ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗರ ಕೆರೆಯಲ್ಲಿ ಜಲಜಾತ್ರೆ

ಸ್ಥಳೀಯ ನಿವಾಸಿಗಳಿಗೆ ಸಂಭ್ರಮ
Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಲುಷಿತಗೊಂಡು ದುರ್ವಾಸನೆ ಬೀರುತ್ತಿದ್ದ ಅಗರ ಕೆರೆಗೆ ಕಾಯಕಲ್ಪ ನೀಡಲಾಗಿದೆ. ಸ್ಥಳೀಯ ನಿವಾಸಿಗಳು ಸೇರಿ ಭಾನುವಾರ ಕೆರೆಯಂಗಳದಲ್ಲಿ ‘ಜಲಜಾತ್ರೆ’ ಹಮ್ಮಿಕೊಳ್ಳುವ ಮೂಲಕ ಕೆರೆಯ ಹೊಸತನವನ್ನು ಸಂಭ್ರಮಿಸಿದರು.

ಕೆರೆಯನ್ನು ಅರಣ್ಯ ಇಲಾಖೆ ಅಭಿವೃದ್ಧಿಗೊಳಿಸಿದೆ. ಇದರ ಹೂಳನ್ನು ತೆರವುಗೊಳಿಸಿ ಸುತ್ತಲೂ ತಂತಿ ಬೇಲಿಯನ್ನು ಅಳವಡಿಸಿದೆ. ಅಗರ ಭಾಗದ ಕಡೆಗೆ ಉದ್ಯಾನ ನಿರ್ಮಿಸಲಾಗಿದೆ. ಜಲಮೂಲದ ಸುತ್ತಲೂ ನಡಿಗೆ ಪಥ ಹಾಗೂ ಸೈಕಲ್‌ ಪಥವಿದೆ. ಹಸಿರೀಕರಣಕ್ಕೂ ಒತ್ತು ನೀಡಲಾಗಿದೆ. ಇನ್ನೂ ಸಣ್ಣಪುಟ್ಟ ಕಾಮಗಾರಿಗಳು ಬಾಕಿ ಇವೆ.

ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ದೊಡ್ಡಕನ್ನಹಳ್ಳಿ ಹಾಗೂ ಜೆ.ಪಿ.ನಗರದಿಂದ ಎರಡು ತಂಡಗಳಲ್ಲಿ ಸೈಕಲ್‌ ಸವಾರರು ರ‍್ಯಾಲಿ ನಡೆಸಿದರು. ಜಲಮೂಲಗಳ ಬಳಿ ಶುಚಿತ್ವ ಕಾಪಾಡುವ ಕುರಿತು ಸ್ವಚ್ಛ ಭಾರತ ಅಭಿಯಾನದ ತಂಡದವರು ಅರಿವು ಮೂಡಿಸಿದರು. ನೀರಿನ ಉಳಿತಾಯದ ಮಹತ್ವದ ಕುರಿತು ತಿಳಿ ಹೇಳಿದರು.

ಮಕ್ಕಳಿಗಾಗಿ ಅಳಿಗುಳಿಮನೆ, ಕೇರಂ ಆಟಗಳನ್ನು ಏರ್ಪಡಿಸಲಾಗಿತ್ತು. ಜಾತ್ರೆಯ ಪ್ರಯುಕ್ತ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ಚನ್ನಪಟ್ಟಣದ ಗೊಂಬೆಗಳು ಗಮನಸೆಳೆದವು. ತಾರಸಿ ತೋಟಕ್ಕೆ ಬಳಸುವ ಸಾಮಗ್ರಿಗಳ ಮಳಿಗೆಗಳೂ ಇದ್ದವು. ಇಲ್ಲಿನ ಉದ್ಯಾನದ ಗಿಡಗಳಿಗೆ ಎಲೆಗಳಿಂದ ತಯಾರಿಸಿದ ಗೊಬ್ಬರ ಹಾಕಲಾಯಿತು. ಈ ಕಾರ್ಯದಲ್ಲಿ ಮಕ್ಕಳು ಕೂಡ ಕೈಜೋಡಿಸಿದರು.

‘ಎಚ್‌ಎಸ್‌ಆರ್‌ ಬಡಾವಣೆಯ ಮರಗಳಿಂದ ಉದುರಿದ ಎಲೆಗಳನ್ನು ಬಳಸಿ ಸಾವಯವ ಗೊಬ್ಬರ ತಯಾರಿಸಿದ್ದೇವೆ’ ಎಂದು ‘ಸಿಟಿಜನ್ಸ್‌ ಫೋರಂ’ನ ಚಿತ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

ಜನ ಏನನ್ನುತ್ತಾರೆ?

* ಕೆರೆಯನ್ನು ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ. ನಡಿಗೆ ಪಥ, ಸೈಕಲ್‌ ಪಥ ಮಾಡಿರುವುದರಿಂದ ಜನರಿಗೆ ಅನುಕೂಲವಾಗುತ್ತದೆ. ಹಸಿರೀಕರಣಕ್ಕೂ ಆದ್ಯತೆ ನೀಡಿದ್ದಾರೆ.
–ಚಂದನಾ, ಟೀಚರ್ಸ್‌ ಕಾಲೊನಿ, ಎಚ್‌ಎಸ್‌ಆರ್‌ ಬಡಾವಣೆ

* 15 ವರ್ಷಗಳಿಂದ ಈ ಕೆರೆಯಲ್ಲಿ ವಾಯುವಿಹಾರ ಮಾಡುತ್ತಿದ್ದೇನೆ. ಈ ಹಿಂದೆ ಕೊಳಚೆ ನೀರು ಸೇರಿದ್ದರಿಂದ ಕೆರೆ ಕಲುಷಿತಗೊಂಡಿತ್ತು. ಈಗ ಶುದ್ಧನೀರನ್ನು ಮಾತ್ರ ಕೆರೆಗೆ ಬಿಡಲಾಗುತ್ತಿದೆ. ವಾಸನೆ ಕಡಿಮೆ ಆಗಿದೆ.
– ಪ್ರಗತಿ, ಎಚ್‌ಎಸ್‌ಆರ್‌ ಬಡಾವಣೆ

* ನಡಿಗೆ ಪಥದ ಕಾಮಗಾರಿ ಇನ್ನೂ ಬಾಕಿ ಇದೆ. ಅದನ್ನು ಕೂಡಲೇ ಪೂರ್ಣಗೊಳಿಸಬೇಕು. ಉದ್ಯಾನದಲ್ಲಿ ಹಣ್ಣಿನ ಗಿಡಗಳನ್ನು ನೆಡಬೇಕು.
– ಲಕ್ಷ್ಮಿ, ಟೀಚರ್ಸ್‌ ಕಾಲೊನಿ

* ಎಚ್‌ಎಸ್‌ಆರ್‌ ಬಡಾವಣೆ ಸಿಟಿಜನ್ಸ್‌ ಫೋರಂನ ಸದಸ್ಯ ಮೋಹನ್‌ ಇಲ್ಲಿನ ಕಾಲುವೆಯಲ್ಲಿ ಬಿದ್ದು ಗಾಯಗೊಂಡಿದ್ದರು. ವಾಯುವಿಹಾರಕ್ಕೆ ಬರುವವರ ಹಿತದೃಷ್ಟಿಯಿಂದ ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ಅಲ್ಲಲ್ಲಿ ಅಳವಡಿಸಬೇಕು.
– ಪ್ರತಿಮಾ, ಎಚ್‌ಎಸ್‌ಆರ್‌ ಬಡಾವಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT