2019ರಲ್ಲಿ ಕೊಳವೆ ಮೂಲಕ ಎಲ್‌ಪಿಜಿ: ಪ್ರಧಾನ್

7
ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌

2019ರಲ್ಲಿ ಕೊಳವೆ ಮೂಲಕ ಎಲ್‌ಪಿಜಿ: ಪ್ರಧಾನ್

Published:
Updated:

ಮಂಗಳೂರು: ಕೊಚ್ಚಿ –ಮಂಗಳೂರು ಅನಿಲ ಸರಬರಾಜು ಕೊಳವೆ ಮಾರ್ಗದ ಕಾಮಗಾರಿ ವರ್ಷಾಂತ್ಯಕ್ಕೆ ಪೂರ್ಣಗೊಳ್ಳಲಿದ್ದು, 2019ರ ಆರಂಭದಲ್ಲಿ ಮಂಗಳೂರು ಮತ್ತು ಸುತ್ತಲಿನ ನಗರಗಳಲ್ಲಿ ಮನೆಗಳಿಗೆ ಕೊಳವೆ ಮೂಲಕ ಎಲ್‌ಪಿಜಿ ಪೂರೈಕೆ ಮಾಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೊಚ್ಚಿಯಲ್ಲಿ ಅನಿಲ ಸಂಗ್ರಹ ಟರ್ಮಿನಲ್ ನಿರ್ಮಾಣವಾಗಿ ಆರು ವರ್ಷ ಕಳೆದಿತ್ತು. ಆದರೆ, ಕೊಳವೆ ಮಾರ್ಗದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಕೇರಳ ಮತ್ತು ಕರ್ನಾಟಕ ರಾಜ್ಯ ಸರ್ಕಾರಗಳು ಸಂಪೂರ್ಣ ಸಹಕಾರ ನೀಡಿರುವುದರಿಂದ ಕೊಳವೆ ಮಾರ್ಗದ ಕಾಮಗಾರಿ ಪೂರ್ಣಗೊಳ್ಳುವ ಹಾದಿಯಲ್ಲಿದೆ’ ಎಂದರು.

ಬಿಎಸ್‌–6 ಇಂಧನ ಉತ್ಪಾದನೆ: ‘ಮಂಗಳೂರು ರಿಫೈನರಿ ಅಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಕಂಪನಿಯಿಂದ ನಗರದ ಗೌರವ ಹೆಚ್ಚುತ್ತಿದೆ. 2020ರ ವೇಳೆಗೆ ದೇಶದಲ್ಲಿ ಬಿಎಸ್‌–6 ಗುಣಮಟ್ಟದ ಇಂಧನ ಉತ್ಪಾದನೆಯ ಗುರಿ ಹೊಂದಲಾಗಿತ್ತು.

ಆದರೆ, ಎಂಆರ್‌ಪಿಎಲ್‌ 2019ರಲ್ಲೇ ಬಿಎಸ್‌–6 ಡೀಸೆಲ್‌ ಉತ್ಪಾದಿಸಲಿದೆ. ನಂತರದ ಕೆಲವೇ ತಿಂಗಳಲ್ಲಿ ಬಿಎಸ್‌–6 ಪೆಟ್ರೋಲ್‌ ಉತ್ಪಾದನೆ ಆರಂಭಿಸಲಿದೆ.

‘5 ವರ್ಷಗಳಲ್ಲಿ ಎಂಆರ್‌ಪಿಎಲ್‌ಗೆ ₹ 70 ಸಾವಿರ ಕೋಟಿ ಹೂಡಿಕೆ ಬರಲಿದೆ. ತೈಲ ಸಂಸ್ಕರಣಾ ಸಾಮರ್ಥ್ಯವನ್ನು 1.5 ಕೋಟಿ ಟನ್‌ನಿಂದ 2.5 ಕೋಟಿ ಟನ್‌ಗಳಿಗೆ ಹಚ್ಚಿಸಲಾಗುತ್ತಿದೆ. ಎಂಆರ್‌‍ಪಿಎಲ್‌ ಮತ್ತು ಒಎಂಪಿಎಲ್‌ ವಿಲೀನ ಪ್ರಕ್ರಿಯೆ ಅಂತಿಮ ಹಂತ ತಲುಪಿದೆ’ ಎಂದು ಪ್ರಧಾನ್ ತಿಳಿಸಿದ್ದಾರೆ.

‘ವಿಲೀನದ ಬಳಿಕ ಕಂಪನಿಯ ಚಟುವಟಿಕೆಗಳ ವಿಸ್ತರಣೆ, ಭೂಸ್ವಾಧೀನ ಮತ್ತು ತಂತ್ರಜ್ಞಾನದ ಬಳಕೆಗೆ ಮತ್ತಷ್ಟು ವೇಗ ದೊರೆಯಲಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಮೊದಲ ಹೊಗೆ ರಹಿತ ರಾಜ್ಯ

ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಕರ್ನಾಟಕದಲ್ಲಿ ಎಲ್‌ಪಿಜಿ ಬಳಸುವ ಕುಟುಂಬಗಳ ಸಂಖ್ಯೆ 85 ಲಕ್ಷ ಇತ್ತು. ಈಗ ಅದು 1.35 ಕೋಟಿಗೆ ಏರಿಕೆಯಾಗಿದೆ. ಕೆಲವು ತಿಂಗಳಲ್ಲಿ ಕರ್ನಾಟಕದ ಎಲ್ಲ ಕುಟುಂಬಗಳಿಗೂ ಎಲ್‌ಪಿಜಿ ಸಂಪರ್ಕ ಲಭ್ಯವಾಗಲಿದೆ. ಇದು ದೇಶದ ಮೊದಲ ಹೊಗೆರಹಿತ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಲಿದೆ ಎಂದು ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದರು.

**

2018ರ ನವೆಂಬರ್‌ ವೇಳೆಗೆ ಕೊಳವೆ ಮಾರ್ಗ ಸಿದ್ಧ

2019ರ ಮಾರ್ಚ್‌ ವೇಳೆಗೆ ಮನೆಗಳಿಗೆ ಕೊಳವೆಯಲ್ಲಿ ಅನಿಲ

2019ರ ಅಂತ್ಯಕ್ಕೆ ಎಂಆರ್‌ ಪಿಎಲ್‌ನಲ್ಲಿ ಬಿಎಸ್‌–6 ಇಂಧನ ಉತ್ಪಾದನೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry