ಮಾಹಿತಿಗೆ ’ನಮೋ’ ಕನ್ನ

7
ಮೋದಿ ಆ್ಯಪ್‌ ವಿರುದ್ಧ ರಾಹುಲ್‌ ಆಕ್ರೋಶ

ಮಾಹಿತಿಗೆ ’ನಮೋ’ ಕನ್ನ

Published:
Updated:
ಮಾಹಿತಿಗೆ ’ನಮೋ’ ಕನ್ನ

ನವದೆಹಲಿ: ನರೇಂದ್ರ ಮೋದಿ (ನಮೋ) ಆ್ಯಪ್‌ಗೆ ಸಂಬಂಧಿಸಿ ಕಾಂಗ್ರೆಸ್‌ ಆಧ್ಯಕ್ಷ ರಾಹುಲ್‌ ಗಾಂಧಿ ಮತ್ತು ಬಿಜೆಪಿ ನಡುವೆ ವಾಕ್ಸಮರ ನಡೆದಿದೆ. ನಮೋ ಆ್ಯಪ್‌ ಮೂಲಕ ಜನರ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ರಾಹುಲ್‌ ಆರೋಪಿಸಿದ್ದಾರೆ. ಆದರೆ, ಈ ಆರೋಪವನ್ನು ಬಿಜೆಪಿ ಅಲ್ಲಗಳೆದಿದೆ.

ನಮೋ ಆ್ಯಪ್‌ನಲ್ಲಿ ಸಂಗ್ರಹವಾಗಿರುವ ದತ್ತಾಂಶಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹ್ಯಾಕರ್‌ವೊಬ್ಬರು ಆರೋಪ ಮಾಡಿದ್ದಾರೆ ಎಂಬ ವರದಿಯೊಂದು ಇತ್ತೀಚೆಗೆ ಪ್ರಕಟವಾಗಿತ್ತು. ಈ ವರದಿಯ ಆಧಾರದಲ್ಲಿ ರಾಹುಲ್‌ ಆರೋಪ ಮಾಡಿದ್ದಾರೆ. ಈ ಸುದ್ದಿಯನ್ನು ಭಾರತದ ಮಾಧ್ಯಮ ಮುಚ್ಚಿಹಾಕಿದೆ ಎಂದೂ ರಾಹುಲ್‌ ಟೀಕಿಸಿದ್ದಾರೆ.

‘ದತ್ತಾಂಶ ಕಳ್ಳತನದ ಆರೋಪ ಪ್ರಧಾನಿ ಮೋದಿ ಮನೆಬಾಗಿಲವರೆಗೂ ಬಂದಿದೆ. ಹ್ಯಾಕರ್‌ವೊಬ್ಬರಿಂದ ಆಘಾತಕಾರಿ ವಿಚಾರಗಳು ಬಯಲು’ ಎಂಬ ವರದಿಯನ್ನು ತಮ್ಮ ಟ್ವೀಟ್‌ಗೆ ರಾಹುಲ್‌ ಲಗತ್ತಿಸಿದ್ದಾರೆ.

ನಮೋ ಆ್ಯಪ್‌ ಬಳಕೆದಾರರ ಹೆಸರು, ಇ–ಮೇಲ್‌ ವಿಳಾಸ, ಫೋಟೊ ಮುಂತಾದ ಮಾಹಿತಿಯನ್ನು ಅವರ ಅನುಮತಿ ಇಲ್ಲದೆಯೇ ಬೇರೊಂದು ಸಂಸ್ಥೆಗೆ ನೀಡಲಾಗುತ್ತಿದೆ ಎಂಬುದು ರಾಹುಲ್‌, ಮುಖ್ಯ ಆರೋಪವಾಗಿದೆ.

‘ಕಾಂಗ್ರೆಸ್‌ ಅಧ್ಯಕ್ಷನಿಂದ ಇದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡಿರಲಿಲ್ಲ. ಭಾರತದಲ್ಲಿ ನಡೆಯುತ್ತಿರುವ ಒಳ್ಳೆಯ ಕೆಲಸಗಳ ಬಗ್ಗೆ ತಿಳಿದುಕೊಳ್ಳಲು ರಾಹುಲ್‌ ಅವರು ನಮೋ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲಿ’ ಎಂದು ಬಿಜೆಪಿ4ಇಂಡಿಯಾ ಟ್ವೀಟ್‌ ಮಾಡಿದೆ.

ಬಳಕೆದಾರರಿಗೆ ಯಾವ ಮಾಹಿತಿ ಅಗತ್ಯ ಎಂಬುದನ್ನು ವಿಶ್ಲೇಷಿಸಿ, ಆ ಮಾಹಿತಿಯನ್ನಷ್ಟೇ ಅವರಿಗೆ ದೊರಕುವಂತೆ ಮಾಡಲು ಈ ದತ್ತಾಂಶ ವಿಶ್ಲೇಷಣೆ ನಡೆಸಲಾಗುತ್ತಿದೆ. ಇದು ದತ್ತಾಂಶ ಸೋರಿಕೆ ಅಲ್ಲ ಎಂದು ಬಿಜೆಪಿ ಹೇಳಿದೆ.

ನಮೋ ಆ್ಯಪ್‌ ಮೂಲಕ ದತ್ತಾಂಶ ಸೋರಿಕೆಯ ಸುದ್ದಿಯನ್ನು ಸರಿಯಾಗಿ ತೆಗೆದುಕೊಂಡಿಲ್ಲ ಎಂದು ಮಾಧ್ಯಮಗಳ ವಿರುದ್ಧ ರಾಹುಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಎಂದಿನಂತೆಯೇ, ಮತ್ತೊಂದು ಮಹತ್ವದ ಸುದ್ದಿಯನ್ನು ಹೂತು ಹಾಕುವ ಮೂಲಕ ದೊಡ್ಡ ಕೆಲಸ ಮಾಡಿದ್ದೀರಿ. ಮುಖ್ಯ ವಾಹಿನಿಯ ಮಾಧ್ಯಮಕ್ಕೆ ಧನ್ಯವಾದ’ ಎಂದು ರಾಹುಲ್‌ ವ್ಯಂಗ್ಯವಾಡಿದ್ದಾರೆ.

ಫೇಸ್‌ಬುಕ್‌ ಮೂಲಕ ಮಾಹಿತಿ ಕಳ್ಳತನ ಮಾಡಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಅವರಿಗೆ ನೆರವಾದ ಕೇಂಬ್ರಿಜ್‌ ಅನಲಿಟಿಕಾ ಕಂಪನಿಯ ಸೇವೆ ಬಳಸಿಕೊಂಡ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪರಸ್ಪರರನ್ನು ದೂಷಿಸಿದ್ದವು. ಅದರ ಬೆನ್ನಿಗೇ ಮೋದಿ ಆ್ಯಪ್‌ ಮೂಲಕ ಮಾಹಿತಿ ದುರ್ಬಳಕೆ ಮಾಡಲಾಗುತ್ತಿದೆ ಎಂಬ ಆರೋಪವನ್ನು ರಾಹುಲ್‌ ಮಾಡಿದ್ದಾರೆ.

ಸುಳ್ಳು ಸುದ್ದಿ: ಕೇಂದ್ರ ಸ್ಪಷ್ಟನೆ

ನಮೋ ಆ್ಯಪ್‌ ಮೂಲಕ ಮಾಹಿತಿ ಸೋರಿಕೆಯಾಗುತ್ತಿದೆ ಎಂಬ ಸುದ್ದಿಗಳು ಸುಳ್ಳು. ಬಳಕೆದಾರರ ವೈಯಕ್ತಿಕ ಮಾಹಿತಿ ನೀಡುವಂತೆ ಆ್ಯಪ್‌ ಕೇಳುವುದೇ ಇಲ್ಲ ಎಂದು ಸರ್ಕಾರ ತಿಳಿಸಿದೆ.

ನಮೋ ಆ್ಯಪ್‌ ಬಹಳ ವಿಶಿಷ್ಟವಾಗಿದೆ. ಈ ಆ್ಯಪ್‌ನಲ್ಲಿ ಬಳಕೆದಾರರನ್ನು ‘ಅತಿಥಿ’ (ಗೆಸ್ಟ್‌) ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಲ್ಲಿ ಅನುಮತಿ ಪಡೆದುಕೊಳ್ಳುವ ಅಥವಾ ಯಾವುದೇ ಮಾಹಿತಿ ನೀಡುವ ಅಗತ್ಯ ಇಲ್ಲ. ಸಾಂದರ್ಭಿಕ ಮತ್ತು ನಿರ್ದಿಷ್ಟ ಅನುಮತಿಗಳು ಮಾತ್ರ ಬೇಕಾಗುತ್ತವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಉದಾಹರಣೆಗೆ, ಸೆಲ್ಫಿ ಅಭಿಯಾನದಲ್ಲಿ ಭಾಗವಹಿಸುವವರ ಕ್ಯಾಮೆರಾ ಮತ್ತು ಅಥವಾ ಫೋಟೊ ಗ್ಯಾಲರಿಗೆ ಪ್ರವೇಶಿಸಲು ಅನುಮತಿ ನೀಡಬೇಕಾಗುತ್ತದೆ. ಬಳಕೆದಾರರು ತಮ್ಮ ಇ–ಮೇಲ್‌ ವಿಳಾಸ ಮತ್ತು ಹುಟ್ಟಿದ ದಿನಾಂಕ ಕೊಟ್ಟರೆ ಅಂಥವರಿಗೆ ಪ್ರಧಾನಿಯಿಂದ ಹುಟ್ಟುಹಬ್ಬದ ಶುಭಾಶಯ ಬರುತ್ತದೆ. ಹಾಗಾಗಿ ಎಲ್ಲ ಮಾಹಿತಿಯೂ ಆ್ಯಪ್‌ಗೆ ದೊರೆಯಬೇಕು ಎಂಬ ಯಾವುದೇ ನಿಬಂಧನೆ ಇಲ್ಲ ಎಂದು ತಿಳಿಸಿದೆ.

‘ಫ್ರೆಂಚ್‌ ಟ್ವಿಟರ್‌’ ಬಳಕೆದಾರ ಬಹಿರಂಗಪಡಿಸಿರುವ ಮಾಹಿತಿ ಅವರೇ ತಮ್ಮ ಫೋನ್‌ನಲ್ಲಿ ಸಲ್ಲಿಸಿದ ಮಾಹಿತಿಯಾಗಿದೆ. ಹಾಗಾಗಿ ಇದು ಸೋರಿಕೆ ಅಲ್ಲ. ಅವರು ನೀಡಿದ ಮಾಹಿತಿ ಅಲ್ಲದೆ ಬೇರೆ ಮಾಹಿತಿ ಅವರಿಗೆ ದೊರಕುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸಂಪರ್ಕಕ್ಕೆ ಆ್ಯಪ್‌

ಜನರ ಜತೆ ಸಂಪರ್ಕ ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಈ ಆ್ಯಪ್‌ ಬಳಸುತ್ತಿದ್ದಾರೆ. ವಿವಿಧ ವಿಷಯಗಳ ಬಗ್ಗೆ ಜನರ ಪ್ರತಿಕ್ರಿಯೆಯನ್ನು ಆ್ಯಪ್‌ ಮೂಲಕ ಅವರು ಪಡೆಯುತ್ತಾರೆ. ಪ್ರಧಾನಿಗೆ ಸಂಬಂಧಿಸಿ ಎಲ್ಲ ಮಾಹಿತಿಯೂ ಈ ಆ್ಯಪ್‌ನಲ್ಲಿ ಲಭ್ಯ. ಅವರ ‘ಮನದ ಮಾತು‘ ಭಾಷಣದ ಎಲ್ಲ ಅವತರಣಿಕೆಗಳನ್ನೂ ಈ ಆ್ಯಪ್‌ನಲ್ಲಿ ಕೇಳಬಹುದು.

*

ಹಾಯ್‌, ನನ್ನ ಹೆಸರು ಮೋದಿ. ನಾನು ಭಾರತದ ಪ್ರಧಾನಿ. ನನ್ನ ಅಧಿಕೃತ ಆ್ಯಪ್‌ಗೆ ನೀವು ಪ್ರವೇಶಿಸಿದಾಗ ನಿಮ್ಮೆಲ್ಲ ದತ್ತಾಂಶಗಳನ್ನು ಅಮೆರಿಕದ ಕಂಪನಿಗಳಲ್ಲಿರುವ ನನ್ನ ಗೆಳೆಯರಿಗೆ ನೀಡುತ್ತೇನೆ.

–ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

*

ನಮೋ ಆ್ಯಪ್‌ ಬಗ್ಗೆ ಭಯ ನೋಡಿದರೆ ತಮಾಷೆ ಅನಿಸುತ್ತದೆ. ರಾಹುಲ್‌ಬಾಟ್‌ಗಳು (ರೊಬೋಟ್‌) #ಡಿಲೀಟ್‌ ನಮೋಆ್ಯಪ್‌ ಅಭಿಯಾನ ಮಾಡಿದ ಬಳಿಕ ಆ್ಯಪ್‌ನ ಜನಪ್ರಿಯತೆ ಹೆಚ್ಚಾಗಿದೆ.

–ಬಿಜೆಪಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry