ದಿನವೂ ‘ಅರ್ಥ್‌ ಅವರ್‌’: ಗೃಹಿಣಿಯರ ಅಳಲು

7

ದಿನವೂ ‘ಅರ್ಥ್‌ ಅವರ್‌’: ಗೃಹಿಣಿಯರ ಅಳಲು

Published:
Updated:
ದಿನವೂ ‘ಅರ್ಥ್‌ ಅವರ್‌’: ಗೃಹಿಣಿಯರ ಅಳಲು

ಬೆಂಗಳೂರು: ಏರುತ್ತಿರುವ ಜಾಗತಿಕ ತಾಪಮಾನ ತಗ್ಗಿಸಲು ವಿಶ್ವದ ಎಲ್ಲೆಡೆ ವಿವಿಧ ಸಂಘಟನೆಗಳು ಶನಿವಾರ ರಾತ್ರಿ 8.30ರಿಂದ 9.30ರವರೆಗೆ ಒಂದು ಗಂಟೆ ವಿದ್ಯುತ್ ದೀಪ ಆರಿಸಿ ‘ಅರ್ಥ್ ಅವರ್‌’ ಆಚರಿಸುತ್ತಿದ್ದರೆ, ಬೆಸ್ಕಾಂ ಒಂದು ಹೆಜ್ಜೆ ಮುಂದೆ ಹೋಗಿ ನಗರದ ಹಲವು ಪ್ರದೇಶಗಳಲ್ಲಿ ಅನಿಮಿಯತ ಅವಧಿಗೆ ವಿದ್ಯುತ್‌ ಕಡಿತಗೊಳಿಸಿದೆ!

ಇದರಿಂದ ನಗರದ ಅನೇಕ ಪ್ರದೇಶಗಳಲ್ಲಿ ನಿವಾಸಿಗಳು ತೊಂದರೆ ಅನುಭವಿಸಬೇಕಾಯಿತು. ಫ್ಯಾನ್, ಕೂಲರ್, ಹವಾನಿಯಂತ್ರಣ (ಎ.ಸಿ) ವ್ಯವಸ್ಥೆ ಬಂದ್‌ ಆಗಿ ಸೆಕೆ ತಾಳಲಾರದೆ ಬೆವರುವಂತಾಯಿತು. ಬನಶಂಕರಿ, ಬಸವನಗುಡಿ, ಬೆಂಗಳೂರು ದಕ್ಷಿಣ ಹಾಗೂ ಭುವನೇಶ್ವರಿ ನಗರ ನಿವಾಸಿಗಳು ನಿರಂತರ ವಿದ್ಯುತ್ ಕಡಿತದ ಸಮಸ್ಯೆ ಎದುರಿಸಿದರು.

ಬಿಳೇಕಹಳ್ಳಿಯ ವಿಜಯ ಬ್ಯಾಂಕ್‌ ಬಡಾವಣೆಯ ನಿವಾಸಿ ಹಾಗೂ ನಿವೃತ್ತ ಉದ್ಯೋಗಿ ಭಾರತಿ ಶೇಖರ್‌, ‘ಕಳೆದ ಹಲವು ವಾರಗಳಿಂದ ಈ ಸಮಸ್ಯೆ ಮರುಕಳಿಸುತ್ತಿದೆ. ವಿದ್ಯುತ್ ಯಾವಾಗ ಇರುತ್ತದೆ ಎನ್ನುವುದನ್ನು ನೋಡಿಕೊಂಡು ವಾಷಿಂಗ್ ಮೆಷಿನ್, ಮಿಕ್ಸರ್ ಗ್ರೈಂಡರ್ ಬಳಸಬೇಕಾಗಿದೆ. ಇದರಿಂದ ಸಾಕಷ್ಟು ಅನಾನುಕೂಲವಾಗುತ್ತಿದೆ’ ಎಂದರು.

‘ತಾಂತ್ರಿಕ ಸಮಸ್ಯೆಗಳಿಂದ ವಿಜಯನಗರ, ಬೆಂಗಳೂರು ದಕ್ಷಿಣ ಸೇರಿ ಕೆಲವು ಕಡೆಗಳಲ್ಲಿ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು. ವಿಜಯನಗರದ ಮುಖ್ಯ ಸರಬರಾಜು ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿ, ವಿದ್ಯುತ್‌ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಂಗಳೂರು ದಕ್ಷಿಣದಲ್ಲಿ ಮಾರ್ಗದಲ್ಲೂ ತೊಂದರೆ ಕಾಣಿಸಿಕೊಂಡಿತ್ತು. ಈಗ ಸಮಸ್ಯೆಗಳನ್ನು ಸರಿಪಡಿಸಲಾಗಿದೆ’ ಎಂದು ಗ್ರಾಹಕ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕಿ ಜಯಂತಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

* ವಿಜಯನಗರದ ಮುಖ್ಯ ಸರಬರಾಜು ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆ ತಲೆದೋರಿ, ವಿದ್ಯುತ್‌ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry