‘ಸುಳ್ಳು ಹೇಳುವ ಶಾಸಕರ ಮಾತು ನಂಬಬೇಡಿ’

7
6.5 ಲಕ್ಷ ಹೆಕ್ಟೇರ್ ಭೂಮಿ ನೀರಾವರಿಗೆ: ದರ್ಶನಾಪುರ

‘ಸುಳ್ಳು ಹೇಳುವ ಶಾಸಕರ ಮಾತು ನಂಬಬೇಡಿ’

Published:
Updated:

ಕೆಂಭಾವಿ: ‘ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ರೈತರ ಹಿತದೃಷ್ಟಿಯಿಂದ ಹಲವಾರು ಕೃಷಿ ಹಾಗೂ ನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದೆ’ ಎಂದು ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆಯನ್ನು ಜಾರಿಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ತಮಗೆ ಶುಕ್ರವಾರ ಯಕ್ತಾಪುರ ಗ್ರಾಮದ ಗುತ್ತಿ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.

‘2018–19ನೇ ಸಾಲಿನ ಬಜೆಟ್‌ನಲ್ಲಿ ಸರ್ಕಾರ ಜಾರಿಗೆ ತಂದಿರುವ ಬೂದಿಹಾಳ– ಪೀರಾಪುರ ಏತ ನೀರಾವರಿ ಯೋಜನೆ ₹200 ಕೋಟಿಯಿಂದ ₹500 ಕೋಟಿ ವರೆಗೆ ಒಟ್ಟು ಆರು ಹಂತದ ಕಾಮಗಾರಿಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಅಂತಿಮವಾಗಿ ತಜ್ಞರ ಸಮಿತಿ ಒಂದನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ವರದಿ ನೀಡಲಿದೆ’ ಎಂದರು.

‘ಸುರಪುರ ತಾಲ್ಲೂಕಿನ ಶಹಾಪುರ ಮತಕ್ಷೆತ್ರದ ಒಟ್ಟು 15 ಗ್ರಾಮಗಳ 6.5 ಲಕ್ಷ ಹೆಕ್ಟೇರ್ ಭೂಮಿ ನೀರಾವರಿಗೆ ಒಳಪಡಲಿದೆ. ಈ ಯೋಜನೆಗಳ ಬಗ್ಗೆ ಕೇವಲ ಸುಳ್ಳು ಹೇಳುವ ಮೂಲಕ ದಾರಿ ತಪ್ಪಿಸುತ್ತಿರುವ ಶಾಸಕ ಗುರು ಪಾಟೀಲ ಅವರಿಗೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

‘ಸರ್ಕಾರದ ಸವಲತ್ತು ಪಡೆಯಲು ಹೋರಾಟ ಮಾಡುವುದು ಮುಖ್ಯ’ ಎಂದ ಅವರು ಅಂಥಾ ಒಂದು ಹೋರಾಟದ ಮುಂಚೂಣಿ ವಹಿಸಿ ಈ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಸಹಕರಿಸಿದ ಕರ್ನಾಟಕ ಪ್ರಾಂತ ರೈತ ಸಂಘದ ಯಲ್ಲಪ್ಪ ಚಿನ್ನಾಕಾರ ಹಾಗೂ ಎಲ್ಲ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲಕಲ್, ‘ಸರ್ಕಾರದ ಸೌಲಭ್ಯಗಳನ್ನು ನಾನೇ ಮಾಡಿದ್ದೇನೆ ಎಂದು ಸುಳ್ಳು ಹೇಳಿ ದೇವರ ಮೇಲೆ ಪ್ರಮಾಣ ಮಾಡುತ್ತಿರುವ ಶಾಸಕ ಗುರು ಪಾಟೀಲ ಅವರು ಸುಳ್ಳುಪಕ್ಷದ ಸದಸ್ಯ. ಇವರು ಹೇಳುತ್ತಿರುವ ಸುಳ್ಳುಗಳು ಜನರಿಗೆ ಗೊತ್ತಿಲ್ಲ ಎಂದು ತಿಳಿದಿದ್ದಾರೆ’ ಎಂದು ಟೀಕಿಸಿದರು.

ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಚಂದ್ರಕಲಾ ಹೊಸಮನಿ, ಸದಸ್ಯ ಬಸನಗೌಡ ಯಡಿಯಾಪುರ, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಮಂಜುಳಾ ನಂದರಗಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್‌ ಪಾಟೀಲ, ಕೆಂಭಾವಿ ಪುರಸಭೆ ಅಧ್ಯಕ್ಷ ದೇವಪ್ಪ ಮ್ಯಾಗೇರಿ, ಕೃಷಿ ತಜ್ಞ ಸಿದ್ಧನಗೌಡ ಫರಹತಾಬಾದ್‌, ಮುಖಂಡರಾದ ಬಸನಗೌಡ ಹೊಸಮನಿ, ಹಣಮಂತ್ರಾಯ ಮಾಣಸುಣಗಿ, ಅಮ್ಮಣ್ಣ ಧರಿ, ಫಯಾಜ ಸಾಸನೂರ, ಶಶಿಧರ ಮಾಲಿಪಾಟೀಲ, ಖಾಜಾಪಟೇಲ್‌ ಕಾಚೂರ ಇದ್ದರು.

ಬಸವರಾಜ ಚಿಂಚೋಳಿ ನಿರೂಪಿಸಿ, ಗೌಡಪ್ಪಗೌಡ ನಂದರಗಿ ವಂದಿಸಿದರು.

*

ಪೀರಾಪುರ–ಬೂದಿಹಾಳ ನೀರಾವರಿ ಯೋಜನೆಗೆ ಸರ್ಕಾರ ಹಣ ಮೀಸಲಿಟ್ಟಿದ್ದು ಶೀಘ್ರದಲ್ಲಿ ಕಾಮಗಾರಿಗೆ ಚಾಲನೆ ದೊರಕಲಿದೆ.

–ಶರಣಬಸಪ್ಪ ದರ್ಶನಾಪುರಮಾಜಿ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry