ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲು ಸೂಚನೆ

ರಂಭಾಪುರಿ, ಶ್ರೀಶೈಲ, ಕಾಶಿ ಶಿವಾಚಾರ್ಯರ ಕರೆ
Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಿಜಯಪುರ: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ರಣ ಕಹಳೆ ಮೊಳಗಿಸಿದ ಪಂಚಪೀಠಾಧೀಶ್ವರರು ಹಾಗೂ ವಿವಿಧ ಮಠಗಳ ಶಿವಾಚಾರ್ಯರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು ಎಂದು ತಮ್ಮ ಭಕ್ತ ಸಮೂಹಕ್ಕೆ ಖಡಕ್‌ ಸೂಚನೆ ರವಾನಿಸಿದರು.

ಬಾಳೆಹೊನ್ನೂರು, ಕಾಶಿ ಹಾಗೂ ಶ್ರೀಶೈಲ ಪೀಠದ ಸ್ವಾಮೀಜಿಗಳ ನೇತೃತ್ವದಲ್ಲಿ ನಗರದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತರ ಸಮಾವೇಶದಲ್ಲಿ ಮಾತನಾಡಿದ ಮಠಾಧೀಶರು, ವೀರಶೈವ ಲಿಂಗಾಯತರ ವಿಭಜನೆಗೆ ಮುಂದಡಿಯಿಟ್ಟಿರುವ ಕಾಂಗ್ರೆಸ್‌ಗೆ ಬುದ್ಧಿ ಕಲಿಸಲೇಬೇಕು ಎಂದು ಗುಡುಗಿದರು.

‘ಇದುವರೆಗೆ ಎಲ್ಲವನ್ನೂ ಸಹಿಸಿದ್ದೆವು. ನಮ್ಮ ಪ್ರಾಣವಾದ ಧರ್ಮಕ್ಕೆ ನೀವು ಕೈ ಹಾಕಿದ್ದೀರಿ. ವೀರಶೈವ ಪರಂಪರೆಯ ‘ಗಣಾಚಾರ’ ಬಳಸಿಕೊಂಡು, ನಿಮ್ಮ ಪ್ರಾಣವಾಗಿರುವ ‘ಕುರ್ಚಿ’ಯನ್ನು ಇನ್ನಿಲ್ಲದಂತೆ ಮಾಡುತ್ತೇವೆ’ ಎಂದು ಶ್ರೀಶೈಲದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಕಿಡಿಕಾರಿದರು.

‘ನಮ್ಮ ಧಾರ್ಮಿಕ ಎಲ್ಲೆಯನ್ನೂ ಮೀರಿದ್ದೇವೆ. ನಿಮ್ಮ ಪ್ರಾಣವಾಗಿರುವ ಕುರ್ಚಿ ತಪ್ಪಿಸಲು ಭಕ್ತ ಸಮೂಹದ ಜತೆ ಕೈ ಜೋಡಿಸಿ, ಕ್ರಿಯಾ ಯೋಜನೆ ರೂಪಿಸಿಕೊಂಡು ಕಾರ್ಯಗತಗೊಳಿಸುತ್ತೇವೆ. ಲಂಕೆ ಪ್ರವೇಶಿಸಿದ್ದ ಹನುಮಂತನನ್ನು ಸುಟ್ಟು ಹಾಕಲು, ಆತನ ಬಾಲಕ್ಕೆ ರಾವಣ ಬೆಂಕಿ ಹಚ್ಚಿದ್ದ. ಅದೇ ರೀತಿ ನೀವೂ ನಿಮ್ಮ ರಾಜಕೀಯ ಲಾಭಕ್ಕಾಗಿ ವೀರಶೈವ ಲಿಂಗಾಯತ ಒಡೆಯಲು ಮುಂದಾಗಿದ್ದೀರಿ. ಹನುಮನು ಲಂಕೆ ಸುಟ್ಟಂತೆ, ನಿಮ್ಮ ಸರ್ವನಾಶಕ್ಕೆ ನಾವು ಮುಂದಾಗುತ್ತೇವೆ’ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಚುನಾವಣಾ ಅಖಾಡಕ್ಕೆ: ‘ಬಸವೇಶ್ವರರ ಹೆಸರಿನಲ್ಲಿ ತಮ್ಮ ಮಾತಿನ ವೈಖರಿ ಬದಲಿಸಿಕೊಂಡಿರುವ ಎಲ್ಲರಿಗೂ ಪ್ರಾಯಶ್ಚಿತ್ತದ ಕಾಲ ಸನ್ನಿಹಿತವಾಗಿದೆ. ಬಲಿಷ್ಠ ಸಮಾಜವನ್ನು ಒಡೆದಾಳುವ ನೀತಿಗೆ ಬಳಸಿಕೊಂಡ ಮುಖ್ಯಮಂತ್ರಿ, ಐವರು ಸಚಿವರಿಗೆ ತಕ್ಕಪಾಠ ಕಲಿಸುತ್ತೇವೆ. ದುಷ್ಟರ ದಮನಕ್ಕಾಗಿ ಭಕ್ತರಿಗೆ ರಾಜಕೀಯ ಮಾರ್ಗದರ್ಶನ ನೀಡಲು ನಾವೂ ಚುನಾವಣಾ ಅಖಾಡಕ್ಕೆ ಧುಮುಕುವ ಮೂಲಕ ತಿರುಗಿ ಬೀಳುತ್ತೇವೆ. ಸಹನೆ, ತಾಳ್ಮೆ ನಮ್ಮ ದೌರ್ಬಲ್ಯವಲ್ಲ. ಧರ್ಮ ದಂಡದ ಪ್ರಯೋಗಕ್ಕೆ ಸಿದ್ಧರಾಗಿದ್ದೇವೆ’ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರು ಗುಡುಗಿದರು.

‘ಬಿಎಲ್‌ಡಿಇ ಸಂಸ್ಥೆಯ ಉಪ್ಪಿನ ಋಣ ಮರೆತು, ನಿಮ್ಮ ಅವನತಿಗೆ ನೀವೇ ಕಾರಣರಾಗಿದ್ದೀರಿ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲರಿಗೆ ಪರೋಕ್ಷ ಎಚ್ಚರಿಕೆ ನೀಡಿದ ರಂಭಾಪುರಿ ಸ್ವಾಮೀಜಿ, ‘ಬಂಥನಾಳದ ವೃಷಭಲಿಂಗೇಶ್ವರರು, ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯರ ಮೇಲೆ ಇದೀಗ ದೊಡ್ಡ ಜವಾಬ್ದಾರಿಯಿದೆ. ನೀವಿಬ್ಬರೂ ಭಕ್ತರ ಮನೆ–ಮನ ತಲುಪಿ. ಧರ್ಮ ಸ್ಥಾಪನೆಗೆ ನಮ್ಮ ಹಿರಿಯರ ಪರಿಶ್ರಮ ತಿಳಿಸಿ. ಇದೀಗ ಧರ್ಮ ಒಡೆದವರ ಬಗ್ಗೆಯೂ ಹೇಳಿ’ ಎಂದು ಸೂಚಿಸಿದರು.

‘ಬಿಜೆಪಿಯತ್ತ ಒಲವು ಹೆಚ್ಚುವಂತೆ ನೋಡಿಕೊಳ್ಳಿ’
‘ಈ ಸಮಾವೇಶದಲ್ಲಿ ನೆರೆದಿರುವವರ ಸಂಖ್ಯೆ ಕಡಿಮೆ ಇರಬಹುದು. ಇಲ್ಲಿರುವವರು ಬಾಡಿಗೆ ಭಕ್ತರಲ್ಲ. ವಿಧಾನಸಭಾ ಚುನಾವಣೆ ಸನಿಹದಲ್ಲಿದೆ. ಹೆಪ್ಪಿಗೆ ಮಜ್ಜಿಗೆ ಎಷ್ಟು ಬೇಕು ಎಂಬುದನ್ನು ನೆನಪಿಡಿ. ಅದೇ ರೀತಿ ನಿಮ್ಮೂರುಗಳಲ್ಲಿ ಕಾಂಗ್ರೆಸ್‌ ವಿರುದ್ಧ ಭಕ್ತರ ಮನೆ ಮನೆಗೂ ಹೋಗಿ ಸಂದೇಶ ನೀಡಿ. ಬಿಜೆಪಿಯತ್ತ ವೀರಶೈವ ಲಿಂಗಾಯತರ ಒಲವು ಹೆಚ್ಚುವಂತೆ ನೋಡಿಕೊಳ್ಳಿ’ ಎಂದು ಬಳ್ಳಾರಿ ಜಿಲ್ಲೆಯ ಎಮ್ಮಿಗನೂರಿನ ವಾಮದೇವ ಶಿವಾಚಾರ್ಯರು ಸಮಾವೇಶದಲ್ಲಿ ಭಾಗವಹಿಸಿದ್ದ ಜಂಗಮ ಸಮೂಹಕ್ಕೆ ಕರೆ ನೀಡಿದರು.

‘ಕಾಂಗ್ರೆಸ್‌ ಮುಕ್ತ ಕರ್ನಾಟಕ ಆಗುವುದನ್ನು ತಪ್ಪಿಸಲು, ರಾಜ್ಯ ಸರ್ಕಾರ ಒಡೆದಾಳುವ ನೀತಿ ಅನುಸರಿಸುತ್ತಿದೆ. ದನಕಾಯುವ ವೀರಶೈವ ಲಿಂಗಾಯತನಿಗೂ ಇದರ ಗುಟ್ಟು ಗೊತ್ತಿದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯರು ಹೇಳಿದರು.

ಜಾಗತಿಕ ಲಿಂಗಾಯತ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿ ಎಸ್‌.ಎಂ. ಜಾಮದಾರ ಅವರು ಬೆಂಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಬಗ್ಗೆ ಚಿಂತಿಸಲಾಗುವುದು ಎಂದು ರಂಭಾಪುರಿ ಪೀಠದ ಸ್ವಾಮೀಜಿ  ಸಮಾವೇಶದಲ್ಲಿಯೇ ಪ್ರಕಟಿಸಿದರು.

‘ಪಾಕಿಸ್ತಾನದ ಏಜೆಂಟರು’
‘ವೀರಶೈವ ಲಿಂಗಾಯತ ಧರ್ಮ ಒಡೆಯಲು ಮುಂದಾಗಿರುವವರು ಪಾಕಿಸ್ತಾನದ ಏಜೆಂಟರು’ ಎಂದು ಶ್ರೀಶೈಲದ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಗಂಭೀರ ಆರೋಪ ಮಾಡಿದರು.

‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿಯಾದರೆ, ಪಾಕಿಸ್ತಾನವು ವಿಶ್ವದ ಭೂಪಟದಲ್ಲಿರುವುದಿಲ್ಲ ಎಂಬ ಕಾರಣಕ್ಕೆ ಧರ್ಮ ಒಡೆಯುವ ಕಾರ್ಯ ಬಿರುಸಿನಿಂದ ನಡೆದಿದೆ’ ಎಂದು ಕಿಡಿಕಾರಿದರು.

‘ಮೋದಿಗೆ ಹಿಂದೂ ಧರ್ಮದ ಬಲವಿದೆ. ಇದನ್ನು ತಪ್ಪಿಸಲಿಕ್ಕಾಗಿಯೇ ರಾಜಸ್ತಾನದಲ್ಲಿ ಜಾಟರು, ಗುಜರಾತಿನಲ್ಲಿ ಪಟೇಲರು, ಮಹಾರಾಷ್ಟ್ರದಲ್ಲಿ ಮರಾಠಿಗರನ್ನು ಎತ್ತಿ ಕಟ್ಟಿದ ಕಾಂಗ್ರೆಸ್‌, ಇದೀಗ ಕರ್ನಾಟಕದಲ್ಲಿ ವೀರಶೈವ ಲಿಂಗಾಯತರನ್ನು ವಿಭಜಿಸಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

*
ಧರ್ಮದ ವಿಷಯಕ್ಕೆ ಕೈ ಹಾಕಿದರೆ ಎಂತಹ ಅನಾಹುತ ಆಗುತ್ತದೆ ಎಂಬುದನ್ನು ಮುಂದಿನ ಪೀಳಿಗೆಯವರು ನೆನಪಿನಲ್ಲಿಡುವಂತಹ ಪಾಠ ಕಲಿಸುತ್ತೇವೆ.
-ಡಾ.ಚಂದ್ರಶೇಖರ ಶಿವಾಚಾರ್ಯರು, ಕಾಶಿ ಪೀಠ

*
ಬಬಲೇಶ್ವರ ಬೃಹನ್ಮಠದ ಭಕ್ತರಿಗೆ ಎಲ್ಲವೂ ಗೊತ್ತಿದೆ. ಸೇಡು ತೀರಿಸಿಕೊಳ್ಳಲು ಕಾದು ಕೂತಿದ್ದಾರೆ. ಶಿವಾಚಾರ್ಯರ ಶಾಪಕ್ಕೆ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ.
-ಡಾ.ಮಹಾದೇವ ಶಿವಾಚಾರ್ಯ, ಬಬಲೇಶ್ವರ ಬೃಹನ್ಮಠ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT