ಮೃತ್ಯು ಕೂಪವಾದ ರಾಷ್ಟ್ರೀಯ ಹೆದ್ದಾರಿ

7
ಅಪಘಾತ ಸ್ಥಳಕ್ಕೆ ಭೇಟಿ; ಎನ್‌ಎಚ್‌ಎಐ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಜಿ.ಸತ್ಯವತಿ ಕಿಡಿ

ಮೃತ್ಯು ಕೂಪವಾದ ರಾಷ್ಟ್ರೀಯ ಹೆದ್ದಾರಿ

Published:
Updated:

ಕೋಲಾರ: ‘ರಾಜ್ಯದ ಬೇರೆ ಜಿಲ್ಲೆಗಳಲ್ಲೂ ರಾಷ್ಟ್ರೀಯ ಹೆದ್ದಾರಿಗಳಿವೆ. ಆದರೆ, ಕೋಲಾರ ಜಿಲ್ಲೆ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 75 ಮೃತ್ಯು ಕೂಪವಾಗಿದೆ. ಇಲ್ಲಿ ಸಂಭವಿಸುವಷ್ಟು ಅಪಘಾತಗಳು ಬೇರೆಲ್ಲೂ ಸಂಭವಿಸುವುದಿಲ್ಲ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಹೇಳಿದರು.

ತಾಲ್ಲೂಕಿನ ವಡಗೂರು ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಗುರುವಾರ ಅಪಘಾತ ಸಂಭವಿಸಿ ವಿದ್ಯಾರ್ಥಿಗಳಿಬ್ಬರು ಮೃತಪಟ್ಟ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿ, ‘ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತಗಳು ಮಿತಿ ಮೀರಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದು, ರಸ್ತೆಯಲ್ಲಿ ವಿದ್ಯುತ್‌ ದೀಪ ಮತ್ತು ಸೂಚನಾ ಫಲಕಗಳು ಇಲ್ಲದಿರುವುದು ಈ ಭಾಗದಲ್ಲಿ ಅಪಘಾತ ಹೆಚ್ಚಳಕ್ಕೆ ಪ್ರಮುಖ ಕಾರಣಗಳು. ಈ ಸಂಗತಿಗಳು ನಿಮ್ಮ ಗಮನಕ್ಕೆ ಬಂದಿಲ್ಲವೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

’ಜಿಲ್ಲೆಯ ನರಸಾಪುರ ಗಡಿಯಿಂದ ಮುಳಬಾಗಿಲು ಗಡಿವರೆಗೂ ಅಪಘಾತಗಳು ಸಾಮಾನ್ಯವಾಗಿವೆ. ಇಷ್ಟಾದರೂ ಅಧಿಕಾರಿಗಳು ಅಪಘಾತ ತಡೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಥಾ ಪ್ರಕಾರ ಬೇಜವಾಬ್ದಾರಿ ಮುಂದುವರಿಸಿದ್ದಾರೆ’ ಎಂದು ಲ್ಯಾಂಕೊ ಕಂಪನಿ ಪ್ರತಿನಿಧಿಗಳ ವಿರುದ್ಧ ಕಿಡಿಕಾರಿದರು.

ಆಟವಾಡಬೇಡಿ: ‘ಗುರುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಸ್ತೆಯ ಅಕ್ಕಪಕ್ಕ ಸರಿಯಾಗಿ ಸೂಚನಾ ಫಲಕ ಅಳವಡಿಸಿದ್ದರೆ ಇಂತಹ ದುರ್ಘಟನೆ ನಡೆಯುತ್ತಿರಲಿಲ್ಲ. ಜನರ ಪ್ರಾಣದ ಜತೆ ಆಟವಾಡಬೇಡಿ’ ಎಂದು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು.

ಇದಕ್ಕೆ ಪ್ರತಿಕ್ರಿಯಿಸಿದ ಲ್ಯಾಂಕೊ ಪ್ರತಿನಿಧಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ‘ರಸ್ತೆ ಸುಧಾರಣೆ ಸಂಬಂಧ ನಾವು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ದೆಹಲಿಯಿಂದ ಆದೇಶ ಬರಬೇಕು’ ಎಂದು ತಿಳಿಸಿದರು. ಸಭೆಯಲ್ಲಿದ್ದ ಸಾರ್ವಜನಿಕರು ಹಾಗೂ ಮುಖಂಡರು ಅಧಿಕಾರಿಗಳ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಲ್ಯಾಂಕೊ ಕಂಪನಿ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತೆ ಇಲ್ಲವಾಗಿದೆ. ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ ₹ 5 ಲಕ್ಷ ಮತ್ತು ಗಾಯಾಳುಗಳಿಗೆ ತಲಾ ₹ 2 ಲಕ್ಷ ನೀಡಬೇಕು’ ಎಂದು ಸಾರ್ವಜನಿಕರು ಒತ್ತಾಯಿಸಿದರು.

ಚಾಲಕರಿಗೆ ಪ್ರಜ್ಞೆಯಿಲ್ಲ: ‘ಕೆಎಸ್‌ಆರ್‌ಟಿಸಿ ಬಸ್‌ ಚಾಲಕರಿಗೆ ಸಂಚಾರ ನಿಯಮ ಪಾಲನೆಯ ಪ್ರಜ್ಞೆಯಿಲ್ಲ. ರಾಷ್ಟ್ರೀಯ ಹೆದ್ದಾರಿ ಹಾಗೂ ನಗರದೊಳಗೆ ಮನಬಂದಂತೆ ಬಸ್‌ ನಿಲ್ಲಿಸುತ್ತಾರೆ. ಈ ಬಗ್ಗೆ ಹಿಂದೆಯೇ ಎಚ್ಚರಿಕೆ ನೀಡಿದ್ದೆ. ಆದರೂ ಚಾಲಕರು ಸುಧಾರಿಸಿಲ್ಲ. ನಿಗದಿತ ನಿಲ್ದಾಣದಲ್ಲಿ ಮಾತ್ರ ವಾಹನ ನಿಲ್ಲಿಸುವಂತೆ ಚಾಲಕರಿಗೆ ತಿಳಿಸಿ’ ಎಂದು ಜಿಲ್ಲಾಧಿಕಾರಿಯು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಾಶ್‌ಬಾಬು ಅವರಿಗೆ ಸೂಚಿಸಿದರು.

ವಡಗೂರು, ತಂಬಿಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ರಸ್ತೆ ಸಮಸ್ಯೆ ಸಂಬಂಧ ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸೆಪಟ್‌ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry