ಫ್ಲೆಕ್ಸ್‌ ಗಲಾಟೆ ಬಿಜೆಪಿ ಮುಖಂಡನ ಬಂಧನ

7

ಫ್ಲೆಕ್ಸ್‌ ಗಲಾಟೆ ಬಿಜೆಪಿ ಮುಖಂಡನ ಬಂಧನ

Published:
Updated:

ಬೆಂಗಳೂರು: ಶಿವಾಜಿನಗರದ ಯೂನಿವರ್ಸಲ್ ಪೆಟ್ರೋಲ್ ಬಂಕ್ ಎದುರು ಫ್ಲೆಕ್ಸ್‌ ಕಟ್ಟಿದ್ದನ್ನು ಪ್ರಶ್ನಿಸಿ, ಬಂಕ್‌ನ ಕ್ಯಾಷಿಯರ್ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಬಿಜೆಪಿ ಮುಖಂಡ ಅಪ್ಪುನನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಜಯಮಹಲ್ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಪ್ಪು, ಪರಾಭವಗೊಂಡಿದ್ದರು. ಪ್ರಕರಣದ ಇನ್ನೊಬ್ಬ ಆರೋಪಿ ರಾಜು ತಲೆಮರೆಸಿಕೊಂಡಿದ್ದು, ಪತ್ತೆ ಹಚ್ಚುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದರು.

ಸಚಿವ ರೋಷನ್‌ ಬೇಗ್ ಸೇರಿ ಕಾಂಗ್ರೆಸ್‌ನ ಹಲವು ಮುಖಂಡರ ಭಾವಚಿತ್ರವಿರುವ ಫ್ಲೆಕ್ಸ್‌ನ್ನು ಬಂಕ್‌ ಬಳಿ ಕಟ್ಟಲಾಗಿತ್ತು. ಬೆಂಬಲಿಗರ ಜತೆ ಮಾ. 21ರಂದು ಸ್ಥಳಕ್ಕೆ ಬಂದಿದ್ದ ಅಪ್ಪು, ‘ಇದು ನಮ್ಮ ಕ್ಷೇತ್ರ. ಇಲ್ಲಿ ಏಕೆ ಫ್ಲೆಕ್ಸ್‌ ಕಟ್ಟಿದ್ದೀರಾ’ ಎಂದು ಬಂಕ್‌ ಸಿಬ್ಬಂದಿಯನ್ನು ಪ್ರಶ್ನಿಸಿದ್ದರು. ಸಿಬ್ಬಂದಿ, ‘ಅದನ್ನು ನಾವು ಕಟ್ಟಿಲ್ಲ. ಬೇರೆ ಯಾರೋ ಬಂದು ಕಟ್ಟಿ ಹೋಗಿದ್ದಾರೆ’ ಎಂದಿದ್ದರು.

ಅಷ್ಟಕ್ಕೆ ಸುಮ್ಮನಾಗದ ಅವರು, ಕ್ಯಾಷಿಯರ್‌ ಮೇಲೆ ಹರಿಹಾಯ್ದು ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿ ಪರಾರಿಯಾಗಿದ್ದರು. ಗಾಯಗೊಂಡ ಕ್ಯಾಷಿಯರ್‌, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ, ಠಾಣೆಗೆ ಬಂದು ದೂರು ನೀಡಿದ್ದರು. ನಂತರವೇ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದೇವೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry