ದೇಶವನ್ನು ಸ್ಮಶಾನದತ್ತ ಕೊಂಡೊಯ್ಯುತ್ತಿದ್ದೇವೆ

7
ಕಾನೂನು ಅರಿವು ನೆರವು: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶಿರೋಳ್ ಕಳವಳ

ದೇಶವನ್ನು ಸ್ಮಶಾನದತ್ತ ಕೊಂಡೊಯ್ಯುತ್ತಿದ್ದೇವೆ

Published:
Updated:

ಕೋಲಾರ: ‘ಸಿನಿಮಾಗಳಿಗಿಂತ ನಿಜ ಜೀವನದಲ್ಲೇ ಹೆಚ್ಚಿನ ಪಾತ್ರಗಳು ಬರುತ್ತವೆ. ಅವುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಅಂತಃಸತ್ವ ಮುಖ್ಯ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುರಾಜ್ ಜಿ.ಶಿರೋಳ್ ಅಭಿಪ್ರಾಯಪಟ್ಟರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ರವಿ ಕಾಲೇಜು ಹಾಗೂ ಜಾಗೃತಿ ಸೇವಾ ಸಂಸ್ಥೆ ಸಹಯೋಗದಲ್ಲಿ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ನಾವೆಲ್ಲಾ ಜೀವನದಲ್ಲಿ ಪರಿಪೂರ್ಣತೆ ಸಾಧಿಸಲು ಸಮಾಧಾನದಿಂದ ಬಾಳುವುದು ಮುಖ್ಯ’ ಎಂದರು.

‘ಭೂಮಿಯ ಮುಕ್ಕಾಲು ಭಾಗ ನೀರು ಆವರಿಸಿದ್ದರೂ ಕುಡಿಯಲು ಶೇ 3ರಷ್ಟು ನೀರಿಲ್ಲ. ಪ್ರತಿ ವ್ಯಕ್ತಿಗೆ ದಿನಕ್ಕೆ ಕನಿಷ್ಠ 10 ಲೀಟರ್‌ ನೀರು ಅವಶ್ಯ. ಪ್ರಯೋಗಾಲಯಗಳಲ್ಲಿ ನೀರು ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ ಲಭ್ಯ ಜಲ ಸಂಪತ್ತನ್ನು ಮಿತವಾಗಿ ಬಳಸಬೇಕು. ಮನಬಂದಂತೆ ನೀರು ಬಳಸಿದರೆ ಭವಿಷ್ಯದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ’ ಎಂದು ಕಿವಿಮಾತು ಹೇಳಿದರು.

‘ಗಿಡ ಮರಗಳನ್ನು ಹೆಚ್ಚಾಗಿ ಬೆಳೆಸಿ ಮಳೆ ಬರುವ ವ್ಯವಸ್ಥೆ ಮಾಡಿಕೊಳ್ಳಬೇಕು. ಗಿಡ ಮರಗಳಿದ್ದರೆ ನೀರು, ಆಮ್ಲಜನಕ ಎಲ್ಲವೂ ಸಿಗುತ್ತದೆ. ಅದಕ್ಕಾಗಿ ಅರಣ್ಯ ಸಂರಕ್ಷಣೆ ಅತ್ಯಗತ್ಯ. ಪ್ರಸ್ತುತ ನಾವು ಕಾಂಕ್ರೀಟ್‌ ಕಾಡು ಕಟ್ಟುವ ಕೆಲಸದಲ್ಲಿ ನಿರತರಾಗಿದ್ದು, ದೇಶವನ್ನು ಸ್ಮಶಾನದ ಕಡೆಗೆ ಕೊಂಡೊಯ್ಯುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

ನಕ್ಷೆಗೆ ಸೀಮಿತ: ‘ಈ ಹಿಂದೆ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಪಂಚ ನದಿಗಳು ಹರಿಯುತ್ತಿದ್ದವು. ಆದರೆ, ಈಗ ಆ ನದಿಗಳು ನಕ್ಷೆಗೆ ಸೀಮಿತವಾಗಿವೆ. 5 ಸಾವಿರ ಕೆರೆಗಳಿದ್ದ ಜಿಲ್ಲೆಯಲ್ಲಿ ಸದ್ಯ 3 ಸಾವಿರ ಕೆರೆಗಳು ಮಾತ್ರ ಉಳಿದಿವೆ. ಪೂರ್ವಿಕರು ಕೆರೆಗಳನ್ನು ಕಟ್ಟದಿದ್ದರೆ ಈಗಿನ ತಲೆಮಾರು ಬದುಕಲು ಸಾಧ್ಯವಾಗುತ್ತಿರಲಿಲ್ಲ’ ಎಂದು ತಿಳಿಸಿದರು.

‘ಅಭಿವೃದ್ಧಿ ಹೆಸರಿನಲ್ಲಿ ಕೆರೆಗಳನ್ನು ನಾಶ ಮಾಡಿ ನಮ್ಮ ತಲೆ ಮೇಲೆ ನಾವೇ ಕಲ್ಲು ಹಾಕಿಕೊಳ್ಳುತ್ತಿದ್ದೇವೆ. ಜಿಲ್ಲೆಯಲ್ಲಿ ಮಳೆ ಹಾಗೂ ಅಂತರ್ಜಲವೇ ನೀರಿಗೆ ಆಧಾರವಾಗಿದೆ. ಮಳೆ ಇಲ್ಲದಿದ್ದರೆ 15 ವರ್ಷಗಳಲ್ಲಿ ಕೋಲಾರ ಜಿಲ್ಲೆಯು ಮರು ಭೂಮಿಯಾಗುತ್ತದೆ. ಆದ ಕಾರಣ ಜನ ಜಾಗೃತರಾಗಿ ನೀರಿನ ಸಂರಕ್ಷಣೆಗೆ ದೃಢ ಸಂಕಲ್ಪ ಮಾಡಬೇಕು’ ಎಂದು ಸಲಹೆ ನೀಡಿದರು.

ಜನಾಂದೋಲನವಾಗಲಿ: ‘ಪರಿಸರ ಸಂರಕ್ಷಣೆಯು ಇಂದಿನ ತುರ್ತು ಅನಿವಾರ್ಯವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಮರ ಗಿಡ ಬೆಳೆಸಬೇಕು. ಶಾಲೆ ಆವರಣ ಹಾಗೂ ಮನೆಯ ಸುತ್ತಮುತ್ತ ಸಸಿಗಳನ್ನು ನೆಡಬೇಕು. ಈ ಕಾರ್ಯ ದೊಡ್ಡ ಜನಾಂದೋಲನವಾಗಬೇಕು’ ಎಂದು ರವಿ ವಿದ್ಯಾ ಸಂಸ್ಥೆ ನಿರ್ದೇಶಕ ಜಿ.ನರೇಶ್‌ಬಾಬು ಹೇಳಿದರು.

ವನ್ಯಜೀವಿ ಪರಿಪಾಲಕ ಕೆ.ಎನ್.ತ್ಯಾಗರಾಜ್ ಜಲ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎನ್.ಡಿ.ಶ್ರೀನಿವಾಸ್, ರವಿ ವಿದ್ಯಾ ಸಂಸ್ಥೆಗಳ ಕಾರ್ಯದರ್ಶಿ ಇ.ಗೋಪಾಲಪ್ಪ, ಮೇಲ್ವಿಚಾರಕ ಮಂಜುನಾಥ್‌ರೆಡ್ಡಿ, ಜಾಗೃತಿ ಸೇವಾ ಸಂಸ್ಥೆ ಅಧ್ಯಕ್ಷ ಕೆ.ಆರ್.ಧನರಾಜ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry