7
ನೆರೆಮನೆಯಲ್ಲೇ ಇದ್ದ ಪ್ರಮುಖ ಆರೋಪಿ

ಕಳ್ಳರನ್ನು ಪತ್ತೆ ಮಾಡಿದ ವಿಡಿಯೊಗ್ರಾಫರ್!

Published:
Updated:
ಕಳ್ಳರನ್ನು ಪತ್ತೆ ಮಾಡಿದ ವಿಡಿಯೊಗ್ರಾಫರ್!

ಬೆಂಗಳೂರು: ತಮ್ಮ ಮನೆಯಲ್ಲಿ 240 ಗ್ರಾಂ ಚಿನ್ನ ಹಾಗೂ ಐದು ಕ್ಯಾಮೆರಾಗಳನ್ನು ಕದ್ದೊಯ್ದಿದ್ದ ಕಳ್ಳರಿಬ್ಬರನ್ನು ತಾವೇ ತನಿಖೆ ನಡೆಸಿ ಹಿಡಿಯುವಲ್ಲಿ ವಿಡಿಯೊಗ್ರಾಫರ್‌ ಅಯಾಜ್ ಪಾಷಾ ಯಶಸ್ವಿಯಾಗಿದ್ದಾರೆ.

ಸೋಮೇಶ್ವರನಗರ 6ನೇ ಅಡ್ಡರಸ್ತೆ ನಿವಾಸಿಯಾದ ಅಯಾಜ್, ಮನೆ ಸಮೀಪವೇ ಸ್ಟುಡಿಯೊ ಇಟ್ಟುಕೊಂಡಿದ್ದಾರೆ. 2017ರ ಸೆಪ್ಟೆಂಬರ್‌ನಲ್ಲಿ ಸ್ಟುಡಿಯೊ ನವೀಕರಣ ಕಾರ್ಯ ನಡೆಯುತ್ತಿದ್ದರಿಂದ, ಎಲ್ಲಾ ಕ್ಯಾಮೆರಾಗಳನ್ನು ಮನೆಯಲ್ಲಿಟ್ಟಿದ್ದರು. ಕುಟುಂಬ ಸಮೇತ ಅವರು ನಲ್ಲೂರಿಗೆ ತೆರಳಿದ್ದ ಸಂದರ್ಭದಲ್ಲಿ ಬನ್ನೇರುಘಟ್ಟ ರಸ್ತೆಯ ಸಲ್ಮಾನ್ (22) ಹಾಗೂ ಸೋಮೇಶ್ವರದ ಮೊಹಮದ್ ಜಬೀವುಲ್ಲಾ (23) ಎಂಬುವರು, ಮನೆಗೆ ನುಗ್ಗಿ ಕಳ್ಳತನ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

‍ಪೇಂಟಿಂಗ್ ಮಾಡಿದ್ದ: ಅಯಾಜ್ ವರ್ಷದ ಹಿಂದೆ ಈ ಮನೆ ಕಟ್ಟಿಸಿದ್ದರು. ಆಗ, ಆರೋಪಿ ಸಲ್ಮಾನ್‌ನೇ ಪೇಂಟಿಂಗ್ ಕೆಲಸಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ಆತನಿಗೆ ನೆರೆಮನೆಯ ಜಬೀವುಲ್ಲಾನ ಪರಿಚಯವಾಗಿತ್ತು. ಕ್ರಮೇಣ ಇಬ್ಬರೂ ಆಪ್ತ ಸ್ನೇಹಿತರಾಗಿದ್ದರು.

ಸೆ.28ರಂದು ಅಯಾಜ್ ಕುಟುಂಬ ಊರಿಗೆ ತೆರಳಿದ ಕೂಡಲೇ ಸಲ್ಮಾನ್‌ಗೆ ಕರೆ ಮಾಡಿದ್ದ ಜಬೀವುಲ್ಲಾ, ‘ಕ್ಯಾಮೆರಾಗಳೆಲ್ಲ ಮನೆಯಲ್ಲೇ ಇವೆ. ಕಳವು ಮಾಡಿ ಮಾರಾಟ ಮಾಡಿದರೆ ಲಕ್ಷಾಂತರ ರೂಪಾಯಿ ಸಿಗುತ್ತದೆ’ ಎಂದು ಹೇಳಿದ್ದ. ಅದಕ್ಕೆ ಆತ ಒಪ್ಪಿಕೊಂಡಿದ್ದ. ಮರುದಿನ ರಾತ್ರಿಯೇ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದರು.

ಸೆ.30ರ ಬೆಳಿಗ್ಗೆ ಮನೆ ಬಾಗಿಲು ತೆಗೆದಿದ್ದರಿಂದ ಅನುಮಾನಗೊಂಡ ಅಯಾಜ್ ಸಂಬಂಧಿಯೊಬ್ಬರು, ಕೂಡಲೇ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಅಲ್ಲದೆ, ಸಿದ್ದಾಪುರ ಠಾಣೆಗೂ ವಿಷಯ ತಿಳಿಸಿದ್ದರು. ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚುದಳದ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಹೋಗಿದ್ದರು.

ಫಿರ್ಯಾದಿಯ ತನಿಖೆ ಶುರು..!: ಅ.3ರಂದು ನಗರಕ್ಕೆ ವಾಪಸಾದ ಅಯಾಜ್, ಠಾಣೆಗೆ ದೂರು ಕೊಟ್ಟು ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಕರಣ ದಾಖಲಾಗಿ ವಾರ ಕಳೆದರೂ ಯಾವುದೇ ಪ್ರಗತಿ ಕಾಣದಿದ್ದಾಗ, ತಾವೇ ತನಿಖೆ ಶುರು ಮಾಡಿದ್ದರು.

‘ಸೆಕೆಂಡ್ ಹ್ಯಾಂಡ್ ಕ್ಯಾಮೆರಾಗಳನ್ನು ಖರೀದಿಸಲು ನಿರ್ಧರಿಸಿದ್ದೇನೆ. ನಿಮಗೆ ಗೊತ್ತಿರುವ ಕ್ಯಾಮೆರಾ ಡೀಲರ್‌ಗಳಿಗೆ ನನ್ನನ್ನು ಸಂಪರ್ಕಿಸಲು ಹೇಳಿ. ಹೆಚ್ಚಿನ ಬೆಲೆಯನ್ನೇ ಕೊಟ್ಟು ಖರೀದಿ ಮಾಡುತ್ತೇನೆ ಎಂದು ‍ಪರಿಚಿತ ಛಾಯಾಗ್ರಾಹಕರೆಲ್ಲರಿಗೂ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಕಳುಹಿಸಿದೆ. ಅವರು ಪರಿಚಿತ ಡೀಲರ್‌ಗಳಿಗೆ ಆ ಸಂದೇಶವನ್ನು ಕಳುಹಿಸಿ, ನನ್ನ ಮೊಬೈಲ್ ಸಂಖ್ಯೆ ಹಾಗೂ ಸ್ಟುಡಿಯೊ ವಿಳಾಸವನ್ನೂ ಕೊಟ್ಟಿದ್ದರು’ ಎಂದು ಅಯಾಜ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಆ ನಂತರ 20ಕ್ಕೂ ಹೆಚ್ಚು ಮಂದಿ ಸ್ಟುಡಿಯೊಗೆ ಬಂದು ಕ್ಯಾಮೆರಾಗಳನ್ನು ತೋರಿಸಿದರು. ಅವ್ಯಾವು ನನ್ನದಾಗಿರಲಿಲ್ಲ. ಹೀಗಾಗಿ, ಏನೇನೋ ನೆಪ ಹೇಳಿ ವಾಪಸ್ ಕಳುಹಿಸಿದ್ದೆ. 15 ದಿನಗಳ ಹಿಂದೆ ಮೈಸೂರಿನಿಂದ ಖದೀರ್ ಎಂಬ ಡೀಲರ್ ಕರೆ ಮಾಡಿ, ‘ನಾನು ಇತ್ತೀಚೆಗೆ ವಿಡಿಯೊ ಕ್ಯಾಮೆರಾವೊಂದನ್ನು ಖರೀದಿಸಿದ್ದೇನೆ. ನಿಮಗೆ ಬೇಕಾದರೆ ಹೆಚ್ಚಿನ ಬೆಲೆಗೆ ಮಾರುತ್ತೇನೆ’ ಎಂದಿದ್ದರು. ಅದಕ್ಕೆ ಒಪ್ಪಿಕೊಂಡ ನಾನು, ಕ್ಯಾಮೆರಾ ನೋಡಿದ ಬಳಿಕ ವ್ಯವಹಾರ ಮಾತನಾಡುವುದಾಗಿ ತಿಳಿಸಿದ್ದೆ.’

‘ಮಾರ್ಚ್ 18ರಂದು ಅವರು ಸ್ಟುಡಿಯೊಗೆ ಬಂದು ಕ್ಯಾಮೆರಾ ತೋರಿಸಿದರು. ಕೈಲಿ ಹಿಡಿದುಕೊಳ್ಳುತ್ತಿದ್ದಂತೆಯೇ ಅದು ನನ್ನದೇ ಕ್ಯಾಮೆರಾ ಎಂಬುದು ಗೊತ್ತಾಯಿತು. ಸೀರಿಯಲ್ ನಂಬರ್ ಸಹ ಸರಿಯಾಗಿಯೇ ಇತ್ತು. ಹೀಗಾಗಿ, ಪೊಲೀಸರಿಗೆ ಕರೆ ಮಾಡಿ ಸ್ಟುಡಿಯೊ ಬಳಿ ಕರೆಸಿಕೊಂಡೆ. ಆಗ ಖದೀರ್, ‘ನಾನು ಮೈಸೂರಿನ ಸ್ಟುಡಿಯೊವೊಂದರಲ್ಲಿ ಇದನ್ನು ಖರೀದಿಸಿದ್ದು’ ಎಂದರು. ಅದೇ ದಿನ ರಾತ್ರಿ ಅವರ ಜತೆ ನಾನು ಹಾಗೂ ಪೊಲೀಸರು ಮೈಸೂರಿಗೆ ತೆರಳಿದೆವು.’

‘ಆ ಸ್ಟುಡಿಯೊಗೆ ಹೋದಾಗ ನನ್ನ ಐದೂ ಕ್ಯಾಮೆರಾಗಳು ಅಲ್ಲೇ ಇದ್ದವು. ಅದರ ಮಾಲೀಕ ಫಾಜಿಲ್, ‘ನನಗೆ ಯುವಕರಿಬ್ಬರು ಇವುಗಳನ್ನು ಮಾರಿದ್ದರು. ಖರೀದಿ ಮಾಡುವಾಗ ಅವರ ಫೋಟೊ ಹಾಗೂ ಗುರುತಿನ ಚೀಟಿಗಳನ್ನೂ ಸಂಗ್ರಹಿಸಿಕೊಂಡಿದ್ದೇನೆ’ ಎಂದು ಹೇಳಿದರು. ಅವುಗಳನ್ನು ಪರಿಶೀಲಿಸಿದಾಗ, ನನ್ನ ಮನೆಯ ಗೋಡೆಗಳಿಗೆ ಬಣ್ಣ ಬಳಿದಿದ್ದ ಸಲ್ಮಾನ್ ಹಾಗೂ ನೆರೆಮನೆಯ ಜಬೀವುಲ್ಲಾ ಅವರೇ ಆರೋಪಿಗಳು ಎಂಬದು ಖಚಿತವಾಯಿತು’ ಎಂದು ಅಯಾಜ್ ಮಾಹಿತಿ ನೀಡಿದರು.

ಎರಡು ಕಾರು ಖರೀದಿ

‘ಕ್ಯಾಮೆರಾ ಹಾಗೂ ಆಭರಣ ಮಾರಿದ್ದರಿಂದ ಬಂದಿದ್ದ ಹಣದಲ್ಲಿ ಆರೋಪಿಗಳು ಬೊಲೆನೊ, ಹೋಂಡಾ ಸಿಟಿ ಕಾರುಗಳನ್ನು ಹಾಗೂ ಎರಡು ಲ್ಯಾಪ್‌ಟಾಪ್‌ಗಳನ್ನು ಖರೀದಿಸಿದ್ದರು. ಅವುಗಳನ್ನೂ ಜಪ್ತಿ ಮಾಡಿದ್ದೇವೆ’ ಎಂದು ಸಿದ್ದಾಪುರ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry