7

ದಪ್ಪಗಿದ್ದರೇನು! ಎಲ್ಲಾ ಪಾತ್ರಕ್ಕೂ ಸೈ...

Published:
Updated:
ದಪ್ಪಗಿದ್ದರೇನು! ಎಲ್ಲಾ ಪಾತ್ರಕ್ಕೂ ಸೈ...

ರಂಗಭೂಮಿ, ಹಿರಿತೆರೆ, ಕಿರುತೆರೆಯಲ್ಲಿ ದಪ್ಪ ಮೈಕಟ್ಟಿನ ಅನೇಕ ನಟ, ನಟಿಯರಿದ್ದಾರೆ. ದಪ್ಪ ಇದ್ದಾರೆ ಎಂದಾಕ್ಷಣ ಅವರನ್ನು ಪೋಷಕ ಅಥವಾ ಹಾಸ್ಯ ಪಾತ್ರಕ್ಕೆ ಸೀಮಿತಗೊಳಿಸಿಬಿಡುತ್ತಾರೆ. ಇದರಿಂದಾಗಿ ಅವರಲ್ಲಿರುವ ನಟನಾ ಕೌಶಲ ಗೌಣವಾಗುತ್ತದೆ. ಅಂತಹವರು ಉತ್ತಮ ಪಾತ್ರದ ಅವಕಾಶದಿಂದ ವಂಚಿತರಾಗುವುದನ್ನು ಮನಗಂಡ ರಂಗಭೂಮಿ ಕಲಾವಿದೆ ಅನುರಾಧಾ ಎಚ್‌.ಆರ್. ಕಟ್ಟಿದ ತಂಡದ ಹೆಸರೇ

‘ಬಿಗ್‌ ಫ್ಯಾಟ್‌ ಕಂಪನಿ’!

‘ದಪ್ಪಗಿರುವವರನ್ನು ಸಿನಿಮಾ, ರಂಗಭೂಮಿಗಳಲ್ಲಿ ಬುದ್ಧಿ ಕಡಿಮೆ ಇರುವವರು, ತಿಂಡಿಪೋತರು ಎಂದು ತೋರಿಸಲಾಗುತ್ತದೆ. ಸುಂದರ ಮೈಕಟ್ಟಿನ ಬಗ್ಗೆ ಇರುವ ಮಿಥ್ಯೆಗಳಿಂದ ಪ್ರತಿಭಾವಂತ ನಟರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಕಣ್ಣಿಗೆ ಕಾಣುವ ಸೌಂದರ್ಯ ಮಾತ್ರ ನಿಜವಲ್ಲ, ಪ್ಲಸ್‌ ಸೈಜ್‌ನವರಿಗೂ ಎಲ್ಲಾ ರೀತಿಯ ಪ್ರಯೋಗಾತ್ಮಕ ಪಾತ್ರಗಳಲ್ಲಿ ನಟಿಸುವ ಚಾತುರ್ಯ ಇದೆ. ಹೀಗಾಗಿ ತಂಡ ಕಟ್ಟುವ ಸಾಹಸ ಮಾಡಿದೆ’ ಎಂದು ಕಂಪನಿ ಆರಂಭದ ಉದ್ದೇಶವನ್ನು ವಿವರಿಸುತ್ತಾರೆ ಅನುರಾಧಾ.

ಈ ತಂಡ 2017ರ ಜುಲೈ ತಿಂಗಳಲ್ಲಿ ಆರಂಭವಾಯಿತು. ಆರಂಭದಲ್ಲಿ ಅನುರಾಧಾ ಇಂತಹದ್ದೊಂದು ತಂಡ ಕಟ್ಟಬೇಕು ಎಂದು ನಿರ್ಧರಿಸಿ, ಅದನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸಿ, ಆಸಕ್ತಿ ಇರುವವರು ಸೇರಿಕೊಳ್ಳಬಹುದು ಎಂದು ಪ್ರಕಟಿಸಿದರು. ಆದರೆ ಇದಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಗಳು ಬರಲೇ ಇಲ್ಲ. ಅನುರಾಧಾ 20 ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದವರು. ತಮ್ಮಂತೆ ದಪ್ಪಗಿರುವ ಸ್ನೇಹಿತೆಯರಲ್ಲಿ ತಮ್ಮ ಉದ್ದೇಶದ ಬಗ್ಗೆ ತಿಳಿಸಿದಾಗ ಎಲ್ಲರೂ ತಂಡದ ಸದಸ್ಯರಾದರು. ಈಗ ತಂಡದಲ್ಲಿ 15 ಸದಸ್ಯರಿದ್ದಾರೆ. ಜುಲೈನಿಂದ ಡಿಸೆಂಬರ್‌ ತನಕ ತಂಡದ ಕಾರ್ಯಸ್ವರೂಪದ ಬಗ್ಗೆ ಕಾರ್ಯಾಗಾರ ನಡೆಸಲಾಯಿತು. ತಂಡದ ಮೊದಲ ನಾಟಕ ‘ಹೆಡ್‌ 2 ಹೆಡ್‌’. ಇದು ಮಾರ್ಚ್‌ ತಿಂಗಳಲ್ಲಿ ಕೆ.ಎಚ್‌. ಕಲಾಸೌಧದಲ್ಲಿ ಮೂರು ಬಾರಿ ಪ್ರದರ್ಶನಗೊಂಡಿದೆ. ಈ ನಾಟಕ ಏಪ್ರಿಲ್‌ 6, 7ರಂದು ರಂಗಶಂಕರದಲ್ಲಿ ಮತ್ತೆ ಪ್ರದರ್ಶನವಾಗಲಿದೆ.

ಬಿಗ್‌ ಫ್ಯಾಟ್‌ ಕಂಪನಿಯಲ್ಲಿ ಒಟ್ಟು 15 ಸದಸ್ಯರಿದ್ದಾರೆ. ಸುಷ್ಮಾ, ಸ್ನೇಹಾ ಕಪ್ಪಣ್ಣ, ಕೃತಿ, ಶರೂನ್‌ ರಾಬಿನ್‌, ಅನುರಾಧಾ, ಶೈಲಜಾ ಸಂಪತ್‌, ದೀಪ್ತಿ ಚಂದ್ರಕಾಂತ್‌, ಲಕ್ಷ್ಮೀ ಭಾಗವತ, ವಿದ್ಯಾ ಊಳಿತ್ತಾಯ, ಸಿಂಧು ಹೆಗ್ಡೆ, ಸುನೇತ್ರಾ ಪಂಡಿತ್‌, ಸತ್ಯಪ್ರಕಾಶ್‌ ಶರ್ಮ ಈ ತಂಡದಲ್ಲಿದ್ದಾರೆ. ಈ ತಂಡದ ಎಲ್ಲ ನಟ, ನಟಿಯರೂ ದಪ್ಪಗಿನವರೇ. ತಂಡದ ಮೂಲ ಉದ್ದೇಶವನ್ನೇ ತಮ್ಮ ಮೊದಲ ನಾಟಕದಲ್ಲೂ ರಂಗದಲ್ಲಿ ಪ‍್ರಸ್ತುತಪಡಿಸಿದೆ ಬಿಗ್‌ ಫ್ಯಾಟ್‌ ಕಂಪನಿ.

ಅಮೂರ್ತ ಕಲ್ಪನೆಗಳ ಮೂಲಕ ‘ಬಾಡಿ ಶೇಮಿಂಗ್‌’ ವಿರುದ್ಧ, ದೇಹಾಕಾರದ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವುದರ ವಿರುದ್ಧ ಧ್ವನಿ ಎತ್ತಿದ್ದಾರೆ ಈ ತಂಡದ ಕಲಾವಿದರು. ಈ ನಾಟಕವನ್ನು ಗಿರೀಶ್‌ ಕಾರ್ನಾಡ್‌ ಅವರ ‘ಹಯವದನ’ ನಾಟಕ ಆಧರಿಸಿ ರಚಿಸಲಾಗಿದೆ. ಈ ನಾಟಕದಲ್ಲಿ ಜಗತ್ತಿನಲ್ಲಿ ಸೌಂದರ್ಯದ ಕಲ್ಪನೆಗಳ ಬಗ್ಗೆ ಪ್ರಶ್ನಿಸಲಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ನಮ್ಮ ತಂಡದ ಕಲಾವಿದರು ಒಬ್ಬ ನಟಿಯಾಗಿ ‘ನಾನು ಯಾರು?’ ಎಂಬ ಅಸ್ಮಿತೆಯ ಹುಡುಕಾಟದಲ್ಲಿ ತೊಡಗುವುದು ಈ ನಾಟಕದ ಸಾರಾಂಶ ಎನ್ನುತ್ತಾರೆ ಅನುರಾಧಾ.

ಇಂತಹ ಪ್ರಯೋಗಗಳು ನಡೆದರೂ, ಜನರಿಗೆ ಪ್ಲಸ್‌ ಸೈಜ್‌ ಜನರ ಕುರಿತಾಗಿನ ತಪ್ಪು ತಿಳಿವಳಿಕೆಗಳು ಬದಲಾಗಿಲ್ಲ. ‘ಮೊನ್ನೆ ನಮ್ಮ ನಾಟಕ ಪ್ರದರ್ಶನವಾಗುತ್ತಿತ್ತು. ನಾಟಕದ ದೃಶ್ಯವೊಂದರಲ್ಲಿ ನಟಿಯೊಬ್ಬರು ಮನಸ್ಸಿನ ಭಾವನೆಯ ಜೊತೆಗೆ ‘ನಾನು ಯಾರು?’ ಎಂದು ತನ್ನನ್ನೇ ವೇದಿಕೆಯಲ್ಲಿ ಪ್ರಶ್ನಿಸಿಕೊಳ್ಳುವಂತಹ ದೃಶ್ಯವಿದೆ. ಆಗ ಸಭಿಕರಲ್ಲೊಬ್ಬರು ‘ತಿಂಡಿಪೋತಿ’ ಎಂದು ಜೋರಾಗಿ ಕೂಗಿ ಹೇಳಿದರು. ಇಂತಹ ಮನಸ್ಥಿತಿ ಬದಲಾಗಬೇಕು ಎಂದು ನೋವು ತೋಡಿಕೊಳ್ಳುತ್ತಾರೆ ಅನುರಾಧಾ.

'ದಪ್ಪ ಇದ್ದೇವೆ ಎಂದಾಕ್ಷಣ ಸೋಮಾರಿಗಳು, ಬರೀ ತಿನ್ನೋಕೆ ಲಾಯಕ್ಕಾದವರು ಎಂದು ಗುರುತಿಸುತ್ತಾರೆ. ನನಗೀಗ 40 ವರ್ಷ. ನಮ್ಮ ತಂಡದಲ್ಲಿದ್ದ ಎಲ್ಲರೂ ದಪ್ಪಗಿನವರೇ. ಆದರೆ ಯಾರಿಗೂ ರಕ್ತದೊತ್ತಡ, ಸಕ್ಕರೆ ಕಾಯಿಲೆ ಇಲ್ಲ. ಎಲ್ಲಾ ರೀತಿಯಿಂದಲೂ ಆರೋಗ್ಯವಾಗಿದ್ದೀವಿ. ಚುರುಕಾಗಿ ಕೆಲಸ ಮಾಡುತ್ತೇವೆ. ಉತ್ತಮ ಆರೋಗ್ಯಕ್ಕಾಗಿ ಸಣ್ಣಗಾಗುವುದು ಬೇರೆ. ಆದರೆ ಚೆನ್ನಾಗಿ ಕಾಣಬೇಕು ಎಂದು ಸಣ್ಣಗಾಗುವವರ ಬಗ್ಗೆ ನಮ್ಮ ಕೋಪ’ ಎಂದು ಹೇಳುತ್ತಾರೆ ಅವರು.

ಬಿಗ್‌ ಫ್ಯಾಟ್‌ ಕಂಪನಿ ಮೂಲಕ ಉತ್ತಮ ನಾಟಕಗಳನ್ನು ನಿರ್ದೇಶನ ಮಾಡಿ, ರಾಜ್ಯ ಹಾಗೂ ದೇಶದ ಬೇರೆ ಬೇರೆ ಭಾಗಗಳಲ್ಲಿ ಪ್ರದರ್ಶನ ಮಾಡುವ ಗುರಿಯನ್ನು ಈ ತಂಡ ಹೊಂದಿದೆ. ‘ಮೊದಲ ನಾಟಕದ ಮೂರೂ ಷೋಗಳಿಗೂ ಉತ್ತಮ ಪ್ರತಿಕ್ರಿಯೆ ಬಂದಿತು. ಇದು ರಂಗಭೂಮಿ ಅಭಿಮಾನಿಗಳು ನಮ್ಮನ್ನು ಸ್ವೀಕರಿಸಿದ್ದಕ್ಕೆ ಸಾಕ್ಷಿ’ ಎಂದು ಖುಷಿಪಡುತ್ತಾರೆ ಅನುರಾಧಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry