ರಂಗರೂಪಾಂತರದ ಸವಾಲು

7

ರಂಗರೂಪಾಂತರದ ಸವಾಲು

Published:
Updated:
ರಂಗರೂಪಾಂತರದ ಸವಾಲು

ಹೈಸ್ಕೂಲ್‌ ಓದುತ್ತಿರುವಾಗಲೇ ನನಗೆ ನಾಟಕಗಳ ಸೆಳೆತ ಇತ್ತು. ಅದು 1976 ಇರಬೇಕು. ಬಸವರಾಜ ತಿಮ್ಮರಾಜ ದೊಡ್ಡಮನಿ ಎಂಬ ಕನ್ನಡ ಮೇಷ್ಟ್ರು ಇದ್ದರು. ಅವರು ನನ್ನಿಂದ ಒಂದೇ ವರ್ಷದಲ್ಲಿ ಮೂರು ನಾಟಕ ಮಾಡಿಸಿದ್ದರು. ನನ್ನ ತಂದೆ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ನಮ್ಮ ದೊಡ್ಡಪ್ಪ ಹಾಗೂ ಮಾವ ರಾಮಾಯಣ, ಮಹಾಭಾರತವನ್ನು ಪ್ರತಿದಿನ ಓದುತ್ತಾ ಇದ್ದರು. ಇವೆಲ್ಲವೂ ನಾಟಕದ ಕಡೆ ಆಸಕ್ತಿ ಬೆಳೆಯಲು ಪೂರಕವಾದವು.

ನನಗೆ ಕಾದಂಬರಿ, ಕವನ ಬರೆಯಬೇಕೆನ್ನುವ ಆಸೆ ಇತ್ತು. ಒಮ್ಮೆ ಸಿಜಿಕೆ ಜತೆ ಕೆಲಸ ಮಾಡಿದ್ದ ಸ್ವಾಮಿ ಉಮಾಶಂಕರ್‌ ಅವರ ಸೂಚನೆಯಂತೆ ಸ್ಪೇನ್‌ನ ಪ್ರಸಿದ್ಧ ನಾಟಕಕಾರ ಫೆಡೆರಿಕೊ ಗಾರ್ಸಿಯಾ ಲೋರ್ಕಾನ ‘ಎರ್ಮಾ’ ನಾಟಕ ಅನುವಾದ ಮಾಡಿಕೊಟ್ಟೆ. ನಾಟಕದಲ್ಲಿ ಉಮಾಶ್ರೀ ಅಭಿನಯಿಸಿದ್ದರು. ಅದು ಕೇವಲ ಭಾಷಾಂತರವಾಗಿರಲಿಲ್ಲ.

ನಾಟಕವನ್ನು ಆಧಾರವಾಗಿಟ್ಟುಕೊಂಡು ಅಲ್ಲಿನ ಸಾಂಸ್ಕೃತಿಕ ಆಯಾಮ ಮತ್ತು ಅಗತ್ಯಗಳನ್ನು ಅರ್ಥ ಮಾಡಿಕೊಂಡು ಕನ್ನಡಕ್ಕೆ ತಂದಿದ್ದೆ. ಹೀಗೆ ಆರಂಭವಾಯಿತು ನಾಟಕ ರೂಪಾಂತರಿಸುವ ಹುಚ್ಚು. ಕೆಎಸ್‌ಡಿಎಲ್‌ ಚಂದ್ರು ಅವರು ‘ಮಳೆ ಬೀಜ’ ನಾಟಕ ಬರೆದುಕೊಡಲು ಮನವಿ ಮಾಡಿದರು. ಹೀಗೆ ಸಣ್ಣಕಥೆಗಳನ್ನು, ಕಾದಂಬರಿಗಳನ್ನು ನಾಟಕ ಮಾಡುವುದು ಮುಂದುವರಿಯಿತು.

ಕನಕದಾಸರ ‘ಮೋಹನ ತರಂಗಿಣಿ’, ಪಿ.ಲಂಕೇಶರ ‘ಮುಸ್ಸಂಜೆ ಕಥಾ ಪ್ರಸಂಗ, ಡಾ.ಕೆ.ಶಿವರಾಮ ಕಾರಂತರ ‘ಮೈಮನಗಳ ಸುಳಿಯಲ್ಲಿ’, ಶಾಂತರಸರ ‘ಬಡೇಸಾಬು ಪುರಾಣ’, ಡಿ.ಕೆ.ಚೌಟ ಅವರ ‘ಮಿತ್ತಬೈಲು ಯಮುನಕ್ಕ’, ವಸುಧೇಂದ್ರ ಅವರ ‘ಮೋಹನಸ್ವಾಮಿ’ ಸೇರಿದಂತೆ 15 ಪ್ರಮುಖ ಕೃತಿಗಳನ್ನು ರೂಪಾಂತರ ಮಾಡಿದ್ದೇನೆ.

ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತೇನೆ. ಕೃತಿಯನ್ನು ಅನೇಕ ಸಲ ಓದಿಕೊಳ್ಳಬೇಕು. ಒಂದೊಂದು ಸಲ ಓದುವಾಗಲೂ ಮುಖ್ಯ ಅಂಶಗಳನ್ನು ಗುರುತು ಮಾಡಿಕೊಳ್ಳುತ್ತೇನೆ. ನನ್ನ ಗಮನ ಸೆಳೆದ ಸಂಗತಿಗಳನ್ನು ಪ್ರತ್ಯೇಕ ಬಣ್ಣದಲ್ಲಿ ಗುರುತು ಮಾಡಿಕೊಳ್ಳುತ್ತೇನೆ. ಕೃತಿಯನ್ನು ಮೂರನೇ ಬಾರಿ ಓದುವಾಗ ಅದು ರಂಗರೂಪಾಂತರದ ಆಕಾರ ಪಡೆದುಕೊಳ್ಳುತ್ತದೆ.

ಡಿ.ಕೆ. ಚೌಟ ಅವರ ‘ಮಿತ್ತಬೈಲು ಯಮುನಕ್ಕ’ ತುಳು ಕಾದಂಬರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ. ಕಾದಂಬರಿಗೆ ರಂಗರೂಪ ನೀಡುವುದು ಸವಾಲಿನ ಸಂಗತಿ ಎನಿಸಿತ್ತು. 400 ವರ್ಷಗಳ ಇತಿಹಾಸದ ಕಥೆ ಇರುವ ಈ ಕೃತಿಯನ್ನು ನಾಟಕ ರೂಪಾಂತರ ಮಾಡಲು ಆರೇಳು ತಿಂಗಳು ಆಗಲೇ ಇಲ್ಲ. ಅವರೂ ಬಂದು ಕೇಳಲಿಲ್ಲ. ಆಮೇಲೆ ಒಂದು ದಿನ ನಾನೇ ಕರೆ ಮಾಡಿ ‘ಸರ್‌ 200 ವರ್ಷಗಳ ತುಳು ಇತಿಹಾಸ ನಿರಾಕರಿಸಿ ಕೇವಲ ಯಮುನಕ್ಕನ ಮೇಲೆ ಕೇಂದ್ರೀಕರಿಸಿ ನಾಟಕ ಬರೆಯುತ್ತೇನೆ’ ಎಂದೆ. ಅದಕ್ಕೆ ಚೌಟ ‘ನಿಮ್ಮಿಷ್ಟ ಏನು ಬೇಕಾದರೂ ಮಾಡಿ’ ಎಂದರು.

ಆಮೇಲೆ ನನಗೆ ಸುಲಭವಾಯಿತು. ಲಂಕೇಶರ ‘ಮುಸ್ಸಂಜೆಯ ಕಥಾ ಪ್ರಸಂಗ’ ಮಾಡುವಾಗಲೂ ಹಾಗೇ ಆಯಿತು. ಅದರಿಂದ ಏನೇನು ಬಿಡಬೇಕು ಎಂಬುದೇ ದೊಡ್ಡ ಗೊಂದಲ ಎನಿಸಿತ್ತು. ಸಣ್ಣ ಕಥೆಗಳಲ್ಲಾದರೆ ಎರಡು ಮೂರು ದೃಶ್ಯಗಳನ್ನು ನಾವೇ ಪೂರಕವಾಗಿ ಸೃಷ್ಟಿ ಮಾಡಿಕೊಂಡು ಹೋಗಬಹುದು. ಆದರೆ ಕಾದಂಬರಿಗಳ ವಿಚಾರ ಹಾಗಲ್ಲ. ಕಾದಂಬರಿಯನ್ನು ನಾಟಕ ಮಾಡುವುದೇ ಕಷ್ಟದ ಕೆಲಸ. ಬೃಹತ್‌ ಕಾದಂಬರಿಗಳನ್ನು ನಾಟಕ ಮಾಡುವುದು ಇನ್ನೂ ಕಷ್ಟ.

ಬಸವರಾಜ ಸೂಳೇರಿ ಪಾಳ್ಯ

ರಂಗರೂಪಾಂತರ ಕೈಗೆತ್ತಿಕೊಂಡಾಗ ಕಥೆಗಾರರನ್ನು, ಕಾದಂಬರಿಕಾರರನ್ನು ನಾನು ಸಂಪರ್ಕಿಸುವುದೇ ಇಲ್ಲ. ಚರ್ಚೆ ಮಾಡಲೂ ಅವರೊಂದಿಗೆ ಕುಳಿತುಕೊಳ್ಳುವುದಿಲ್ಲ. ಕೃತಿ ಬರೆದವರು ಅವರಿಗೆ ಯಾವುದು ಮುಖ್ಯ ಎನಿಸುತ್ತದೋ ಅದನ್ನು ಹೇಳುತ್ತಾರೆ. ಈವರೆಗೆ ಬರೆದ ಯಾವುದೇ ನಾಟಕಗಳಿಗೆ ಯಾರೂ ಮೂಗು ತೂರಿಸಿಲ್ಲ. ಆಕ್ಷೇಪ ವ್ಯಕ್ತಪಡಿಸಿಲ್ಲ. ಗೌರಿ ಲಂಕೇಶ್‌ ಮಾತ್ರ ಅವರಪ್ಪನ ಕಾದಂಬರಿ ‘ಮುಸ್ಸಂಜೆಯ ಕಥಾ ಪ್ರಸಂಗ’ ನಾಟಕದ ಬಗ್ಗೆ ತುಸು ಆಕ್ಷೇಪದ ದನಿಯಲ್ಲಿ ಮಾತನಾಡಿದ್ದರು.

‘ನಾಟಕ ಇಷ್ಟವಾಯಿತು, ಆದರೆ ತುಂಬಾ ಭಿನ್ನಾಭಿಪ್ರಾಯ ಇದೆ’ ಎನ್ನುವುದು ಅವರ ಆಕ್ಷೇಪವಾಗಿತ್ತು. ಅದಕ್ಕೆ ನಾನು, ‘ನಿಮ್ಮ ಭಿನ್ನಾಭಿಪ್ರಾಯ ಯಾವಾಗಲು ಇರುತ್ತೆ. ಮುಂದೆ ಎಂದಾದರೂ ಮಾತನಾಡೋಣ’ ಎಂದಿದ್ದೆ. ಆದರೆ ಈಗ ಅವರೇ ಇಲ್ಲ. ಇನ್ನು ಭಿನ್ನಾಭಿಪ್ರಾಯದ ಮಾತು ಎಲ್ಲಿಯದು.

ರಂಗಭೂಮಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡವರು ನನ್ನ ರೂಪಾಂತರದ ಬಗ್ಗೆ ಮಾತನಾಡಿದ್ದಾರೆ. ಲಂಕೇಶ್‌ ಹಾಗೂ ಕಾರಂತ ಸೇರಿದಂತೆ ಹಿರಿಯ ಸಾಹಿತಿಗಳ ಮೂಲಕೃತಿಗಳನ್ನು ಓದಿಕೊಂಡು ನನ್ನ ನಾಟಕ ನೋಡಲು ಬಂದಾಗ ಅವರ ನಿರೀಕ್ಷೆಗಳೇ ಬೇರೆ. ಮೂಲಕೃತಿ ಓದದೇ ನಾಟಕ ನೋಡಲು ಬಂದವರ ಅಭಿಪ್ರಾಯವೂ ವಿಭಿನ್ನ. ನಾಟಕ ನೋಡುವುದನ್ನೇ ಹವ್ಯಾಸ ಮಾಡಿಕೊಂಡವರು ಯಾವುದೇ ನಿರೀಕ್ಷೆ ಇಲ್ಲದೆ ಬಂದಿರುತ್ತಾರೆ.

‘ಲಂಕೇಶರು ಈ ವಿಷಯದ ಬಗ್ಗೆ ತುಂಬಾ ಬರೆದಿದ್ದರು. ಆದರೆ ನೀವು ಅನ್ನು ಸಂಪೂರ್ಣವಾಗಿ ಬಿಟ್ಟಿದ್ದೀರಿ’ ಎಂದು ಆಕ್ಷೇಪಿಸುತ್ತಾರೆ.

ಶಾಂತರಸರ ‘ಬಡೇಸಾಬು ಪುರಾಣ’ ಹಿಂದೂ– ಮುಸ್ಲಿಂ ಸಂಬಂಧದ ವಿಷಯ ಹೊಂದಿತ್ತು. ಸಿನಿಮಾ ನಿರ್ದೇಶಕರು ಬಂದು, ‘ಏನೀದು ಹಿಂದೂ ಮುಸ್ಲಿಮರ ಮಧ್ಯೆ ಗಲಾಟೆ ತಂದು ಹಾಕೋದಕ್ಕೆ ನಾಟಕ ಬರೆದಿದ್ದೀರಾ’ ಎಂದರು. ಆದರೆ ನಾಟಕದಲ್ಲಿ ಹಾಗೆ ಇರಲೇ ಇಲ್ಲ. ನಾಟಕದ ಕೊನೆಯಲ್ಲಿ ಪ್ರೇಕ್ಷಕರೆಲ್ಲರೂ ಎದ್ದು ನಿಂತು ಚಪ್ಪಾಳೆ ಹೊಡೆಯುವಂತೆ ಕ್ಲೈಮ್ಯಾಕ್ಸ್‌ ಬರೆದಿದ್ದೆ.

ಇಳಕಲ್‌ನಲ್ಲಿ ‘ಬಡೇಸಾಬು ಪುರಾಣ’ ಪ್ರದರ್ಶನ ನೋಡಿದ ಜನರು ಕಣ್ಣೀರು ಹಾಕಿದ್ದರು. ಅವರ ಬದುಕಿಗೆ ಅದು ಅಷ್ಟು ಹತ್ತಿರ ಎನಿಸಿತ್ತು. ಇಡೀ ದೇಶಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಹೈದರಾಬಾದ್‌ ಕರ್ನಾಟಕಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ.

ರಜಾಕಾರರ ದಾಳಿಯ ಅತಿರೇಕಗಳನ್ನು ಅನುಭವಿಸಿದವರು ಆ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ ನಾಟಕಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry