ಚುನಾವಣೆ ನೀತಿ ಸಂಹಿತೆ ಎಂಬ ಪ್ರಹಸನ

7

ಚುನಾವಣೆ ನೀತಿ ಸಂಹಿತೆ ಎಂಬ ಪ್ರಹಸನ

Published:
Updated:

ರಾಜ್ಯದಲ್ಲಿ ಯಾವುದೇ ಕ್ಷಣ ಚುನಾವಣೆಯ ದಿನಾಂಕ ಪ್ರಕಟವಾಗಿ ನೀತಿ ಸಂಹಿತೆ ಜಾರಿಗೊಳ್ಳಬಹುದು. ಮುಕ್ತವಾಗಿ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆಗಳು ನಡೆಯಬೇಕೆನ್ನುವುದೇ ಚುನಾವಣೆ ನೀತಿ ಸಂಹಿತೆಯ ಉದ್ದೇಶ. ಅದರ ಉಲ್ಲಂಘನೆಯು ಪ್ರಜಾಪ್ರತಿನಿಧಿ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆ ಅಡಿ ದಂಡನಾರ್ಹ ಅಪರಾಧ.

2013ರಲ್ಲಿ ರಾಜ್ಯದ ವಿಧಾನಸಭೆಗೆ ನಡೆದ ಚುನಾವಣೆಯ ಸಂದರ್ಭದಲ್ಲಿ ನೀತಿ ಸಂಹಿತೆ ಹಾಗೂ ನಿಯಮಗಳ ಉಲ್ಲಂಘನೆ ಪ್ರಕರಣಗಳು ಬಹಳಷ್ಟು ನಡೆದಿವೆ. ಈ ಕುರಿತ ಅನೇಕ ವರದಿಗಳನ್ನು ಓದಿದ್ದೇವೆ. ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣ ಮತ್ತು ಮದ್ಯವನ್ನು ಜಪ್ತಿ ಮಾಡಿದ್ದು, ಅನಧಿಕೃತ ವಾಹನ ಬಳಕೆ, ನಿಯಮ ಮೀರಿ ಭಾಷಣ ಮಾಡಿರುವುದು... ಹೀಗೆ ಚುನಾವಣಾ ಆಯೋಗ ಹಲವು ಪ್ರಕರಣಗಳನ್ನು ದಾಖಲಿಸಿತ್ತು. ಚುನಾವಣೆಗಳು ಮುಗಿದ ನಂತರ ನಮ್ಮ ಸ್ಮೃತಿಪಟಲದಿಂದ ಅವೆಲ್ಲವೂ ಮರೆಯಾಗಿವೆ. ಮತ್ತೊಂದು ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ನಾವು, ಹಿಂದಿನ ಚುನಾವಣೆಯ ಸಂದರ್ಭದಲ್ಲಿ ದಾಖಲಾಗಿದ್ದ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಗತಿ ಏನಾಯಿತು ಎಂದು ತಿಳಿಯುವುದು ಉಚಿತ.

ಚುನಾವಣಾ ಕಾಲಕ್ಕೆ ನೀತಿ– ನಿಯಮಗಳ ಉಲ್ಲಂಘನೆಯನ್ನು ಗಂಭೀರವಾಗಿ ಪರಿಗಣಿಸುವ ಆಯೋಗವು ಚುನಾವಣೆಯ ನಂತರ ಅವುಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನೂ ಆಯೋಗ ಹೊಂದಿದೆ. ಆದರೆ ಹಾಗಾಗುತ್ತಿಲ್ಲ.

2013ರ ಚುನಾವಣೆ ಸಂದರ್ಭದಲ್ಲಿ ದಾಖಲಾದ ಪ್ರಕರಣಗಳ ಸ್ಥಿತಿಗತಿ ತಿಳಿಯಲು ನಾನೊಂದು ಪ್ರಯತ್ನ ಮಾಡಿದೆ. ಮಾಹಿತಿ ಹಕ್ಕು ಕಾಯ್ದೆ ಅಡಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಗೆ ಪತ್ರ ಬರೆದು, ರಾಜ್ಯದಲ್ಲಿ ದಾಖಲಾದ ಪ್ರಕರಣಗಳ ವಿವರ, ವಶಪಡಿಸಿಕೊಳ್ಳಲಾದ ಹಣ ಅಥವಾ ವಸ್ತುಗಳ ಪ್ರಮಾಣ ಹಾಗೂ ಪ್ರಕರಣಗಳು ಈಗ ಯಾವ ಹಂತದಲ್ಲಿವೆ ಎಂಬ ವಿವರಗಳನ್ನು ಒದಗಿಸುವಂತೆ ಕೋರಿದೆ. ತಮ್ಮ ಕಾರ್ಯಾಲಯದಲ್ಲಿ ಆ ಮಾಹಿತಿ ಲಭ್ಯ ಇಲ್ಲದ ಕಾರಣಕ್ಕೆ ಅವರು ನನ್ನ ಅರ್ಜಿಯನ್ನು ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು ಮತ್ತು ಬಿಬಿಎಂಪಿ ಚುನಾವಣಾಧಿಕಾರಿಗಳಿಗೆ ಕಳಿಸಿದರು. ಅವರಲ್ಲೂ ಈ ಕುರಿತ ಮಾಹಿತಿ ಇಲ್ಲದೆ ಅರ್ಜಿಯನ್ನು ಕೆಲವರು ಜಿಲ್ಲಾ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಇನ್ನೂ ಕೆಲವರು ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರರಿಗೆ ಕಳುಹಿಸಿ, ಮಾಹಿತಿ ನೀಡುವಂತೆ ಸೂಚಿಸಿದರು.

ಎರಡು ಜಿಲ್ಲಾಧಿಕಾರಿ ಕಚೇರಿಗಳಿಂದ, ‘ನೀವು ಕೇಳಿರುವ ಮಾಹಿತಿ ಲಭ್ಯವಿಲ್ಲ, ಮಾಹಿತಿ ಸಂಗ್ರಹಿಸಿ ಕೊಡಲು ಮಾಹಿತಿ ಹಕ್ಕು ಕಾಯ್ದೆಯಡಿ ಅವಕಾಶ ಇಲ್ಲ. ಬೇಕಾದರೆ ಅಪೀಲು ಮಾಡಿಕೊಳ್ಳಬಹುದು’ ಎಂಬ ಉತ್ತರ ಬಂತು.

ಮೂರು ತಿಂಗಳ ಅವಧಿಯಲ್ಲಿ, ನಾಲ್ಕು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗಳು, ಒಂದು ಡಿವೈಎಸ್‌ಪಿ ಕಚೇರಿ ಮತ್ತು ಒಂದು ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯಿಂದ ಮಾತ್ರ ನಾನು ಕೇಳಿದ್ದ ಮಾಹಿತಿ ಲಭ್ಯವಾಯಿತು. ಬಹಳಷ್ಟು ಜಿಲ್ಲಾಧಿಕಾರಿಗಳು ಅಥವಾ ಜಿಲ್ಲಾ ಚುನಾವಣಾ ಅಧಿಕಾರಿಗಳ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಾಹಿತಿ ಹಕ್ಕು ಕಾಯ್ದೆಗೆ ದೊರೆಯುತ್ತಿರುವ ಸ್ಪಂದನದ ಸ್ಥಿತಿ ಇದು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಂದ ಬಂದ ಮಾಹಿತಿ ಪ್ರಕಾರ ಗದಗ, ಚಾಮರಾಜನಗರ, ಕೋಲಾರ (ಭಾಗಶಃ) ಮತ್ತು ಬೀದರ್‌ ಜಿಲ್ಲೆಗಳಲ್ಲಿ ನೀತಿ ಸಂಹಿತೆ ಉಲ್ಲಂಘನೆಗಾಗಿ 2013ರಲ್ಲಿ ದಾಖಲಾದ ಪ್ರಕರಣಗಳು ಕ್ರಮವಾಗಿ 22, 41, 21 ಹಾಗೂ 30. ಇವು ಹೆಚ್ಚಾಗಿ ವಾಹನಗಳ ಅನಧಿಕೃತ ಬಳಕೆ, ಮತದಾರರಿಗೆ ಹಣ, ವಸ್ತುಗಳನ್ನು ಹಂಚಿದ್ದು ಹಾಗೂ ಬಾಡೂಟ ವಿತರಿಸುವಾಗ ಸಿಕ್ಕಿಬಿದ್ದ ಪ್ರಕರಣಗಳು.

ಈ 114 ಪ್ರಕರಣಗಳನ್ನು ವಿಶ್ಲೇಷಣೆ ಮಾಡಿ ನೋಡಿದಾಗ, ಆರೋಪ ಸಾಬೀತಾಗದೆ 35 ಪ್ರಕರಣಗಳ ಆರೋಪಿಗಳು ಖುಲಾಸೆಗೊಂಡಿದ್ದಾರೆ. 20 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ‘ಬಿ–ವರದಿ’ ಸಲ್ಲಿಕೆಯಾಗಿದೆ. 38 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ. ಇವುಗಳಲ್ಲಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಂಡು ₹ 200 ರಿಂದ ₹600ರಷ್ಟು ದಂಡ ತೆತ್ತವರೇ ಹೆಚ್ಚು. ಉಳಿದ ಪ್ರಕರಣಗಳು ಇನ್ನೂ ವಿಚಾರಣೆ ಹಂತದಲ್ಲಿವೆ.

ಗದಗ ಜಿಲ್ಲೆಯ ನಾಲ್ಕು ಪ್ರಕರಣಗಳಲ್ಲಿ ₹ 1,200 ರಿಂದ ₹ 9,600ರವರೆಗೆ ದಂಡ ವಿಧಿಸಲಾಗಿದೆ. ಒಂದು ಪ್ರಕರಣದಲ್ಲಿ ಮತಕ್ಕಾಗಿ ಸೀರೆ ಪಡೆದ 32 ಮಹಿಳೆಯರಿಗೆ ದಂಡ ವಿಧಿಸಲಾಗಿದೆ. ದಂಡದ ಪ್ರಮಾಣದ ವಿವರವನ್ನು ಒದಗಿಸಿಲ್ಲ. ಚಾಮರಾಜನಗರದ ಹತ್ತು ಪ್ರಕರಣಗಳಲ್ಲಿ ₹ 400 ರಿಂದ ₹ 700ರವರೆಗೆ ದಂಡ, ಮೂರರಲ್ಲಿ ₹ 800, ₹900 ಹಾಗೂ ₹ 2000 ದಂಡ ಮತ್ತು ಒಂದು ದಿನದ ಜೈಲು ಶಿಕ್ಷೆ ವಿಧಿಸಲಾಗಿದೆ. ಬೀದರ್‌ ಜಿಲ್ಲೆಯ 11 ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದರೂ ಅದರ ವಿವರ ಕೊಟ್ಟಿಲ್ಲ. ವಿಚಾರಿಸಿದಾಗ, ಸಣ್ಣ ಪ್ರಮಾಣದ ದಂಡ ವಿಧಿಸಿರುವ ಬಗ್ಗೆ ತಿಳಿದುಬಂತು.

ವಿರಾಜಪೇಟೆಯ ಡಿವೈಎಸ್‌ಪಿ ಒದಗಿಸಿದ ಮಾಹಿತಿಯಂತೆ, ಅವರ ಉಪವಿಭಾಗದಲ್ಲಿ ದಾಖಲಾದ ಆರು ಪ್ರಕರಣಗಳಲ್ಲಿ ಎರಡರಲ್ಲಿ ‘ಬಿ–ವರದಿ’ ಸಲ್ಲಿಸಲಾಗಿದೆ. ಒಂದು ಪ್ರಕರಣದಲ್ಲಿ ಆರೋಪಿ ಖುಲಾಸೆಯಾಗಿದ್ದಾರೆ. ಮೂರು ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಗೌರಿಬಿದನೂರು ಸರ್ಕಲ್‌ ಇನ್‌ಸ್ಪೆಕ್ಟರ್‌ ನೀಡಿರುವ ಮಾಹಿತಿಯಂತೆ ಅವರ ವೃತ್ತದಲ್ಲಿ ದಾಖಲಾದ 9 ಪ್ರಕರಣಗಳಲ್ಲಿ 8ರಲ್ಲಿ ಆರೋಪಿಗಳು ಖುಲಾಸೆಯಾಗಿದ್ದು, ಒಂದು ವಿಚಾರಣೆಗೆ ಬಾಕಿ ಇದೆ.

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಚುನಾವಣೆ ಮುಗಿದ ಮೇಲೆ ಅಧಿಕಾರ ರಾಜಕಾರಣದ ಪ್ರಭಾವಕ್ಕೊಳಗಾಗಿ ತೀವ್ರತೆ ಕಳೆದುಕೊಳ್ಳುತ್ತವೆ. ಜನರ ನೆನಪಿನಿಂದಲೂ ಅವು ಮಾಸಿ ಹೋಗಬಹುದು. ಆದರೆ ಆಯೋಗದ ನೆನಪಿನಿಂದಲೂ ಅಳಿಸಿಹೋಗುವುದು ಉಚಿತವಲ್ಲ.

ಅರ್ಧದಷ್ಟು ಪ್ರಕರಣಗಳು ಸಾಕ್ಷ್ಯಾಧಾರಗಳಿಲ್ಲದೆ ಬಿದ್ದುಹೋಗುತ್ತವೆ. ಮತ್ತೊಂದು ಚುನಾವಣೆ ಬಂದರೂ ನ್ಯಾಯಾಲಯದಲ್ಲಿ ಇತ್ಯರ್ಥಗೊಳ್ಳದ ಪ್ರಕರಣಗಳಿಗೂ ಕೊರತೆಯಿಲ್ಲ. ಹೀಗಾಗಿ ರಾಜಕೀಯ ಪಕ್ಷಗಳು ನೀತಿ ಸಂಹಿತೆಯ ಬಗ್ಗೆ ತಲೆ ಕೆಡಿಸಿಕೊಳ್ಳವುದು ಕಡಿಮೆ.

ಈ ಬಾರಿಯಂತೂ ಬಹಳ ಮುಂಚಿತವಾಗಿಯೇ ರಾಜಕೀಯ ಪಕ್ಷಗಳು, ಮುಖಂಡರು ಮತದಾರರಿಗೆ ಅಮಿಷ ಒಡ್ಡುವುದರಲ್ಲಿ ಮುಳುಗಿದ್ದಾರೆ. ಪರಸ್ಪರರ ದೂಷಣೆ, ನಿಂದನೆ, ಅವಾಚ್ಯ ಪದಗಳ ಬಳಕೆಯು ನಾಗರಿಕ ಸಮಾಜವನ್ನು ನಾಚುವಂತೆ ಮಾಡಿದೆ. ಭಾರತದ ಪ್ರಜಾಸತ್ತೆ ಚುನಾವಣೆಯಿಂದ ಚುನಾವಣೆಗೆ ನೈತಿಕ ಅಧಃಪತನದತ್ತ ಸಾಗುತ್ತಿದೆ. ಹೀಗಾಗಿ ಚುನಾವಣೆಪೂರ್ವದಲ್ಲಿ ಜಾರಿಯಾಗುವ ಒಂದಿಷ್ಟು ದಿನಗಳ ನೀತಿ ಸಂಹಿತೆ ಒಂದು ಪ್ರಹಸನದಂತೆ ಕಂಡುಬರುತ್ತದೆ ಅಲ್ಲವೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry