ರಾಜ್ಯ ಯಾವುದರಲ್ಲಿ ನಂ.1: ಗೋಪಾಲಗೌಡ ಪ್ರಶ್ನೆ

7

ರಾಜ್ಯ ಯಾವುದರಲ್ಲಿ ನಂ.1: ಗೋಪಾಲಗೌಡ ಪ್ರಶ್ನೆ

Published:
Updated:
ರಾಜ್ಯ ಯಾವುದರಲ್ಲಿ ನಂ.1: ಗೋಪಾಲಗೌಡ ಪ್ರಶ್ನೆ

ಬೆಂಗಳೂರು: ‘ಕರ್ನಾಟಕ ಯಾವುದರಲ್ಲಿ ನಂಬರ್–1’ ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ, ‘ಹೀಗೆ ಜಾಹೀರಾತು ಪ್ರಕಟಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು’ ಎಂದು ಏಕ ವಚನದಲ್ಲಿ ಅಬ್ಬರಿಸಿದರು.

‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಭಾನುವಾರ ಏರ್ಪಡಿಸಿದ್ದ ‘ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಸಮಾವೇಶ’ದಲ್ಲಿ ಅವರು ಮಾತನಾಡಿದರು.

‘ಹೆಗಲ ಮೇಲಿನ ಟವೆಲ್‌ ಹಿಡಿದುಕೊಂಡು ನಂಬರ್–1, ನಂಬರ್–1 ಎಂದು ಹೇಳಿ ಎಷ್ಟು ದಿನ ಜನರಿಗೆ ಮೋಸ ಮಾಡುತ್ತೀಯ ಮುಖ್ಯಮಂತ್ರಿ? ನಿನ್ನ ಬಳಿ ಹಣ ಇದೆ, ನಮ್ಮ ಬಳಿ ತೋಳ್ಬಲ ಇದೆ. ಈ ಬಲದಿಂದಲೇ ಈ ಬಾರಿ ನಿನಗೆ ಬುದ್ಧಿ ಕಲಿಸುತ್ತೇವೆ’ ಎಂದು ಗುಡುಗಿದರು.

‘ಡಬಲ್ ಡಿಗ್ರಿ ಪಡೆದವರು ತಿಂಗಳಿಗೆ ₹5,000 ಸಂಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ. ಗ್ರಾಮೀಣ ಜನರಿಗೆ ಕುಡಿಯಲು ನೀರಿಲ್ಲ, ಬೆಂಗಳೂರಿನಲ್ಲಿ ವಾಯು ಮಾಲಿನ್ಯ ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಗೆ ಜನ ತುತ್ತಾಗುತ್ತಿದ್ದಾರೆ. ಎರಡು ವಾರಗಳಿಂದ ನಾನೇ ಜ್ವರದಿಂದ ಬಳಲುತ್ತಿದ್ದೇನೆ. ಮೂಲಭೂತ ಸೌಕರ್ಯ ಒದಗಿಸದ ನಂಬರ್‌–1 ಸರ್ಕಾರವೇ ನಿಮ್ಮದು?’ ಎಂದು ಕಿಡಿ ಕಾರಿದರು.

‘ಕರ್ನಾಟಕ ನಂಬರ್‌–1 ಎಂಬ ಜಾಹೀರಾತುಗಳನ್ನು ಯಾವ ಆಧಾರದಲ್ಲಿ ಪ್ರಕಟಿಸುತ್ತಿದ್ದೀರಿ, ಸರ್ಕಾರಿ ಬಸ್‌ಗಳ ಮೇಲೆ ಈ ರೀತಿ ಬರೆಸಲು ಯಾರು ಹೇಳಿದರು ನಿಮಗೆ, 50 ಲಕ್ಷ ಉದ್ಯೋಗ ಸೃಷ್ಟಿಸುವ ನಿಮ್ಮ ಭರವಸೆ ಏನಾಯಿತು’ ಎಂದು ಕುಟುಕಿದರು.

‘ಸಾರ್ವಜನಿಕರ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ. ಮಾಹಿತಿ ಹಕ್ಕು ಕಾಯ್ದೆಯಡಿ ಎಲ್ಲ ವಿವರಗಳನ್ನು ಪಡೆದು ನಿಮ್ಮ ವಿರುದ್ಧ ಮೊಕದ್ದಮೆ ದಾಖಲಿಸಬೇಕು. ಮುಖ್ಯಮಂತ್ರಿ ಬರುವ ಕಡೆಗಳಲ್ಲೆಲ್ಲ ಯುವಕರು ಎದ್ದು ನಿಂತು ಪ್ರಶ್ನೆ ಕೇಳಬೇಕು’ ಎಂದರು.

‘ಜನರು ಕಪ್ಪು ಬಾವುಟ ಪ್ರದರ್ಶನ ಮಾಡಿದರೆ ಪೊಲೀಸ್ ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸುತ್ತೀರಿ. ಯುವಕರಿಗೆ ಉದ್ಯೋಗ ನೀಡುವ ನೀತಿಗಳನ್ನು ನೀವು ರೂಪಿಸಿದ್ದರೆ ಜನರೇಕೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಾರೆ’ ಎಂದು ಕೇಳಿದರು.

‘ಹಾಸನ ಜಿಲ್ಲೆಗೆ ಭೇಟಿ ನೀಡಿದ್ದ ನಿಮ್ಮನ್ನು  ಹೆಲಿಪ್ಯಾಡ್‌ಗೆ ಬಂದು ಸ್ವಾಗತಿಸಲಿಲ್ಲ ಎಂಬ ಕಾರಣಕ್ಕೆ ಅಲ್ಲಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ಮಾಡಿದ್ದೀರಿ. ನೀವು ಹೇಳಿದವರಿಗೆ ಕಾಮಗಾರಿಗಳ ಗುತ್ತಿಗೆ ನೀಡಬೇಕು, ಗಣಿಗಾರಿಕೆಗೆ ಅನುಮತಿ ನೀಡಬೇಕು. ಇಲ್ಲದಿದ್ದರೆ ವರ್ಗಾವಣೆ. ಇದು ರಾಜಕಾರಣವೇ, ರಾಜನೀತಿಯೇ’ ಎಂದು ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಹರಿಹಾಯ್ದ ಗೋಪಾಲಗೌಡ, ‘ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ ಮಾಡದೆ  ಸೂಟು–ಬೂಟು ಹಾಕಿಕೊಂಡು ವಿದೇಶ ಸುತ್ತಾಡುವ ನಿಮಗೆ ನಾಚಿಕೆಯಾಗಬೇಕು’ ಎಂದರು.

‘ಉದ್ಯೋಗ ಖಾತರಿ ಮಾಡದ ಪಕ್ಷಕ್ಕೆ ಯುವಜನರ ಮತ ಇಲ್ಲ’

‘ಉದ್ಯೋಗ ಸೃಷ್ಟಿಸದ, ಉದ್ಯೋಗ ಭದ್ರತೆ ಖಾತರಿ ಮಾಡದ ಪಕ್ಷಕ್ಕೆ ಯುವಜನರ ಮತ ಇಲ್ಲ’ ಎಂಬ ಎಚ್ಚರಿಕೆಯನ್ನು ‘ಉದ್ಯೋಗಕ್ಕಾಗಿ ಯುವಜನರು’ ಸಂಘಟನೆ ರಾಜಕೀಯ ಪಕ್ಷಗಳಿಗೆ ರಾವಾನಿಸಿತು.

ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರ ನಡುವೆ ‘ಉದ್ಯೋಗ, ಉದ್ಯೋಗ ಭದ್ರತೆಗೆ ಮತ’ ಎಂಬ ಫಲಕವನ್ನು ಬಿಡುಗಡೆ ಮಾಡಲಾಯಿತು.

‘ಉದ್ಯೋಗ ಸೃಷ್ಟಿ ಹೇಗೆ ಸಾಧ್ಯ ಎಂಬುದರ ಬಗ್ಗೆ ಈಗಾಗಲೇ ಪ್ರಣಾಳಿಕೆ ಬಿಡುಗಡೆ ಮಾಡಿ ಎಲ್ಲಾ ಪಕ್ಷಗಳಿಗೂ ತಲುಪಿಸಿದ್ದೇವೆ. ಇದನ್ನು ಒಪ್ಪಿಕೊಳ್ಳದ ಪಕ್ಷಗಳ ವಿರುದ್ಧ ನಾವೂ ಪ್ರಚಾರ ಮಾಡುತ್ತೇವೆ. ಈ ಆಂದೋಲನಕ್ಕೆ ಚಾಲನೆ ದೊರೆತಿದ್ದು, ರಾಜ್ಯದಾದ್ಯಂತ ಮನೆ–ಮನೆಗೆ ತಲುಪಲಿದೆ’ ಎಂದು ಸಂಘಟನೆ ಸಂಚಾಲಕ ಸರೋವರ್ ಬೆಂಕಿಕೆರೆ ತಿಳಿಸಿದರು.

*

ಡಾ. ಅಂಬೇಡ್ಕರ್ ಹೆಸರು ಹೇಳಿಕೊಂಡು ರಾಜಕಾರಣ ಮಾಡುವವರು ಸಂವಿಧಾನದ ಆಶಯಗಳಿಗೆ ಧಕ್ಕೆ ತರುತ್ತಿದ್ದಾರೆ.

-ನ್ಯಾಯಮೂರ್ತಿ ವಿ. ಗೋಪಾಲಗೌಡ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry