ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಳಿದವರ ದಾಹ ನೀಗಿಸುವ ಅರವಟಿಗೆ

ಮಾರ್ಚ್‌ ಆರಂಭದಿಂದಲೇ ವಿಜಯಪುರದಲ್ಲಿ ರಸ್ತೆ ಬದಿ ಕುಡಿಯುವ ನೀರಿನ ಅರವಟಿಗೆ ಸ್ಥಾಪನೆ
Last Updated 26 ಮಾರ್ಚ್ 2018, 6:07 IST
ಅಕ್ಷರ ಗಾತ್ರ

ವಿಜಯಪುರ: ಬೇಸಿಗೆ ಆರಂಭಗೊಂಡಿದೆ. ಕಡು ಬೇಸಿಗೆ ಆರಂಭಗೊಳ್ಳಲು ವಾರವಷ್ಟೇ ಬಾಕಿಯಿದೆ. ಬಾಯಾರಿದವರ ದಾಹ ತೀರಿಸಲು ನಗರದ ವಿವಿಧೆಡೆ ಈಗಾಗಲೇ ಅರವಟಿಗೆ ಕಾರ್ಯಾ ಚರಿಸುತ್ತಿವೆ. ಏಪ್ರಿಲ್‌ನಲ್ಲಿ ಅರವಟಿಗೆ ಆರಂಭಿಸುವವರ ಸಂಖ್ಯೆಯೂ ಸಾಕಷ್ಟಿದೆ.

ಬಿಸಿಲ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮುಂಜಾನೆ 10 ಗಂಟೆ ದಾಟಿದರೆ ಸಾಕು, ಮುಗಿಲಿಂದ ಬೆಂಕಿಯುಗುಳುವಿಕೆ ಆರಂಭಗೊಳ್ಳುತ್ತದೆ. ಗರಿಷ್ಠ ತಾಪಮಾನ ಇದೀಗ 38 ಡಿಗ್ರಿ ಸೆಲ್ಷಿಯಸ್‌ ಆಸುಪಾಸು ದಾಖಲಾಗುತ್ತಿದೆ. ಏಪ್ರಿಲ್‌, ಮೇ ತಿಂಗಳಲ್ಲಿ ಇದು 41–42 ಡಿಗ್ರಿ ಸೆಲ್ಷಿಯಸ್‌ ದಾಖಲಾಗುವ ಸಾಧ್ಯತೆಗಳಿವೆ.

ಸೂರ್ಯನ ಪ್ರಖರ ಕಿರಣಗಳಿಗೆ ಸುಸ್ತಾದ ಜನಸ್ತೋಮ ಮನೆಯಿಂದ ಹೊರ ಹೆಜ್ಜೆಯಿಡಲು ಹಿಂದೆ–ಮುಂದೆ ಆಲೋಚಿಸುವ ಸ್ಥಿತಿ ನಿರ್ಮಾಣಗೊಂಡಿದೆ. ಅನಿವಾರ್ಯ ಕಾರಣಗಳಿಂದ, ತುರ್ತು ಕೆಲಸಕ್ಕಾಗಿ ಮನೆಯಿಂದ ಹೊರ ಬೀಳಬೇಕಾದ ಜನರು ವಿಧಿಯಿಲ್ಲದೆ ನೆತ್ತಿ ಸುಡುವ ಕೆಂಡದಂತಹ ಬಿಸಿಲನ್ನು ಲೆಕ್ಕಿಸದೆ ಅಲೆದಾಡಬೇಕಿದೆ.

ಈ ಅಲೆದಾಟದಲ್ಲಿ ಧಗೆ ತಾಳ ಲಾಗುತ್ತಿಲ್ಲ. ತಾಸಿಗೆ ನಾಲ್ಕೈದು ಬಾರಿ ನೀರು ಕುಡಿದರೂ ಬಾಯಾರಿಕೆ ಇಂಗುತ್ತಿಲ್ಲ. ಬಿಸಿಲ ಝಳದಿಂದ ದೇಹದಲ್ಲಿನ ಉಷ್ಣತೆ ಕಾಪಾಡಿಕೊಳ್ಳಲು ಜನರು ಅನಿವಾರ್ಯವಾಗಿ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯಲು ಪರಿತಪಿಸುವ ದೃಶ್ಯ ನಗರದ ವಿವಿಧೆಡೆ ಗೋಚರಿಸುತ್ತಿವೆ.

ವಿವಿಧ ಕೆಲಸಗಳ ನಿಮಿತ್ತ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಜನರ ಜತೆಗೆ, ಮನೆಯಿಂದ ನಿತ್ಯ ಹೊರ ದುಡಿಯಲು ತೆರಳುವ ನಗರದ ಜನರ ದಣಿವಾರಿಸಲು, ವಿಜಯಪುರದ ವಿವಿಧೆಡೆ ಸಂಘ–ಸಂಸ್ಥೆಗಳು, ಸಮಾಜ ಸೇವಕರು ಅರವಟಿಗೆ ಸ್ಥಾಪಿಸಿ ಕುಡಿಯುವ ನೀರು ಪೂರೈಸುವ ಮಹಾತ್ಕಾರ್ಯದಲ್ಲಿ ನಿರತರಾಗಿದ್ದಾರೆ. ನಗರದ ಜನದಟ್ಟಣೆಯ ಮಹಾತ್ಮಗಾಂಧಿ ರಸ್ತೆಯ ಎರಡ್ಮೂರು ಕಡೆ ಕುಡಿಯುವ ನೀರಿನ ಅರವಟಿಗೆ ಸ್ಥಾಪಿಸಲಾಗಿದೆ. ನಗರ ಬಸ್‌ ನಿಲ್ದಾಣವಿರುವ ಅಂಚೆ ಕಚೇರಿ ಮುಂಭಾಗವೂ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ.

ಇಲ್ಲಿ ಎರಡು ದೊಡ್ಡ ಹರವಿಗಳನ್ನಿಡಲಾಗಿದೆ. ಒಂದೊಂದು ಹರವಿ ತಲಾ ಎರಡೂವರೆ ಕೊಡ ನೀರು ತುಂಬಿಸಿಕೊಳ್ಳಲಿದ್ದು, ಬಜಾರ್‌ಗಾಗಿ ಬರುವ ಬಡ ಮಂದಿಯ ಬಾಯಾರಿಕೆ ಇಂಗಿಸುವಲ್ಲಿ ಈ ಹರವಿಗಳು ಮಹತ್ತರ ಪಾತ್ರ ವಹಿಸುತ್ತಿವೆ ಎನ್ನುತ್ತಾರೆ ಅಶೋಕ ಚವ್ಹಾಣ.

‘ರಾತ್ರಿ 9 ಗಂಟೆಗೆ ಎರಡೂ ಹರವಿಗಳನ್ನು ನಳದ ನೀರಿನಿಂದ ತುಂಬುತ್ತೇವೆ. ಮುಂಜಾನೆಯೊಳಗೆ ನೀರು ತಂಪಿರುತ್ತದೆ. ಬೆಳಿಗ್ಗೆ 9 ಗಂಟೆ ದಾಟುವುದರೊಳಗಾಗಿ ಹರವಿಯ ನೀರು ಖಾಲಿಯಾಗಿರುತ್ತೆ. ತಕ್ಷಣವೇ ಅವನ್ನು ಸ್ವಚ್ಛಗೊಳಿಸಿ ನೀರು ತುಂಬುತ್ತೇವೆ. ಖಾಲಿಯಾದ ತಕ್ಷಣ ಮತ್ತೆ ನೀರು ತುಂಬುತ್ತೇವೆ. ದಶಕದಿಂದಲೂ ನಾವೂ ಮೂವರು ಸ್ನೇಹಿತರು ಒಟ್ಟಾಗಿ ಈ ಕಾರ್ಯ ಮಾಡುತ್ತಿದ್ದೇವೆ’ ಎಂದು ಹಮೀದ್‌ ಕಲಾದಗಿ, ದಾವಲ್‌ ಹೇಳಿದರು.

‘ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ನಗರದ ವಿವಿಧೆಡೆ ಅರವಟಿಗೆ ಸ್ಥಾಪಿಸಲಾಗಿದೆ. ಎಲ್ಲೆಡೆ ಮಡಕೆಯಲ್ಲಿ ನೀರು ತುಂಬಿ, ಪ್ಲಾಸ್ಟಿಕ್‌ ಲೋಟ ಇಟ್ಟಿದ್ದಾರೆ. ಬಿಸಿಲ ಝಳಕ್ಕೆ ಬಾಯಾರಿದವರು ಮನತೃಪ್ತಿಯಾಗುವ ತನಕವೂ ತಣ್ಣನೆ ನೀರು ಕುಡಿಯಬಹುದಾಗಿದೆ.

ಪ್ರತಿ ವರ್ಷವೂ ತಪ್ಪದೇ ಈ ಕಾಯಕವನ್ನು ಕೆಲವರು ಮಾಡುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅರವಟಿಗೆ ಸಂಖ್ಯೆ ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆ. ಕೂಲಿ ಕಾರ್ಮಿಕರು, ಹಳ್ಳಿಗರಿಗೆ ತುಂಬಾ ಪ್ರಯೋಜನಕಾರಿಯಾಗಿವೆ’ ಎಂದು ರವಿ ಮೂಕರ್ತಿಹಾಳ ‘ಪ್ರಜಾವಾಣಿ’ಗೆ ತಿಳಿಸಿದರು.

**

ಕುಡಿಯುವ ನೀರು ಬೇಸಿಗೆಯಲ್ಲಿ ಅತ್ಯಮೂಲ್ಯ. ಇದಕ್ಕಾಗಿ ಹೆಚ್ಚಿನ ಖರ್ಚು ಮಾಡಲ್ಲ. ಸೇವಾ ಮನೋಭಾವವಷ್ಟೇ. ಈ ಕೆಲಸ ಮನತೃಪ್ತಿ ನೀಡಿದೆ.

-ಅಶೋಕ ಚವ್ಹಾಣ, ಅರವಟಿಗೆ ಸ್ಥಾಪಕ

**

ಅರವಟಿಗೆ ಮೂಲಕ ನೀರು ಕೊಡುತ್ತಿರುವುದು ಒಳ್ಳೆಯ ಬೆಳವಣಿಗೆ. ಅದರಲ್ಳೂ ಬಡವರಿಗೆ ಹೆಚ್ಚು ಅನುಕೂಲ ಆಗಿದೆ

-ಸಂತರಾಮಸಿಂಗ್ ರಜಪೂತ, ವಿಜಯಪುರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT