ಬಾಲಕನಿಗೆ ಲೈಂಗಿಕ ದೌರ್ಜನ್ಯ ಮದರಸಾ ಶಿಕ್ಷಕ ಬಂಧನ

7

ಬಾಲಕನಿಗೆ ಲೈಂಗಿಕ ದೌರ್ಜನ್ಯ ಮದರಸಾ ಶಿಕ್ಷಕ ಬಂಧನ

Published:
Updated:
ಬಾಲಕನಿಗೆ ಲೈಂಗಿಕ ದೌರ್ಜನ್ಯ ಮದರಸಾ ಶಿಕ್ಷಕ ಬಂಧನ

ಬೆಂಗಳೂರು: ತಲಘಟ್ಟಪುರದ ಮದರಸಾದಲ್ಲಿ ಓದುತ್ತಿರುವ 12 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ, ಶಿಕ್ಷಕ ಮೊಹಮ್ಮದ್ ಅಬ್ದುಲ್ ಜುಬೇರ್‌ನನ್ನು (35) ಪೊಲೀಸರು ಬಂಧಿಸಿದ್ದಾರೆ.

‘ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಜುಬೇರ್, ನಾಲ್ಕು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ. ಶಿವಾಜಿನಗರದಲ್ಲಿ ವಾಸವಿದ್ದ. ಒಂದು ವರ್ಷದಿಂದ ಮದರಸಾದಲ್ಲಿ ಕೆಲಸ ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

ಸಂತ್ರಸ್ತ ಬಾಲಕ ಕುಮಾರಸ್ವಾಮಿ ಲೇಔಟ್ ನಿವಾಸಿ. ನಾಲ್ಕನೇ ತರಗತಿಯಲ್ಲಿ ಅನುತ್ತೀರ್ಣನಾಗಿದ್ದ ಬಾಲಕನನ್ನು ಪೋಷಕರು ಮದರಸಾಕ್ಕೆ ಸೇರಿಸಿದ್ದರು. ಅಲ್ಲಿ 60 ಬಾಲಕರು ಕಲಿಯುತ್ತಿದ್ದಾರೆ.

‘ಮದರಸಾ ಅವಧಿ ಮುಗಿದ ಬಳಿಕ ಆರೋಪಿಯು, ಬಾಲಕನನ್ನು ನಿತ್ಯವೂ ಶಿವಾಜಿನಗರದಲ್ಲಿರುವ ತನ್ನ ಮನೆಗೆ ಕರೆದೊಯ್ಯುತ್ತಿದ್ದ. ಅಲ್ಲಿಯೇ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ವಿಷಯ ಬಹಿರಂಗ ಪಡಿಸಿದರೆ, ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದ. ಒಂದು ವರ್ಷದಿಂದ ಆತ ಬಾಲಕನ ಮೇಲೆ ದೌರ್ಜನ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದರು.

‘ಬಾಲಕನ ವರ್ತನೆಯಲ್ಲಿ ಇತ್ತೀಚೆಗೆ ಬದಲಾವಣೆ ಕಂಡುಬಂದಿತ್ತು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.ಅದನ್ನು ಗಮನಿಸಿದ್ದ ಅಜ್ಜಿ, ಆತನನ್ನು ಪ್ರಶ್ನಿಸಿದ್ದಳು. ಅವಾಗಲೇ ಬಾಲಕ ವಿಷಯ ಬಾಯ್ಬಿಟ್ಟಿದ್ದ. ಬಳಿಕ, ಪೋಷಕರು ದೂರು ನೀಡಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದೇವೆ’ ಎಂದು ತಿಳಿಸಿದರು.

‘ಆರೋಪಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಅದರ ವರದಿ ಬಂದ ಬಳಿಕ ಕೃತ್ಯದ ಬಗ್ಗೆ ನಿಖರ ಮಾಹಿತಿ ತಿಳಿಯಲಿದೆ. ಸದ್ಯ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದೇವೆ. ಆತ ಸಲಿಂಗಕಾಮಿ ಎಂದು ಕೆಲವರು ಹೇಳುತ್ತಿದ್ದಾರೆ. ಅದನ್ನು ಪರಿಶೀಲಿಸುತ್ತಿದ್ದೇವೆ’ ಎಂದರು.

‘ನಾನು ಯಾವುದೇ ತಪ್ಪು ಮಾಡಿಲ್ಲ. ಅನಗತ್ಯವಾಗಿ ಆರೋಪ ಮಾಡಲಾಗಿದೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry