ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಬೇಡ್ಕರ್‌ ತತ್ವದಂತೆ ನಡೆದು ಯಶಸ್ಸು ಗಳಿಸಿದ್ದಕ್ಕೆ ನಾನೇ ಉದಾಹರಣೆ’ : ನರೇಂದ್ರ ಮೋದಿ

Last Updated 25 ಮಾರ್ಚ್ 2018, 10:25 IST
ಅಕ್ಷರ ಗಾತ್ರ

ನವದೆಹಲಿ : ‘ಡಾ.ಬಿ.ಆರ್‌.ಅಂಬೇಡ್ಕರ್‌ ಅವರನ್ನು ಜನರು ಅಪಹಾಸ್ಯ ಮಾಡಿದ್ದರು. ಹಿಂದುಳಿದ ಸಮುದಾಯದ ಕುಟುಂಬಕ್ಕೆ ಸೇರಿದ ಅವರು ಉನ್ನತ ಸ್ಥಾನಕ್ಕೆ ತಲುಪದಂತೆ ಅಡೆತಡೆಗಳನ್ನು ಒಡ್ಡಿದ್ದರು. ಆದರೆ ಇಂದಿನ ನವಭಾರತದಲ್ಲಿ ಬಡವರು ಮತ್ತು ಹಿಂದುಳಿದವರು ಮುಂದೆ ಬರಲು ಪೂರಕವಾದ ವಾತಾವರಣವಿದೆ’ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

ತಿಂಗಳಿನ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ದೇಶದ ಆರ್ಥಿಕತೆ ಸುಧಾರಣೆಯಲ್ಲಿ ರೈತರ ಶ್ರಮ ಮತ್ತು ಕೃಷಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮಹಾತ್ಮ ಗಾಂಧಿ, ಲಾಲ್‌ ಬಹದ್ದೂರ್‌ ಶಾಸ್ತ್ರಿ, ರಾಮ್‌ ಮನೋಹರ್‌ ಲೋಹಿಯಾ, ಚರಣ್‌ ಸಿಂಗ್‌ ಮತ್ತು ದೇವಿ ಲಾಲ್‌ ಹೇಳಿದ್ದಾರೆ’ ಎಂದು ಮಹನಿಯರನ್ನು ನೆನಪಿಕೊಂಡರು.

‘ಬಡ ಅಥವಾ ಶ್ರೀಮಂತ ಕುಟುಂಬದಲ್ಲಿ ಹುಟ್ಟುವುದಕ್ಕೂ ಯಶಸ್ಸಿಗೂ ಸಂಬಂಧವಿಲ್ಲ. ಭಾರತದಂತ ದೇಶದಲ್ಲಿ ಬಡವರು ಸಹ ದೊಡ್ಡ ಕನಸುಗಳನ್ನು ಕಾಣಬಹುದು. ಅವುಗಳನ್ನು ಸಾಕಾರ ಮಾಡಿಕೊಳ್ಳಬಹುದು ಎಂದು ಅಂಬೇಡ್ಕರ್‌ ತೋರಿಸಿಕೊಟ್ಟಿದ್ದಾರೆ’ ಎಂದರು.

‘ಅಂಬೇಡ್ಕರ್‌ ತತ್ವದಂತೆ ನಡೆದು ಯಶಸ್ಸು ಗಳಿಸಿದ್ದಕ್ಕೆ ನಾನೇ ಉದಾಹರಣೆ’ ಎಂದು ಪ್ರಧಾನಿ ಹೇಳಿದರು.

‘ಅಂಬೇಡ್ಕರ್‌ ಎದುರಿಸಿದ ಪರಿಸ್ಥಿತಿ ಇಂದಿಲ್ಲ. ಇಂದು ನಮ್ಮ ದೇಶ ಬಡವರ ಮತ್ತು ಹಿಂದುಳಿದವರ ಏಳಿಗೆ ಬಯಸಿದ ಅಂಬೇಡ್ಕರ್‌ ಭಾರತ ಆಗಿದೆ’ ಎಂದು ಹೇಳಿದರು.

ಮುಂಬರುವ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಏಪ್ರಿಲ್‌ 14ರಿಂದ ಮೇ 5ರ ವರೆಗೆ ‘ಗ್ರಾಮ ಸ್ವರಾಜ್‌ ಅಭಿಯಾನ’ ಹಮ್ಮಿಕೊಂಡಿದ್ದೇವೆ. ಇದರಲ್ಲಿ ಗ್ರಾಮ ಅಭಿವೃದ್ಧಿ, ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ನ್ಯಾಯ ಜಾಗೃತಿಗಾಗಿ ದೇಶಾದ್ಯಂತ ಪ್ರತ್ಯೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಎಲ್ಲರೂ ಈ ಅಭಿಯಾನದಲ್ಲಿ ಭಾಗಿಯಾಗಿರಿ’ ಎಂದು ಕರೆ ನೀಡಿದರು.

‘ಅಂಬೇಡ್ಕರ್‌ ಭಾರತವೊಂದು ಕೈಗಾರಿಕಾ ಸುಪರ್‌ಪವರ್‌ ದೇಶವಾಗಬೇಕು ಎಂದು ಬಯಸಿದ್ದರು. ಅದನ್ನು ಇಂದಿನ ನಮ್ಮ ಮೇಕ್‌ ಇನ್‌ ಇಂಡಿಯಾ ಯೋಜನೆ ಸಾಕಾರಗೊಳಿಸುತ್ತಿದೆ. ಅಂಬೇಡ್ಕರರ ದೃಷ್ಟಿಕೋನಗಳು ನಮಗೆ ಸ್ಫೂರ್ತಿಯಾಗಿವೆ’ ಎಂದು ಕೊಂಡಾಡಿದರು.

‘ಸ್ವಾವಲಂಬನೆಯಲ್ಲಿ ಬಾಬಾ ಸಾಹೇಬರು ನಂಬಿಕೆ ಇರಿಸಿದ್ದರು. ಯಾರೇ ಆದರೂ ಬಡತನದಲ್ಲಿಯೇ ಉಳಿಯುವುದನ್ನು ಅವರು ಬಯಸುತ್ತಿರಲಿಲ್ಲ. ಹಾಗೇಯೇ ಕೇವಲ ಬಂಡವಾಳದ ಹಂಚಿಕೆಯಿಂದಾಗಿಯೇ ಬಡತನ ನಿರ್ಮೂಲನೆ ಆಗಲಾರದು ಎಂದು ಅವರು ನಂಬಿದ್ದರು. ನಮ್ಮ ಇಂದಿನ ಹಣಕಾಸು ನೀತಿ, ಸ್ಟಾರ್ಟ್‌ ಅಪ್‌ ಇಂಡಿಯಾ, ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆಗಳು ಯುವ ಸಂಶೋಧಕರು ಮತ್ತು ಉದ್ಯಮಿಗಳನ್ನು ಬೆಳೆಸುತ್ತಿವೆ’ ಎಂದು ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT