ಲೋಹಿಯಾ ರಾಜಕಾರಣ ಇಂದಿನ ಅಗತ್ಯ

7
‘ಲೋಹಿಯಾ ನೆನಪು’ ಕಾರ್ಯಕ್ರಮದಲ್ಲಿ ಸಮಾಜವಾದಿಗಳ ಅಭಿಪ್ರಾಯ

ಲೋಹಿಯಾ ರಾಜಕಾರಣ ಇಂದಿನ ಅಗತ್ಯ

Published:
Updated:

ಶಿವಮೊಗ್ಗ: ಇಂದಿನ ಕೇಂದ್ರ ಸರ್ಕಾರವು ಧರ್ಮದ ಆಧಾರದ ಮೇಲೆ ದೇಶವನ್ನು ಆಳುವ ಪ್ರಯತ್ನದಲ್ಲಿರುವುದು ಸಮಾಜದ ದೊಡ್ಡ ದುರಂತ ಎಂದು ಹಿರಿಯ ಸಮಾಜವಾದಿ ಪುಟ್ಟಯ್ಯ ಅಭಿಪ್ರಾಯಪಟ್ಟರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಸಭಾಂಗಣದಲ್ಲಿ ಲೋಹಿಯಾ ಜನ್ಮಶತಾಬ್ದಿ ಪ್ರತಿಷ್ಠಾನದಿಂದ ಶುಕ್ರವಾರ ಏರ್ಪಡಿಸಿದ್ದ ‘ಲೋಹಿಯಾ ನೆನಪು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ದೇಶದಲ್ಲಿ ಹಿಂದೂ, ಮುಸ್ಲಿಂ, ಜೈನ, ಬೌದ್ಧ, ಸಿಖ್‌, ಪಾರ್ಸಿ, ಕ್ರಿಶ್ಚಿಯನ್‌, ಹೀಗೆ ಅನೇಕ ಧರ್ಮಗಳಿವೆ. ಲಿಂಗಾಯತವು ಪ್ರತ್ಯೇಕ ಧರ್ಮವಾಗುವ ಪ್ರಯತ್ನದಲ್ಲಿದೆ. ಮುಂದೊಂದು ದಿನ ದಲಿತರು ತಮಗೂ ಪ್ರತ್ಯೇಕ ಧರ್ಮಬೇಕು ಎಂದು ವಿಂಗಡಣೆಯಾದರೆ ಆಗ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಇಂತಹ ದೇಶದಲ್ಲಿ ಒಂದು ಧರ್ಮದ ಆಧಾರದ ಮೇಲೆ, ಅದರಲ್ಲೂ ವಿಶೇಷವಾಗಿ ಹಿಂದೂ ಧರ್ಮದ ಬುನಾದಿಯ ಮೇಲೆ ಈ ದೇಶವನ್ನು ತೆಗೆದುಕೊಂಡು ಹೋಗಬೇಕು ಎನ್ನುವ ಪ್ರಯತ್ನ ದೇಶಕ್ಕೆ ಮಾರಕ ಎಂದರು.

ಲೋಹಿಯಾ ಅಪ್ಪಟ ದೇಶ ಪ್ರೇಮಿ. ಎಂತಹವರನ್ನೂ ಆಯಸ್ಕಾಂತದಂತೆ ಆಕರ್ಷಿಸುವ ಗುಣ ಅವರಲ್ಲಿತ್ತು. ಲೋಹಿಯಾ ಈ ದೇಶದ ಜನಜೀವನವನ್ನು, ಸಮಾಜ ವ್ಯವಸ್ಥೆಯನ್ನು ಗಾಢವಾಗಿ ಅಧ್ಯಯನ ಮಾಡಿದ್ದರು. ಅವರು ರಾಜಕೀಯ ವ್ಯಕ್ತಿ ಮಾತ್ರವೇ ಆಗಿರಲಿಲ್ಲ. ಸಮಾಜಶಾಸ್ತ್ರ, ಭೂಗೋಳ ಶಾಸ್ತ್ರ, ಚರಿತ್ರೆಯ ಬಗ್ಗೆ ಆಳವಾದ ಜ್ಞಾನವಿತ್ತು. ದೇಶದ ಒಟ್ಟು ಚಿತ್ರಣವನ್ನು ಹತ್ತಿರದಿಂದ ನೋಡಿ, ಅನುಭವಿಸಿ ಅದನ್ನು ಜನರ ಮುಂದಿಟ್ಟರು. ವರ್ಗ ಮತ್ತು ಜಾತಿ ನಿರ್ಮೂಲನೆ ಆಗದೆ ಈ ದೇಶದಲ್ಲಿ ಸಮಾನತೆ ಸಾಧಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಪಾದಿಸಿದ್ದರು ಎಂದು ಹೇಳಿದರು.

ಹಿರಿಯ ಸಮಾಜವಾದಿ ಪ್ರೊ.ಎಂ.ಬಿ.ನಟರಾಜ್ ಮಾತನಾಡಿ, ‘ಲೋಹಿಯಾ ತಮ್ಮನ್ನು ತಾವು ಸಮಾಜಕ್ಕೆ ಸಮರ್ಪಿಸಿಕೊಂಡಿದ್ದರು. ಅವರು ಮೊದಲಿನಿಂದಲೂ ಪ್ರಜಾಪ್ರಭುತ್ವ ಕಟ್ಟುವ ಕೆಲಸ ಮಾಡಿದರು. ಸಾಮಾನ್ಯ ಜನರ ಜೀವನ ಮಟ್ಟ ಸುಧಾರಿಸುವದಕ್ಕಾಗಿ ಅಪರಿಮಿತವಾಗಿ ಶ್ರಮಿಸಿದರು’ ಎಂದರು.

ಸಮಾಜವಾದಿ ಡಿ.ಎಸ್‌.ನಾಗಭೂಷಣ್‌ ಪ್ರಾಸ್ತಾವಿಕವಾಗಿ ಮಾತನಾಡಿ, ‘ಸಮಾಜದಲ್ಲಿ ಅಸಮಾನತೆ ಹೆಚ್ಚಾಗಿದೆ. ಇದು ಸಹಜವಾಗಿ ಸಮಾಜದ ಅಶಾಂತಿ ಉಂಟು ಮಾಡಿದೆ. ಇಂತಹ ಸಂದರ್ಭದಲ್ಲಿ ಲೋಹಿಯಾ ನೆನಪಾಗುತ್ತಾರೆ. ಅವರು ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ಪ್ರಸ್ತುತ ಎಂಡಪಂಥೀಯ ರಾಜಕಾರಣ ಮತ್ತು ಬಲಪಂಥೀಯ ರಾಜಕಾರಣದ ನಡುವೆ ಲೋಹಿಯಾ ರಾಜಕಾರಣ ಹೆಚ್ಚು ಅವಶ್ಯಕ ಎಂದರು.

ಹಿರಿಯ ಸಮಾಜವಾದಿ ಕೋಣಂದೂರು ಲಿಂಗಪ್ಪ ಅವರು ಕವನ ವಾಚಿಸುವ ಮೂಲಕ ಲೋಹಿಯಾ ಸ್ಮರಣೆಗೆ ಚಾಲನೆ ನೀಡಿದರು. ಅನೇಕರು ಲೋಹಿಯಾ ಅವರ ಕುರಿತಂತೆ ಕವನ ವಾಚಿಸಿದರು. ಪ್ರೆಸ್‌ಟ್ರಸ್ಟ್‌ ಅಧ್ಯಕ್ಷ ಎನ್‌.ಮಂಜುನಾಥ್‌ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry