5
‘ಎಪ್ಸಿಲಾನ್ 2018’ ಅಂತರಕಾಲೇಜು ವಿಜ್ಞಾನ ಮೇಳ

ಅಂಧರ ನೆರವಿಗೆ ‘ಓಜೊ’ ಕನ್ನಡಕ!

Published:
Updated:
ಅಂಧರ ನೆರವಿಗೆ ‘ಓಜೊ’ ಕನ್ನಡಕ!

ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯದ ಅಂತಿಮ ವರ್ಷದ ಎಂಸಿಎ ವಿದ್ಯಾರ್ಥಿಗಳು ಅಂಧರಿಗೆ ನೆರವಾಗಬಲ್ಲ ‘ಓಜೊ’ ಕನ್ನಡಕ ರೂಪಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಎಪ್ಸಿಲಾನ್ 2018’ ಅಂತರಕಾಲೇಜು ವಿಜ್ಞಾನ ಮೇಳದಲ್ಲಿ ಇದನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಕನ್ನಡಕದಲ್ಲಿ ಪುಟ್ಟ ಕ್ಯಾಮೆರಾ ಅಳವಡಿಸಲಾಗಿದೆ. ಅದು ತನ್ನ ಎದುರಿಗಿನ ಪ್ರತಿಯೊಂದು ವಸ್ತುಗಳನ್ನು ಸ್ಕ್ಯಾನ್ ಮಾಡಿ ಅವುಗಳ ಹೆಸರನ್ನು ಹೇಳುತ್ತದೆ. ಅಕ್ಷರಗಳನ್ನೂ ಗ್ರಹಿಸಿ ಓದುತ್ತದೆ.

ದೇಶದಲ್ಲಿ 1.50 ಕೋಟಿ ಅಂಧರಿದ್ದಾರೆ. ಓದಲು ಹಾಗೂ ನಡೆದಾಡಲು ಅವರು ಕಷ್ಟ ಪಡುತ್ತಿದ್ದಾರೆ. ವಿಷಯಗಳ ಮಾಹಿತಿಯು ಬ್ರೈಲ್ ಲಿಪಿಯಲ್ಲಿ ಲಭ್ಯವಿರದ ಕಾರಣಕ್ಕೆ ಓದಿನ ಹಂಬಲವುಳ್ಳವರು ನಿರಾಸೆಗೊಳ್ಳುತ್ತಿದ್ದಾರೆ. ಅಂಥವರಿಗೆ ಈ ಕನ್ನಡಕ ನೆರವಾಗಲಿದೆ ಎಂದು ವಿದ್ಯಾರ್ಥಿನಿ ತೇಜಸ್ವಿನಿ ಹೇಳಿದಳು.

ತಿರುಗುವ ಸೌರ ಫಲಕ: ಬೆಳಕು ಹಾಗೂ ತಾಪಮಾನ ಗ್ರಹಿಸಿ ಸೂರ್ಯನತ್ತ 180 ಡಿಗ್ರಿ ರೂಪದಲ್ಲಿ ತಿರುಗುವ ಸೌರ ಫಲಕವನ್ನು ಚನ್ನಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಾದ ಎಚ್.ಸಿ.ಕಾರ್ತಿಕ್ ಹಾಗೂ ಚೇತನ್‌ಕುಮಾರ್ ರೂಪಿಸಿದ್ದಾರೆ.

‘ಒಂದು ನಿರ್ದಿಷ್ಟ ದಿಕ್ಕಿನ ಕಡೆಗೆ ಮುಖ ಮಾಡಿರುವಂತೆ ಸೌರಫಲಕಗಳನ್ನು ಅಳವಡಿಸುವುದು ಸದ್ಯದ ಪದ್ಧತಿ. ಅದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೌರಶಕ್ತಿ ಉತ್ಪಾದನೆ ಸಾಧ್ಯವಿಲ್ಲ. ನಾವು ರೂಪಿಸಿರುವ ತಿರುಗುವ ಸೌರಫಲಕದಿಂದ ಗರಿಷ್ಠ ಸೌರಶಕ್ತಿ ಉತ್ಪಾದಿಸಬಹುದು’ ಎಂದು ವಿದ್ಯಾರ್ಥಿ ಕಾರ್ತಿಕ್ ವಿವರಿಸಿದ.

ಸ್ವಯಂಚಾಲಿತ ರೊಬೋಟ್: ಸ್ವಯಂಚಾಲಿತವಾಗಿ ಚಲಿಸಬಲ್ಲ ಹಾಗೂ ಮಾತನಾಡಬಲ್ಲ ರೊಬೋಟ್ ತಂತ್ರಜ್ಞಾನವನ್ನು ಚನ್ನಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿ ಧ್ಯಾನ್ ಸಾಗರ್ ಆವಿಷ್ಕರಿಸಿದ್ದಾನೆ.

‘ನಾವು ಕೇಳುವ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ಈ ರೊಬೋಟ್ ನೀಡಲಿದೆ. ಇದನ್ನು ಆಪ್ತ ಸಹಾಯಕನ ರೀತಿಯಾಗಿ ಬಳಸಬಹುದು. ಕುಟುಂಬ ಸದಸ್ಯರನ್ನು ಹೊರತುಪಡಿಸಿ ಮನೆಗೆ ಬರುವ ಬೇರೆ ವ್ಯಕ್ತಿಗಳನ್ನು ಗುರುತಿಸಿ, ಅವರ ಚಿತ್ರಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ಮಾಲೀಕರಿಗೆ ರವಾನಿಸುತ್ತದೆ’ ಎಂದು ಧ್ಯಾನ್‌ ಸಾಗರ್ ಹೇಳಿದ.

ಪರಿಸರ ಮಾಲಿನ್ಯವಿಲ್ಲದೆ ನೀರು ಹಾಗೂ ಸೌರಶಕ್ತಿಯಿಂದ ಜಲಜನಕ ತಯಾರಿಸಬಹುದೇ? ಹೌದು, ಇದು ಸಾಧ್ಯ ಎಂಬುದನ್ನು ಪಿಇಎಸ್ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ನಾಲ್ಕನೇ ವರ್ಷದ ವಿದ್ಯಾರ್ಥಿ ಸಂಕೇತ್ ಹೆದ್ದೂರಿ ನೇತೃತ್ವದ ತಂಡ ಸಾಬೀತು ಮಾಡಿದೆ.

‘ಈ ಮಾದರಿಯಲ್ಲಿ ಸೆಮಿಕಂಡಕ್ಟರ್ ಉಪಕರಣವನ್ನು ಅಳವಡಿಸಿದ್ದೇವೆ. ಅದು ಸೌರಶಕ್ತಿಯನ್ನು ಗ್ರಹಿಸಿ, ನೀರಿನ ಮಾಲಿಕ್ಯೂಲ್‌ ಅನ್ನು ಬೇರ್ಪಡಿಸುತ್ತದೆ. ಆಗ ಹೈಡ್ರೋಜನ್ ಹಾಗೂ ಆಮ್ಲಜನಕ ಉತ್ಪಾದನೆಯಾಗುತ್ತದೆ. ಅದನ್ನು ಪ್ರತ್ಯೇಕ ಟ್ಯಾಂಕ್‌ಗಳಲ್ಲಿ ಸಂಗ್ರಹ ಮಾಡಿ ಉಪಯೋಗಿಸಬಹುದು’ ಎಂದು ಸಂಕೇತ್ ವಿವರಿಸಿದ.

‘ನಮ್ಮ ಮಾದರಿ ಮೂಲಕ ಜಲಜನಕ ತಯಾರಿಕೆಯಿಂದ ಮಾಲಿನ್ಯ ಉಂಟಾಗುವುದಿಲ್ಲ. ಸೌರಶಕ್ತಿ ಹಾಗೂ ನೀರು ಬಳಸಿಕೊಳ್ಳುವುದರಿಂದ ಖರ್ಚು ಸಹ ಕಡಿಮೆ. ಜಲಜನಕವನ್ನು ವಿದ್ಯುತ್ ಹಾಗೂ ರಾಕೆಟ್‌ ಇಂಧನ ರೂಪದಲ್ಲಿ ಬಳಸಬಹುದು’ ಎಂದು ಮಾಹಿತಿ ನೀಡಿದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry