ಎರಡು ತಿಂಗಳಲ್ಲಿ 96 ನಕಲಿ ದಾಖಲೆ ಸೃಷ್ಟಿ!

7

ಎರಡು ತಿಂಗಳಲ್ಲಿ 96 ನಕಲಿ ದಾಖಲೆ ಸೃಷ್ಟಿ!

Published:
Updated:
ಎರಡು ತಿಂಗಳಲ್ಲಿ 96 ನಕಲಿ ದಾಖಲೆ ಸೃಷ್ಟಿ!

ಪಟ್ನಾ/ರಾಂಚಿ: ದುಮಕಾ ಖಜಾನೆಯಿಂದ ಅಕ್ರಮವಾಗಿ ಹಣ ಪಡೆದ ಪ್ರಕರಣ ನಡೆದಾಗ ಲಾಲು ಪ್ರಸಾದ್‌ ಬಿಹಾರದ ಮುಖ್ಯಮಂತ್ರಿ ಆಗಿದ್ದರು.

1995ರ ಡಿಸೆಂಬರ್‌ –1996ರ ಜನವರಿ ಅವಧಿಯ ಎರಡೇ ತಿಂಗಳಲ್ಲಿ 96 ನಕಲಿ ದಾಖಲೆ ನೀಡಿ ಖಜಾನೆಗೆ ₹3.76 ಕೋಟಿ ವಂಚನೆ ಮಾಡಲಾಗಿದೆ ಎಂದು ಸಿಬಿಐ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿತ್ತು.

ಆರೋಪಿಗಳಲ್ಲಿ ಬಹುತೇಕರು ಗುತ್ತಿಗೆದಾರರು, ಸರಬರಾಜುದಾರರು ಹಾಗೂ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿದ್ದರು.

ಲಾಲು ಸಹಿತ 19 ಆರೋಪಿಗಳನ್ನು ದೋಷಿಗಳು ಎಂದು ಸಿಬಿಐ ನ್ಯಾಯಾಲಯ ಮಾರ್ಚ್‌ 19ರಂದು ತೀರ್ಪು ನೀಡಿತ್ತು.

ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ್ ಮಿಶ್ರಾ, ಇಬ್ಬರು ನಿವೃತ್ತ ಐಎಎಸ್‌ ಅಧಿಕಾರಿಗಳಾದ ಮಹೇಶ್ ಪ್ರಸಾದ್ ಹಾಗೂ ಬೆಕ್‌ ಜ್ಯೂಲಿಯಸ್, ಮಾಜಿ ಸಂಸದ ಜಗದೀಶ್ ಶರ್ಮ, ಮಾಜಿ ಸಚಿವ ವಿದ್ಯಾಸಾಗರ್ ನಿಷಾದ, ಹಗರಣ ನಡೆದ ವೇಳೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಮುಖ್ಯಸ್ಥ

ರಾಗಿದ್ದ ಧ್ರುವ್ ಭಾಗ್ವತ್ ಸೇರಿ 12 ಜನರನ್ನು ಖುಲಾಸೆಗೊಳಿಸಿತ್ತು.

ತೀರ್ಪು ದುರದೃಷ್ಟಕರ: ‘ಇದು ನಿಜಕ್ಕೂ ದುರದೃಷ್ಟಕರ. ಒಂದೇ ತಪ್ಪಿಗೆ ಒಂದೇ ವ್ಯಕ್ತಿಗೆ ಹಲವು ಬಾರಿ ಶಿಕ್ಷೆ ವಿಧಿಸಿರುವ ಈ ತೀರ್ಪು ನ್ಯಾಯಕ್ಕೆ ವಿರುದ್ಧವಾದುದು. ಈ ಮೊದಲು ಸುಪ್ರೀಂ ಕೋರ್ಟ್ ಮೇವು ಹಗರಣವನ್ನು ಆರು ಭಾಗಗಳಾಗಿ ವಿಂಗಡಿಸಿತ್ತು. ಆದರೆ ಈಗ ವಿಶೇಷ ಸಿಬಿಐ ನ್ಯಾಯಾಲಯ, ಎಲ್ಲಾ ಪ್ರಕರಣಗಳಲ್ಲಿಯೂ ಪ್ರತ್ಯೇಕವಾಗಿ ಶಿಕ್ಷೆ ಪ್ರಕಟಿಸುತ್ತಿದೆ. ಇದು ಅನ್ಯಾಯ’ ಎಂದು ಆರ್‌ಜೆಡಿ ಉಪಾಧ್ಯಕ್ಷ ಶಿವಾನಂದ್ ತಿವಾರಿ ಹೇಳಿದ್ದಾರೆ.

ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕಟ: ಅನಾರೋಗ್ಯದಿಂದ ಬಳಲುತ್ತಿರುವ ಲಾಲು ಅವರನ್ನು ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಆರ್‌ಐಎಂಎಸ್‌) ದಾಖಲಿಸಲಾಗಿದೆ. ಆದ್ದರಿಂದ, ನ್ಯಾಯಾಧೀಶರು ವಿಡಿಯೊ ಕಾನ್ಫರೆನ್ಸ್ ಮೂಲಕ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

ತಂದೆಯ ಜೀವಕ್ಕೆ ಬೆದರಿಕೆ: ತೇಜಸ್ವಿ ಯಾದವ್‌

ತಮ್ಮ ತಂದೆ ಲಾಲು ಪ್ರಸಾದ್‌ ಜೀವಕ್ಕೆ ಬೆದರಿಕೆ ಇದೆ ಎಂದು ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಆತಂಕ ವ್ಯಕ್ತಪಡಿಸಿದ್ದಾರೆ.

‘ನಮ್ಮ ತಂದೆ ಬಿಜೆಪಿಯ ದಬ್ಬಾಳಿಕೆಯನ್ನು ಪ್ರಶ್ನಿಸುತ್ತಿರುವುದರಿಂದ ಹಾಗೂ ದೇಶದಾದ್ಯಂತ ಬಿಜೆಪಿ ವಿರುದ್ಧದ ಪಕ್ಷಗಳನ್ನು ಒಗ್ಗೂಡಿಸುತ್ತಿದ್ದಾರೆ. ಇದರಿಂದ ಅವರ ಜೀವಕ್ಕೆ ಅಪಾಯ ಇದೆ’ ಎಂದು ಅವರು ಹೇಳಿದ್ದಾರೆ.

ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ತೇಜಸ್ವಿ, ‘ನಮ್ಮ ತಂದೆ ಮುಗ್ಧರು. ಮೇಲಿನ ಹಂತದ ನ್ಯಾಯಾಲಯಗಳಲ್ಲಿ ಅವರಿಗೆ ನ್ಯಾಯ ದೊರಕುತ್ತದೆ. ಆರ್‌ಜೆಡಿ ಮುಖ್ಯಸ್ಥರ ವಿರುದ್ಧದ ಸಂಚಿಗೆ ಬಿಹಾರ ಜನತೆ ತಕ್ಕ ಉತ್ತರ ನೀಡುತ್ತಾರೆ’ ಎಂದು ಹೇಳಿದ್ದಾರೆ.

‘ತೇಜಸ್ವಿ ಆರೋಪ ಸುಳ್ಳು’

ತಂದೆಗೆ ಜೀವ ಬೆದರಿಕೆ ಇದೆ ಎನ್ನುವ ತೇಜಸ್ವಿ ಅವರ ಆರೋಪವನ್ನು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ತಳ್ಳಿಹಾಕಿದ್ದಾರೆ.

ಜೈಲಿನಲ್ಲಿ ಲಾಲು ಅವರಿಗೆ ಸಂಪೂರ್ಣ ಭದ್ರತೆ ಇರಲಿದೆ ಎಂದು ಅವರು ಹೇಳಿದ್ದಾರೆ. ಕಾನೂನು ತನ್ನ ಕ್ರಮ ಕೈಗೊಂಡಿದೆ. ಈ ತೀರ್ಪು ಮೇವು ಹಗರಣಗಳಲ್ಲಿ ಮೊದಲನೆಯದಲ್ಲ. ಎಲ್ಲರೂ ಇದನ್ನು ಗೌರವಿಸಬೇಕು ಎಂದು ಸುಶೀಲ್ ತೀರ್ಪಿಗೆ ಪ್ರತಿಕ್ರಿಯಿಸಿದ್ದಾರೆ.

ಪಟ್ನಾ ಹೈಕೋರ್ಟ್‌ನಲ್ಲಿ ಮೇವು ಹಗರಣದ ವಿರುದ್ಧ ದೂರು ದಾಖಲಿಸಿದ ಅರ್ಜಿದಾರರಲ್ಲಿ ಸುಶೀಲ್ ಕುಮಾರ್‌ ಮೋದಿ ಸಹ ಒಬ್ಬರಾಗಿದ್ದರು.

*

ಆರು ಮೇವು ಹಗರಣ

1990ರ ದಶಕದಲ್ಲಿ ಬಿಹಾರದಲ್ಲಿ ನಡೆದಿದ್ದ ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಲಾಲು ಪ್ರಸಾದ್‌ ವಿರುದ್ಧ ಒಟ್ಟು ಆರು ಪ್ರಕರಣ ದಾಖಲಾಗಿವೆ. ಆ ಪೈಕಿ ಈಗ ನಾಲ್ಕನೇ ಹಗರಣದ ತೀರ್ಪು ಹೊರಬಿದ್ದಿದೆ. ಉಳಿದ ಎರಡು ಮೇವು ಹಗರಣ ಪ್ರಕರಣಗಳ ತೀರ್ಪು ಬರಬೇಕಿದೆ.

ಮೊದಲ ಹಗರಣ

ಚಾಯಿಬಾಸಾ ಖಜಾನೆಯಿಂದ ಹಣ ಪಡೆದ ಪ್ರಕರಣ (ಆರ್‌ಸಿ 20ಎ/96) ಲಾಲು ಪ್ರಸಾದ್‌ಗೆ ಐದು ವರ್ಷ ಜೈಲು ಶಿಕ್ಷೆ. 3ತಿಂಗಳಲ್ಲೇ ಸುಪ್ರೀಂ ಕೋರ್ಟ್‌ನಿಂದ ಜಾಮೀನು. ಲೋಕಸಭಾ ಸದಸ್ವತ್ವ ನಷ್ಟ. ಐದು ವರ್ಷ ಚುನಾವಣೆ ಸ್ಪರ್ಧೆಗೆ ನಿರ್ಬಂಧ

ಎರಡನೇ ಹಗರಣ

ದೇವಗಡ ಖಜಾನೆಯಿಂದ ₹90 ಲಕ್ಷ ಹಣ ಅಕ್ರಮವಾಗಿ ಪಡೆದ ಪ್ರಕರಣ (ಆರ್‌ಸಿ 64ಎ/96) ಮೂರೂವರೆ ವರ್ಷ ಜೈಲು ಶಿಕ್ಷೆ ಮತ್ತು ₹10 ಲಕ್ಷ ದಂಡ

ಮೂರನೇ ಹಗರಣ

ಚಾಯಿಬಾಸಾ ಖಜಾನೆಯಿಂದ 1992–93ರಲ್ಲಿ ₹33.13 ಕೋಟಿ ಪಡೆದ ಪ್ರಕರಣ (ಆರ್‌ಸಿ 68ಎ/96) ಲಾಲು ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಡಾ. ಜಗನ್ನಾಥ ಮಿಶ್ರಾಗೆ ಐದು ವರ್ಷ ಶಿಕ್ಷೆ ಮತ್ತು ₹10 ಲಕ್ಷ ದಂಡ

ನಾಲ್ಕನೇ ಮೇವು ಹಗರಣ

ದುಮಕಾ ಖಜಾನೆಯಿಂದ ಅಕ್ರಮವಾಗಿ ₹3.76 ಕೋಟಿ ಪಡೆದ ಪ್ರಕರಣ (ಆರ್‌ಸಿ38ಎ/96) 14 ವರ್ಷ ಜೈಲು ಶಿಕ್ಷೆ ಮತ್ತು ₹60 ಲಕ್ಷ ದಂಡ

ಐದನೇ ಹಗರಣ

ರಾಂಚಿಯ ಡೋರಂಡಾ ಖಜಾನೆಯಿಂದ ₹184 ಕೋಟಿ ತೆಗೆದ ಐದನೇ ಪ್ರಕರಣದ ವಿಚಾರಣೆ ನಡೆಯುತ್ತಿದೆ.

ಆರನೇ ಹಗರಣ

ಭಾಗಲ್ಪುರ ಖಜಾನೆಯಿಂದ ಹಣ ತೆಗೆದ ಆರನೇ ಪ್ರಕರಣ ಬಿಹಾರದ ಸಿಬಿಐ ನ್ಯಾಯಾಲಯದಲ್ಲಿದೆ.

*ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಹಿತಾಸಕ್ತಿಗಳನ್ನು ಬಿಜೆಪಿ ಪ್ರತಿನಿಧಿಸುತ್ತದೆ. ಈ ರೀತಿಯ ರಾಜಕೀಯ ಪಕ್ಷಗಳ ಸಂಚಿಗೆ ಅವರು ಬಲಿಯಾಗಿದ್ದಾರೆ.

–ಮನೋಜ್ ಝಾ, ಆರ್‌ಜೆಡಿ ರಾಷ್ಟ್ರೀಯ ವಕ್ತಾರ

*ಮೇವು ಹಗರಣ ದಾಖಲಾದಾಗ ಬಿಜೆಪಿ ಅಧಿಕಾರದಲ್ಲಿ ಇರಲಿಲ್ಲ. ಆರ್‌ಜೆಡಿ ಕಾರ್ಯಕರ್ತರು ಇದನ್ನು ನೆನಪಿಟ್ಟುಕೊಳ್ಳಬೇಕು. ತೀರ್ಪಿನ ಕುರಿತು ಆತುರದ ಪ್ರತಿಕ್ರಿಯೆ ವ್ಯರ್ಥ

–ಗಿರಿರಾಜ್ ಸಿಂಗ್, ಕೇಂದ್ರ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry