ಸಾಲ ನೀಡದೆ ವಂಚಿಸಿದರೆ ಕ್ರಿಮಿನಲ್ ಪ್ರಕರಣ

7
ಸಾಲ ಯೋಜನೆ ಬಿಡುಗಡೆ ಕಾರ್ಯಕ್ರಮದಲ್ಲಿ ಬ್ಯಾಂಕ್‌ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸತ್ಯವತಿ ಖಡಕ್‌ ಎಚ್ಚರಿಕೆ

ಸಾಲ ನೀಡದೆ ವಂಚಿಸಿದರೆ ಕ್ರಿಮಿನಲ್ ಪ್ರಕರಣ

Published:
Updated:
ಸಾಲ ನೀಡದೆ ವಂಚಿಸಿದರೆ ಕ್ರಿಮಿನಲ್ ಪ್ರಕರಣ

ಕೋಲಾರ: ‘ಸರ್ಕಾರಗಳು ವಿವಿಧ ಯೋಜನೆಯಡಿ ಮಂಜೂರು ಮಾಡಿರುವ ಸಾಲ ಸೌಲಭ್ಯವನ್ನು ಬ್ಯಾಂಕ್‌ ಅಧಿಕಾರಿಗಳು ಫಲಾನುಭವಿಗಳಿಗೆ ಕಲ್ಪಿಸದೆ ವಂಚಿಸಿದರೆ ದೌರ್ಜನ್ಯ ತಡೆ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಖಡಕ್‌ ಎಚ್ಚರಿಕೆ ನೀಡಿದರು.

ನಗರದಲ್ಲಿ ಶುಕ್ರವಾರ ನಡೆದ ಸಾಲ ಯೋಜನೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ಜನಸಾಮಾನ್ಯರ ಠೇವಣಿ ಪಡೆಯುವ ಬ್ಯಾಂಕ್‌ಗಳು ಅವರಿಗೆ ಸಾಲ ಬಿಡುಗಡೆ ಮಾಡುತ್ತಿಲ್ಲ. ಬ್ಯಾಂಕ್‌ಗಳಿಗೆ ನಾಮ ಹಾಕುವ ದೊಡ್ಡ ಉದ್ಯಮಿಗಳನ್ನು ನಂಬಿ ಸುಲಭವಾಗಿ ಸಾಲ ಕೊಡುತ್ತೀರಿ. ನಿಮಗೆ ಆ ವಂಚಕರೆ ಸರಿ’ ಎಂದು ಬ್ಯಾಂಕ್‌ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಬಡವರಿಗೆ ಆರ್ಥಿಕ ನೆರವು ಕಲ್ಪಿಸಬೇಕೆಂಬ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ಯೋಜನೆಗಳ ಮೂಲಕ ಸಾಲ, ಸಹಾಯಧನ ಮಂಜೂರು ಮಾಡಿ ಬ್ಯಾಂಕ್‌ಗಳ ಮೂಲಕ ವಿತರಿಸು

ತ್ತವೆ. ಆಯಾ ಇಲಾಖೆ ಅಧಿಕಾರಿಗಳು ಫಲಾ

ನುಭವಿಗಳನ್ನು ಗುರುತಿಸಿ ಬ್ಯಾಂಕ್‌ಗೆ ಪಟ್ಟಿ ಕಳುಹಿಸಿದರೆ ನೂರೊಂದು ಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದೀರಿ. ಇದರಿಂದ ನಿಮಗೇನು ಲಾಭ?’ ಎಂದು ಪ್ರಶ್ನಿಸಿದರು.

ದೂರು ಬಂದಿವೆ: ‘ಬ್ಯಾಂಕ್‌ಗಳ ವ್ಯವಸ್ಥಾಪಕರು ತಮ್ಮ ಮನಸ್ಥಿತಿ ಬದಲಿಸಿಕೊಳ್ಳಬೇಕು. ನಿಮ್ಮ ಜೇಬಿನಿಂದ ಸಾಲ ಕೊಡುವುದಿಲ್ಲ. ಸಾರ್ವಜನಿಕರಿಂದ ಠೇವಣಿ ಪಡೆಯುವುದರ ಜತೆಗೆ, ಸಾಲ ಸೌಲಭ್ಯ ಕಲ್ಪಿಸಬೇಕು. ಸಾಲಕ್ಕಾಗಿ ಈಗಾಗಲೇ ಸಲ್ಲಿಕೆಯಾಗಿರುವ ಅರ್ಜಿಗಳನ್ನು ವಿಲೇವಾರಿ ಮಾಡದ ಬಗ್ಗೆ ಸಾಕಷ್ಟು ದೂರು ಬಂದಿವೆ. ಭೌತಿಕ ಗುರಿಯಲ್ಲಿ ಶೇ 50ರಷ್ಟು ಸಾಧನೆ ಆಗಿಲ್ಲವೆಂದರೆ ಏನು ಅರ್ಥ’ ಎಂದು ಕೆಂಡಾಮಂಡಲರಾದರು.

‘ಸರ್ಕಾರಿ ಇಲಾಖೆಗಳಿಗೆ ಬ್ಯಾಂಕ್‌ ಅಧಿಕಾರಿಗಳು ಸ್ಪಂದಿಸದಿದ್ದರೆ ಠೇವಣಿ ವಾಪಸ್ ಪಡೆದು, ಸಾರ್ವಜನಿಕರಿಗೆ ಸಾಲ ಕೊಡುವಂತಹ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಿ. ಭೌತಿಕ ಗುರಿ ಸಾಧನೆ ನಿರ್ಲಕ್ಷಿಸಿರುವುದು ಬ್ಯಾಂಕ್‌ನ ಅಧಿಕಾರಿಗಳ ಬೇಜವಾಬ್ದಾರಿಯ ಪರಮಾವಧಿ. ಈ ಬಗ್ಗೆ ಬ್ಯಾಂಕ್‌ಗಳ ಮುಖ್ಯ ಶಾಖೆಗೆ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ’ ಎಂದು ಎಚ್ಚರಿಸಿದರು.

ಯೋಗ್ಯರಲ್ಲ: ‘ಮಾ.31ರವರೆಗೆ ಅರ್ಜಿಗಳನ್ನು ಇಟ್ಟುಕೊಂಡು ನಂತರ ವಾಪಸ್ ಕೊಡುವುದು ಬ್ಯಾಂಕ್‌ ಅಧಿಕಾರಿಗಳ ಉದ್ದೇಶ. ಇದರಿಂದ ಫಲಾನುಭವಿಗಳಿಗೆ ಮಂಜೂರಾಗಿರುವ ಸಹಾಯಧನ ಸರ್ಕಾರಕ್ಕೆ ವಾಪಸ್ ಹೋಗುವ ಮೂಲಕ ಯೋಜನೆಗಳು ವಿಫಲವಾಗುತ್ತವೆ. ಇದಕ್ಕೆಲ್ಲಾ ಬ್ಯಾಂಕ್ ಅಧಿಕಾರಿಗಳೇ ಕಾರಣ. ಇಂತಹ ಬೇಜ

ವಾಬ್ದಾರಿ ಅಧಿಕಾರಿಗಳು ಸಾರ್ವಜನಿಕ ಕ್ಷೇತ್ರದಲ್ಲಿರಲು ಯೋಗ್ಯರಲ್ಲ. ಬ್ಯಾಂಕ್‌ಗಳನ್ನು ಮುಚ್ಚುವುದು ಉತ್ತಮ’ ಎಂದು ಕಿಡಿಕಾರಿದರು.

‘ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಚುರುಕಿನಿಂದ ಕೆಲಸ ಮಾಡುತ್ತಿಲ್ಲ. ಲೀಡ್‌ ಬ್ಯಾಂಕ್‌ನ ಅಧೀನದಲ್ಲಿರುವ ಬ್ಯಾಂಕ್‌ಗಳ ಅಧಿಕಾರಿಗಳ ಸಭೆ ನಡೆಸಿ ಚುರುಕು ಮುಟ್ಟಿಸಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ನಿಮ್ಮ ವೈಫಲ್ಯವೇ ಇಷ್ಟೆಲ್ಲಾ ಸಮಸ್ಯೆಗೆ ಕಾರಣ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಯಾವ ಅಧಿಕಾರಿಯೂ ಸಮರ್ಪಕ ಮಾಹಿತಿಯೊಂದಿಗೆ ಸಭೆಗೆ ಬಂದಿಲ್ಲ. ಮಾ.27ರಂದು ನಡೆಯುವ ಸಭೆಯ ವೇಳೆಗೆ ಎಲ್ಲಾ ಬ್ಯಾಂಕ್‌ಗಳು ತಮ್ಮ ಭೌತಿಕ ಸಾಲ ವಿತರಣೆ ಗುರಿ ತಲುಪಿರಬೇಕು ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

₹ 2,200 ಕೋಟಿ: ‘2018-–19ನೇ ಸಾಲಿನಲ್ಲಿ ಕೃಷಿಗೆ ₹ 1,259 ಕೋಟಿ ಸಾಲ ಸೇರಿದಂತೆ ವಿವಿಧ ವಲಯಗಳಲ್ಲಿ ಒಟ್ಟು ₹ 2,200 ಕೋಟಿ ಸಾಲ ನೀಡುವ ಗುರಿ ಇದೆ’ ಎಂದು ಲೀಡ್ ಬ್ಯಾಂಕ್ ವ್ಯವಸ್ಥಾಪಕ ಶ್ರೀನಿವಾಸರಾವ್ ವಿವರಿಸಿದರು.

‘ಆದ್ಯತಾ ವಲಯಕ್ಕೆ ₹ 2,075 ಕೋಟಿ ಹಾಗೂ ಇತರೆ ವಲಯಗಳಿಗೆ ₹ 125 ಕೋಟಿ ಸೇರಿ ₹ 2,200 ಕೋಟಿ ಸಾಲ ನೀಡಲಾಗುವುದು. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ₹ 25 ಕೋಟಿ ಹೆಚ್ಚಿಗೆ ಸಾಲ ನೀಡಲು ಉದ್ದೇಶಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಆದ್ಯತಾ ವಲಯದ ₹ 2,075 ಕೋಟಿಯಲ್ಲಿ ಕೃಷಿ ಕ್ಷೇತ್ರಕ್ಕೆ ₹ 1,259 ಕೋಟಿ, ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ₹ 282 ಕೋಟಿ, ಅಸಂಘಟಿತ ವಲಯಕ್ಕೆ ₹ 218 ಕೋಟಿ ಹಾಗೂ ಇತರೆ ಆದ್ಯತಾ ವಲಯಕ್ಕೆ ₹ 314 ಕೋಟಿ ಸಾಲ ಒದಗಿಸಲಾಗುವುದು’ ಎಂದು ತಿಳಿಸಿದರು.

ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಾದ ಉದಯ್‌ಕುಮಾರ್ ಶೆಟ್ಟಿ, ನಟರಾಜ್, ಪ್ರಮೋದ್‌ನಾಯಕ್, ನಾಗೇಂದ್ರ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ್ ಹಾಜರಿದ್ದರು.

**

ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಲ ಮಂಜೂರು ಮಾಡಲು ಎಷ್ಟು ಹಿಂಸೆ ಕೊಡುತ್ತೀರಿ. ಎಸ್ಸಿ ಎಸ್ಟಿ ಆಯೋಗಕ್ಕೆ ದೂರು ಕೊಟ್ಟರೆ ಒಂದೇ ತಾಸಿನಲ್ಲಿ ಸಾಲ ಬಿಡುಗಡೆಯಾಗುತ್ತದೆ.

–ಜಿ.ಸತ್ಯವತಿ, ಜಿಲ್ಲಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry