ಕಮಿಷನ್‌ಗಾಗಿ ಕಾಲುವೆ ನಿರ್ಮಾಣ: ಅರುಣ್‌ಸಿಂಗ್

7
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆರೋಪ

ಕಮಿಷನ್‌ಗಾಗಿ ಕಾಲುವೆ ನಿರ್ಮಾಣ: ಅರುಣ್‌ಸಿಂಗ್

Published:
Updated:

ವಿಜಯಪುರ: ‘ಕಮಿಷನ್‌ ಪಡೆಯುವ ಏಕೈಕ ಉದ್ದೇಶಕ್ಕಾಗಿ ವಿಜಯಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ನೀರಾವರಿ ಕಾಲುವೆಗಳನ್ನು ನಿರ್ಮಿಸಲಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್ ದೂರಿದರು.

‘ಕಾಲುವೆ ನಿರ್ಮಾಣದ ಹಿಂದೆ ಜನ ಹಿತವಿಲ್ಲ. ಇದೂವರೆಗೂ ರೈತರ ಹೊಲಗಳಿಗೆ ಹನಿ ನೀರು ಹರಿಸಿಲ್ಲ. ಜಲಸಂಪನ್ಮೂಲ ಸಚಿವರು ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸೋಲುವುದು ಖಚಿತ’ ಎಂದು ಭಾನುವಾರ ರಾತ್ರಿ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಭ್ರಷ್ಟಾಚಾರದ ಮೂಲ ಬೇರಾಗಿರುವ ಕಾಂಗ್ರೆಸ್ ಪಕ್ಷವನ್ನು ಕಿತ್ತೆಸೆಯುವುದೇ ಬಿಜೆಪಿಯ ಮುಖ್ಯ ಗುರಿಯಾಗಿದೆ. ಸಮಾಜ, ಧರ್ಮವನ್ನು ಒಡೆಯುವುದೇ ಕಾಂಗ್ರೆಸ್ ಕೆಲಸವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ಮೂಲಕ, ದೇಶದಲ್ಲಿ ಬಿಜೆಪಿ ಆಡಳಿತವಿರುವ 22ನೇ ರಾಜ್ಯವಾಗಿ ಹೊರಹೊಮ್ಮಲಿದೆ’ ಎಂದು ತಿಳಿಸಿದರು.

‘ರಾಹುಲ್‌ಗಾಂಧಿಗೆ ಸರಿಯಾಗಿ ಕನ್ನಡ ಮಾತನಾಡಲು ಬರಲ್ಲ. ಆದ್ರೂ ವೋಟಿನಾಸೆಗಾಗಿ ಉಲ್ಟಾ ಮಾತನಾಡಿ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಮಠ–ಮಂದೀರ ಸುತ್ತಿದರೂ ಈ ಚುನಾವಣೆಯಲ್ಲಿ ಯಾವುದೇ ಪ್ರಯೋಜನವಾಗಲ್ಲ’ ಎಂದು ಅರುಣ್‌ಸಿಂಗ್‌ ಎಐಸಿಸಿ ಅಧ್ಯಕ್ಷರ ಕಾಲೆಳೆದರು.

ಯತ್ನಾಳ ಸೇರ್ಪಡೆಗೆ ವಿರೋಧ: ವಿಧಾನ ಪರಿಷತ್‌ನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಸೇರ್ಪಡೆ ವಿರೋಧಿಸಿ ಕೆಲ ಬಿಜೆಪಿ ಕಾರ್ಯಕರ್ತರು ಪತ್ರಿಕಾಗೋಷ್ಠಿಯಲ್ಲೇ ಅರುಣ್‌ಸಿಂಗ್‌ ಜತೆ ಅಪಸ್ವರ ತೆಗೆದರು.

‘ಯತ್ನಾಳ ಈ ಹಿಂದೆ ನಮ್ಮ ರಾಷ್ಟ್ರೀಯ ವರಿಷ್ಠರು, ಆರ್‌ಎಸ್‌ಎಸ್‌ ಪ್ರಮುಖರು, ವಿಎಚ್‌ಪಿ ಮುಖಂಡರನ್ನು ವಾಚಾಮಗೋಚರವಾಗಿ ನಿಂದಿಸಿದ್ದಾರೆ. ಎರಡೂ ಜಿಲ್ಲೆಯಲ್ಲಿ ಬಿಜೆಪಿಗೆ ಶಕ್ತಿಯಿರುವುದು ಕಾರ್ಯಕರ್ತರಿಂದ ಹೊರತು ಯಾವೊಬ್ಬ ವ್ಯಕ್ತಿಯಿಂದಲ್ಲ’ ಎಂದು ಮಹಾನಗರ ಪಾಲಿಕೆ ಸದಸ್ಯ, ಮಾಜಿ ಉಪ ಮೇಯರ್‌ ಗೋಪಾಲ ಘಟಕಾಂಬಳೆ ಅರುಣ್‌ಸಿಂಗ್‌ಗೆ ತಿಳಿಸಿದರು.

ಮಾಧ್ಯಮದವರ ಮುಂಭಾಗವೇ ವಿರೋಧ ವ್ಯಕ್ತವಾಗುತ್ತಿದ್ದಂತೆ ಅರುಣ್‌ಸಿಂಗ್‌ ಯತ್ನಾಳ ವಿರೋಧಿ ಗುಂಪಿನ ಸದಸ್ಯರನ್ನು ಹೋಟೆಲ್‌ ಸಭಾಂಗಣದೊಳಗೆ ಕರೆದೊಯ್ದು 15 ನಿಮಿಷಕ್ಕೂ ಹೆಚ್ಚಿನ ಅವಧಿ ಚರ್ಚಿಸಿದರು. ಈ ಸಮಯ ಕೆಲವರು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಪರ ಜೈಕಾರ ಮೊಳಗಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry