ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮಾಸಾಶನ: ಬಿಜೆಪಿ ಆಕ್ರೋಶ

Last Updated 24 ಮಾರ್ಚ್ 2018, 11:34 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನಕ್ಕೆ ಅರ್ಜಿ ಸಲ್ಲಿಸಿ ಮಂಜೂರಾತಿ ಪತ್ರ ಪಡೆದು ವರ್ಷ ಕಳೆದರೂ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ರೈತ ಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ಶುಕ್ರವಾರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರೈತ ನಾಯಕ ಕೆ.ಎಸ್‌.ನಂಜುಂಡೇಗೌಡ ನೇತೃತ್ವದಲ್ಲಿ ತಾಲ್ಲೂಕು ಕಚೇರಿಗೆ ತೆರಳಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್‌ ಡಿ.ನಾಗೇಶ್‌ ಅವರನ್ನು ಪ್ರಶ್ನಿಸಿದರು.

‘ತಾಲ್ಲೂಕಿನಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಮಂಜೂರಾತಿಗೆ ಅರ್ಜಿ ಹಾಕಿ ಕಾದು ಕುಳಿತಿದ್ದಾರೆ. ಸಾವಿರಕ್ಕೂ ಹೆಚ್ಚು ಜನರಿಗೆ ವರ್ಷದ ಹಿಂದೆಯೇ ಮಂಜೂರಾತಿ ಪತ್ರ ಕೂಡ ಸಿಕ್ಕಿದೆ. ಆದರೆ ಹಣ ಬಿಡುಗಡೆ ಆಗಿಲ್ಲ. ಜನರು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದ ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ದೂರಿದರು.

‘ತಾಲ್ಲೂಕಿನ ಮೈಸೂರು ಗಡಿ ಭಾಗದಲ್ಲಿ ಸರ್ಕಾರಿ ಜಮೀನನ್ನು ಉದ್ಯಮಿಗಳು ಅತಿಕ್ರಮಿಸುತ್ತಿದ್ದಾರೆ. ನೌಕರರ ಕುಮ್ಮಕ್ಕಿನಿಂದ ಮೂಲ ದಾಖಲೆಗಳನ್ನೇ ತಿದ್ದುಪಡಿ ಮಾಡಲಾಗಿದೆ. ಕೆಬಿಎಲ್‌ ಹೆಸರಿನ ಕಂಪೆನಿ ನಾಲ್ಕೈದು ಎಕರೆಗಳಷ್ಟು ಬೆಲೆ ಬಾಳುವ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡಿದೆ. ಹುಲಿಕೆರೆ ಬಳಿ ಜುವಾರಿ ಗಾರ್ಡನ್‌ ಸಿಟಿ ಹೆಸರಿನ ಕಂಪೆನಿ ಸಾರ್ವಜನಿಕರ ರಸ್ತೆಗೆ ಬೇಲಿ ಹಾಕಿಕೊಂಡಿದೆ. ಮಿನಿ ವಿಧಾನಸೌಧದಲ್ಲಿ ಸಿಬ್ಬಂದಿಯೇ ಇರುವುದಿಲ್ಲ. ಕರ್ತವ್ಯದ ವೇಳೆ ಟೀ ಅಂಗಡಿಗಳ ಬಳಿ ಕಾಲ ಕಳೆಯುತ್ತಾರೆ. ಈ ಎಲ್ಲ ಅಕ್ರಮಗಳನ್ನು ತಡೆಗಟ್ಟಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ತಹಶೀಲ್ದಾರ್‌ ಡಿ. ನಾಗೇಶ್‌ ಮಾತನಾಡಿ, ‘ಜುವಾರಿ ಗಾರ್ಡನ್‌ ಸಿಟಿ ರಸ್ತೆಗೆ ಬೇಲಿ ಹಾಕಿಮಕೊಂಡಿರುವ ಸಂಗತಿ ಗಮನಕ್ಕೆ ಬಂದಿದ್ದು, ಶೀಘ್ರ ಸ್ಥಳ ಪರಿಶೀಲನೆ ನಡೆಸುತ್ತೇವೆ. ಮಾಸಾಶನ ಬಿಡುಗಡೆ ವಿಳಂಬಕ್ಕೆ ಖಜಾನೆಯ ಕೋಡ್‌ (ಕೆ–2) ಕಾರಣವಾಗಿದ್ದು, ಅದನ್ನು ಸರಿಪಡಿಸಲು ಕ್ರಮ ವಹಿಸಲಾಗುತ್ತಿದೆ. ಎರಡು ವಾರಗಳಲ್ಲಿ ಎಲ್ಲ ಫಲಾನುಭವಗಳಿಗೆ ಮಾಸಾಶನ ಕೊಡಿಸಲು ಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮರಳಾಗಾಲ ಕೃಷ್ಣೇಗೌಡ, ಪಿಎಸ್‌ಎಸ್‌ಕೆ ನಿರ್ದೇಶಕರಾದ ಪಾಂಡು, ಬಿ.ಸಿ.ಕೃಷ್ಣೇಗೌಡ, ಮಹದೇವು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT