ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಗೆಲುವು ನೋಡಲು ತಂದೆ ಬದುಕಿರಲಿಲ್ಲ

Last Updated 24 ಮಾರ್ಚ್ 2018, 12:44 IST
ಅಕ್ಷರ ಗಾತ್ರ

ಸುರಪುರ: ‘ನಾನು ವಿಧಾನಸಭೆಯ ಮೆಟ್ಟಿಲು ಹತ್ತಬೇಕೆನ್ನುವುದು ಎರಡು ಬಾರಿ ಶಾಸಕರಾಗಿದ್ದ ತಂದೆ ರಾಜಾ ಕುಮಾರನಾಯಕ ಅವರ ಕನಸಾಗಿತ್ತು’ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ಮಾತಿಗಿಳಿದರು.

ತಂದೆಯ ಜೊತೆ ಒಂದೆರೆಡು ಬಾರಿ ವಿಧಾನಸಭೆಗೆ ಹೋಗಿದ್ದು ಬಿಟ್ಟರೆ ವಿಧಾನಸಭೆಯ ಕಾರ್ಯಕಲಾಪದ ಅರಿವು ಇರಲಿಲ್ಲ. ನನ್ನ ಅದೃಷ್ಟ ಎಂಬಂತೆ ನನ್ನ ಮೊದಲ ಅಧಿವೇಶನದ 2ನೇ ದಿನ ನನಗೆ ಮಾತನಾಡಲು ಅವಕಾಶ ಸಿಕ್ಕಿತ್ತು. ನಾನು ಇಂಗ್ಲಿಷ್‌ ಮಾಧ್ಯಮ ವಿದ್ಯಾರ್ಥಿಯಾಗಿದ್ದರಿಂದ ಇಂಗ್ಲಿಷ್‌ನಲ್ಲೇ ಮಾತು ಆರಂಭಿಸಿದೆ. ಆಗ ಶಾಸಕರಾಗಿದ್ದ ವಾಟಾಳ್‌ ನಾಗರಾಜ್‌ ತೀವ್ರವಾಗಿ ವಿರೋಧಿಸಿದರು.

ಕೆಸಿಪಿ ಶಾಸಕ ಮಾಲೀಕಯ್ಯ ಗುತ್ತೇದಾರ ಹಾಗೂ ಇತರರು ಬೆಂಬಲಕ್ಕೆ ನಿಂತರು. ಕನ್ನಡದಲ್ಲೇ ಮಾತನಾಡಬೇಕು ಎಂದು ವಾಟಾಳ್‌ ಪಟ್ಟು ಹಿಡಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಅಂದಿನ ಸ್ಪೀಕರ್‌ ವಿ.ಎಸ್. ಕೌಜಲಗಿ, ‘ಅನ್ಯಭಾಷೆ ಮಾತನಾಡಬಾರದು ಎಂಬ ನಿಯಮವೇನೂ ಇಲ್ಲ. ನಮ್ಮ ಭಾಷೆ ಕನ್ನಡ. ಕನ್ನಡದಲ್ಲೇ ಮಾತನಾಡಿದರೆ ಚೆನ್ನ’ ಎಂದು ನನಗೆ ಸಲಹೆ ನೀಡಿದರು ಎಂದು ಅವರು ಮೊದಲು ವಿಧಾನಸಭೆ ಪ್ರವೇಶಿಸಿದ ಘಟನೆಯೊಂದನ್ನು ಮೆಲುಕು ಹಾಕಿದರು.

‘ತಂದೆ ರಾಜಾ ಕುಮಾರನಾಯಕ 1957 ಮತ್ತು 1978ರಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದರು. ನಂತರದ ಚುನಾವಣೆಗಳಲ್ಲಿ ಅದೃಷ್ಟ ಅವರಿಗೆ ಒಲಿದು ಬರಲಿಲ್ಲ’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

‘1989ರಲ್ಲಿ ತಂದೆ ನಿಧನರಾದರು. ಕಾಂಗ್ರೆಸ್‌ ನಮ್ಮ ಕೈಬಿಟ್ಟಿತ್ತು. ತಂದೆಯ ಕನಸು ಈಡೇರಿಸಬೇಕು ಎಂಬ ಛಲ ಮನೆ ಮಾಡಿತ್ತು.1994ರಲ್ಲಿ ಎಸ್‌.ಬಂಗಾರಪ್ಪ ಅವರ ಕೆಸಿಪಿ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾದೆ. ಇದನ್ನು ನೋಡಲು ತಂದೆ ಇರಲಿಲ್ಲ ಎಂಬ ಕೊರಗು ನನಗೆ ಈಗಲೂ ಕಾಡುತ್ತದೆ’ ಎಂದರು.
**
ಕೈಹಿಡಿದ ಪಾದಯಾತ್ರೆ

ಎರಡು ಸಲ ಸೋಲಿನಿಂದ ಹತಾಶರಾಗಿದ್ದ ರಾಜಾ ವೆಂಕಟಪ್ಪನಾಯಕರಿಗೆ ಆಸರೆಯಾಗಿದ್ದು 2013ರಲ್ಲಿ ನೀರಿಗಾಗಿ ಕೈಗೊಂಡ ಪಾದಯಾತ್ರೆ. 2011 ಮತ್ತು 12ರಲ್ಲಿ ಈ ಭಾಗದ ರೈತರ 2ನೇ ಅವಧಿ ಬೆಳೆಗಾಗಿ ಕಾಲುವೆಗೆ ನೀರು ಬಿಟ್ಟಿರಲಿಲ್ಲ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದರು.

ಸುರಪುರದಿಂದ ನಾರಾಯಣಪುರದವರೆಗೆ ಸಹಸ್ರಾರು ಬೆಂಬಲಿಗರೊಂದಿಗೆ ಬೃಹತ್‌ ಪಾದಯಾತ್ರೆ ನಡೆಸಿದರು. ಎರಡನೆ ಅವಧಿಗೆ ಕಾಲುವೆಗೆ ನೀರು ಹರಿಸಲೇಬೇಕು ಎಂದು ಹೋರಾಟ ನಡೆಸಿದರು. ಪರಿಣಾಮ ಸರ್ಕಾರ ಕಾಲುವೆಗೆ ನೀರು ಹರಿಸಿತು. ಇದು ರಾಜಾ ವೆಂಕಟಪ್ಪನಾಯಕ ಅವರನ್ನು ಮತ್ತೆ ಫಿನಿಕ್ಸ್‌ನಂತೆ ಎದ್ದು ಬರಲು ನೆರವಾಯಿತು. 2013ರಲ್ಲಿ 3ನೇ ಬಾರಿ ಶಾಸಕರಾದರು.
**
ರಾಜಾ ವೆಂಕಟಪ್ಪನಾಯಕ ಹತ್ತಿದ ಮೆಟ್ಟಿಲುಗಳು...

ಶಾಸಕ ರಾಜಾ ವೆಂಕಟಪ್ಪನಾಯಕ ಅವರದ್ದು ರಾಜಕೀಯ ಕುಟುಂಬ. ಚಿಕ್ಕಂದಿನಲ್ಲಿಯೇ ರಾಜಕಾರಣದ ಗುಣಗಳು ಮೈಗೂಡಿದ್ದವು. ಕಲಬುರ್ಗಿಯ ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ಸೇರಿದ್ದ ಇವರಿಗೆ ಓದಿಗಿಂತ ರಾಜಕೀಯದ ತುಡಿತವೇ ಹೆಚ್ಚಿತ್ತು.

ಓದನ್ನು ಅರ್ಧಕ್ಕೆ ನಿಲ್ಲಿಸಿಬಿಟ್ಟರು. ತಂದೆಯ ಅಶೀರ್ವಾದದಿಂದ ತಾಲ್ಲೂಕಿನ ಪೇಠಅಮ್ಮಾಪುರ ಮಂಡಲ ಪಂಚಾಯಿತಿ ಪ್ರಧಾನರಾಗಿ 5 ವರ್ಷ ಅಧಿಕಾರ ಪೂರೈಸಿದರು. ಅದಾಗಲೇ ಉತ್ತಮ ಕೆಲಸ ಮಾಡಿ ಜನಪ್ರಿಯರಾದರು.

1994ರಲ್ಲಿ ಕೆಸಿಪಿಯಿಂದ ವಿಧಾನಸಭೆಗೆ ಸ್ಪರ್ಧಿಸಿ ಮೊದಲ ಯತ್ನದಲ್ಲೆ ಯಶ ಕಂಡರು. ನಂತರ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಅವರು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಯಶಸ್ಸು ಕಂಡರು.

1998ರಲ್ಲಿ ಕಾಂಗ್ರೆಸ್‌ ಇವರ ಕೈಹಿಡಿಯಿತು. 1998ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾದರು. 2004 ಮತ್ತು 2008ರಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡರು.
**
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕನಿಗೆ ಮಾತ್ರ ಅಭಿವೃದ್ಧಿ ಕೆಲಸ ಮಾಡಲು ಹೆಚ್ಚಿನ ಅವಕಾಶ ಲಭಿಸುತ್ತದೆ. ಈ ನಿಟ್ಟಿನಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ ತೃಪ್ತಿ ನನಗಿದೆ.
ರಾಜಾ ವೆಂಕಟಪ್ಪನಾಯಕ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT