(ಪರ)ಲೋಕ ಕಥೆ

7

(ಪರ)ಲೋಕ ಕಥೆ

Published:
Updated:
(ಪರ)ಲೋಕ ಕಥೆ

ಮೂಲ: ಗೀತ ಚತುರ್ವೇದಿ(ಹಿಂದಿ)

ಅನುವಾದ: ಮೆಹಬೂಬ ಮುಲ್ತಾನಿ

ಒಂದಾನೊಂದು ಕಾಲದ ಮಾತು. ಒಂದು ಬೀಜವಿತ್ತು. ಅದರ ಹತ್ತಿರ ಒಂದು ಭೂಮಿಯಿತ್ತು. ಬೀಜ ಮತ್ತು ಭೂಮಿ ಗಾಢವಾಗಿ ಪ್ರೀತಿಸುತ್ತಿದ್ದರು. ಬೀಜ ಯಾವತ್ತೂ ನಲಿದಾಡುತ್ತಾ ಭೂಮಿಯ ಮಡಿಲಿನಲ್ಲಿಯೇ ಇರಬಯಸುತ್ತಿತ್ತು. ಭೂಮಿಯಾದರೂ ಅಷ್ಟೇ, ಬೀಜವನ್ನು ತನ್ನ ಪ್ರೀತಿ ತುಂಬಿದ ಬಾಹುಗಳಿಂದ ಸುರಕ್ಷಿತವಾಗಿ ಅಪ್ಪಿಕೊಂಡೇ ಬೀಜಕ್ಕೆ ಮೊಳಕೆ ಒಡೆಯಲು ಹೇಳುತ್ತಿತ್ತು. ಬೀಜಕ್ಕೆ ಸುತಾರಾಂ ಇಷ್ಟವಿರಲಿಲ್ಲ. ನಿಗಿ ನಿಗಿ ಬಿಸಿಲಿನಿಂದಾಗಿ ಭೂಮಿಗೆ ಬಾಯಾರಿಕೆಯಾಗಿದ್ದೇ ತಡ ವರುಣನ ದರ್ಶನವಾಯಿತು.‌

ವರುಣನ ಕೃಪೆ, ಭೂಮಿಯ ಮಾತಿನಿಂದಾಗಿ ಬೀಜ ಮೊಳೆಯದೇ ದಾರಿಯೇ ಇರಲಿಲ್ಲ. ಅರ್ಧ ಮನಸ್ಸಿನಿಂದಲೇ ಬೀಜ ಮೊಳಕೆ ಒಡೆದು ಭೂಮಿಯಲ್ಲಿ ಬೇರು ಬಿಟ್ಟು ಹುಲುಸಾಗಿ ಚಿಗುರತೊಡಗಿತು.

ಅರ್ಧ ಮನಸ್ಸು ಕೂಡಾ ರಮಣೀಯವಾಗಿರುತ್ತದೆ ಎನ್ನುವುದಕ್ಕೆ ಸಾಕ್ಷಿಯಾಗಿ ಚೆನ್ನಾಗಿ ಬೆಳೆದು ಎತ್ತರವಾಯಿತು. ಬೀಜ ಬೆಳೆದು ಎತ್ತರವಾದರೆ ಭೂಮಿ ಹಾಗಲ್ಲ, ಹರಡುವ ಗುಣ. ಮರ ಕೂಡ ಎಷ್ಟೇ ಹರಡಿಕೊಂಡರೂ ಎತ್ತರವೇ ಅದರ ಗುರುತು.

ಇಬ್ಬರೂ ದೂರವಾದರು. ವಿಚಿತ್ರವೆಂದರೆ ಬೇರು ಮಾತ್ರ ಭೂಮಿಯಲ್ಲಿಯೇ ಇವೆ. ಆದರೆ, ಬೇರುಗಳಿಗೆ ಯಾರೂ ಮರವೆನ್ನವುದಿಲ್ಲ. ಮರವೆಂದರೆ ಭೂಮಿಯಿಂದ ಎತ್ತರಕ್ಕೆ ಬೆಳೆಯುವ ಲಕ್ಷಣ. ಭೂಮಿಗೆ ಹತ್ತಿಕೊಂಡೇ ಉಳಿದರೆ ಅದು ಮರವಾಗುವುದಿಲ್ಲ... ಯಕಶ್ಚಿತ್ ಹುಲ್ಲಾಗುತ್ತದೆ.

ಎತ್ತರ ಬೆಳೆದ ಮರ ಮತ್ತೆ ಬೀಜವಾಗಲು ಬಯಸುತ್ತಿತ್ತು. ಭೂಮಿಯೂ ಅಷ್ಟೇ ಮೊದಲಿನ ಬೀಜವೇ ಚೆಂದ ಎಂದುಕೊಳ್ಳುತ್ತಿತ್ತು. ಆದರೆ, ಮರವೆಂದೂ ಬೀಜವಾಗಲು ಸಾಧ್ಯವಿಲ್ಲ ಎನ್ನುವ ಅರಿವು ಇಬ್ಬರಲ್ಲೂ ಇದ್ದಂತಿತ್ತು. ಅದೇ ಮರ ಸಾವಿರ ಬೀಜಗಳಾಗುವ ಸಾಧ್ಯತೆ ಇದ್ದರೂ ಮೊದಲಿನ ಬೀಜ ಮಾತ್ರ ಆಗದು. ಭೂಮಿಯೂ ಅಷ್ಟೇ ಈ ಸಾವಿರ ಬೀಜಗಳನ್ನು ಅಪ್ಪಿಕೊಂಡರೂ ಆ ಮೊದಲಿನ ಬೀಜದ ಅಪ್ಪುಗೆಯ ಸಖ್ಯ ಪಡೆಯಲಾರದು. ವಿರೋಧಾಭಾಸವೆಂದರೆ ಇದೇ ಇರಬೇಕು. ಭೂಮಿಗೆ ಮರವೆಂದರೆ ಕೇವಲ ನೆರಳಷ್ಟೆ.

ಜೀವನದಲ್ಲಿ ಎಲ್ಲ ವಸ್ತುಗಳು ಅದಲು ಬದಲಾಗುವುದಿಲ್ಲ. ರಾತ್ರಿಯೊಂದು ಕತ್ತಲೆ ತುಂಬಿದ ದಿನವಾಗಲೀ ದಿನವೊಂದು ಬೆಳಕಿನ ರಾತ್ರಿಯಾಗಲೀ ಎಂದೂ ಆಗುವುದಿಲ್ಲ. ಚಂದ್ರ ತಂಪು ಸೂರ್ಯನಾಗಲೀ ಸೂರ್ಯ ಬಿಸಿಯಾದ ಚಂದ್ರನಾಗಲೀ ಆಗಲು ಸಾಧ್ಯವೇ ಇಲ್ಲ. ಭೂಮಿ ಮತ್ತು ಆಕಾಶ ಎಲ್ಲೆಂದರೆ ಎಲ್ಲಿಯೂ ಒಂದಾಗುವುದಿಲ್ಲ.

ನಾನು ಮರದ ತೀರಾ ಹತ್ತಿರ ಹೋಗಿ ಪಿಸುಮಾತಿನಲ್ಲಿ ಹೇಳಿದೆ. ‘ಕೇಳು ನೀನು ಈಗ ಕೂಡಾ ಬೀಜವೇ. ಅದೇ ಮೊದಲಿನ ಬೀಜವೇ. ಎತ್ತರವೆಂಬ ಅಮಲೇರಿಸಿಕೊಳ್ಳಬೇಡ. ಈಗಲೂ ನೀನು ಏನೂ ಬೆಳೆದಿಲ್ಲ. ನೀನೊಂದು ಭೂಮಿಯ ಕಲ್ಪನೆ ಅಷ್ಟೆ.’

‘ಎಲ್ಲ ಮರಗಳು ಭೂಮಿಯ ಕಲ್ಪನೆಯಲ್ಲಿ ಬೆಳೆಯುತ್ತವೆ, ವಾಸ್ತವದಲ್ಲಿ ಅವು ಬೀಜಗಳು ಮಾತ್ರ’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry