ಸ್ಮಿತ್‌ಗೆ ಒಂದು ಪಂದ್ಯ ನಿಷೇಧ ಬ್ಯಾಂಕ್ರಾಫ್ಟ್‌ಗೆ ದಂಡ

7

ಸ್ಮಿತ್‌ಗೆ ಒಂದು ಪಂದ್ಯ ನಿಷೇಧ ಬ್ಯಾಂಕ್ರಾಫ್ಟ್‌ಗೆ ದಂಡ

Published:
Updated:
ಸ್ಮಿತ್‌ಗೆ ಒಂದು ಪಂದ್ಯ ನಿಷೇಧ ಬ್ಯಾಂಕ್ರಾಫ್ಟ್‌ಗೆ ದಂಡ

ಕೇಪ್‌ಟೌನ್‌/ದುಬೈ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಚೆಂಡು ವಿರೂಪಗೊಳಿಸಲು ‘ತಂತ್ರ ರೂಪಿಸಿದ’ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವ್ ಸ್ಮಿತ್ ಮೇಲೆ ಐಸಿಸಿ ಒಂದು ಪಂದ್ಯದ ನಿಷೇಧ ಹೇರಿದೆ. ಚೆಂಡು ವಿರೂಪಗೊಳಿಸಿದ ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ ಅವರಿಗೆ ದಂಡ ವಿಧಿಸಿದೆ.

ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಮೂರನೇ ದಿನವಾದ ಶನಿವಾರ ಬ್ಯಾಟ್ಸ್‌ಮನ್‌ ಬ್ಯಾಂಕ್ರಾಫ್ಟ್‌ ಹರಿತವಾದ ಸಾಧನದಿಂದ ಚೆಂಡನ್ನು ಕೆರೆದಿದ್ದರು. ನಂತರ ಆ ವಸ್ತುವನ್ನು ಒಳ ಉಡುಪಿನೊಳಗೆ ಬಚ್ಚಿಟ್ಟಿದ್ದರು. ಇದು ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು. ದಿನದಾಟದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ಸ್ಟೀವ್ ಸ್ಮಿತ್‌, ಚೆಂಡು ವಿರೂಪಗೊಳಿಸಲು ಬೆಂಬಲ ನೀಡಿದ್ದನ್ನು ಒಪ್ಪಿಕೊಂಡಿದ್ದರು.

‘ಇದು ತಂಡದ ನಿರ್ಧಾರ ಆಗಿತ್ತು. ಮಧ್ಯಾಹ್ನ ಭೋಜನದ ಸಂದರ್ಭದಲ್ಲಿ ಈ ಕುರಿತು ಮಾತುಕತೆ ನಡೆದಿತ್ತು’ ಎಂದು ಹೇಳಿದ್ದ ಸ್ಟೀವ್ ಸ್ಮಿತ್‌, ‘ಪ್ರಕರಣಕ್ಕೆ ಸಂಬಂಧಿಸಿ ನಾಯಕತ್ವ ತೊರೆಯುವುದಿಲ್ಲ’ ಎಂದಿದ್ದರು.

ಆದರೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಿತ್ತು. ನಾಯಕತ್ವದ ಜವಾಬ್ದಾರಿಯನ್ನು ವಿಕೆಟ್ ಕೀಪರ್‌ ಟಿಮ್ ಪೈನೆ ಅವರಿಗೆ ವಹಿಸಿತ್ತು.

ಪಂದ್ಯ ಶುಲ್ಕಕ್ಕೆ ತಡೆ: ಸ್ಟೀವ್ ಸ್ಮಿತ್ ಅವರನ್ನು ವಜಾಗೊಳಿಸಿದ ಐಸಿಸಿ ಮೂರನೇ ಟೆಸ್ಟ್‌ ಪಂದ್ಯ ಶುಲ್ಕದ ಶೇ 100ರಷ್ಟು ದಂಡ ವಿಧಿಸಿದೆ. ಬ್ಯಾಂಕ್ರಾಫ್ಟ್‌ ಅವರಿಗೆ ಪಂದ್ಯಶುಲ್ಕದ ಶೇ 75ರಷ್ಟು ದಂಡ ವಿಧಿಸಿದ್ದು ಮೂರು ನಕಾರಾತ್ಮಕ ಪಾಯಿಂಟ್‌ಗಳ ‘ಶಿಕ್ಷೆ’ಯನ್ನೂ ನೀಡಿದೆ.

‘ಸದರಿ ಪಂದ್ಯಕ್ಕೆ ಸಂಬಂಧಿಸಿ ಮತ್ತು ಒಟ್ಟಿನಲ್ಲಿ ಕ್ರಿಕೆಟ್‌ಗೆ ಸಂಬಂಧಿಸಿ ಇದು ಘೋರ ಕೃತ್ಯ. ಆದ್ದರಿಂದ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ’ ಎಂದು ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಡೇವಿಡ್‌ ರಿಚರ್ಡ್ಸನ್‌ ಹೇಳಿದ್ದಾರೆ.

ಆಸ್ಟ್ರೇಲಿಯಾಗೆ ಸೋಲು: ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ 322 ರನ್‌ಗಳಿಂದ ಸೋತಿದೆ. ನಾಲ್ಕನೇ ದಿನವಾದ ಭಾನುವಾರ 430 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡ ದಕ್ಷಿಣ ಆಫ್ರಿಕಾದ ಮಾರ್ನೆ ಮಾರ್ಕೆಲ್‌ (23ಕ್ಕೆ5) ಪರಿಣಾಮಕಾರಿ ದಾಳಿಗೆ ನಲುಗಿ 107 ರನ್‌ಗಳಿಗೆ ಪತನ ಕಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry