ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವವೈವಿಧ್ಯ ರಕ್ಷಣೆ ಎಲ್ಲರ ಹೊಣೆ

Last Updated 24 ಮಾರ್ಚ್ 2018, 19:32 IST
ಅಕ್ಷರ ಗಾತ್ರ

ಬೆಂಗಳೂರು: ‘ಜೀವವೈವಿಧ್ಯ ನಶಿಸಿದರೆ ಅದಕ್ಕೆ ಜೀವವೈವಿಧ್ಯ ಮಂಡಳಿಯನ್ನು ದೂಷಣೆ ಮಾಡಲಾಗದು. ಅದಕ್ಕೆ ಎಲ್ಲರೂ ಹೊಣೆಗಾರರೇ ಆಗಿರುತ್ತೇವೆ. ನಮ್ಮ ಸುತ್ತಲಿನ ಜೀವವೈವಿಧ್ಯ ಸಂರಕ್ಷಿಸಿಕೊಳ್ಳಲು ಎಲ್ಲರೂ ಒತ್ತುನೀಡಬೇಕು’ ಎಂದು ಚೆನ್ನೈನ ಫ್ಲೆಡ್ಜ್‌ ಟ್ರಸ್ಟಿ ಮತ್ತು ಅಧ್ಯಕ್ಷ ಡಾ.ಬಾಲಕೃಷ್ಣ ಪಿಸುಪತಿ ತಿಳಿಸಿದರು.

ರಾಜ್ಯ ಜೀವವೈವಿಧ್ಯ ಮಂಡಳಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಜೀವ ವೈವಿಧ್ಯ ಕಾಯ್ದೆ ಅರಿವು ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.

‘ಇಂದು ನಮ್ಮ ಬದುಕನ್ನು ಎಲ್ಲ ರೀತಿಯಿಂದಲೂ ಇಂಟರ್‌ನೆಟ್‌ ಮತ್ತು ಗೂಗಲ್‌ ನಿರ್ಧರಿಸುತ್ತಿವೆ. ಕಾಯಿಲೆ ಕಂಡುಕೊಳ್ಳುವುದು ಮತ್ತು ಅದಕ್ಕೆ ಚಿಕಿತ್ಸೆ ಹುಡುಕುವುದು ಗೂಗಲ್‌ನಲ್ಲೇ ನಡೆಯುತ್ತಿದೆ. ಗೊತ್ತಿಲ್ಲದ ಸಂಗತಿ ಬಗ್ಗೆ ಗೂಗಲ್‌ ತೆರೆದು ನೋಡಿ ಇದೇ ಸರಿ ಎಂಬ ತೀರ್ಮಾನಕ್ಕೆ ಬರುವ, ಒಂದಿಬ್ಬರ ಅಭಿಪ್ರಾಯದ ಮೇಲೆ ಅದೇ ಸತ್ಯ, ಅದೇ ಅಂತಿಮವೆಂಬ ತೀರ್ಪು ಕೊಡುವ ಪ್ರವೃತ್ತಿ ಬೆಳೆಯುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ತಲೆನೋವಿಗೆ ಗೂಗಲ್‌ನಲ್ಲಿ ಕಾರಣ ಹುಡುಕಿ, ಅದು ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡಿದರೆ ನಿಮಗೆ ಮಿದುಳಿನಲ್ಲಿ ಗಡ್ಡೆ ಇದೆ ಎನ್ನುವ ಉತ್ತರವನ್ನು ಗೂಗಲ್‌ ಕೊಡುತ್ತದೆ. ಇಂಟರ್ನೆಟ್‌, ಗೂಗಲ್‌ ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದೇ ಭಾವಿಸಿದ್ದೇವೆ. ಸಾಮಾಜಿಕ ಜಾಲತಾಣ, ಟಿ.ವಿ. ಹಾಗೂ ಮುದ್ರಣ ಮಾಧ್ಯಮಗಳು ಈ ರೀತಿ ಅಭಿಪ್ರಾಯಗಳಿಗೆ ಬರಬಾರದು. ಆಳವಾಗಿ ಅಭ್ಯಸಿಸಿ, ಜನರಿಗೆ ನಿಖರ ಮಾಹಿತಿ ನೀಡಬೇಕು’ ಎಂದರು.

ಜೀವ ವೈವಿಧ್ಯ ಕಾಯ್ದೆ ಅನುಷ್ಠಾನವಾಗಿಲ್ಲವೆಂದು ಯಾರಾದರೂ ಹೇಳಿದಾಗ ಹತ್ತಿಪ್ಪತ್ತು ಕಡತಗಳನ್ನು ನೋಡಿ ಅದನ್ನೇ ನಂಬಿ ಬಿಡುತ್ತೇವೆ. ಕಾಯ್ದೆ ಅನುಷ್ಠಾನವಾಗಿಲ್ಲವೆಂದು ಎಲ್ಲರೂ ಹೇಳಲು ಶುರು ಮಾಡುತ್ತೇವೆ. ಆ ರೀತಿ ಆಗಬಾರದು. ವಾಸ್ತವ ನೋಡಬೇಕು ಮತ್ತು ಪ್ರತಿಯೊಂದನ್ನು ಆಳವಾಗಿ ಅಧ್ಯಯನ ನಡೆಸಿ ತೀರ್ಮಾನಕ್ಕೆ ಬರಬೇಕು. ಜನರು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಜೀವ ವೈವಿಧ್ಯ ಕಾಯ್ದೆ ಕುರಿತು ಮಾತನಾಡಿದ ಎಟಿಮೋ ವೆಂಚರ್ಸ್‌ನ ಡಾ.ಸುಹಾಷ್‌ ನಿಂಬಾಳ್ಕರ್‌, ‘ಮುಂದುವರಿದ ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಜೀವ ವೈವಿಧ್ಯದ ಅರಿವು ಭಾರತದಲ್ಲಿ ಅತ್ಯಂತ ಕೆಳಮಟ್ಟದಲ್ಲಿದೆ. ಮುಂದುವರಿದ ರಾಷ್ಟ್ರಗಳಲ್ಲಿ ಜೀವವೈವಿಧ್ಯ ಕಾಪಾಡಿಕೊಳ್ಳುವ ಕಾಳಜಿ ಹೆಚ್ಚುತ್ತಿದೆ. ನಮ್ಮ ದೇಶದಲ್ಲಿ ಕೆಲವು ದಶಕಗಳ ಹಿಂದೆ ಬರೀ ತರಕಾರಿಯಲ್ಲೇ ಸುಮಾರು 400ರಿಂದ 500 ವಿಧಗಳಿದ್ದವು. ಈಗ ಹೆಚ್ಚೆಂದರೆ 50 ಬಗೆಯ ತರಕಾರಿ ಕಾಣಿಸುತ್ತಿವೆ’ ಎಂದರು.

ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಎಸ್‌.ಪಿ.ಶೇಷಾದ್ರಿ ಮಾತನಾಡಿ, ‘ಸಸ್ಯ ಮತ್ತು ಪ್ರಾಣಿ ಸಂಕುಲ ಸಂರಕ್ಷಿಸುವುದು ಇಂದಿನ ತುರ್ತು ಅಗತ್ಯ. ಜೀವವೈವಿಧ್ಯ ಕಾಪಾಡಿಕೊಳ್ಳುವ ಪ್ರಜ್ಞೆ ಮತ್ತು ಚಟುವಟಿಕೆಗಳು ಗ್ರಾಮಮಟ್ಟದಿಂದ ಅಂತರರಾಷ್ಟ್ರೀಯ ಮಟ್ಟದವರೆಗೂ ಒಂದು ಚಳವಳಿಯಂತೆ ಹರಡಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT