ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿಯಲ್ಲಿ ಸಿಬಿಐ ತಂಡ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಡಿಕೇರಿ: ಕರ್ನಾಟಕ ವೃಂದದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ನಿಗೂಢ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡವು ಕೊಡಗಿನಲ್ಲಿ ಬೀಡುಬಿಟ್ಟಿದ್ದು ತನಿಖೆ ಚುರುಕುಗೊಳಿಸಿದೆ.

2013ರ ಆಗಸ್ಟ್‌ನಿಂದ 2015ರ ಜೂನ್‌ವರೆಗೆ ಅನುರಾಗ್ ತಿವಾರಿ ಕೊಡಗು ಜಿಲ್ಲಾಧಿಕಾರಿಯಾಗಿ ಕರ್ತವ್ಯನಿರ್ವಹಿಸಿದ್ದರು. ಹೀಗಾಗಿ, ತನಿಖಾ ತಂಡವು ಮಡಿಕೇರಿಗೂ ಬಂದಿದೆ.

ಲೋಕೋಪಯೋಗಿ ಇಲಾಖೆಯ ಸುದರ್ಶನ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿರುವ 10ಕ್ಕೂ ಹೆಚ್ಚು ತನಿಖಾಧಿಕಾರಿಗಳು, ಜಿಲ್ಲೆಯ ವಿವಿಧ ಸ್ಥಳಗಳಿಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ತಿವಾರಿ ಜಿಲ್ಲಾಧಿಕಾರಿ ಆಗಿದ್ದಾಗ ಅವರ ನಿವಾಸದಲ್ಲಿದ್ದ ಅಡುಗೆ ಸಿಬ್ಬಂದಿ, ಅವರ ಗನ್‌ಮ್ಯಾನ್, ಆಪ್ತ ಸಹಾಯಕರು, ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯನ್ನು ಭಾನುವಾರ ಪ್ರತ್ಯೇಕವಾಗಿ ಅತಿಥಿಗೃಹಕ್ಕೆ ಕರೆಸಿ ವಿಚಾರಣೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.

2017, ಮೇ 17ರಂದು ಉತ್ತರ ಪ್ರದೇಶದ ಲಖನೌನ ಹಜ್ರತ್‌ಗಂಜ್‌ ಪ್ರದೇಶದ ಮೀರಾಬಾಯಿ ಮಾರ್ಗದಲ್ಲಿ ಅನುರಾಗ್‌ ತಿವಾರಿ ಅವರ ಶವ ಪತ್ತೆಯಾಗಿತ್ತು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಆಯುಕ್ತರಾಗಿದ್ದ ತಿವಾರಿ, ಉತ್ತರಾಖಂಡದ ಮಸ್ಸೂರಿಯಲ್ಲಿ ತರಬೇತಿ ಮುಗಿಸಿಕೊಂಡು ಲಖನೌಗೆ ತೆರಳಿ ನಿಗೂಢವಾಗಿ ಸಾವನ್ನಪ್ಪಿದ್ದರು.

ಅವರ ಸಾವು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ತಿವಾರಿ ಕುಟುಂಬಸ್ಥರ ಮನವಿ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಅದೇ ವರ್ಷದ ಜೂನ್‌ನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಅದಕ್ಕೂ ಮೊದಲು ವಿಶೇಷ ತನಿಖಾ ತಂಡವು (ಎಸ್‌ಐಟಿ) ತನಿಖೆ ನಡೆಸುತ್ತಿತ್ತು.

ತಿವಾರಿ ಅವರು ಕೊಡಗಿನಲ್ಲಿ ಕರ್ತವ್ಯ ನಿರ್ವಹಿಸುವಾಗ ಜಿಲ್ಲೆಯಲ್ಲಿ ನಡೆದಿದ್ದ ಬೆಳವಣಿಗೆಗಳು, ಯಾವುದಾದರೂ ಪ್ರಕರಣದಲ್ಲಿ ವಿರೋಧವಿತ್ತೆ ಎಂಬುದರ ಬಗ್ಗೆಯೂ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT