ಇದು ಅಂಬೇಡ್ಕರ್‌ ಭಾರತ: ನರೇಂದ್ರ ಮೋದಿ

7

ಇದು ಅಂಬೇಡ್ಕರ್‌ ಭಾರತ: ನರೇಂದ್ರ ಮೋದಿ

Published:
Updated:
ಇದು ಅಂಬೇಡ್ಕರ್‌ ಭಾರತ: ನರೇಂದ್ರ ಮೋದಿ

ನವದೆಹಲಿ: ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿರುವ ನವ ಭಾರತದ ಇಂದಿನ ದಿನಗಳು ದೇಶದ ಬಡವರು ಮತ್ತು ಹಿಂದುಳಿದವರಿಗೆ ಸೇರಿವೆ. ಈ ಸಮುದಾಯಗಳ ಬೆಳವಣಿಗೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಭವಿಷ್ಯ ನುಡಿದಿದ್ದಾರೆ.

ಬಡ ಕುಟುಂಬದಿಂದ ಬಂದ ಬಿ.ಅರ್‌. ಅಂಬೇಡ್ಕರ್‌ ಅವರನ್ನು ಅನೇಕರು ಅಪಹಾಸ್ಯ ಮಾಡಿದ್ದರು. ಕಾಲೆಳೆಯಲು ಪ್ರಯತ್ನಿಸಿ ಕೊನೆಗೆ ವಿಫಲರಾದರು. ಬಡವರ ಏಳಿಗೆ ತಡೆಯಲು ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದರು.

ಭಾನುವಾರ ಪ್ರಸಾರವಾದ 42ನೇ ‘ಮನದ ಮಾತು’ ತಿಂಗಳ ರೇಡಿಯೊ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾರತದ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ. ಇದು ಡಾ. ಅಂಬೇಡ್ಕರ್‌ ಭಾರತ. ಅಂದರೆ, ಬಡವರು ಮತ್ತು ಹಿಂದುಳಿದವರಿಗೆ ಸೇರಿದ ಭಾರತ ಎಂದು ಬಣ್ಣಿಸಿದರು.

ಶ್ರೀಮಂತ ಕುಟುಂಬದ ಹಿನ್ನೆಲೆ ಹೊಂದಿದವರು ಮಾತ್ರ ಯಶಸ್ಸು ಕಾಣುತ್ತಾರೆ ಎಂದು ಭಾವಿಸಬೇಕಾಗಿಲ್ಲ. ಬಡತನವನ್ನು ಮೀರಿ ನಿಂತ ಡಾ.ಅಂಬೇಡ್ಕರ್‌ ಸಾಧನೆ ಎಲ್ಲರಿಗೂ ಮಾದರಿ ಎಂದು ಪ್ರಧಾನಿ ಹೇಳಿದರು. ತಾವೂ ಇದೇ ರೀತಿ ಮೇಲಕ್ಕೆ ಬಂದವರು ಎಂಬುದನ್ನು ಅವರು ನೆನಪಿಸಿಕೊಂಡರು.

‘ಕೈಗಾರಿಕೀಕರಣ ಹೊಸ ಉದ್ಯೋಗಗಳ ಸೃಷ್ಟಿಯ ಮಾರ್ಗ ಎಂದು ಅಂಬೇಡ್ಕರ್‌ ಹಲವು ವರ್ಷಗಳ ಹಿಂದೆಯೇ  ಭವಿಷ್ಯ ನುಡಿದಿದ್ದರು. ಭಾರತ ಔದ್ಯೋಗಿಕ ಶಕ್ತಿಯಾಗಿ ಬೆಳೆಯಬೇಕು ಎಂದು ಅವರು ಕಂಡಿದ್ದ ಕನಸನ್ನು ಇಂದು ನಾವು ಸಾಕಾರಗೊಳಿಸುತ್ತಿದ್ದೇವೆ. ಅವರ ದೂರದೃಷ್ಟಿ ನಮಗೆ ಪ್ರೇರಣೆ’ ಎಂದರು.

ಡಾ. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಏಪ್ರಿಲ್‌ 14ರಿಂದ ಮೇ 5ರವರೆಗೆ ದೇಶದಾದ್ಯಂತ ‘ಗ್ರಾಮ ಸ್ವರಾಜ್ಯ ಅಭಿಯಾನ’ ಹಮ್ಮಿಕೊಳ್ಳಲಾಗುವುದು. ಗ್ರಾಮಗಳ ಅಭಿವೃದ್ಧಿ, ಬಡತನ ನಿರ್ಮೂಲನೆ, ಸಾಮಾಜಿಕ ನ್ಯಾಯ ಕುರಿತಾಗಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮಹಾತ್ಮ ಗಾಂಧಿ, ರಾಮ್‌ ಮನೋಹರ ಲೋಹಿಯಾ, ಚೌಧರಿ ಚರಣ್ ಸಿಂಗ್‌, ದೇವಿಲಾಲ್‌ ಅವರಂತಹ ನಾಯಕರು ರೈತರು ಮತ್ತು ಕೃಷಿ ಈ ದೇಶದ ಆರ್ಥಿಕ ಬೆನ್ನೆಲುಬು ಎಂದು ಭಾವಿಸಿದ್ದರು ಎಂದು ಮೋದಿ ಸ್ಮರಿಸಿದರು. ಸಧೃಡ ಭಾರತ ಕಟ್ಟಲು ಯುವ ಜನಾಂಗ ಸಧೃಡ ಮನಸ್ಸು ಮತ್ತು ಆರೋಗ್ಯ ಹೊಂದಬೇಕು ಎಂದರು.

*

ಜಾಗತಿಕಮಟ್ಟದಲ್ಲಿ ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ. ಭಾರತ ಹೊಸತನ ಮತ್ತು ಹೂಡಿಕೆಗೆ ಆಕರ್ಷಕ ತಾಣವಾಗಿ ಹೊರಹೊಮ್ಮಿದೆ. ಭಾರತದಲ್ಲಿ ಬಂಡವಾಳ ಹೂಡಲು ಎಲ್ಲ ರಾಷ್ಟ್ರಗಳು ತುದಿಗಾಲ ಮೇಲೆ ನಿಂತಿವೆ.

-ನರೇಂದ್ರ ಮೋದಿ, ಪ್ರಧಾನಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry