ಆಸ್ಟ್ರೇಲಿಯಾ ತಂಡದ ಮೇಲೆ ಆಕ್ರೋಶ

7

ಆಸ್ಟ್ರೇಲಿಯಾ ತಂಡದ ಮೇಲೆ ಆಕ್ರೋಶ

Published:
Updated:
ಆಸ್ಟ್ರೇಲಿಯಾ ತಂಡದ ಮೇಲೆ ಆಕ್ರೋಶ

ಕೇಪ್‌ಟೌನ್‌: ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಗುರಿಯಾದ ಆಸ್ಟ್ರೇಲಿಯಾ ತಂಡದ ವಿರುದ್ಧ ಕ್ರಿಕೆಟ್ ಪ್ರಿಯರು ಮತ್ತು ಹಿರಿಯ ಕ್ರಿಕೆಟಿಗರು ಆಕ್ರೋಶದ ಮಳೆ ಸುರಿಸಿದ್ದಾರೆ.

ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಆಸ್ಟ್ರೇಲಿಯಾ ತಂಡದ ಆಟಗಾರರು ಅಂಗಣಕ್ಕೆ ಇಳಿದಾಗ ಪ್ರೇಕ್ಷಕರು ಗೇಲಿ ಮಾಡಿ ತಂಡಕ್ಕೆ ‘ಸ್ವಾಗತ’ ಕೋರಿದರು. ದಿನದಾಟದ ಟಿಕೆಟ್‌ಗಳು ಬೆಳಿಗ್ಗೆಯೇ ಖಾಲಿಯಾಗಿದ್ದವು. ಗ್ಯಾಲರಿಯಲ್ಲಿ ಕಿಕ್ಕಿರಿದ್ದು ತುಂಬಿದ್ದ ಪ್ರೇಕ್ಷಕರು ಆಸ್ಟ್ರೇಲಿಯಾದ ಆಟಗಾರರು ಫೀಲ್ಡಿಂಗ್‌ಗೆ ಸಜ್ಜಾಗುತ್ತಿದ್ದಂತೆ ಕೂಗಾಡತೊಡಗಿದರು.

ಇನ್ನೊಂದೆಡೆ ‍ಟಿವಿಗಾಗಿ ಪಂದ್ಯದ ವಿಶ್ಲೇಷಣೆ ಮಾಡಲು ಬಂದಿದ್ದ ಹಿರಿಯ ಆಟಗಾರರು ಕೂಡ ಆಸ್ಟ್ರೇಲಿಯಾ ಆಟಗಾರರ ಕ್ರಮವನ್ನು ಖಂಡಿಸಿದರು.ಇವರ ಪೈಕಿ ಆಸ್ಟ್ರೇಲಿಯಾದ ಹಿಂದಿನ ನಾಯಕ ಅಲನ್ ಬಾರ್ಡರ್‌ ‘ಆಸ್ಟ್ರೇಲಿಯಾ ಆಟಗಾರರ ನಡೆ ನನ್ನನ್ನು ಕುಪಿತನನ್ನಾಗಿ ಮಾಡಿದೆ’ ಎಂದು ಹೇಳಿದರು. ಆಸ್ಟ್ರೇಲಿಯಾದ ಹಿರಿಯ ಆಟಗಾರ ಶೇನ್ ವಾರ್ನೆ ಕೂಡ ತಂಡದ ವಿರುದ್ಧ ಕಿಡಿ ಕಾರಿದ್ದಾರೆ.

‘ನಾಯಕನಾಗಿ ಸ್ಟೀವ್ ಸ್ಮಿತ್ ಇಂಥ ಕೃತ್ಯಕ್ಕೆ ಮುಂದಾದದ್ದು ನಾಚಿಕೆಗೇಡಿನ ವಿಷಯ’ ಎಂದು ಹೇಳಿದ ಅವರು ‘ಇದು ಆಸ್ಟ್ರೇಲಿಯಾ ಕ್ರಿಕೆಟ್ ಘನತೆಗೆ ಭಂಗ ತಂದಿದೆ’ ಎಂದಿದ್ದಾರೆ.

ದಕ್ಷಿಣ ಆಫ್ರಿಕಾದ ಹಿರಿಯ ಆಟಗಾರ ಗ್ರೇಮ್ ಸ್ಮಿತ್ ಮಾತನಾಡಿ ‘ಇದು ಆಸ್ಟ್ರೇಲಿಯಾ ತಂಡಕ್ಕೆ ಶೋಭೆ ತರುವ ಕೃತ್ಯವಲ್ಲ, ಆಸ್ಟ್ರೇಲಿಯಾ ತಂಡದವರು ಹೀಗೆ ಮಾಡಿದ್ದಾರೆ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದರು. ‘ಆ ತಂಡದವರು ಇದಕ್ಕೆ ತಕ್ಕ ಪ್ರತಿಫಲ ಉಣ್ಣಲಿದ್ದಾರೆ’ ಎಂದು ದಕ್ಷಿಣ ಆಫ್ರಿಕಾದ ಮತ್ತೊಬ್ಬ ಹಿರಿಯ ಆಟಗಾರ ಶಾನ್ ಪೊಲಾಕ್ ಹೇಳಿದರು.

ಚೆಂಡು ವಿರೂಪಗೊಳಿಸಿದ ಕೆಲವು ಪ್ರಮುಖ ಪ್ರಕರಣಗಳು

1994: ಲಾರ್ಡ್ಸ್‌ನಲ್ಲಿ ದಕ್ಷಿಣ ಆಫ್ರಿಕಾ ಎದುರು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಮೈಕ್ ಅಥರ್ಟನ್‌ ಜೇಬಿನಲ್ಲಿ ಇರಿಸಿದ್ದ ಯಾವುದೋ ವಸ್ತುವನ್ನು ತೆಗೆದು ಚೆಂಡಿಗೆ ಲೇಪಿಸಿ ವಿರೂಪಗೊಳಿಸಲು ಪ್ರಯತ್ನಿಸಿದ್ದರು. ಅವರಿಗೆ ₹ 2.4 ಲಕ್ಷ ಮೊತ್ತದ ದಂಡ ವಿಧಿಸಲಾಗಿತ್ತು.

2006: ಲೀಡ್ಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಒಳಗಾದ ಪಾಕಿಸ್ತಾನ ನಾಲ್ಕನೇ ದಿನ ಚಹಾ ವಿರಾಮದ ನಂತರ ಅಂಗಣಕ್ಕೆ ಇಳಿಯಲಿಲ್ಲ. ಹೀಗಾಗಿ ಅಂಪೈರ್‌ಗಾಳದ ಡ್ಯಾರೆಲ್‌ ಹೇರ್‌ ಮತ್ತು ಬಿಲಿ ಡಾಕ್ಟ್ರೋವ್‌ ಇಂಗ್ಲೆಂಡ್ ತಂಡ ವಿಜಯಿ ಎಂದು ಘೋಷಿಸಿದರು. ಮೂರು ವರ್ಷಗಳ ನಂತರ ಐಸಿಸಿ ಈ ಪಂದ್ಯದ ಫಲಿತಾಂಶವನ್ನು ಪರಿಷ್ಕರಿಸಿ ಡ್ರಾ ಎಂದು ಘೋಷಿಸಿತು.

2010: ಪರ್ಥ್‌ನಲ್ಲಿ ನಡೆದ ಆಸ್ಟ್ರೇಲಿಯಾ ಎದುರಿನ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ಚೆಂಡಿನ ಸೀಮ್‌ ಅನ್ನು ಕಚ್ಚಿದ್ದರು. ಹೀಗಾಗಿ ಅವರಿಗೆ ಮುಂದಿನ ಟ್ವೆಂಟಿ–20 ಸರಣಿಯ ಎರಡು ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು.

2013: ದುಬೈನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ಫಾಫ್‌ ಡು ಪ್ಲೆಸಿ ಚೆಂಡನ್ನು ತಮ್ಮ ಪ್ಯಾಂಟ್ ಜೇಬಿನ ಜಿಪ್‌ಗೆ ಉಜ್ಜಿ ವಿರೂಪಗೊಳಿಸಿದ್ದರು. ಇದರಿಂದ ಅವರು ಪಂದ್ಯ ಶುಲ್ಕದ ಶೇ 50ರಷ್ಟನ್ನು ದಂಡದ ರೂಪದಲ್ಲಿ ತೆರಬೇಕಾಯಿತು.

2014: ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ವೇಗಿ ವೆರ್ನಾನ್ ಫಿಲಾಂಡರ್‌ ಉಗುರಿನಿಂದ ಗೀರಿ ಚೆಂಡು ವಿರೂಪಗೊಳಿಸಿದ್ದರು. ತಪ್ಪೊಪ್ಪಿಕೊಂಡ ಅವರಿಂದ ಪಂದ್ಯಶುಲ್ಕದ ಶೇ 75ರಷ್ಟನ್ನು ತಡೆ ಹಿಡಿಯಲಾಗಿತ್ತು.

2016: ಹೋಬರ್ಟ್‌ನಲ್ಲಿ ಆಸ್ಟ್ರೇಲಿಯಾ ಎದುರು ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಫಾಫ್ ಡು ಪ್ಲೆಸಿ, ಬಾಯಲ್ಲಿದ್ದ ಮಿಂಟ್‌ ತೆಗೆದು ಚೆಂಡಿಗೆ ಅಂಟಿಸಿದ್ದರು. ತನಿಖೆ ನಡೆಸಿದ ಐಸಿಸಿ ಅವರನ್ನು ತಪ್ಪಿತಸ್ಥ ಎಂದು ಘೋಷಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry