ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಯಲ್ಲಿ ಸಂಪೂರ್ಣ ವಿಫಲ: ಆರೋಪ

ಸಚಿವ ಪ್ರಮೋದ್ ವಿರುದ್ಧ ಬಿಜೆಪಿ ಆರೋಪಪಟ್ಟಿ
Last Updated 24 ಮಾರ್ಚ್ 2018, 12:32 IST
ಅಕ್ಷರ ಗಾತ್ರ

ಉಡುಪಿ: "ಸಚಿವ ಪ್ರಮೋದ್ ಮಧ್ವರಾಜ್ ಅವರು ವಿರುದ್ಧ ಶುಕ್ರವಾರ ಆರೋಪಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ ಜಿಲ್ಲಾ  ಘಟಕ, ಅವರ ವೈಫಲ್ಯಗಳ ದೊಡ್ಡ ಪಟ್ಟಿಯನ್ನೇ ಮಾಡಿದೆ. ಮುಂಬರುವ ಚುನಾವಣೆಯಲ್ಲಿ ಅವರನ್ನು ಸೋಲಿಸುವ ಮೂಲಕ ಕರ್ತವ್ಯ ವೈಫಲ್ಯ ತೋರಿರುವ ಸಚಿವರಿಗೆ ಜನರು ಶಿಕ್ಷೆ ನೀಡಬೇಕು' ಎಂದು ಮನವಿ ಮಾಡಿದೆ.

ಮಾಜಿ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಸರ್ಕಾರಿ ನೌಕರರ ಸಂಬಳ, ಸಾಮಾಜಿಕ ಸುರಕ್ಷತಾ ಯೋಜನೆ, ಅನ್ನಭಾಗ್ಯ ಸೇರಿದಂತೆ ಸರ್ಕಾರದಿಂದ ಐದು ವರ್ಷಗಳ ಅವಧಿಯಲ್ಲಿ ಉಡುಪಿ ಜಿಲ್ಲೆಗೆ ಬಂದಿರುವ ಎಲ್ಲ ಅನುದಾನ ಸೇರಿಸಿ ₹2,000 ಕೋಟಿ ಅಭಿವೃದ್ಧಿ ಮಾಡಿದ್ದೇನೆ ಎಂದು ಅವರು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಕಣ್ಣಿಗೆ ಕಾಣುವಂತಹ, ಶಾಶ್ವತವಾಗಿ ನಿಲ್ಲುವಂತಹ ಒಂದೇ ಒಂದು ಯೋಜನೆಯನ್ನೂ ಅವರು ಈ ವರೆಗೆ ಅನುಷ್ಠಾನಗೊಳಿಸಿಲ್ಲ. ರಸ್ತೆಗಳನ್ನು ಅವರು ವಿಸ್ತರಣೆ ಮಾಡಿಲ್ಲ. ಆದರೆ ದೊಡ್ಡ ಸಾಧನೆ ಮಾಡಿದ್ದೇನೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರು ಮಾಡಿರುವುದು ಶಿಲಾನ್ಯಾಸ ಮತ್ತು ಉದ್ಘಾಟನೆ ಮಾತ್ರ’ ಎಂದು ಟೀಕಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರವನ್ನು ಶೇ10 ಸರ್ಕಾರ ಎಂದು ಆರೋಪಿಸಿದ್ದರು. ಬೆಂಗಳೂರಿನ ಗುತ್ತಿಗೆದಾರರು ಕಮಿಷನ್ ನೀಡಿ ಮಂಜೂರು ಮಾಡಿಸಿಕೊಂಡು ಬಂದ ಯೋಜನೆಗಳನ್ನು ಮಾತ್ರ ಅವರು ಜಾರಿಗೊಳಿಸಿದ್ದಾರೆ. ಲಂಚ ಪಡೆಯುವುದಿಲ್ಲ ಎಂದು ಹೇಳುವ ಅವರು ಅರ್ಹತೆ ಇಲ್ಲದ ವ್ಯಕ್ತಿ ಡಿ. ಮಂಜುನಾಥಯ್ಯ ಅವರನ್ನು 4 ವರ್ಷಗಳ ಕಾಲ ನಗರಸಭೆ ಪೌರಾಯುಕ್ತ ಸ್ಥಾನದಲ್ಲಿ ಕೂರಿಸಿದ್ದಾರೆ. ಆ ಮೂಲಕ ಅವರು ಭ್ರಷ್ಟಾಚಾರ ಮಾಡಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ವಾರಾಹಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ತರುವ ಯೋಜನೆ ಟೆಂಡರ್ ಹಂತದಲ್ಲಿದೆ. ಆದರೆ ವೈಜ್ಞಾನಿಕವಾಗಿ ನೋಡಿದರೆ ಅದು ಕಾರ್ಯಸಾಧುವಲ್ಲ. ರಸ್ತೆ ಕೆಳಗೆ ಪೈಪ್ ಅಳವಡಿಸಿ ಉಡುಪಿಗೆ ನೀರು ತರಲು ಸಾಧ್ಯವಿಲ್ಲ. ನಗರಸಭೆ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು ಮಾರ್ಚ್‌ ತಿಂಗಳಿನಲ್ಲಿಯೇ ಎರಡು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ’ ಎಂದು ಹೇಳಿದರು.

ಕ್ರೀಡಾ ಕಿಟ್ ಅವ್ಯವಹಾರ:
ಯುವಕರಿಗೆ ಕ್ರೀಡಾ ಪರಿಕರಗಳನ್ನು ಒಳಗೊಂಡ ಕಿಟ್ ನೀಡುವ ಯೋಜನೆಯನ್ನು ಕ್ರೀಡಾ ಸಚಿವರೂ ಆದ ಪ್ರಮೋದ್ ಜಾರಿ ಮಾಡಿದ್ದಾರೆ. ಒಟ್ಟು 20 ಕೋಟಿ ವೆಚ್ಚದಲ್ಲಿ 5 ಸಾವಿರ ಕಿಟ್ ನೀಡುವ ಉದ್ದೇಶ ಇದೆ. ಆದರೆ ಉಡುಪಿಗೆ ಜಿಲ್ಲೆಯಲ್ಲೇ 2 ಸಾವಿರ ಕಿಟ್ ವಿತರಣೆಯಾಗಿದೆ. ಕ್ರೀಡಾ ಪರಿಕರಗಳ ಗುಣಮಟ್ಟ ಕಳಪೆಯಾಗಿದೆ. ಕೆಲವೇ ದಿನಗಳ ಹಿಂದೆ ನೀಡಿರುವ ವಸ್ತುಗಳು ಹಾಳಾಗಿ ಹೋಗಿವೆ. ಕಿಟ್‌ಗೆ ಎಷ್ಟು ದರ ಆಗಬಹುದು ಎಂದು ಪರಿಶೀಲಿಸಿದಾಗ ₹15,000 ಎಂದು ಗೊತ್ತಾಯಿತಿ. ಆದರೆ ಅದಕ್ಕೆ ₹40,000ಕ್ಕೆ ಖರೀದಿಸಲಾಗಿದೆ. ಇಲಾಖೆಯಲ್ಲಿಯೇ ಈ ಭ್ರಷ್ಟಾಚಾರ ನಡೆದಿದೆ’ ಎಂದು ಗಂಭೀರ ಆರೋಪ ಮಾಡಿದರು.

ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮುಖಂಡರಾದ ಕಪ್ಪೆಟ್ಟು ಪ್ರವೀಣ್ ಪೂಜಾರಿ, ಪ್ರಭಾಕರ ಪೂಜಾರಿ, ಶ್ರೀಶ ನಾಯಕ್, ಅಕ್ಷಿತ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT