ಮಹದೇವಪುರ: ‘ಖಾತಾ ಭಾಗ್ಯ ಬೇಕು’ ಅಭಿಯಾನ

7
ಅಪಾರ್ಟ್‌ಮೆಂಟ್‌ಗಳ 3 ಸಾವಿರ ಕುಟುಂಬಗಳಿಗೆ ಖಾತಾ ನೀಡಿಲ್ಲ

ಮಹದೇವಪುರ: ‘ಖಾತಾ ಭಾಗ್ಯ ಬೇಕು’ ಅಭಿಯಾನ

Published:
Updated:
ಮಹದೇವಪುರ: ‘ಖಾತಾ ಭಾಗ್ಯ ಬೇಕು’ ಅಭಿಯಾನ

ಬೆಂಗಳೂರು: ಮಹದೇವಪುರ ಕ್ಷೇತ್ರದ ನಾಗರಿಕರು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯ ನೇತೃತ್ವದಲ್ಲಿ ವಲಯ ಜಂಟಿ ಆಯುಕ್ತರ ಕಚೇರಿ ಎದುರು ಶನಿವಾರ ‘ಖಾತಾ ಭಾಗ್ಯ ಬೇಕು’ ಅಭಿಯಾನ ನಡೆಸಿದರು.

ನಾಗರಿಕರು ಜಂಟಿ ಆಯುಕ್ತೆ ವಾಸಂತಿ ಅಮರ್‌ ಅವರನ್ನು ಭೇಟಿ ಮಾಡಲು ಮಧ್ಯಾಹ್ನ 3ಕ್ಕೆ ಕಚೇರಿ ಬಳಿ ಬಂದರು. ಆದರೆ, ಅವರು ಇರಲಿಲ್ಲ. ಇದರಿಂದ ಕೆರಳಿದ ನಿವಾಸಿಗಳು, ಜಂಟಿ ಆಯುಕ್ತರ ವಿರುದ್ಧ ಘೋಷಣೆಗಳನ್ನು ಕೂಗಿದರು.

‘ಮಹದೇವಪುರ ವಲಯದ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಲ್ಲಿ ನೆಲೆಸಿರುವ 3 ಸಾವಿರ ನಿವಾಸಿಗಳಿಗೆ ಖಾತಾ ಮಾಡಿಕೊಟ್ಟಿಲ್ಲ. ಈ ಕುರಿತು ಮೂರು ತಿಂಗಳಿಂದ ಹೋರಾಟ ನಡೆಸುತ್ತಿದ್ದೇವೆ. ಈ ಸಂಬಂಧ ವಾಸಂತಿ ಅಮರ್‌ ಹಾಗೂ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ದೂರು ನೀಡಿದ್ದೆವು. ಎಲ್ಲರಿಗೂ ಖಾತಾ ನೀಡುತ್ತೇವೆ ಎಂದು ಆಯುಕ್ತರು ಭರವಸೆ ನೀಡಿದ್ದರು. ಅಲ್ಲದೆ, ಈ ಸಂಬಂಧ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದರು’ ಎಂದು ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆಯ ಸದಸ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಂಟಿ ಆಯುಕ್ತರು ಅಪಾರ್ಟ್‌ಮೆಂಟ್‌ ನಿವಾಸಿಗಳ ಸಭೆಯನ್ನು ಕರೆದಿದ್ದರು. ಖಾತಾ ಮೇಳ ಮಾಡಿ, 30 ದಿನಗಳಲ್ಲಿ ಖಾತಾ ನೀಡಬೇಕು ಎಂದು ವೈಟ್‌ಫೀಲ್ಡ್‌, ಮಾರತ್ತಹಳ್ಳಿ ಹಾಗೂ ಹೂಡಿ ಉಪ ಕಂದಾಯ ವಿಭಾಗಗಳ ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದರು. ಆಗ ಅರ್ಜಿ ಪಡೆದ ಅಧಿಕಾರಿಗಳು, ಎರಡು ತಿಂಗಳಾದರೂ ಇನ್ನೂ ಖಾತಾ ಮಾಡಿಕೊಟ್ಟಿಲ್ಲ’ ಎಂದು ದೂರಿದರು.

‘ಕಂದಾಯ ಅಧಿಕಾರಿ ಕೆಂಪರಂಗಯ್ಯ ಬಳಿ ಖಾತಾ ಬಗ್ಗೆ ವಿಚಾರಿಸಿದರೆ, ನನ್ನ ಬಳಿಗೆ ಯಾವುದೇ ಕಡತ ಬಂದಿಲ್ಲ ಎಂದು ಉಡಾಫೆ ಉತ್ತರ ನೀಡಿದರು. ಜಂಟಿ ಆಯುಕ್ತರು ಕರೆಯನ್ನು ಸ್ವೀಕರಿಸಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಭ್ರಷ್ಟಾಚಾರ ಎಲ್ಲೆಮೀರಿದೆ’

‘ಅಪಾರ್ಟ್‌ಮೆಂಟ್‌ ಖರೀದಿ ಮಾಡುವವರಿಗೆ ಸ್ವಾಧೀನಾನುಭವ ಪತ್ರ (ಒ.ಸಿ) ನೀಡಿದ ಬಳಿಕ, ಅಭಿವೃದ್ಧಿ ಶುಲ್ಕ ಪಡೆದು, ಅಪಾರ್ಟ್‌ಮೆಂಟ್‌ಗಳನ್ನು ವಿಭಾಗಿಸಿ ಖಾತಾ ಮಾಡಿಕೊಡಬೇಕು. ಇದಕ್ಕಾಗಿ ಇಡೀ ಅಪಾರ್ಟ್‌ಮೆಂಟ್‌ ಸಮುಚ್ಚಯದ ಇ.ಸಿ, ಒ.ಸಿ, ಯೋಜನಾ ನಕ್ಷೆ ಕೊಟ್ಟರೆ ಸಾಕು. ಆದರೆ, ಸಮುಚ್ಚಯದಲ್ಲಿರುವ ಎಲ್ಲರೂ ಈ ದಾಖಲೆಗಳನ್ನು ನೀಡಬೇಕು ಎಂದು ಅಧಿಕಾರಿಗಳು ಒತ್ತಾಯಿಸುತ್ತಾರೆ. ಕೆಲವರು ಎಲ್ಲ ದಾಖಲೆಗಳನ್ನು ಸಲ್ಲಿಸಿ ಆರು ತಿಂಗಳು ಕಳೆದರೂ ಖಾತಾ ಮಾಡಿಕೊಟ್ಟಿಲ್ಲ. ಕೆಲ ಅಧಿಕಾರಿಗಳು ನೇರವಾಗಿ ಲಂಚ ಕೇಳುತ್ತಾರೆ. ಈ ಹಿಂದೆ ಒಂದು ಖಾತಾ ಮಾಡಿಕೊಡಲು ₹25 ಸಾವಿರ ಲಂಚ ನೀಡಬೇಕಿತ್ತು. ಈಗ ಸುಮಾರು ₹8 ಸಾವಿರ ಕೊಡಬೇಕು’ ಎಂದು ಸಂಘಟನೆಯ ಸದಸ್ಯರೊಬ್ಬರು ದೂರಿದರು.

‘ಆಸ್ತಿ ತೆರಿಗೆ ಕಟ್ಟುವುದಿಲ್ಲ’

‘ನಗರದಲ್ಲೇ ಅತಿ ಹೆಚ್ಚು ಆಸ್ತಿ ತೆರಿಗೆಯನ್ನು ಮಹದೇವಪುರ ವಲಯದ ಆಸ್ತಿ ಮಾಲೀಕರು ಕಟ್ಟುತ್ತಿದ್ದಾರೆ. ಆದರೆ, ಖಾತೆ ಮಾಡಿಕೊಡುವ ವಿಷಯದಲ್ಲಿ ಮಾತ್ರ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ. ಖಾತಾ ನೀಡುವವರೆಗೂ ಆಸ್ತಿ ತೆರಿಗೆ ಕಟ್ಟುವುದಿಲ್ಲ’ ಎಂದು ಸಂಘಟನೆಯ ಸದಸ್ಯರೊಬ್ಬರು ತಿಳಿಸಿದರು.

‘ನನ್ನ ಮೇಲೆ ಕೇಸು ಹಾಕಿದ್ದರು’

‘ಖಾತಾ ನೀಡುವಂತೆ ಒತ್ತಾಯಿಸಿ ಹೋರಾಟ ಮಾಡಿದ್ದವು. ಈ ಕುರಿತು ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದವು. ಇದನ್ನು ಆಧಾರವಾಗಿ ಇಟ್ಟುಕೊಂಡು ಅಧಿಕಾರಿಗಳು ನಮ್ಮ ವಿರುದ್ಧ ಕೇಸು ಹಾಕಿದ್ದರು. ಅಪಾರ್ಟ್‌ಮೆಂಟ್‌ಗಳ ನಿವಾಸಿಗಳಿಂದ ಖಾತಾ ಮಾಡಿಸಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಆ ಕೇಸು ಖುಲಾಸೆ ಆಗಿತ್ತು’ ಎಂದು ಸಂಘಟನೆಯ ಸದಸ್ಯರೊಬ್ಬರು ತಿಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry