ಸಿದ್ದರಾಮಯ್ಯರ ಒಲವು ವಿಧಾನಸೌಧದ ಮೆಟ್ಟಿಲೇರಿಸಿತು

7

ಸಿದ್ದರಾಮಯ್ಯರ ಒಲವು ವಿಧಾನಸೌಧದ ಮೆಟ್ಟಿಲೇರಿಸಿತು

Published:
Updated:
ಸಿದ್ದರಾಮಯ್ಯರ ಒಲವು ವಿಧಾನಸೌಧದ ಮೆಟ್ಟಿಲೇರಿಸಿತು

ಕೊಪ್ಪಳ: 'ತಂದೆಯ ರಾಜಕಾರಣದ ನೆರಳು ಹಾಗೂ ಸಿದ್ದರಾಮಯ್ಯರ ವಿಶ್ವಾಸ ವಿಧಾನಸೌಧದ ಮೆಟ್ಟಿಲೇರಿಸಿತು'–ಹೀಗೆ ಹೇಳಿ ಮುಗುಳು ನಗೆ ಬೀರಿದರು ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ್.

'ಜಿಲ್ಲಾ ಪಂಚಾಯಿತಿ ಅಧ್ಯಕ್ಷನಾಗಿದ್ದಾಗ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಕರೆದು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದರು. ಆ ಸೂಚನೆ ಪಾಲಿಸಿದೆ ಅಷ್ಟೇ' ಎಂದು ‘ಆ ದಿನಗಳ’ ಮೆಲುಕು ಹಾಕಿದರು.

ಮೊದಲ ಪ್ರಯತ್ನದಲ್ಲಿಯೇ ಶಾಸಕರಾಗಿ ಆಯ್ಕೆಯಾದ ಹೆಗ್ಗಳಿಕೆ ಅವರದು. ತಂದೆ ಬಸವರಾಜ ಹಿಟ್ನಾಳ್‍ ಪರವಾಗಿ ಹಲವು ವಿಧಾನಸಭಾ ಚುನಾವಣೆಗಳಲ್ಲಿ ಪ್ರಚಾರ ಮಾಡಿದ್ದರು. ತಂದೆಯ ಗರಡಿಯಲ್ಲಿ ಪಳಗಿದ್ದು ಗೆಲುವಿನ ದಡ ಸೇರಿಸಿತು.

ಆರು ತಿಂಗಳು ಬೇಕಾಯಿತು: 'ಶಾಸಕನಾಗಿ ಮೊದಲು ಸದನ ಪ್ರವೇಶ ಮಾಡಿದಾಗ ಸಾಕಷ್ಟು ಅಚ್ಚರಿಗಳನ್ನು ಕಂಡೆ. ಹಿರಿಯರ ಮಾತಿನ ಲಹರಿ ಕುತೂಹಲ ಮೂಡಿಸಿತು. ಸದಸ್ಯರ ವಾಗ್ಬಾಣಗಳು, ಬೇರೆ ಭಾಗಗಳ ಜನಪ್ರತಿನಿಧಿಗಳು ಪ್ರಶ್ನೆಗಳನ್ನು ಕೇಳುತ್ತಿದ್ದ ವೈಖರಿ ಹೊಸ ಅನುಭವ ನೀಡಿತು' ಎಂದು ನೆನಪಿಗೆ ಜಾರಿದರು.

ಹಿರೇಹಳ್ಳ ಯೋಜನೆಯ ಅನುಷ್ಠಾನ ಅವರು ಸದನದಲ್ಲಿ ಪ್ರಸ್ತಾಪಿಸಿದ ಮೊದಲ ವಿಷಯ. ಹಿರೇಹಳ್ಳದ ನಾಲೆಗಳಲ್ಲಿ ಹೂಳು ತುಂಬಿತ್ತು. ನೀರು ಕೊನೆಯ ಭಾಗ ತಲುಪುತ್ತಿರಲಿಲ್ಲ. ಈ ಅಂಶವನ್ನು ಪ್ರಸ್ತಾಪಿಸಿದಾಗ ಯುವ ಶಾಸಕನತ್ತ ಎಲ್ಲರ ಚಿತ್ತ ನೆಟ್ಟಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಎಂ.ಬಿ.ಪಾಟೀಲ ಶಾಸಕರ ಮಾತನ್ನು ತಾಳ್ಮೆಯಿಂದ ಆಲಿಸಿದರು. ಎಂ.ಬಿ.ಪಾಟೀಲ ಖುದ್ದು ಭೇಟಿ ನೀಡಿ ನಾಲೆ ಪರಿಶೀಲಿಸುವ ಅಭಯ ನೀಡಿದ್ದರು.

'ಚುಕ್ಕಿ ಗುರುತಿನ ಪ್ರಶ್ನೆ, ಲಿಖಿತ ಉತ್ತರ, ಶೂನ್ಯ ವೇಳೆ ಎಂದರೇನು ಎಂಬುದೇ ಗೊತ್ತಿರಲಿಲ್ಲ. ಯಾವ ಸಂದರ್ಭದಲ್ಲಿ ಎಂಥ ಪ್ರಶ್ನೆ ಕೇಳಬೇಕು ಎಂಬುದರ ಮಾಹಿತಿಯೂ ಇರಲಿಲ್ಲ. ಹೀಗಾಗಿ ಆರಂಭದಲ್ಲೇ ಪ್ರಶ್ನೆ ಕೇಳಲು ಹಿಂಜರಿದಿದ್ದೆ' ಎಂದು ಸದನದ ಅನುಭವ ಬಿಚ್ಚಿಟ್ಟರು.

'ವಿಧಾನಸಭೆಯಲ್ಲಿ ಇದ್ದ ಬಹುತೇಕರು ಅಪರಿಚಿತರು. ಎಲ್ಲರ ಬಳಿಗೆ ಖುದ್ದು ತೆರಳಿ ಸ್ವಪರಿಚಯ ಮಾಡಿಕೊಂಡೆ. ವಿರೋಧ ಪಕ್ಷದವರೂ ಪ್ರೀತಿಯಿಂದ ಕಂಡರು' ಎಂದು ಖುಷಿ ಹಂಚಿಕೊಂಡರು.

ಯುವಕರಿದ್ದಾಗ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು. ಹಳ್ಳಿಗಳ ಯುವಕರ ಜತೆಗಿನ ಒಡನಾಟವೂ ಹೆಚ್ಚು. ಇದು ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಲು ನೆರವಾಯಿತು.

ಆದರೆ, ಜಿಲ್ಲಾ ಪಂಚಾಯಿತಿಗೂ ವಿಧಾನಸಭೆಗೂ ಅಜಗಜಾಂತರ ವ್ಯತ್ಯಾಸ. ಎರಡೂ ಸಾಂವಿಧಾನಿಕ ಸಂಸ್ಥೆಗಳ ಕಾರ್ಯವೈಖರಿಯಲ್ಲಿ ಶೇ 100ರಷ್ಟು ವ್ಯತ್ಯಾಸ ಇದೆ. ಇದೇ ಕಾರಣಕ್ಕೆ ಹೊಣೆ ಅರ್ಥ ಮಾಡಿಕೊಳ್ಳಲು ಆರು ತಿಂಗಳು ಬೇಕಾಯಿತು ಎಂಬುದನ್ನು ವಿನಯದಿಂದಲೇ ಒಪ್ಪಿಕೊಳ್ಳುತ್ತಾರೆ.

ನೆನಪು: ಮೊದಲ ಬಾರಿ ಸ್ಪರ್ಧಿಸಿದಾಗ ಸಾಕಷ್ಟು ಮುಖಂಡರು ಸಹಕಾರ ನೀಡಿದ್ದಾರೆ. ಸುರೇಶ ದೇಸಾಯಿ, ಮಹೇಂದ್ರ ಛೋಪ್ರಾ, ಅಂದಣ್ಣ ಅಗಡಿ ರಾಘವೇಂದ್ರ ಅವರ ಬೆಂಬಲಕ್ಕೆ ನಿಂತಿದ್ದರು. ಈ ಎಲ್ಲರ ನೆರವಿನಿಂದಲೇ ವಿಧಾನಸೌಧದ ಮೆಟ್ಟಿಲು ಹತ್ತಿದ್ದಾರೆ.

'ವಿವಿಧ ಇಲಾಖೆಗಳ ಸಚಿವರು, ಅಧಿಕಾರಿಗಳೊಂದಿಗೆ ಹೇಗೆ ಮಾತುಕತೆ ನಡೆಸಬೇಕು ಎನ್ನುವ ಬಗ್ಗೆ ತಾವು ಇನ್ನೂ ಪಳಗಬೇಕಾಗಿದೆ’ ಎಂಬುದನ್ನು ಒಪ್ಪುತ್ತಾರೆ.

**

ಜಿಲ್ಲಾ ಪಂಚಾಯಿತಿಯೇ ಮೆಟ್ಟಿಲು

ಕೆ.ರಾಘವೇಂದ್ರ ಹಿಟ್ನಾಳ್ ಅವರು ಎರಡು ಬಾರಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಮೊದಲ ಅವಧಿಯಲ್ಲಿ 20 ತಿಂಗಳು ಹಾಗೂ ಎರಡನೇ ಅವಧಿಯಲ್ಲಿ 12 ತಿಂಗಳು ಅಧಿಕಾರದಲ್ಲಿದ್ದರು. 2013ರಲ್ಲಿ ಶಾಸಕರಾದರು. 2004 ಮತ್ತು 2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. ತಂದೆಗೆ ಅನಾರೋಗ್ಯ ಬಾಧಿಸಿದಾಗ ಪ್ರಚಾರದ ಅಖಾಡಕ್ಕೆ ದುಮುಕಿದ್ದರು.

2008ರಲ್ಲಿ ಅಳವಂಡಿ ಜಿಲ್ಲಾ ಪಂಚಾಯಿತಿಯಿಂದ ಸ್ಪರ್ಧೆಗೆ ಇಳಿದರು. ಆ ಪ್ರಯತ್ನದಲ್ಲಿ ಗೆಲುವು ಲಭಿಸಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಿರಿಯೂ ಒಲಿಯಿತು. ಕೊಪ್ಪಳ ತಾಲ್ಲೂಕಿನ ಹಿಟ್ನಾಳ್ ಅವರ ಊರು. ಆದರೆ, ಬೇರೆ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿಗೆ ಸ್ಪರ್ಧೆ ಮಾಡಿದಾಗಲೂ ಹುಟ್ಟೂರಿನ ಅಭಿಮಾನ ಕಡಿಮೆ ಆಗಿರಲಿಲ್ಲ. ಹಿಟ್ನಾಳ ಕ್ಷೇತ್ರದಿಂದ ಸ್ಪರ್ಧೆ ಮಾಡಿದಾಗ ಭಾರಿ ಅಂತರದಲ್ಲಿ ಗೆಲವು ಕಂಡಿದ್ದರು. ಈ ಗೆಲುವು ಮತ್ತೊಮ್ಮೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷಗಾದಿ ತಂದುಕೊಟ್ಟಿತ್ತು.

**

ಸಿದ್ದರಾಮಯ್ಯ ‘ಮಾನಸ ಪುತ್ರ’

ಅವರಿಗೆ ಶಾಸಕ ಸ್ಥಾನವೂ ಅನಾಯಾಸವಾಗಿ ಒಲಿಯಿತು. ಗೆಲುವಿಗೆ ಕಾರಣವಾಗಿದ್ದು ಸಿದ್ದರಾಮಯ್ಯ ಜತೆಗಿನ ನಂಟು. ಕ್ಷೇತ್ರಕ್ಕೆ ಹೆಚ್ಚು ಅನುದಾನವನ್ನು ರಾಜ್ಯ ಸರ್ಕಾರ ನೀಡಿದೆ. ಇದೇ ಕಾರಣಕ್ಕೆ ಕ್ಷೇತ್ರದ ಅವರನ್ನು ಮುಖ್ಯಮಂತ್ರಿಯ ‘ಮಾನಸ ಪುತ್ರ’ ಎಂದು ಬಣ್ಣಿಸುತ್ತಾರೆ.

ಹಿಟ್ನಾಳದಲ್ಲಿ ಪ್ರಾಥಮಿಕ ಶಿಕ್ಷಣ, ಹಗರಿಬೊಮ್ಮನಹಳ್ಳಿಯಲ್ಲಿ ಪ್ರೌಢಶಿಕ್ಷಣ ಹಾಗೂ ಧಾರವಾಡದಲ್ಲಿ ಉನ್ನತ ವ್ಯಾಸಂಗವನ್ನು ಪೂರೈಸಿದ್ದಾರೆ.

**

1994ರ ಚುನಾವಣೆಯಿಂದಲೂ ಕೆಲಸ ಮಾಡುತ್ತಿದ್ದೇನೆ. ತಂದೆ, ಸಹೋದರನ ಪರವಾಗಿ ಸಾಕಷ್ಟು ಸಭೆ, ಸಮಾರಂಭಗಳನ್ನು ಆಯೋಜಿಸಿದ್ದೆ. ಹೀಗಾಗಿ ವಿಧಾನಸಭೆ ಚುನಾವಣೆ ಸವಾಲು ಎನಿಸಲಿಲ್ಲ.

– ಕೆ.ರಾಘವೇಂದ್ರ ಹಿಟ್ನಾಳ್ , ಶಾಸಕ, ಕೊಪ್ಪಳ ವಿಧಾನಸಭಾ ಕ್ಷೇತ್ರ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry