ಬರ

7

ಬರ

Published:
Updated:
ಬರ

ಇಡೀ ರಾತ್ರಿ ಪಾಚಿಗಟ್ಟಿದ ಹೊಂಡಗಳಿಂದ ಮೇಲೆದ್ದ ಮಂಜು ಆ ಗುಡಿಸಲುಗಳ ಮೇಲೆ ಒಂದು ಕೊಳೆತ ವಾಸನೆಯನ್ನು ಹಬ್ಬಿಸುತ್ತಿತ್ತು. ಕಬ್ಬಿಣದಿಂದಾದ ಸಲಕರಣೆಗಳು ತುಕ್ಕು ಹಿಡಿಸಿಕೊಂಡಂತೆ ತಮ್ಮ ಹರಿತವನ್ನು ಕಳೆದುಕೊಂಡವು. ಗುಡಿಸಲುಗಳಿಗೆ ಹೊದಿಸಿದ್ದ ಹುಲ್ಲು ಬಿಸಿಲ ಝಳಕ್ಕೆ ಸಿಕ್ಕಿ ತತ್ತರಿಸುವ ಬಯಲಿನ ಹಾಗೆ ಮಿಸುಕಾಡುತ್ತ ಯಾವುದೇ ಕ್ಷಣದಲ್ಲಿ ಹೊತ್ತಿಕೊಂಡು ಉರಿದುಬಿಡಲಿದೆಯೆನ್ನುವಂತೆ ಕಾಣಿಸುತ್ತಿತ್ತು. ತೆವಳುತ್ತಿದ್ದ ಗಾಳಿಯ ತುಂಬ ಸೊಳ್ಳೆಗಳು; ಗುಡಿಸಲೊಳಗೆ ಹಾರುವ ಹುಳುಹುಪ್ಪಟೆ, ಮೂಲೆಗಳಲ್ಲಿ ಮೂತಿ ತೋರಿಸುತ್ತ ನಾಲಗೆಯಾಡಿಸುವ ಹಾವು.

ಬೇಸಿಗೆಯುದ್ದಕ್ಕೂ ಮಕ್ಕಳ ಮೈಮೇಲೆಲ್ಲ ಗುಳ್ಳೆಗಳು, ಬೊಬ್ಬೆಗಳು, ಕೀವು ಸುರಿಸುವ ಹುಣ್ಣುಗಳು. ಉಸಿರಾಡುವುದಕ್ಕೇ ಕಷ್ಟಪಡುತ್ತಿದ್ದ ಮುದುಕರಿಂದ ಸಾವಿನದೊಂದು ವಾಸನೆ ಹೊರಹೊಮ್ಮುತ್ತಿರುವಂತೆ. ಡಿಸ್ಟ್ರಿಕ್ಟ್‌ ಕಲೆಕ್ಟರರ ಆಜ್ಞೆಯಂತೆ ಪ್ರತಿದಿನವೂ ಬೆಳಿಗ್ಗೆಯೇ ಆ ಹಳ್ಳಿಗೆ ಹೋಗಿ ಕೊಳೆತು ನಾರುತ್ತಿರುವ ಹೊಂಡಗಳಿಗೆ ಕ್ರಿಮಿನಾಶಕಗಳನ್ನು ಸಿಂಪಡಿಸುವಂತೆ ನೋಡಿಕೊಳ್ಳುತ್ತಿದ್ದೆ; ಮಕ್ಕಳ ಮೈಯ ಹುಣ್ಣುಗಳಿಗೆ ಆಯಿಂಟ್‌ಮೆಂಟುಗಳನ್ನು ಹಂಚಿ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ನಮ್ಮ ಘನ ಸರ್ಕಾರದ ಆರೋಗ್ಯ ಇಲಾಖೆ ಅಚ್ಚುಮಾಡಿದ್ದ ಪ್ಯಾಂಫ್ಲೆಟ್ಟುಗಳನ್ನು ಹಂಚುತ್ತಿದ್ದೆ. ಐದು ವರ್ಷಗಳ ಹಿಂದೆ ಅದಾವ ಕಾರಣಕ್ಕೋ ಈ ಫಾಸಲೆಗೆ ಮಂತ್ರಿಗಳ ಜೊತೆ ಶಾಸಕರು, ಅಧಿಕಾರಿಗಳು, ಸರ್ವೇಯರುಗಳು ಬಂದಿದ್ದರಂತೆ. ಮಂತ್ರಿವರ್ಯರು ಹತ್ತು ಮೈಲಿ ದೂರದಲ್ಲಿರುವ ನದಿಗೆ ಈ ಊರಿನತ್ತ ಒಂದು ಕಾಲುವೆ ಕೊರೆಯಬೇಕೆಂದು ಆಜ್ಞೆ ಮಾಡಿದರಂತೆ. ಆಮೇಲೆ ಅವರು ಇತ್ತ ಬರಲಿಲ್ಲ. ಇಷ್ಟು ವರ್ಷಗಳಲ್ಲಿ ಅರ್ಧ ಮೈಲಿ ಕೂಡ ಕಾಲುವೆಯಾಗಿಲ್ಲ.

ಹಗಲೆಲ್ಲ ಮೈ ಉರಿಸುವ ಬಿಸಿಲು. ನೀರಿನ ಪಸೆಯಿಲ್ಲದ ಜಮೀನನ್ನು ಉತ್ತರೇನು ಬಂತು? ಊರ ಪಟೇಲರು ಡಕಾಯಿತರ ಗ್ಯಾಂಗನ್ನು ಸೇರಿದರಂತೆ. ಇನ್ನೆಲ್ಲೋ ವಿಧವೆಯರಾದವರಿಬ್ಬರು ಅವರ ದನದ ಕೊಟ್ಟಿಗೆಯಲ್ಲಿ ಠಿಕಾಣಿ ಹಾಕಿದರಂತೆ. ಇನ್ನಷ್ಟು ಕೂಸುಗಳು ಹುಟ್ಟಿದವು. ಹುಟ್ಟಿಸಿದವರು ಯಾರು ಎಂದು ಗೊತ್ತಾಗುವ ಮೊದಲೇ ಕೆಲವು ಅಸುನೀಗಿದವು. ಈ ಮಧ್ಯೆ ಎಲ್ಲೆಲ್ಲಿಗೋ ಹೋದ ಜನರು ಹಿಂತಿರುಗಿ ಬರಲಿಲ್ಲ. ಬಂದವರು ಸೂರನ್ನೋ ಹೆಣ್ಣನ್ನೋ ಮಗುವನ್ನೋ ಅನ್ನವನ್ನೋ ಹುಡುಕಾಡುತ್ತಿದ್ದವರು.

ಹಸುಮಕ್ಕಳು ಸಾಯುತ್ತಾರೆ. ಇದ್ದಕ್ಕಿದ್ದಂತೆ ವಯಸ್ಸಾಗುತ್ತಿರುವ ಯುವಕರು ಗುಳೆ ಹೋಗುತ್ತಾರೆ. ಹುಡುಗಿಯರು ಹದಿನೈದು ಹದಿನಾರು ವರ್ಷಕ್ಕೇ ಬಳಲಿ ಬೆಂಡಾಗುತ್ತಾರೆ. ಒಮ್ಮೊಮ್ಮೆ ಆಸೆಗಳು ಕೆರಳಿ, ದ್ವೇಷಗಳು ಮರಳಿ ರಾತ್ರಿಯಡೀ ಬೊಬ್ಬೆ, ಆಕ್ರಂದನ; ಕೆಲವೊಮ್ಮೆ ಉದ್ದೇಶವಿಲ್ಲದೆಯೋ ಉದ್ದೇಶಪೂರ್ವಕವಾಗಿಯೋ ನಡೆದುಬಿಡುವ ಕೊಲೆ. ಅಂಥ ರಾತ್ರಿಗಳಲ್ಲಿ ನನ್ನ ಹಾಸಿಗೆಯ ಪಕ್ಕ ಒಂದು ಬಡಿಗೆ, ತಲೆದಿಂಬಿನಡಿ ಒಂದು ಚೂರಿ ಇರಲೇಬೇಕು.

ದಿನಗಳು ಸದ್ದಿಲ್ಲದೆ ಕಳೆದುಹೋಗುತ್ತವೆ. ಪರಿಸ್ಥಿತಿ ಬಿಗಡಾಯಿಸುತ್ತಿರುವ ಬಗ್ಗೆ ವಿವರ ವಿವರವಾಗಿ ಬರೆದು ಕಳಿಸಿದ ಒಂದು ಪತ್ರಕ್ಕೂ ಅಧಿಕಾರಿಗಳಿಂದ ಉತ್ತರವಿಲ್ಲ. ಏನಾಗುತ್ತಿದೆಯೆಂಬುದಕ್ಕೆ ಸಾಕ್ಷಿಯುಂಟು. ಆದರೆ ಯಾರಿಗೆ ಬೇಕಾಗಿದೆ ಸಾಕ್ಷಿ? ನಿನ್ನೆ ನಟ್ಟಿರುಳಿನಲ್ಲಿ ಸುಂಟರಗಾಳಿಯೊಂದು ಹಾರಿಸಿದ ದೂಳಿನಿಂದಾಗಿ ಇವತ್ತು ಹೊತ್ತು ಹುಟ್ಟಿದ್ದೇಗೊತ್ತಾಗಲಿಲ್ಲ. ಮನೆಗಳಿಂದ ಹೊರಬಿದ್ದ ಗಂಡಸರು ಒಂದೆಲೆಯೂ ಇಲ್ಲದ ಅರಳಿಮರದ ಕಡೆ ಹೆಜ್ಜೆ ಹಾಕುತ್ತಿದ್ದರು. ಕೊಡಗಳನ್ನು ಹೊತ್ತ ಹೆಂಗಸರು ನಾಲ್ಕು ಮೈಲಿ ದೂರದ ಹೊಂಡದಲ್ಲಿ ಪಾಚಿಗಟ್ಟಿದ ನೀರಾದರೂ ಸರಿ, ತರೋಣವೆಂದು ಹೊರಟಿದ್ದರು. ಆಗ ದೂರದಲ್ಲಿ ಮಸಕುಮಸಕಾಗಿ ಕಾಣುತ್ತಿದ್ದ ಗುಡ್ಡದ ಮೇಲೆ ಇದ್ದಕ್ಕಿದ್ದಂತೆ ಒಂದು ಜೀಪು ನಿಂತಂತೆ, ಅದರಿಂದ ಮೂರು ನಾಲ್ಕು ಮಂದಿ ಇಳಿದಂತೆ, ಅವರಲ್ಲೊಬ್ಬರು ಕೈಬೀಸುತ್ತ ಬರುತ್ತಿರುವಂತೆ ಕಾಣಿಸಿತು.

-ಯಾರದು?

-ನಾವು ನೋಡಿದವರಲ್ಲ. ಯಾರೋ ಕಳ್ಳರೋ ಡಯಾಯಿತರೋ.

-ಹಾಗಾದರೆ ನಾವು ಜಾಗ್ರತೆಯಾಗಿರಬೇಕು.

-ಹತ್ತಿರ ಬರಲಿ, ಒಬ್ಬನನ್ನು ಬಲಿ ಹಾಕಿದರೆ ಉಳಿದೋರೆಲ್ಲ ಓಡಿಹೋಗುತ್ತಾರೆ.

ಈ ಚರ್ಚೆ ನಡೆಯುತ್ತಿರುವಾಗ ಭೂಮಿಯ ಹಬೆಯನ್ನೆಬ್ಬಿಸುತ್ತ ಮೇಲೇರುತ್ತಿದ್ದ ಬಿಸಿಲಲ್ಲಿ ಹಕ್ಕಿಗಳು ಚೀರಿದವು, ಮಿಡತೆಗಳು ಹಾರಿದವು, ನಾಯಿಗಳು ಬೊಗಳಿದವು, ಗೂಬೆಗಳು ಗೂಕ್‌ ಎಂದವು. ಆಕಾಶದಲ್ಲಿ ಹಾರಾಡಿದವು ಹಿಂಡು ಹಿಂಡು ಹದ್ದುಗಳು.

***

ಪ್ರಶ್ನೆ: ಹ್ಯಾಗಿದ್ದೀರಿ ಯಜಮಾನರೆ?

ಉತ್ತರ: ಹ್ಯಂಗಿರೋದಪ್ಪಾ, ಕುಡಿಯಾಕ್ ನೀರಿಲ್ಲ, ದನಕರೂಗ್ ಮೇವಿಲ್ಲ. ನೀವೇನು ವಿದಾನ ಸೋದದಿಂದ ಬಂದವರಾ?

ಪ್ರಶ್ನೆ: ಹೌದು.

ಉತ್ತರ: ಹಂಗಾದ್ರೆ ಸರೋಯ್ತು ಬುಡಿ. ಯೇ ಪುಟ್ಮಲ್ಲ ನಾನ್ ಯೋಳ್ತಿರಲಿಲ್ವಾ, ಬತ್ತಾರೆ ಬತ್ತಾರೆ ಅಂತ. ನಿಮ್ಗೆ ಗೊತ್ತೈತಾ ಸ್ವಾಮೇರೇ, ವಿದಾನ ಸೋದ ಕಟ್ದೋನು ನಾನು.

ಪ್ರಶ್ನೆ: ಅದ್ಸರಿ ಯಜಮಾನ್ರೇ, ವಿಷಯ ತಿಳಿದು ತುಂಬಾ....

ಉತ್ತರ: ಯಾವ ವಿಷ್ಯ? ನಾನು ಯಿದಾನ ಸೋದ ಕಟ್ಟಿದ್ ವಿಷ್ಯವಾ?

ಪ್ರಶ್ನೆ: ಅಲ್ಲ, ಅದಲ್ಲ. (ನಗು) ನೆನ್ನೆ ನಿಮ್ ಮಗಳು...

ಉತ್ತರ: ಔದು ಸ್ವಾಮೀ, ಇಲ್ಲೇ ಒಲೇ ತಾವ ಕುಂತಿದ್ಲು. ನಾನು ನೋಡ್ತಾ ನೋಡ್ತಾನೇ ಓಗ್ಬುಟ್ಲು.

ಪ್ರಶ್ನೆ: ಸಮಾಧಾನ ಮಾಡ್ಕೊಳ್ಳಿ ಯಜಮಾನ್ರೇ. ಎಲ್ಲಾ ದೈವೇಚ್ಛೆ. ನಾವೂ ಇವತ್ತಲ್ಲ ನಾಳೆ ಜಾಗ ಖಾಲಿ

ಮಾಡೋರೇ ಅಲ್ವಾ?

ಉತ್ತರ: ಔದು ಔದು, ಆದ್ರೆ ನಾನು ಮೊದ್ಲು ಓಯ್ತೀನಿ ಅಂದ್ಕೊಂಡಿದೆ. ನಮ್ಮ ಊರವ್ರೂ ಅಂಗೇ ಯೋಳ್ತಿದ್ರು.

ಪ್ರಶ್ನೆ: ಹಾಗನ್ಬೇಡಿ ಯಜಮಾನ್ರೇ, ಇನ್ನೂ ತುಂಬಾ ವರ್ಷ ಬದುಕಬೇಕು ನೀವು.

ಉತ್ತರ: ಬದುಕೋಕಾಗಲ್ಲ ಸ್ವಾಮೀ, ಬದುಕೋಕಾಗಲ್ಲ. ರೆಟ್ಟೆ ಇಡ್ಕಂಡದೆ, ಸೊಂಟ ಬಿದ್ದೋಗದೆ. ಎಡ ಕಾಲು ಬಾತ್ಕೊಂಡದೆ. ಕಣ್ಣೂ ಸರ‍್ಯಾಗ್‌ ಕಾಣ್ಸಲ್ಲ. ವಿದಾನ ಸೋದ ಕಟ್ಟಿ ಮುಗ್ಸೋವತ್ಗೆ ಐರಾಣಾಗೋಯ್ತು ಬುಡಿ. ಆಮ್ಯಾಕ್ ಮಲ್ಕೊಂಡೋನು ಮ್ಯಾಲ್ಕೇ ಏಳ್ಲಿಲ್ಲ.

ಪ್ರಶ್ನೆ: ನೀವೇನೂ ಯೋಚ್ನೆ ಮಾಡ್ಬೇಡಿ ಯಜಮಾನ್ರೇ, ನಾಳೆ ಬೆಂಗಳೂರಿಂದ ಡಾಕ್ಟರು ಬರ‍್ತಾರೆ. ನಿಮ್ಮನ್ನು ಪರೀಕ್ಷೆ ಮಾಡಿ, ನಿಮಗೆ ಬೇಕಾದ ಔಷಧಿ ಕೊಡ್ತಾರೆ. ಎಲ್ಲಾ ಸರಿ ಹೋಗುತ್ತೆ.

ಉತ್ತರ: ಏನ್ ಸರೋಗುತ್ತೋ ಏನೋ ಬುದ್ಧಿ. ಅಗ್ಲೆಲ್ಲಾ ಯಿಂಗೇ ಯಿಲ್ಲಿ ಮಲಗಿರ‍್ತೀನಾ, ರಾತ್ರಿ ಬೆಳ್ಗಿನ್ ಜಾವ್ದಾಗೆ ಬಾಗ್ಲು ತಕ್ಕೊಂಡ್ ಬತ್ತದೆ ನೋಡಿ, ಬಿಳಿ ಶ್ಯಾಲೆ ಉಟ್ಕೊಂಡು, ಕಾಲ್ಕ ಗೆಜ್ಜೆ ಕಟ್ಟೊಂದು...

ಪ್ರಶ್ನೆ: ಏನು ದೆವ್ವಾನಾ? (ನಗು)

ಉತ್ತರ: ದೆವ್ವಾನೇ. ಬಾಗ್ಲ್‌ ಅಲ್ಲಾಡುಸ್ತದೆ, ಆ ಮೂಲ್ಯಾಗ್‌ ಕುಂತ್ಕಂಡ್ ನನ್ನೇ ನೋಡ್ತದೆ, ಅದೆಂಗೋಯೋನೊ, ಬಗ್ಲಾಗಿಂದ ಅವೊತ್ತು ನಾನ್ ಬಾವ್ಯಾಗ್ ಬಿಸಾಕಿದ್ ಮಚ್ಚು ತೆಗ್ದು, ನಗ್ತಾ ನಗ್ತಾ ನನ್‌ಕಡೀಕೇ ಬಿಸಾಕ್ತದೆ...

ಪ್ರಶ್ನೆ: ಮಚ್ಚು? ಯಾವ ಮಚ್ಚು ಯಜಮಾನ್ರೇ? ಬಾವೀಗೆ ಯಾಕೆ ಎಸೆದಿರಿ?

ಉತ್ತರ: ಇನ್ನೇನು ಮಾಡ್ಬೇಕಾಗಿತ್ತು, ಮಚ್ಚೆಲ್ಲಾರ ಕುತಾ ಆದ್ರೆ, ಯೆಂಡ್ರು ಯೆಂಡ್ರಂಗ್‌ ಇಲ್ದಿದ್ರೆ....

ಏನಿವನು ಮಾತಾಡುತ್ತ ಇರೋದು? ತಲೆ ನೆಟ್ಟಗಿದೆಯೋ ಇಲ್ಲವೊ? ಹೀಗೆಲ್ಲ ನೀವು ಕೇಳಿದರೆ ನಾನೇನು ಹೇಳುವುದು. ನೀವು ದೊಡ್ಡ ಅಧಿಕಾರಿ, ಹೌದು. ಆದರೂ ವಯಸ್ಸಾದವರ ಜೊತೆ ಮಾತಾಡುವಾಗ ಹುಷಾರಾಗಿರಬೇಕು. ಅವರು ಒಂದು ಕ್ಷಣ ಇದ್ದ ಹಾಗೆ ಇನ್ನೊಂದು ಕ್ಷಣ ಇರುವುದಿಲ್ಲ. ಅವರ ಮಾತು ಹೇಗೆ ನಿಮಗೆ ಅರ್ಥವಾಗುವುದಿಲ್ಲವೋ ಹಾಗೆ ನಿಮ್ಮ ಮಾತೂ ಅವರಿಗೆ ಅರ್ಥವಾಗುವುದಿಲ್ಲ. ಅವರಿಗೆ ನೀವೇನಾದರೂ ಕೊಡುವುದಿದ್ದರೆ ಇವತ್ತೇ ಈಗಲೇ ಕೊಡಬೇಕು. ನಾಳೆ, ನಾಳಿದ್ದು, ಒಂದು ವರ್ಷದ ಮೇಲೆ ಕೊಡುತ್ತೇವೆಂದರೆ ಅವರು ನಂಬುವುದಿಲ್ಲ. ಹೌದು, ನೀವು ಕಣ್ಣಾರೆ ನೋಡಬೇಕು, ನೋಡಿದ್ದನ್ನು ಬರೆಯಬೇಕು, ಬರೆದದ್ದನ್ನು ನಿಮ್ಮ ಶಿಫಾರಸಿನ ಜೊತೆ ಮೇಲಿನವರಿಗೆ ಸಲ್ಲಿಸಬೇಕು. ಅದಕ್ಕೆಲ್ಲಾ ಕಾಲಾವಕಾಶ ಬೇಕೆಂದು ನನಗೆ ಗೊತ್ತಿಲ್ಲವೆ? ಏನೆಂದಿರಿ? ಈ ಕ್ಯಾಮೆರಾ ಗರ್ರೆನ್ನುತ್ತಿರುವ ಸದ್ದಿನಲ್ಲಿ ಏನೂ ಕೇಳಿಸುತ್ತಿಲ್ಲ...

**

ನಾನು ಬೆಂಗಳೂರಿನಲ್ಲಿರುವ ವಿಧಾನಸೌಧವನ್ನು ನೂರಾರು ಸಲ ದೂರದಿಂದಲೂ ಕೆಲವೇ ಸಲ ಒಳಗಿನಿಂದಲೂ ನೋಡಿರುವವನು. ಆ ಭವ್ಯ ಕಟ್ಟಡದಲ್ಲಿ ನಮ್ಮ ಘನ ಸರ್ಕಾರವಿದೆಯಲ್ಲವೆ? ನನ್ನ ಕೆಲಸಕ್ಕೆ ಸಂಬಂಧಿಸಿದಂತೆ ನಾನು, ಅದರೊಳಗಿರುವ ಮಂತ್ರಿಗಳನ್ನಲ್ಲದಿದ್ದರೂ, ಕೆಲವು ಶಾಸಕರನ್ನು, ಅನೇಕ ಅಧಿಕಾರಿಗಳನ್ನು, ಕ್ಲರ್ಕುಗಳನ್ನು ಭೆಟ್ಟಿಯಾಗಿರುವವನು. ಆದರೂ ಅದರ ನಿರ್ಮಾಣದ ಚರಿತ್ರೆಯನ್ನು ತಿಳಿದುಕೊಳ್ಳುವುದಕ್ಕೆ ಇಷ್ಟು ವರ್ಷ ಬೇಕಾಯಿತು.

ವಿಧಾನ ಸೌಧದ ನಿರ್ಮಾಣಕ್ಕೆ ವಾಷಿಂಗ್ಟನ್ನಿನ ಕ್ಯಾಪಿಟೊಲ್, ಲಂಡನ್ನಿನ ಹೌಸ್‌ ಆಫ್‌ ಕಾಮನ್ಸ್‌ ಸ್ಫೂರ್ತಿಯಂತೆ. ಸ್ಫೂರ್ತಿಗೊಂಡವರು ಅಪ್ಪಟ ಮೈಸೂರಿನವರಾದ ಕೆಂಗಲ್ ಹನುಮಂತಯ್ಯನವರು; ಶಂಕುಸ್ಥಾಪನೆ ನೆರವೇರಿಸಿದವರು ಜವಾಹರಲಾಲ್ ನೆಹರೂ. ಅರವತ್ತು ಎಕರೆಯಷ್ಟು ಜಾಗವನ್ನು ಆಕ್ರಮಿಸಿಕೊಂಡಿರುವ, ಕಲ್ಲಿನಲ್ಲಿಯೇ ಕಟ್ಟಿರುವ ಕಟ್ಟಡ ಬ್ರಿಟಿಷ್, ದ್ರಾವಿಡ, ಇಂಡೋ- ಇಸ್ಲಾಮಿಕ್ ಹೀಗೆ ಹಲವು ವಾಸ್ತುಶೈಲಿಗಳಲ್ಲಿದೆ. ಅರವತ್ತು ಅಡಿ ಸುತ್ತಳತೆಯಿರುವ ಕೇಂದ್ರ ಗುಮ್ಮಟಕ್ಕೆ ಆರು ಕಂಬಗಳ ಆಧಾರ; ಮೆಟ್ಟಿಲುಗಳಿರುವ ಮುಂಭಾಗದಲ್ಲಿ ನಲವತ್ತು ಅಡಿ ಎತ್ತರದ ಹನ್ನೆರಡು ಕಂಬಗಳು. ಇನ್ನು ನಾಲ್ಕು ಮೂಲೆಗಳಲ್ಲಿರುವ ನಾಲ್ಕು ಗುಮ್ಮಟಗಳೇನು, ಕಲ್ಲಿನ, ಮರದ ಕೆತ್ತನೆಗಳೇನು, ಹೂಬಳ್ಳಿಗಳ ವಿನ್ಯಾಸವೇನು, ಕಮಾನುಗಳೇನು, ಕ್ಯಾಬಿನೆಟ್‌ ರೂಮಿನ ಗಂಧದ ಮರದ ಅಲಂಕಾರಿಕ ಬಾಗಿಲೇನು... ಈ ಸೌಧಕ್ಕೆ ಬಳಸಲಾಗಿರುವ ಕಲ್ಲು ಸರಬರಾಜಾದದ್ದು ಮಲ್ಲಸಂದ್ರದ ಹಾಗೂ ಹೆಸರಘಟ್ಟದ ಆಸುಪಾಸಿನಿಂದ (ಗಣಿಗಾರಿಕೆಯೆನ್ನುವುದು ಸರ್ಕಾರದ್ದೇ ಆಗಿದ್ದಾಗ ನಿಷೇಧವೆಲ್ಲಿ ಬಂತು?); ಸೌಂದರ್ಯವೃದ್ಧಿಗಾಗಿ ಮಾಗಡಿ ಪಿಂಕ್, ತುರುವೇಕರೆ ಬ್ಲ್ಯಾಕ್ ಕಲ್ಲುಗಳನ್ನೂ ಉಪಯೋಗಿಸಿರುವುದುಂಟು.

5, 50, 505 ಚದರಡಿಯುಳ್ಳ, ಮೂರು ಅಂತಸ್ತುಗಳಲ್ಲಿರುವ ಈ ಕಟ್ಟಡ ಕಟ್ಟುವುದಕ್ಕೆ ನಾಲ್ಕು ವರ್ಷ ಹಿಡಿಯಿತಂತೆ. ಖರ್ಚಾದದ್ದು ಕೇವಲ ₹ 1.84 ಕೋಟಿ. ಇವತ್ತಿನ ಗಿಂಬಳದ ಜೊತೆ ಹೋಲಿಸಿದರೆ ಇದು ಒಂದೆರಡು ವಾರಗಳ ಜುಜುಬಿ ಮೊತ್ತ. ಕಟ್ಟಿದವರು ಐದು ಸಹಸ್ರ ಕೆಲಸಗಾರರು. ಅವರಲ್ಲಿ ಬಹುಮಂದಿ ಕೊಲೆಯೂ ಸೇರಿದಂತೆ ಬಗೆಬಗೆಯ ಅಪರಾಧಗಳನ್ನು ಮಾಡಿ ಜೈಲಿನಲ್ಲಿ ಕೊಳೆಯುತ್ತಿದ್ದವರು. ಈ ಕಟ್ಟಡ ನಿರ್ಮಾಣದಿಂದಾಗಿಯೇ ಬೆಳಕು ಕಂಡರಂತೆ. ಕಟ್ಟಡ ನಿರ್ಮಾಣವಾದ ಮೇಲೆ ಎಲ್ಲರೂ ಸ್ವತಂತ್ರರಾದರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry