ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಚುಂಬಿ ಮರಗಳ ಕಾಡು ಮ್ಯೂರ್ ವುಡ್ಸ್‌

Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಅಮೆರಿಕದಲ್ಲಿ ಮಗನ ಮನೆಗೆ ಹೋದಾಗ ಮ್ಯೂರ್ ವುಡ್ಸ್‌ ಎನ್ನುವ ಸ್ಥಳಕ್ಕೆ ಹೋಗೋಣವೆಂದ. ವುಡ್ಸ್‌ ಅಂದಾಗ ಅದೇನಿರಬಹುದು, ವುಡ್ ಅಂದರೆ ಕಾಡಾ ಎಂದುಕೊಂಡೆ. ಕ್ಯಾಲಿಫೋರ್ನಿಯಾದ ಮರೀನ್ ಕೌಂಟಿಯ ಪೆಸಿಫಿಕ್ ಬಂದರಿನ ಹತ್ತಿರದ ಟಮಲ್ ಪೇಸ್ ಶಿಖರದ ರಾಷ್ಟ್ರೀಯ ಉದ್ಯಾನ ಸಮಿತಿಯ ಭಾಗವಾದ ಮ್ಯೂರ್ ವುಡ್ಸ್‌ ರಾಷ್ಟ್ರೀಯ ಸ್ಮಾರಕ ಅತ್ಯಂತ ಅಪರೂಪದ ಅರಣ್ಯವೆನಿಸಿಕೊಂಡಿದೆ. ಸ್ಯಾನ್ ಫ್ರಾನ್ಸಿಸ್ಕೋದಿಂದ 12 ಮೈಲಿ ದೂರವಿರುವ ಮ್ಯೂರ್ ವುಡ್ಸ್‌ 554 ಎಕರೆಗಳಲ್ಲಿ ಹರಡಿಕೊಂಡಿದೆ. ಅದರಲ್ಲಿ 240 ಎಕರೆಗಳಷ್ಟು ಪ್ರದೇಶ ಬಹಳ ಅಪರೂಪವಾದ ಪುರಾತನವಾದ ಕಾಡು ಪ್ರದೇಶವೆನಿಸಿಕೊಂಡಿದೆ. ಮನುಷ್ಯ ಪ್ರಕೃತಿಗೆ ಗೌರವ ನೀಡಿ, ಕಾಪಾಡಿ ಉಳಿಸಿಕೊಂಡಿರುವ ಒಳ್ಳೆಯ ಮಾದರಿ ಈ ಕಾಡು.

ತಂಪೋ ತಂಪು: ಹೊರಗಡೆ ಬಿಸಿಲು ಸುಡುತ್ತಿದ್ದರೂ ಆ ಅರಣ್ಯ ಪ್ರದೇಶದ ಒಳ ಹೊಕ್ಕೊಡನೆ ಚಳಿಯಿಂದ ಜಿಲ್ ಎನಿಸುತ್ತದೆ. ಮೆಲ್ಲಗೆ ನಡುಗುವಂತಾಗುತ್ತದೆ. ಪೆಸಿಫಿಕ್ ಮಹಾ ಸಾಗರದ ಸಾಮೀಪ್ಯ ಇರುವುದರಿಂದ ಈ ಪುರಾತನ ಅರಣ್ಯ ಸದಾ ಸಮುದ್ರದ ಮೇಲ್ಪದರದ ಹಿಮದಿಂದ ಆವರಿಸಿಕೊಂಡಿರುತ್ತದೆ. ಅಲ್ಲಿ ಸದಾ ಶೀತದ ವಾತಾವರಣವಿದ್ದು ಮರಗಳು ವೇಗವಾಗಿ ಬೆಳೆಯಲು ಸಹಾಯಕವಾಗಿದೆ. ಹಿಮ ಈ ಅರಣ್ಯದ ರೆಡ್‌ ವುಡ್ ಜಾತಿಯ ಮರಗಳಿಗೆ ಜೀವಜಲದಂತಿದೆ. ಮುಖ್ಯವಾಗಿ ಬೇಸಿಗೆಯಲ್ಲಿ, ಬರಗಾಲದಲ್ಲಿ ಈ ಹಿಮವೇ ಅವುಗಳಿಗೆ ಜೀವನಾಧಾರ, ಅದನ್ನು ಬಳಸಿಕೊಂಡೇ ಬೆಳೆಯುತ್ತದೆ.

ಈ ಅರಣ್ಯ ಸ್ಮಾರಕದೊಳಗಿನ ಹವಾಮಾನ ಬಹಳ ತಂಪಾಗಿರುತ್ತದೆ. ಮಳೆಗಾಲದಲ್ಲಿ ಚೆನ್ನಾದ ಮಳೆ ಇದ್ದು ಬೇಸಿಗೆಯಲ್ಲಿ ಹಿಮದ ಮಳೆಯಿಂದಲೇ ಅದು ಉಸಿರಾಡಲು ಸಾಧ್ಯ.

ಇತಿಹಾಸ: 150 ಮಿಲಿಯನ್ ಅರ್ಥಾತ್ 150 ದಶಲಕ್ಷ ವರ್ಷಗಳ ಹಿಂದೆ ಇಡೀ ಯು.ಎಸ್.ಎ. ತುಂಬಾ ರೆಡ್ ವುಡ್ ಮತ್ತು ಸಿಕ್ವಾಯ್ ಮರಗಳ ದಟ್ಟ ಅರಣ್ಯಗಳಿದ್ದುವಂತೆ, ಕ್ಯಾಲಿಫೋರ್ನಿಯಾದಲ್ಲಿ ಮರಗಳನ್ನು ಕಡಿಯುವ ಲಾಗಿಂಗ್ ಉದ್ಯಮ ಪ್ರಾರಂಭವಾಗುವುದಕ್ಕಿಂತ ಮುಂಚೆ 2 ದಶಲಕ್ಷ ಎಕರೆಗಳಷ್ಟು ಪುರಾತನವಾದ  ಬೃಹತ್ ಎತ್ತರದ ಮರಗಳನ್ನು ಹೊಂದಿರುವ ಅರಣ್ಯವಿತ್ತಂತೆ. 20ನೇ ಶತಮಾನದ ಹೊತ್ತಿಗೆ ಬಹಳಷ್ಟು ಅರಣ್ಯ ಕಡಿಯಲಾಯಿತಂತೆ. ಮನುಷ್ಯ ಎಲ್ಲಿಂದ ಎಲ್ಲಿಗೆ ಹೋದರೂ ಅಷ್ಟೆ, ತನ್ನ ಸುಖಕ್ಕಾಗಿ ಏನಾದರೂ ಮಾಡಬಲ್ಲ, ಅಮೆರಿಕವಾದರೇನು ಭಾರತವಾದರೇನು ಅಲ್ಲವೆ? ಆದರೆ ಈ ಪುರಾತನ ರೆಡ್ ವುಡ್ ಮರಗಳನ್ನು ಹೊಂದಿರುವ ಈ ತಾಣವನ್ನು ಮಾತ್ರ ಮುಟ್ಟಿರಲಿಲ್ಲ. ಏಕೆಂದರೆ ಅಲ್ಲಿಗೆ ಪ್ರವೇಶ ಸುಲಭವಾಗಿರಲಿಲ್ಲ.

(ಮ್ಯೂರ್‌ ವುಡ್ಸ್‌ನಲ್ಲಿನ ಹಾದಿ)

ಹೆಸರಿನ ಪುರಾಣ: ಆ ಸಮಯದಲ್ಲಿ ಆಗ ತಾನೆ ರಾಜಕೀಯಕ್ಕೆ ಕಾಲಿಟ್ಟಿದ್ದ ವಿಲಿಯಮ್ ಕೆಂಟ್ ಈ ಅರಣ್ಯವನ್ನು ಗಮನಿಸುತ್ತಿದ್ದು 664 ಎಕರೆಗಳಷ್ಟು ಸ್ಥಳವನ್ನು ಟಮಲ್ ಪೇಸ್ ಶಿಖರದ ಭೂ ಮತ್ತು ಜಲ ವಿಭಾಗದ ಕಂಪನಿಯಿಂದ ಕೊಂಡುಕೊಂಡನು. ಆದರೆ ನಂತರದ 1907ರಲ್ಲಿ ಜಲಸಂಸ್ಥೆಯೊಂದು ಈ ಸ್ಥಳದಲ್ಲಿ ನೀರು ಹರಿಸಿ ಆ ಅರಣ್ಯವನ್ನು ಆಹುತಿ ಕೊಡಲು ನಿರ್ಧರಿಸಿತು. ಈ ಯೋಜನೆಗೆ ಕೆಂಟ್ ವಿರೋಧ ವ್ಯಕ್ತಪಡಿಸಿದಾಗ ಅವನನ್ನು ಕೋರ್ಟಿಗೆಳೆಯುತ್ತೇವೆ ಎಂದು ಆ ಜಲ ಸಂಸ್ಥೆ ಅವನನ್ನು ಹೆದರಿಸಿತು. ಆಗ ಕೆಂಟ್ ಅಲ್ಲಿನ ರೆಡ್ ಉಡ್ ಅರಣ್ಯದ 290 ಎಕರೆಗಳನ್ನು ಸರ್ಕಾರಕ್ಕೆ ದಾನ ನೀಡಿದ. ಹೇಗಾದರೂ ಆ ಕಾಡನ್ನು ಉಳಿಸುವ ಉದ್ದೇಶ ಕೆಂಟ್‌ನದಾಗಿತ್ತು. ಜನವರಿ 1908ರಲ್ಲಿ ಅಧ್ಯಕ್ಷ ರೂಸ್ ವೆಲ್ಟ್  ಅದನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸಿದರು. ಖಾಸಗಿ ಪ್ರಜೆಯೊಬ್ಬನಿಂದ ಪಡೆದ ಭೂಮಿ ಈ ರೀತಿ ರಾಷ್ಟ್ರೀಯ ಸ್ಮಾರಕವಾದದ್ದು ಇದೇ ಮೊದಲಂತೆ. ಈ ಅರಣ್ಯಕ್ಕೆ ಕೆಂಟ್‌ನ ಹೆಸರನ್ನೇ ಇಡುವ ಉದ್ದೇಶವಿತ್ತಂತೆ ಆದರೆ ಕೆಂಟ್ ಅಂದಿನ ಪರಿಸರವಾದಿ ಮ್ಯೂರ್‌ನ ಹೆಸರನ್ನಿಡಬೇಕೆಂದು ಬಲವಂತ ಮಾಡಿದನಂತೆ. ಆ ಪರಿಸರವಾದಿ ನಿಸರ್ಗವನ್ನು ಕಾಪಾಡಲು ಮಾಡುತ್ತಿದ್ದ ಪ್ರಚಾರವೇ ಈ ಕಾಡಿನ ಉಳಿವಿಗೆ ಕಾರಣವಾಯಿತೆನ್ನುವುದು ಕೆಂಟ್‌ನ ಅಭಿಪ್ರಾಯ. ಹೀಗಾಗಿ  ಮ್ಯೂರ್ ವುಡ್ ಎನ್ನುವ ಹೆಸರು ಬಂದಿತು. 1937ರಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ನಿರ್ಮಾಣವಾದ ನಂತರ ಮ್ಯೂರ್ ವುಡ್‌ಗೆ ಪ್ರವಾಸಿಗರ ದಂಡು ಹರಿದು ಬರಲು ಆರಂಭವಾಯಿತು. 2008 ಜನವರಿ 9ರಂದು ಐತಿಹಾಸಿಕ ತಾಣವೆಂದು ರಾಷ್ಟ್ರೀಯ ನೋಂದಣಿಯಾಯಿತು.

ಮ್ಯೂರ್ ವುಡ್‌ನ ಮುಖ್ಯ ಆಕರ್ಷಣೆಯೆಂದರೆ ಅಲ್ಲಿನ ಬೃಹತ್ ಎತ್ತರದ ರೆಡ್ ವುಡ್ ಅಂದರೆ ಕೆಂಪು ಮರಗಳು, ಅವು ಸುಮಾರು 380 ಅಡಿ ಎತ್ತರ ಬೆಳೆಯುತ್ತವೆ. ಮ್ಯೂರ್ ವುಡ್‌ನಲ್ಲಿರುವ ಅತಿ ಎತ್ತರದ ಮರ 258 ಅಡಿ ಎತ್ತರವಿದೆ. ಈ ಮರದ ಬೀಜಗಳು ಒಂದು ಟೊಮ್ಯಾಟೋ ಗಾತ್ರವಿರುತ್ತದೆಯಷ್ಟೆ. ಅಲ್ಲಿರುವ ಬಹಳಷ್ಟು ಮರಗಳು 500ರಿಂದ 800 ವರ್ಷ ಹಳೆಯವು. ಅತಿ ಹಳೆಯದೆಂದರೆ 1200 ವರ್ಷಗಳ ಪುರಾತನ ಮರಗಳಿವೆ.

ಇದರ ಜೊತೆ ಸ್ವಲ್ಪ ಕಡಿಮೆ ಎತ್ತರದ ಮರಗಳೂ ಇವೆ. ಅವು ಈ ರೆಡ್ ವುಡ್ ಮರಗಳ ಮಧ್ಯದಿಂದ ಬರುವ ಸೂರ್ಯನ ಬೆಳಕನ್ನು ಉಪಯೋಗ ಮಾಡಿಕೊಂಡು ಜೀವಿಸುತ್ತವೆ. ಈ ಜಾತಿಯ ಮರಗಳು ತಮಗೆ ದೊರಕಿದ ಸೂರ್ಯನ ಬೆಳಕಿಗೆ ಅನುಗುಣವಾಗಿ ತಮ್ಮ ಎಲೆ, ಕಾಂಡ ಬೇರುಗಳನ್ನು ರೂಪಿಸಿಕೊಂಡು ಬದುಕುತ್ತವೆ. ಶ್ರೀಮಂತರ ಮಧ್ಯೆ ಇರುವ ಕಡಿಮೆ ಸವಲತ್ತಿನಲ್ಲೇ ಜೀವಿಸುವ ಬಡವರಂತೆ.

ರೆಡ್ ವುಡ್ ಮರಗಳ ಜೊತೆ ಪಕ್ಷಿ ಪ್ರಾಣಿಗಳು: ಮರಗಳಿದ್ದಲ್ಲಿ ಅಲ್ಲೇ ಜೀವನ, 50 ಜಾತಿಯ ಪಕ್ಷಿಗಳು ಇಲ್ಲಿವೆ. ಈ ಎತ್ತರದ ಮರಗಳು ಹಸಿರಿನ ಸೂರನ್ನೇ ಸೃಷ್ಟಿ ಮಾಡುವುದರಿಂದ ತಮಗೆ ಸಿಗುವ ಅಲ್ಪ ಸ್ವಲ್ಪ ಬೆಳಕಿನಲ್ಲಿ ಬೆಳೆಯುವ ಮರ ಗಿಡಗಳಲ್ಲಿ ಹೂವು ಹಣ್ಣುಗಳು ಕಡಿಮೆ. ಅಂತೆಯೇ ಕೀಟಗಳೂ ಕಡಿಮೆ. ಆದ್ದರಿಂದ ಪಕ್ಷಿಗಳೂ ಕಡಿಮೆ. ಇಲ್ಲವಾದಲ್ಲಿ ಅಷ್ಟು ದೊಡ್ಡ ಕಾನನದಲ್ಲಿ ಮತ್ತೊಂದಷ್ಟು ಪಕ್ಷಿಗಳು ಇರಬೇಕಾಗಿತ್ತು. ಬೇರೆಡೆ ಅಪರೂಪವಾದ ಚುಕ್ಕೆಯನ್ನು ಮೈ ತುಂಬಾ ತುಂಬಿಕೊಂಡಿರುವ ಗೂಬೆಗಳು ಮತ್ತು ಮರ ಕುಟುಕಗಳೂ ಹೆಚ್ಚಾಗಿವೆ.

ಅನೇಕ ಸಸ್ತನಿಗಳಿಗೂ ಈ ಕಾಡು ಆಶ್ರಯ ನೀಡಿದೆ. ಆದರೆ ಇವುಗಳು ನಿಶಾಚರಿಗಳಾದ್ದರಿಂದ ಮತ್ತು ಬಿಲಗಳಲ್ಲಿ ವಾಸಿಸುವುದರಿಂದ ನೋಡಲು ಸುಲಭವಾಗಿ ಲಭ್ಯವಿಲ್ಲ. ಹನ್ನೊಂದು ಜಾತಿಯ ಬಾವಲಿಗಳಿವೆ, ಇವೆಲ್ಲವುದರ ಜೊತೆಗೆ ಮ್ಯೂರ್ ವುಡ್ಸ್ ಗೋಲ್ಡನ್ ಗೇಟ್ ಮನರಂಜನಾ ತಾಣದ ಭಾಗವೂ ಹೌದು.

(ಧರೆಗುರುಳಿದ ಮೇಲೂ ಕಲೆಯಾಗಿ ಜೀವತಳೆವ ಸಾರ್ಥಕ ಜನ್ಮ ಇಲ್ಲಿನ ಮರಗಳದ್ದು)

ಪ್ರವಾಸೋದ್ಯಮದ ಜಾಣ್ಮೆ: ಹೊರಗಡೆ ಬಿಸಿಲು ಸುಡುತ್ತಿದ್ದರೂ ಒಮ್ಮೆ ಒಳಗೆ ಹೋದರೆ ನಡುಗುವಷ್ಟು ತಂಪೆನಿಸುತ್ತದೆ. ಅಚ್ಚುಕಟ್ಟಾದ ಕಾಲುದಾರಿಯನ್ನು ರೂಪಿಸಲಾಗಿದೆ. ಎತ್ತರದ ಕೆಂಪು ಮರಗಳ ಜೊತೆಗೆ ಸಣ್ಣ ಪುಟ್ಟ ಮರಗಳು, ನೆಲಕ್ಕೆ ಹಸಿರು ಹಾಸಿದಂತಿರುವ ನೋಡಲು ನಮ್ಮ ಮುಟ್ಟಿದರೆ ಮುನಿಯಂತಿರುವ ನೆಲಹಾಸಿನಂತೆ ಕಾಣುವ ಹಸಿರು ಪುಟ್ಟ ನೆಲ ಬಳ್ಳಿಗಳು, ಅಲ್ಲಲ್ಲಿ ಜುಳುಜುಳು ಎಂದು ಹರಿಯುವ ನೀರಿನ ಝರಿಗಳು, ಸಾಹಸ ಪ್ರಿಯರಿಗೆ ಎತ್ತರಕ್ಕೆ ಏರಲು ಮೆಟ್ಟಲುಗಳು, ತಿನ್ನಲು ರೆಸ್ಟೋರೆಂಟ್, ತಿಂದ ಮೇಲೆ ಶೌಚಕ್ಕೆ ಅನುಕೂಲ, ಒಮ್ಮೆ ಒಳಗೆ ಹೋದರೆ ನಿಮಗೆ ಸಾಕೆನಿಸುವಷ್ಟು ಸುತ್ತಾಡಬಹುದು. ಸದಾ ಪ್ರವಾಸಿಗರು ಇರುತ್ತಾರೆ. ದಿನಕ್ಕೆ ಆರು ಸಾವಿರ ಜನ ಇಲ್ಲಿಗೆ ಭೇಟಿ ನೀಡುತ್ತಾರೆ. ಅನೇಕ ಕ್ರೀಡಾ ಚಟುವಟಿಕೆಗಳ ತಾಣವೂ ಹೌದು. ವಿದೇಶಗಳಲ್ಲಿ ಪ್ರವಾಸೋದ್ಯಮ ಬಹಳ ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ. ಬರುವ ಪ್ರವಾಸಿಗಳಿಗೆ ಅನುಕೂಲ ನೀಡುತ್ತದೆ ಮತ್ತು ಪ್ರವೇಶಕ್ಕೆ ದರವನ್ನೂ ತೆಗೆದುಕೊಳ್ಳುತ್ತದೆ. ಹತ್ತು ಡಾಲರ್ ಪ್ರವೇಶ ದರ, ನಿಜಕ್ಕೂ ನಾವು ಅವರಿಂದ ಕಲಿತುಕೊಳ್ಳ ಬೇಕಾದ ವಿಷಯವಿದು. ನಮ್ಮಲ್ಲಿರುವ ಅಪಾರ ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳುವ ಬಾಧ್ಯತೆ ನಮ್ಮದು.

ನಮ್ಮ ಪಶ್ಚಿಮ ಘಟ್ಟಗಳಿಗಿಂತ ದಟ್ಟ ಅರಣ್ಯಗಳಾದರೂ ಯಾವುದಿವೆ? ನಾವು ಮನಸ್ಸು ಮಾಡಿ ನಮ್ಮಲ್ಲಿನ ಕಾಡುಗಳನ್ನು ಉಳಿಸಿ, ಬೆಳೆಸಬೇಕಷ್ಟೆ.

**

ತಂಪೋ ತಂಪು: ಹೊರಗಡೆ ಬಿಸಿಲು ಸುಡುತ್ತಿದ್ದರೂ ಆ ಅರಣ್ಯ ಪ್ರದೇಶದ ಒಳ ಹೊಕ್ಕೊಡನೆ ಚಳಿಯಿಂದ ಜಿಲ್ ಎನಿಸುತ್ತದೆ. ಮೆಲ್ಲಗೆ ನಡುಗುವಂತಾಗುತ್ತದೆ. ಪೆಸಿಫಿಕ್ ಮಹಾ ಸಾಗರದ ಸಾಮೀಪ್ಯ ಇರುವುದರಿಂದ ಈ ಪುರಾತನ ಅರಣ್ಯ ಸದಾ ಸಮುದ್ರದ ಮೇಲ್ಪದರದ ಹಿಮದಿಂದ ಆವರಿಸಿಕೊಂಡಿರುತ್ತದೆ. ಅಲ್ಲಿ ಸದಾ ಶೀತದ ವಾತಾವರಣವಿದ್ದು ಮರಗಳು ವೇಗವಾಗಿ ಬೆಳೆಯಲು ಸಹಾಯಕವಾಗಿದೆ. ಹಿಮ ಈ ಅರಣ್ಯದ ರೆಡ್‌ ವುಡ್ ಜಾತಿಯ ಮರಗಳಿಗೆ ಜೀವಜಲದಂತಿದೆ. ಮುಖ್ಯವಾಗಿ ಬೇಸಿಗೆಯಲ್ಲಿ, ಬರಗಾಲದಲ್ಲಿ ಈ ಹಿಮವೇ ಅವುಗಳಿಗೆ ಜೀವನಾಧಾರ, ಅದನ್ನು ಬಳಸಿಕೊಂಡೇ ಬೆಳೆಯುತ್ತದೆ.

ಈ ಅರಣ್ಯ ಸ್ಮಾರಕದೊಳಗಿನ ಹವಾಮಾನ ಬಹಳ ತಂಪಾಗಿರುತ್ತದೆ. ಮಳೆಗಾಲದಲ್ಲಿ ಚೆನ್ನಾದ ಮಳೆ ಇದ್ದು ಬೇಸಿಗೆಯಲ್ಲಿ ಹಿಮದ ಮಳೆಯಿಂದಲೇ ಅದು ಉಸಿರಾಡಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT