ಶಾಸಕ ರುದ್ರೇಶ್‌ ಗೌಡ ವಿಧಿವಶ

7

ಶಾಸಕ ರುದ್ರೇಶ್‌ ಗೌಡ ವಿಧಿವಶ

Published:
Updated:
ಶಾಸಕ ರುದ್ರೇಶ್‌ ಗೌಡ ವಿಧಿವಶ

ಬೇಲೂರು: ಅನಾರೋಗ್ಯದಿಂದ ಬಳಲುತ್ತಿದ್ದ ಕಾಂಗ್ರೆಸ್‌ ಶಾಸಕ ವೈ.ಎನ್.ರುದ್ರೇಶ್‌ಗೌಡ (63) ಶನಿವಾರ ಬೆಂಗಳೂರಿನಲ್ಲಿ ನಿಧನರಾದರು.

ರಾಜ್ಯಸಭೆ ಚುನಾವಣೆಗೆ ಮತದಾನ ಮಾಡಲು ಶುಕ್ರವಾರ ಬೆಂಗಳೂರಿಗೆ ತೆರಳಿದ್ದರು. ಮನೆಯಲ್ಲಿ ಸ್ನಾನ ಮಾಡಿ ಹೊರ ಬರುವಾಗ ಹೃದಯಾಘಾತಕ್ಕೆ ಒಳಗಾಗಿದ್ದರು. ವಿಕ್ರಂ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

ಪತ್ನಿ, ಪುತ್ರಿ, ನಾಲ್ವರು ಸಹೋದರರು, ನಾಲ್ವರು ಸಹೋದರಿಯರು ಇದ್ದಾರೆ. ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ ಬೇಲೂರು ಸಮೀಪದ ಚೀಕನಹಳ್ಳಿಯ ಅವರ ಕಾಫಿ ತೋಟದಲ್ಲಿ ನಡೆಯಲಿದೆ ಎಂದು ಸಹೋದರ ವೈ.ಎನ್‌.ಕೃಷ್ಣಕುಮಾರ್‌ ತಿಳಿಸಿದರು.

1955 ಅ. 16ರಂದು ಬೇಲೂರು ತಾಲ್ಲೂಕು ಯಮಸಂಧಿ ಗ್ರಾಮದ ನಂಜೇಗೌಡ– ದ್ಯಾವಮ್ಮ ದಂಪತಿ ಪುತ್ರರಾಗಿ ಜನಿಸಿದ ರುದ್ರೇಶ್‌ಗೌಡರು 9 ಮಕ್ಕಳಲ್ಲಿ ಹಿರಿಯ ಮಗ. 1986ರಲ್ಲಿ ಜನತಾ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡಿ ಮೊದಲ ಬಾರಿಗೆ ಬೇಲೂರು ತಾಲ್ಲೂಕು ನಾಗೇನಹಳ್ಳಿ ಕ್ಷೇತ್ರದಿಂದ ಜಿಲ್ಲಾ ಪರಿಷತ್‌ ಸದಸ್ಯರಾಗಿ ಆಯ್ಕೆಯಾದರು.

ನಂತರ 2ನೇ ಬಾರಿಗೆ ಕಳ್ಳೇರಿ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅದೇ ವರ್ಷ ಹಾಸನ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. 1996–97ರಲ್ಲಿ ಹಾಸನ ಕ್ಷೇತ್ರದಿಂದ ಲೋಕಸಭೆ ಪ್ರವೇಶ ಮಾಡಿದ್ದರು. ನಂತರ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. 2008 ಹಾಗೂ 2013ರಲ್ಲಿ ಸತತ ಎರಡು ಬಾರಿ ಬೇಲೂರು ಶಾಸಕರಾಗಿ ಆಯ್ಕೆಯಾಗಿದ್ದರು.

ನಾಲ್ಕೈದು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕ್ಷೇತ್ರದ ಜವಾಬ್ದಾರಿಯನ್ನು ಸಹೋದರ ಕೃಷ್ಣಕುಮಾರ್‌ ಅವರಿಗೆ ವಹಿಸಿದ್ದರು. ಈ ಬಾರಿ ಸಹೋದರನಿಗೆ ಟಿಕೆಟ್‌ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry