ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಮದ್ಯ ಮಾರಾಟ ನಿಷೇಧ ಸಾಧ್ಯವೇ?

ಕೆಡಿಪಿ ಸಭೆಯಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಅಸಹಾಯಕತೆ
Last Updated 24 ಮಾರ್ಚ್ 2018, 11:00 IST
ಅಕ್ಷರ ಗಾತ್ರ

ಹಾಸನ: ಗ್ರಾಮೀಣ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದನ್ನು ಮುಖ್ಯಮಂತ್ರಿ ಅವರೇ ಒಪ್ಪಿಕೊಂಡಿ ದ್ದಾರೆ. ಹೀಗಿರುವಾಗ ಅದರ ಸಂಪೂರ್ಣ ತಡೆ ಹೇಗೆ ಸಾಧ್ಯ ಎಂದು ಅಬಕಾರಿ ಇನ್‌ಸ್ಪೆಕ್ಟರ್ ವನಜಾಕ್ಷಿ ಅಸಹಾಯಕತೆ ವ್ಯಕ್ತಪಡಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷ ಬಿ.ಟಿ.ಸತೀಶ್ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.

ಹೆದ್ದಾರಿಯಿಂದ 200 ಮೀಟರ್ ಒಳಗೆ ಮದ್ಯದಂಗಡಿ ತೆರೆಯಬಾರದು ಎಂಬ ನಿಯಮವಿದೆ. ಆದರೆ, ಗೊರೂರಿನಲ್ಲಿ ರಸ್ತೆಯಿಂದ 150 ಹಾಗೂ 50 ಮೀಟರ್ ದೂರದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ಕೇಳುತ್ತಿದ್ದಾರೆ. ಹೀಗಾಗಿ ಅವರಿಗೆ ಸರ್ಕಾರದ ನಿಯಮದ ಕುರಿತು ಮಾಹಿತಿ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಅಕ್ರಮ ಮದ್ಯ ಮಾರಾಟ ಕುರಿತು ಜನರು ದೂರು ಸಲ್ಲಿಸುತ್ತಾರೆ. ಅಂತಹ ಸಂದರ್ಭದಲ್ಲಿ ಸ್ಥಳ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಸಭೆ ಗಮನಕ್ಕೆ ತಂದರು.

ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಕರ್ತವ್ಯಕ್ಕೆ ಹಾಜರಾಗದ ವೈದ್ಯರನ್ನು ಪ್ರಶ್ನಿಸಿದರೆ ಕೆಲಸ ಬಿಟ್ಟು ಹೋಗುತ್ತೇವೆ ಎಂಬ ಉತ್ತರ ನೀಡುತ್ತಾರೆ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಎಚ್.ಜಿ.ಮಂಜುನಾಥ್, ‘ಗೈರು ಹಾಜರಾಗುವ ವೈದ್ಯರಿಗೆ ಕಠಿಣ ಎಚ್ಚರಿಕೆ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದರು.

ಕಾರ್ಯನಿರ್ವಹಣಾಧಿಕಾರಿ ಕೆ.ಸಿ.ದೇವರಾಜೇಗೌಡ ಮಾತನಾಡಿ, ಅಕ್ಷರ ದಾಸೋಹ ಕಾರ್ಯಕ್ರಮಗಳು ಯಾವುದೇ ತೊಡಕಿಲ್ಲದೆ ಸಾಗಬೇಕು. ತಾಲ್ಲೂಕಿನಲ್ಲಿ 26 ಅಂಗನವಾಡಿ ಕಟ್ಟಡ ಪುನರ್ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ನೂತನ ಕಟ್ಟಡಗಳಲ್ಲಿ ಮಕ್ಕಳ ವಿದ್ಯಾಭ್ಯಾಸ ಮುಂದುವರಿಸಬೇಕು. ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲೇ ಎಲ್ಲ ಕಾಮಗಾರಿ ಮುಗಿಸಬೇಕು ಎಂದು ಅಧಿಕಾರಿಗೆ ಸೂಚಿಸಿದರು.

ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಸ್‌.ವೆಂಕಟೇಶ್‌ ಮಾತನಾಡಿ, ಈ ಬಾರಿ ಮೇವಿನ ಕೊರತೆ ಬಾರದಂತೆ ಈಗಾಗಲೇ 7500 ಮೇವಿನ ಬೀಜದ ಮಿನಿ ಕಿಟ್ ವಿತರಿಸಲಾಗಿದೆ.
ಏಪ್ರಿಲ್ ತಿಂಗಳಿನಿಂದ ದನಕರುಗಳಿಗೆ ಚಪ್ಪೆ ರೋಗದ ಲಸಿಕೆ ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನಾ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT