದರೂ ಮೊಬೈಲ್‌ ಪರಿಶೀಲಿಸಬಹುದು. ಅಲ್ಲದೇ, ಸಭಾಂಗಣದಲ್ಲಿ ಎರಡು ಸಿಸಿಟಿವಿ ಕ್ಯಾಮೆರಾ ಇದ್ದು, ಅದನ್ನು ಬೇಕಾದರೆ ಪರಿಶೀಲಿಸಿ’ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಪಾಂಡುರಂಗ ಪಾಟೀಲ ಮತ್ತು ಆಯುಕ್ತರ ನಡುವೆ ಮಾತಿನ ಚಕಮಕಿ ನಡೆಯಿತು. ‘ನನ್ನ ಅನುಮತಿ ಇಲ್ಲದೇ ಪೋನ್‌ ತೆಗೆದುಕೊಳ್ಳಲು ನಿಮಗೆ ಯಾರು ಅಧಿಕಾರ ಕೊಟ್ಟರು’ ಎಂದು ಪಾಟೀಲ ಅವರನ್ನು ಆಯುಕ್ತರು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ, ‘ಹೌದು, ನಿಮ್ಮ ಮೇಲೆ ಅನುಮಾನ ಬಂದ ಕಾರಣ, ಅನುಮತಿ ಇಲ್ಲದೇ ಮೊಬೈಲ್‌ ತೆಗೆದುಕೊಂಡು ಪರಿಶೀಲಿಸಿ

ದ್ದೇನೆ. ಬೇಕಾದರೆ ನನ್ನ ವಿರುದ್ಧ ದೂರು ಕೊಡಿ’ ಎಂದು ಸವಾಲು ಹಾಕಿದರು.

‘ನಿಮ್ಮ ವಿರುದ್ಧ ನಾನು ದೂರು ನೀಡಲಿ ಎಂಬುದು ನಿಮ್ಮ ದಡ್ಡತನ. ಸಭೆಗೆ ಮರ್ಯಾದೆ ಕೊಡದ ನಿಮಗೆ ನಾಚಿಕೆಯಾಗಬೇಕು. ಹಿರಿಯರಾಗಿ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದಿತ್ತು’ ಎಂದು ಆಯುಕ್ತರು ತರಾಟೆಗೆ ತೆಗೆದುಕೊಂಡರು.

ಮೇಯರ್‌ ಸುಧೀರ ಸರಾಫ್‌ ಮತ್ತು ಇತರೆ ಸದಸ್ಯರು ಆಯುಕ್ತ ಮತ್ತು ಪಾಟೀಲ ಅವರನ್ನು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಯಾರ ಮಾತು ಕೇಳದ ಹಿರೇಮಠ ತಮ್ಮ ಜವಾಬ್ದಾರಿಯನ್ನು ಹೆಚ್ಚುವರಿ ಆಯುಕ್ತ ಅಜೀಜ್‌ ದೇಸಾಯಿ ಅವರಿಗೆ ವಹಿಸಿ, ಸಭೆಯಿಂದ ನಿರ್ಗಮಿಸಿದರು.

ಕೋರಂ ಕೊರತೆ: ಬೆಳಿಗ್ಗೆ 11ಕ್ಕೆ ನಿಗದಿಯಾಗಿದ್ದ ಸಾಮಾನ್ಯ ಸಭೆಯು ಕೋರಂ ಕೊರತೆಯಿಂದ 45 ನಿಮಿಷ ತಡವಾಗಿ ಆರಂಭವಾಯಿತು. ಆಯುಕ್ತರು ಹಾಜರಿರಲಿಲ್ಲ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು, ಆಯುಕ್ತರು ಬರುವವರೆಗೂ ಸಭೆ ನಡೆಸುವುದು ಬೇಡ ಎಂದು ಒತ್ತಾಯಿಸಿದ ಕಾರಣ ಮೇಯರ್‌ ಸಭೆಯನ್ನು ಮುಂದೂಡಿದರು.

ಮುಗಿಬಿದ್ದ ಸದಸ್ಯರು: ‘ಪೌರಕಾರ್ಮಿಕರು ಮುಷ್ಕರ ನಡೆಸುತ್ತಿರುವುದರಿಂದ ನಗರದಲ್ಲಿ ಸ್ವಚ್ಛತಾ ಕಾರ್ಯ ಸ್ಥಗಿತಗೊಂಡಿದೆ. ಮುಷ್ಕರ ತಡೆಯಲು ಮುಂಚಿತವಾಗಿ ಏಕೆ ಪ್ರಯತ್ನಿಸಲಿಲ್ಲ. ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ಏಕೆ ಶಿಸ್ತು ಕ್ರಮಕೈಗೊಂಡಿಲ್ಲ. ನಿಮ್ಮ ನಿರ್ಲಕ್ಷ್ಯದಿಂದ ಸಾರ್ವಜನಿಕರು ನಮಗೆ ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಸದಸ್ಯರಾದ ವೀರಣ್ಣ ಸವಡಿ, ಗಣೇಶ ಟಗರಗುಂಟಿ, ಆಲ್ತಾಫ್‌ ಕಿತ್ತೂರ ಅವರು ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ‘ಉಪಾಹಾರ ನೀಡಬೇಕೇ ಅಥವಾ ಭತ್ಯೆ ನೀಡಬೇಕೇ ಎಂಬ ವಿಷಯವಾಗಿ ಪಾಲಿಕೆ ಸಭೆಯು ಸೂಕ್ತ ತೀರ್ಮಾನ ಕೈಗೊಳ್ಳದೇ ದ್ವಂದ್ವನೀತಿ ಅನುಸರಿಸಿದ ಕಾರಣಕ್ಕೆ ಪೌರಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಆದರೆ, ಇದೀಗ ಉಪಾಹಾರ ನೀಡುವ ಸಂಬಂಧ ಟೆಂಡರ್‌ ಕರೆದಿರುವುದರಿಂದ ಸಮಸ್ಯೆ ಇತ್ಯರ್ಥವಾಗಿದೆ’ ಎಂದು ಸ್ಪಷ್ಟಪಡಿಸಿದರು.

‘ಸರ್ಕಾರದ ಆದೇಶದಂತೆ ವೇತನವನ್ನು ನೇರ ಪಾವತಿಸಬೇಕು ಎಂದು ಗುತ್ತಿಗೆ ಪೌರಕಾರ್ಮಿಕರು ಒತ್ತಾಯಿಸುತ್ತಿದ್ದಾರೆ. ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ನಿರ್ಣಯಕೈಗೊಂಡರೆ ಅವರು ಮುಷ್ಕರವನ್ನು ಹಿಂಪಡೆಯಲಿದ್ದಾರೆ’ ಎಂದು ಆಯುಕ್ತರು ಸಭೆಗೆ ತಿಳಿಸಿದರು.

ಆಗ ಮಧ್ಯ ಪ್ರವೇಶಿಸಿದ ಸದಸ್ಯ ಪಾಂಡುರಂಗ ಪಾಟೀಲ, ‘ಉಪಾಹಾರ ಅಥವಾ ಭತ್ಯೆ ನೀಡುವ ವಿಷಯದಲ್ಲಿ ಪಾಲಿಕೆ ಸದಸ್ಯರು ದ್ವಂದ್ವ ನೀತಿ ಅನುಸರಿಸಿದರು ಎಂದರೆ ಏನರ್ಥ. ಪಾಲಿಕೆಯಲ್ಲಿ ಯಾವುದೇ ತೀರ್ಮಾನ ಕೈಗೊಳ್ಳಲು ಸದಸ್ಯರು ಸ್ವತಂತ್ರರಿದ್ದಾರೆ. ಅದನ್ನು ನೀವು ಟೀಕಿಸುವಂತಿಲ್ಲ. ಕೇವಲ ಸಲಹೆ ನೀಡಬಹುದು’ ಎಂದರು.

‘ಗುತ್ತಿಗೆ ಪೌರಕಾರ್ಮಿಕರನ್ನು ಪಾಲಿಕೆ ಸದಸ್ಯರ ವಿರುದ್ಧ ಎತ್ತಿಕಟ್ಟುವ ಹುನ್ನಾರ ನಿಮ್ಮ ಮಾತಿನಲ್ಲಿದೆ. ಅವರು ಮುಷ್ಕರ ನಡೆಸಲು ನೀವೇ ಕಾರಣ’ ಎಂದು ಆರೋಪಿಸಿದರು.

‘ವಿಜಯ ಗುಂಟ್ರಾಳ ಎಂಬುವವರು ಗುತ್ತಿಗೆ ಪೌರಕಾರ್ಮಿಕರ ತಲೆಕೆಡಿಸುವ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರಿಗೆ ಸುಳ್ಳು ಮಾಹಿತಿ ನೀಡಿ, ಪಾಲಿಕೆ ಸದಸ್ಯರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ದಲಿತ ಎಂದು ಹೇಳಿಕೊಂಡು ದಾದಾಗಿರಿ ನಡೆಸುತ್ತಿದ್ದಾರೆ. ಒಬ್ಬ ವ್ಯಕ್ತಿ ಇಡೀ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದು, ಅವರೊಂದಿಗೆ ನೀವು ಕೈಜೋಡಿಸಿದ್ದೀರಿ’ ಎಂದು ಸದಸ್ಯರಾದ ವೀರಣ್ಣ ಸವಡಿ, ಪ್ರಕಾಶ ಕ್ಯಾರಕಟ್ಟಿ, ಗಣೇಶ ಟಗರಗುಂಟಿ ಮತ್ತು ಪಾಂಡುರಂಗ ಪಾಟೀಲ ಆರೋಪಿಸಿದರು.

ಆಕ್ಷೇಪ: ಸಭೆಯ ಆರಂಭದಲ್ಲಿ ಸದಸ್ಯರು ಗಂಭೀರ ಚರ್ಚೆಯಲ್ಲಿ ನಿರತರಾಗಿದ್ದಾಗ ಆಯುಕ್ತರು ಇದನ್ನು ಆಲಿಸದೇ ವಿವಿಧ ಕಡತಗಳಿಗೆ

ಸಹಿ ಮಾಡುತ್ತಿದ್ದದಕ್ಕೆ ಸದಸ್ಯ ವೀರಣ್ಣ ಸವಡಿ, ಗಣೇಶ ಟಗರಗುಂಟಿ ಆಕ್ಷೇಪ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry