ಪರೀಕ್ಷಾ ಅಕ್ರಮಕ್ಕೆ ಕಡಿವಾಣ: ಎಸ್‌ಎಸ್‌ಸಿಗೆ ಸೂಚನೆ

7

ಪರೀಕ್ಷಾ ಅಕ್ರಮಕ್ಕೆ ಕಡಿವಾಣ: ಎಸ್‌ಎಸ್‌ಸಿಗೆ ಸೂಚನೆ

Published:
Updated:

ನವದೆಹಲಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕಲ್ಪಿಸುವ ಸಂಬಂಧ ನಡೆಯುವ ಪರೀಕ್ಷೆಗಳ ಪಾವಿತ್ರ್ಯತೆ ಕಾಪಾಡಲೇಬೇಕು ಎಂದು ಸಂಸದೀಯ ಸಮಿತಿಯು ಸಿಬ್ಬಂದಿ ನೇಮಕಾತಿ ಆಯೋಗಕ್ಕೆ (ಎಸ್‌ಎಸ್‌ಸಿ) ಸೂಚಿಸಿದೆ.

ಪರೀಕ್ಷೆಗಳಲ್ಲಿ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅದು ಸೂಚಿಸಿದೆ.

ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ ಹಲವಾರು ಹುದ್ದೆಗಳಿಗೆ ಸಿಬ್ಬಂದಿ ನೇಮಕಾತಿ ಆಯೋಗವು ಪರೀಕ್ಷೆ ನಡೆಸುತ್ತದೆ. ಆದರೆ, ಕಳೆದ ಐದು ವರ್ಷಗಳಲ್ಲಿ ಒಂಬತ್ತು ಪರೀಕ್ಷೆಗಳು ವಿವಿಧ ಕಾರಣಗಳಿಂದಾಗಿ ರದ್ದಾಗಿವೆ. ಇತ್ತೀಚೆಗಷ್ಟೇ 2017ರ ಕಂಬೈನ್ಡ್ ಗ್ರಾಜ್ಯುಯೇಟ್‌ ಲೆವಲ್‌ನ ಎರಡನೇ ಹಂತದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ.

ಪರೀಕ್ಷೆಗಳನ್ನು ರದ್ದುಗೊಳಿಸುವುದರಿಂದ ಸರ್ಕಾರ ಹಾಗೂ ಅಭ್ಯರ್ಥಿಗಳ ಸಮಯ ವ್ಯರ್ಥವಾಗಿದೆ. ಜತೆಗೆ ಜನಸಾಮಾನ್ಯರ  ದೃಷ್ಟಿಯಲ್ಲಿ ಆಯೋಗದ ಕುರಿತು ಕೆಟ್ಟ ಅಭಿಪ್ರಾಯ ಮೂಡಿದೆ ಎಂದು ಸಮಿತಿ ಈಚೆಗೆ ಸಂಸತ್‌ನಲ್ಲಿ ಮಂಡಿಸಿದ ವರದಿಯಲ್ಲಿ ತಿಳಿಸಿದೆ.

ಮತ್ತೊಂದೆಡೆ ಆಯೋಗದ ಸಮಯ ಮತ್ತು ಹಣ ಸಹ ವ್ಯರ್ಥವಾಗಿದ್ದು, ನೇಮಕಾತಿ ಬಯಸಿದ ಇಲಾಖೆಗಳು ಅಭ್ಯರ್ಥಿಗಳನ್ನು ಪಡೆಯಲು ಹೆಚ್ಚು ಸಮಯ ಕಾಯಬೇಕಾದ ಸ್ಥಿತಿಯೂ ನಿರ್ಮಾಣವಾಗಿದೆ ಎಂದು ಸಮಿತಿ ತಿಳಿಸಿದೆ.

ಆದ್ದರಿಂದ, ಹಿಂದಿನ ಅನುಭವಗಳಿಂದ ಆಯೋಗ ಕಲಿತುಕೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದ್ದು, ಎಲ್ಲಾ ವಿಧದ ದುಷ್ಪರಿಣಾಮ ಮತ್ತು ತಾಂತ್ರಿಕ ತೊಡಕಿನಿಂದ ಮುಕ್ತವಾದ ಪ್ರಕ್ರಿಯೆ ಕೈಗೊಳ್ಳಲು ಆಯೋಗವು ಪ್ರಯತ್ನಿಸಬೇಕಿದೆ ಎಂದು ಸೂಚಿಸಿದೆ.

ಅಲ್ಲದೆ, ಪರೀಕ್ಷೆಗಳು ಯಾವುದೇ ಲೋಪವಿಲ್ಲದೆ ನಡೆಯಲು ಸರ್ಕಾರಿ ಏಜೆನ್ಸಿಗಳು ಎಸ್‌ಎಸ್‌ಸಿಯ ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ಗಳ ಮೇಲೆ ನಿರಂತರವಾಗಿ ನಿಗಾ ಇಡಬೇಕು ಎಂದು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry