ಆಮದು ನಿಷೇಧ: ಬೆಳೆಗಾರರ ಹರ್ಷ

7
ಕಾಳುಮೆಣಸು ಧಾರಣೆ: ಕೇಂದ್ರ ಸರ್ಕಾರದಿಂದ ಬಿಗಿ ಕ್ರಮ

ಆಮದು ನಿಷೇಧ: ಬೆಳೆಗಾರರ ಹರ್ಷ

Published:
Updated:

ಮಡಿಕೇರಿ: ಕೇಂದ್ರ ಸರ್ಕಾರವು ಕಾಳುಮೆಣಸು ಬೆಳೆಗಾರರ ನೆರವಿಗೆ ಮತ್ತೊಮ್ಮೆ ಧಾವಿಸಿದ್ದು, ತಲಾ ಕೆ.ಜಿಗೆ ₹ 500ಕ್ಕಿಂತ ಕಡಿಮೆ ಬೆಲೆಯ ಕಾಳುಮೆಣಸು ಆಮದು ನಿಷೇಧಿಸಿ ಆದೇಶಿಸಿದೆ.

ಕಳೆದ ವರ್ಷ ಕಾಳುಮೆಣಸಿನ ಧಾರಣೆ ಕುಸಿದಾಗ ಕನಿಷ್ಠ ಆಮದು ದರವನ್ನು ₹ 500ಕ್ಕೆ ನಿಗದಿಗೊಳಿಸಿತ್ತು. ಆದರೂ, ವಾಮಮಾರ್ಗದಲ್ಲಿ ಕಳಪೆ ಗುಣಮಟ್ಟದ ಮೆಣಸು ವಿದೇಶದಿಂದ ರಾಷ್ಟ್ರದ ಒಳಕ್ಕೆ ಬರುತ್ತಿತ್ತು. ಈಗ ಅದನ್ನೂ ತಡೆಯಲು ಕೇಂದ್ರ ಸರ್ಕಾರವು ಮುಂದಾಗಿದೆ. ಇದೇ 22ರಂದು ಹೊಸ ಆದೇಶ ಹೊರಡಿಸಿದೆ ಎಂದು ಕಾಳುಮೆಣಸು ಸಮನ್ವಯ ಸಮಿತಿ ಸಂಚಾಲಕ ಕೊಂಕೋಡಿ ಪದ್ಮನಾಭ ಹಾಗೂ ಸಂಯೋಜಕ ಕೆ.ಕೆ. ವಿಶ್ವನಾಥ್ ತಿಳಿಸಿದ್ದಾರೆ.

ಕೊಡಗು ಗುಣಮಟ್ಟದ ಕಾಳುಮೆಣಸು ಉತ್ಪಾದನೆಗೆ ಪ್ರಸಿದ್ಧಿ ಪಡೆದಿದೆ. ಪ್ರತಿವರ್ಷ 15 ಸಾವಿರ ಟನ್‌ನಷ್ಟು ಕಾಳುಮೆಣಸು ಉತ್ಪಾದನೆ ಆಗುತ್ತಿದೆ. ಜಿಲ್ಲೆಯಲ್ಲಿ ಕಾಫಿಯೊಂದಿಗೆ ಉಪ ಬೆಳೆಯಾಗಿ ಮೆಣಸು ಬೆಳೆಯಲಾಗುತ್ತಿದೆ. ಕಪ್ಪುಬಂಗಾರವೇ ಆಗಿದ್ದ ಕಾಳುಮೆಣಸು ದರಕುಸಿತದಿಂದ ರೈತರ ಕೈಹಿಡಿಯುತ್ತಿಲ್ಲ.

ದರ ಕುಸಿತ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಕನಿಷ್ಠದರ ನಿಗದಿಪಡಿಸಿದ್ದರೂ ಕಳಪೆ ಗುಣಮಟ್ಟದ ಕಾಳುಮೆಣಸು ರಾಷ್ಟ್ರದ ಒಳಕ್ಕೆ ಬರುತ್ತಿರುವುದು ನಿಂತಿಲ್ಲ. ಈ ವಿಚಾರವನ್ನು ಕೇಂದ್ರ ವಾಣಿಜ್ಯ ಸಚಿವ ಸುರೇಶ್‌ ಪ್ರಭು ಅವರ ಗಮನಕ್ಕೆ ತರಲಾಗಿತ್ತು. ಸಮನ್ವಯ ಸಮಿತಿಯ ಮನವಿ ಮೇರೆಗೆ ಕ್ರಮ ಕೈಗೊಂಡಿದೆ ಎಂದು ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆಗೆ ಕಾರಣವಾಗಿತ್ತು: ಕಳೆದ ವರ್ಷ ಕಾಳುಮೆಣಸಿನ ಧಾರಣೆ ದಿಢೀರ್‌ ಕುಸಿದಿತ್ತು. ಬಳಿಕ ಬೆಳೆಗಾರರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿದ್ದರು. ವಿದೇಶದಿಂದ ಕಳ್ಳಮಾರ್ಗದಲ್ಲಿ ಕಾಳುಮೆಣಸು ಜಿಲ್ಲೆಗೆ ಬರುತ್ತಿರುವ ಆರೋಪ ಕೇಳಿಬಂದಿತ್ತು. ಜಿಲ್ಲೆಯ ಎಪಿಎಂಸಿ ಮಾರುಕಟ್ಟೆಯೊಂದರ ಗೋದಾಮಿನಲ್ಲಿ ನೂರಾರು ಚೀಲದಷ್ಟು ವಿದೇಶದಿಂದ ಆಮದು ಮಾಡಿಕೊಂಡ ಕಳಪೆ ಗುಣಮಟ್ಟದ ಕಾಳುಮೆಣಸಿನ ಪುಡಿ ಪೊಲೀಸ್‌ ದಾಳಿಯ ವೇಳೆ ಸಿಕ್ಕಿತ್ತು. ಬಳಿಕ ವ್ಯಾಪಾರಿ ವಿರುದ್ಧ ಪ್ರಕರಣವೂ ದಾಖಲಾಗಿದ್ದನ್ನು ಸ್ಮರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry