‘ಹೆಣ್ಣು–ಗಂಡಿನ ಮಧ್ಯೆ ತಾರತಮ್ಯ ಸಲ್ಲದು’

7
ಶಿಕಾರಿಪುರ: ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ತೇಜಸ್ವಿನಿ ರಾಘವೇಂದ್ರ

‘ಹೆಣ್ಣು–ಗಂಡಿನ ಮಧ್ಯೆ ತಾರತಮ್ಯ ಸಲ್ಲದು’

Published:
Updated:

ಶಿಕಾರಿಪುರ: ಹೆಣ್ಣು ಗಂಡಿನ ಮಧ್ಯೆ ತಾರತಮ್ಯ ಸಲ್ಲದು. ಹೆಣ್ಣು – ಗಂಡು ಪರಸ್ಪರ ಹೊಂದಾಣಿಕೆ ಜೀವನ ನಡೆಸಬೇಕು ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ನಿರ್ದೇಶಕಿ ತೇಜಸ್ವಿನಿ ರಾಘವೇಂದ್ರ ಸಲಹೆ ನೀಡಿದರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಸುಗ್ರಾಮ ಗ್ರಾಮ ಪಂಚಾಯ್ತಿ ಮಹಿಳಾ ಚುನಾಯಿತ ಸದಸ್ಯರ ಒಕ್ಕೂಟ, ದಿ ಹಂಗರ್‌ ಪ್ರಾಜೆಕ್ಟ್‌ ಹಾಗೂ ತರೀಕೆರೆ ವಿಕಸನ ಸಂಸ್ಥೆ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ಸ್ತ್ರೀ, ಪುರುಷರನ್ನು ಸಮಾನವಾಗಿ ನೋಡಬೇಕು. ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರದಂತಹ ಪ್ರಕರಣಗಳು ನಿಲ್ಲಬೇಕು. ಹೆಣ್ಣನ್ನು ರಕ್ಷಣೆ ಮಾಡುವ ಜವಾಬ್ದಾರಿ ಕೂಡ ಪುರುಷರ ಮೇಲಿದೆ ಎಂದರು.

ಒಂದು ಕಾಲದಲ್ಲಿ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ, ಪ್ರಸ್ತುತ ಬಾಹ್ಯಾಕಾಶ ಪ್ರಯಾಣದವರೆಗೂ ತನ್ನ ಕಾರ್ಯವ್ಯಾಪ್ತಿ ಹೆಚ್ಚಿಸಿಕೊಂಡಿದ್ದಾಳೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಅಡ್ಡ ದಾರಿ ತುಳಿಯದಂತೆ ಸರಿ ಮಾರ್ಗ ತೋರಿಸುವ ಜವಾಬ್ದಾರಿ ತಾಯಂದಿರ ಮೇಲಿದೆ ಎಂದು ಕಿವಿಮಾತು ಹೇಳಿದರು.

ಬೆಂಗಳೂರು ಲ್ಯಾಂಡೆಸಾ ಸಂಸ್ಥೆ ಯೋಜನಾ ವ್ಯವಸ್ಥಾಪಕರಾದ ಯಶೋದಾ ಮಾತನಾಡಿ, ‘ಮಹಿಳೆಯರು ಎಲ್ಲಾ ಕ್ಷೇತ್ರದ ಬಗ್ಗೆ ಅರಿವು ಹೊಂದಬೇಕು. ಹೆಣ್ಣು ಭೂಮಿಯ ಹಕ್ಕು ಹೊಂದಿದಾಗ ಕುಟುಂಬ ಆರ್ಥಿಕವಾಗಿ ಸದೃಢವಾಗುತ್ತದೆ. ಆಗ ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ ಕಡಿಮೆಯಾಗುತ್ತದೆ’ ಎಂದರು.

ಸುಗ್ರಾಮ ಗ್ರಾಮ ಪಂಚಾಯ್ತಿ ಮಹಿಳಾ ಚುನಾಯಿತ ಸದಸ್ಯರ ಒಕ್ಕೂಟದ ಅಧ್ಯಕ್ಷೆ ಶಾಂತಕುಮಾರಿ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ರೇಣುಕಾ ಹನುಮಂತಪ್ಪ, ಮಮತಾ ಸಾಲಿ ಗದಿಗೆಪ್ಪ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಪರಮೇಶ್ವರಪ್ಪ, ಎಫ್‌ಪಿಎ

ಅಧ್ಯಕ್ಷೆ ಮಧುರಾ ಅಶೋಕ್‌, ತಹಶೀಲ್ದಾರ್‌ ಶೈಲಜಾ, ಪ್ರೊಬೇಷನರಿ ತಹಶೀಲ್ದಾರ್‌ ರಶ್ಮಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ನಿವೇದಿತಾರಾಜು, ವಕೀಲೆ ಪೂರ್ಣಿಮಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾನಾಯ್ಕ, ತರಲಘಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೇತ್ರಾವತಿ ಸಂತೋಷ್‌, ವಿಕಸನ ಸಂಸ್ಥೆ ಸಂಯೋಜಕ ಶ್ರೀನಿವಾಸ್‌, ಸುಗ್ರಾಮ ಒಕ್ಕೂಟ ಕಾರ್ಯದರ್ಶಿ ಶೀಲಾವತಿ ಇದ್ದರು.

ಮಹಿಳಾ ಸಬಲೀಕರಣ ಹಾಗೂ ಮಹಿಳಾ ಭೂ ಒಡೆತನದ ಮಹತ್ವ ವಿಷಯ ಕುರಿತು ಗ್ರಾಮ ಪಂಚಾಯ್ತಿ ಮಹಿಳಾ ಚುನಾಯಿತ ಸದಸ್ಯರಿಗೆ ಕಾರ್ಯಾಗಾರ ನಡೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry