ರೀಲ್‌ ಹಿಂದಿನ ರಿಯಲ್‌ ಕಥೆ

4

ರೀಲ್‌ ಹಿಂದಿನ ರಿಯಲ್‌ ಕಥೆ

Published:
Updated:
ರೀಲ್‌ ಹಿಂದಿನ ರಿಯಲ್‌ ಕಥೆ

ರಂಗಭೂಮಿಯು ನಟನೆಯ ಪಟ್ಟುಗಳನ್ನಷ್ಟೇ ಅಲ್ಲ, ಬದುಕಿನ ಪಾಠವನ್ನೂ ಹೇಳಿಕೊಡುತ್ತದೆ. ವ್ಯಕ್ತಿತ್ವ ನಿರ್ಮಾಣದ ಪ್ರತಿ ಹಂತದಲ್ಲಿಯೂ ಮನುಷ್ಯನನ್ನು ತಿದ್ದಿ ತೀಡುವ ಸಾಮರ್ಥ್ಯ ರಂಗಭೂಮಿಯದ್ದು. ರಂಗದಲ್ಲಿ ನಟನೆಯ ಹೆಜ್ಜೆಗಳನ್ನಿಟ್ಟು ನಟನಾ ಮಾಧ್ಯಮದಲ್ಲಿ ಮಿಂಚುತ್ತಿರುವ ಕೆಲವರು ರಂಗಭೂಮಿ ಬದುಕು ಕಟ್ಟಿಕೊಳ್ಳಲು ಹೇಗೆಲ್ಲಾ ನೆರವಾಯಿತು ಎಂಬ ಬಗ್ಗೆ ಇಲ್ಲಿ ಮಾತನಾಡಿದ್ದಾರೆ.

ನೂರಾರು ವರ್ಷಗಳಿಂದ ಇದ್ದ ರಂಗಭೂಮಿಯ ಗಟ್ಟಿತನ ಈಚೆಗೆ ಕಡಿಮೆ ಆಗುತ್ತಿದೆ ಎಂಬ ಬೇಸರವೂ ಕೆಲವರ ಮಾತಿನಲ್ಲಿ ವ್ಯಕ್ತವಾಗುತ್ತದೆ. ಧಾರಾವಾಹಿ, ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಳ್ಳಬೇಕು ಎನ್ನುವ ಕಾರಣಕ್ಕೇ ರಂಗಭೂಮಿಯನ್ನು ಅಪ್ಪಿಕೊಳ್ಳುತ್ತಿರುವವರ ಬಗೆಗೆ ತಿರಸ್ಕಾರದ ಭಾವವೂ ಕೆಲವರಲ್ಲಿದೆ. ಇಂದಿನ ರಂಗಭೂಮಿ, ನಟರು ಎನ್ನುವ ಮೆಷಿನ್‌ಗಳನ್ನು ಉತ್ಪಾದಿಸುವ ಕಾರ್ಖಾನೆಯಾಗುತ್ತಿದೆಯೇ ಹೊರತು ಪರಿಪೂರ್ಣ ನಟನನ್ನು ತಯಾರಿಸುತ್ತಿಲ್ಲ ಎನ್ನುವ ವಿಷಾದವೂ ಕೆಲವರದ್ದು.

ಬೆಳೆಸಿದ್ದು ರಂಗಭೂಮಿ

ಇಂದು ನಾನೇನಾಗಿದ್ದೇನೆಯೋ ಅದಕ್ಕೆಲ್ಲಾ ರಂಗಭೂಮಿಯೇ ಮುಖ್ಯ ಕಾರಣ. ನಾನು ರಂಗಭೂಮಿಯ ಮೇಲೆ ಅವಲಂಬಿತನಾಗಿ ಅಲ್ಲಿಂದಲೇ ಬೆಳೆದು ಬಂದವ. ನೀನಾಸಂ ನನಗೆ ನಟನೆಯನ್ನು ಕಲಿಸಿತು. ಜೊತೆಗೆ ಓದುವುದನ್ನು, ಒಳ್ಳೆಯ ಅಭಿರುಚಿಯನ್ನು, ಜಗತ್ತನ್ನು ನೋಡೋದು ಹೇಗೆ ಎಂದು ಹೇಳಿಕೊಟ್ಟಿದೆ. ಒಳ್ಳೆಯ ಶಿಕ್ಷಣ ನೀಡಿದೆ. ನೀನಾಸಂನಲ್ಲಿದ್ದಾಗ ನಾನು ಎಲ್ಲಾ ವಿಭಾಗಗಳಲ್ಲಿಯೂ ಕೆಲಸ ಮಾಡಿದ್ದೇನೆ. ಅದು ನನಗೆ ಆತ್ಮವಿಶ್ವಾಸ ನೀಡಿರುವುದರ ಜೊತೆಗೆ ಉತ್ತಮ ಮಾರ್ಗದಲ್ಲಿ ನಡೆಸಿದೆ. ನಾನು ಇಂದು ಉತ್ತಮ ನಟನೆ ಮಾಡುತ್ತಿದ್ದೇನೆ, ಒಳ್ಳೆಯ ಸಿನಿಮಾಗಳನ್ನು ಆಯ್ದುಕೊಳ್ಳುತ್ತಿದ್ದೇನೆ, ಒಳ್ಳೆಯ ದಾರಿಯಲ್ಲಿ ನಡೆಯುತ್ತಿದ್ದೇನೆ ಎಂದರೆ ಅದಕ್ಕೆಲ್ಲಾ ರಂಗಭೂಮಿಯೇ ಕಾರಣ.‌

– ನೀನಾಸಂ ಸತೀಶ್‌, ನಟ

**

ಇದೊಂದು ಪಾಠಶಾಲೆ

ರಂಗಭೂಮಿ ಒಂದು ಪಾಠಶಾಲೆ. ಶಾಲೆ ಹೇಗೆ ಶಿಕ್ಷಣದ ಪಾಠ ಕಲಿಸುತ್ತದೆಯೋ ಹಾಗೆ ರಂಗಭೂಮಿ ನಟನೆ ಹಾಗೂ ಬದುಕಿನ ಪಾಠವನ್ನು ಹೇಳಿಕೊಡುತ್ತದೆ. ನನ್ನ ಸಾಧನೆಗೆ ಮುನ್ನುಡಿ ಹಾಕಿದ ರಂಗಭೂಮಿಯೇ ನನಗೆ ಇಂದಿಗೂ ಅಚ್ಚುಮೆಚ್ಚು. ನಾಲ್ಕನೇ ತರಗತಿಯವರೆಗೆ ಮಾತ್ರ ನಾನು ಕಲಿತಿದ್ದು. ಆದರೂ ಬದುಕಿನಲ್ಲಿ ಸಾಧನೆ ಮಾಡುವ ಆತ್ಮಸ್ಥೈರ್ಯ ತುಂಬಿದ್ದು, ಕಷ್ಟಕಾಲದಲ್ಲಿ ಕೈಹಿಡಿದದ್ದು, ಈ ಮಟ್ಟಕ್ಕೆ ಬೆಳೆಸಿದ್ದು ಎಲ್ಲವೂ ರಂಗಭೂಮಿಯೇ. ಇಲ್ಲಿ ನಟನೆಯ ಪಟ್ಟುಗಳನ್ನು ಕಲಿತೆ. ರಂಗಭೂಮಿಯಿಂದ ನಾನೂ ಬೆಳೆದ, ನನ್ನನ್ನು ನಂಬಿದ ಅನೇಕರೂ ಬೆಳೆದರು. ರಂಗಭೂಮಿಯ ಸಂಪಾದನೆಯಿಂದಾಗಿಯೇ ನನ್ನ ಮನೆಯ ಅನೇಕರು ಉತ್ತಮ ಶಿಕ್ಷಣ ಪಡೆದು ಉದ್ಯೋಗಸ್ಥರಾದರು. ಸಿನಿಮಾ ಧಾರಾವಾಹಿ ರೀಲ್‌, ಆದರೆ ರಂಗಭೂಮಿ ಎಂದಿಗಿದ್ದರೂ ರಿಯಲ್‌. ಇಲ್ಲಿ ಕಲಿಯುವ ಪಾಠಗಳು ಜೀವನದುದ್ದಕ್ಕೂ ಸಹಾಯಕ್ಕೆ ಬರುತ್ತವೆ. ಜೊತೆಗೆ ಅವಕಾಶಗಳ ಬಾಗಿಲೂ ತೆರೆಯುತ್ತವೆ.

–ಮಾಲತಿಶ್ರೀ ಮೈಸೂರು, ವೃತ್ತಿರಂಗಭೂಮಿ ಕಲಾವಿದೆ

**

ಶಿಸ್ತು ಕಲಿಸುತ್ತೆ ರಂಗಭೂಮಿ

ನನ್ನ ಮಟ್ಟಿಗೆ ರಂಗಭೂಮಿ ಸದಾ ಶ್ರೇಷ್ಠ. ಕಥೆ ಹೇಳುವ ಉತ್ಸಾಹವನ್ನು, ಅರ್ಥ ಹುಡುಕುವ ಬದ್ಧತೆ ಮತ್ತು ಶಿಸ್ತನ್ನು ಕಲಿಸುತ್ತದೆ. ಮುಕ್ತವಾಗಿ ಆಲೋಚಿಸುವ, ಪ್ರಶ್ನಿಸುವ ಧೈರ್ಯ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ರಂಗಭೂಮಿಯನ್ನು ಬೇರೆ ಕ್ಷೇತ್ರಗಳಲ್ಲಿ ಮಿಂಚಲು ಬೇಕಾದ ಚಿಮ್ಮು ಹಲಗೆಯಂತೆ ಬಳಸಿಕೊಳ್ಳುತ್ತಾರೆ. ಇದು ನಿಲ್ಲಬೇಕು. ರಂಗಭೂಮಿಯ ಮೇಲೆ ನಿಜವಾದ ಒಲವಿಟ್ಟುಕೊಳ್ಳುವವರ ಸಂಖ್ಯೆ ಹೆಚ್ಚಾಗಬೇಕು.

– ಎಂ.ಡಿ.ಪಲ್ಲವಿ, ಗಾಯಕಿಎಂ.ಡಿ.ಪಲ್ಲವಿ

**

ಪರಿಪೂರ್ಣ ಹಾಗೂ ಪರಿಪಕ್ವ

ನನ್ನ ಪ್ರಕಾರ ರಂಗಭೂಮಿಯಲ್ಲಿ ತರಬೇತಿ ಪಡೆದ ಕಲಾವಿದ ಯಾವುದೇ ಕ್ಷೇತ್ರಕ್ಕೆ ಹೋಗಲಿ ವಿಶಿಷ್ಟವಾದ ಛಾಪನ್ನು ಮೂಡಿಸುವ ಸಾಮರ್ಥ್ಯ ಪಡೆದುಕೊಳ್ಳುತ್ತಾನೆ. ರಂಗಭೂಮಿ ಯಾವತ್ತಿದ್ದರೂ ಜೀವಂತ ಕಲೆ. ಧೈರ್ಯ, ಸಂಯಮ, ಪ್ರತಿಭೆ, ಮಾತನಾಡುವ ಕಲೆ, ಭಾಷಾ ಶುದ್ಧಿ, ವಿವಿಧ ವಿಷಯಗಳನ್ನು ಅರ್ಥೈಸಿಕೊಂಡು ನೆನಪಿಟ್ಟುಕೊಳ್ಳುವ ಸಾಮರ್ಥ್ಯ, ತಾಳ್ಮೆ ಹೆಚ್ಚಿಸುತ್ತದೆ. ಹೀಗಾಗಿಯೇ ಟಿವಿ, ಸೀರಿಯಲ್‌ ಅಥವಾ ಯಾವುದೇ ಕ್ಷೇತ್ರಕ್ಕೇ ಹೋಗಲಿ ರಂಗಭೂಮಿ ನಟ ಬಹುಬೇಗನೆ ಸೈ ಎನಿಸಿಕೊಳ್ಳುತ್ತಾನೆ. ಅದ್ಭುತ ನಟರಾಗುವ ಜೊತೆಗೆ ಸುದೀರ್ಘ ಕಾಲ ಅಸ್ತಿತ್ವ ಕಂಡುಕೊಳ್ಳುವ ಸಾಮರ್ಥ್ಯ ಬಂದಿರುತ್ತದೆ.

ರಾಜಕುಮಾರ್, ನರಸಿಂಹರಾಜು, ಬಾಲಕೃಷ್ಣ, ಉದಯ್‌ಕುಮಾರ್‌ ಮುಂತಾದ ನೂರಾರು ಪ್ರಖ್ಯಾತರು ಬಂದಿದ್ದು ರಂಗಭೂಮಿ ಹಿನ್ನೆಲೆಯಿಂದಲೇ. ರಂಗಭೂಮಿ ವ್ಯಕ್ತಿಯನ್ನು ಎಲ್ಲಾ ವಿಷಯಗಳಿಂದಲೂ ಪರಿಪೂರ್ಣ ಹಾಗೂ ಪರಿಪಕ್ವವಾಗಿಸುವುದರ ಜೊತೆಗೆ ಜ್ಞಾನವಂತನಾಗುತ್ತಾನೆ. ಜಾತ್ಯತೀತ ಸಾಂಸ್ಕೃತಿಕ ಕ್ಷೇತ್ರ ರಂಗಭೂಮಿ ಎನ್ನುವ ಕಾರಣಕ್ಕೆ ನನಗೆ ಹೆಚ್ಚು ಮೆಚ್ಚು. ಇಲ್ಲಿ ಯಾರು ಬೇಕಾದರೂ ಯಾವ ಪಾತ್ರವನ್ನು ಬೇಕಾದರೂ ಮಾಡಬಹುದು. ಹೀಗಾಗಿ ಎಲ್ಲಾ ವ್ಯಕ್ತಿತ್ವ, ಜಾತಿಯ ಸಂಸ್ಕಾರ ನಟನಿಗಾಗುತ್ತದೆ. ಯಾರ ನಡುವೆಯೂ ಭೇದ ಭಾವ ಇಲ್ಲ. ಹೀಗಾಗಿ ರಂಗಭೂಮಿ ಎಂದಿಗಿದ್ದರೂ ಶ್ರೇಷ್ಠ.

ಇಂದಿಗೂ ನನ್ನ ಮನಸಿಗೆ ತೃಪ್ತಿ ನೀಡುವುದು ರಂಗದ ಮೇಲೇರಿ ನಾಟಕ ಮಾಡಿದಾಗಲೇ. ಕಿವಿಗಪ್ಪಳಿಸುವ ಚಪ್ಪಾಳೆ ಸದ್ದಿನ ಆನಂದದ ಮುಂದೆ ಇನ್ಯಾವುದೂ ಇಲ್ಲ. ಸಿನಿಮಾದಲ್ಲಿ ಸಿಕ್ಕಾಪಟ್ಟೆ ಹಣ ಸಿಗುತ್ತದೆ ತೃಪ್ತಿ ಇರುವುದಿಲ್ಲ. ಧಾರಾವಾಹಿಗಳಲ್ಲಿ ಅಭಿನಯಿಸುತ್ತೇನೆ ಜನರ ಪ್ರೀತಿಯಿಂದಾಗಿ. ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೂ ತಿಂಗಳಿಗೆ ಎರಡಾದರೂ ನಾಟಕ ಮಾಡಿದರೇ ನನ್ನ ಮನಸಿಗೆ ಸಮಾಧಾನ ಆಗೋದು.

– ಮುಖ್ಯಮಂತ್ರಿ ಚಂದ್ರು, ನಟ

**


ವ್ಯಕ್ತಿತ್ವ ವಿಕಸನದ ತಳಪಾಯ

ರಂಗಭೂಮಿ ನಟನಾ ಕ್ಷೇತ್ರವಷ್ಟೇ ಅಲ್ಲ, ಯಾವುದೇ ಕ್ಷೇತ್ರದಲ್ಲಿ ಸಮರ್ಥವಾಗಿ ತೊಡಗಿಕೊಳ್ಳಲು ರಂಗಭೂಮಿ ಭದ್ರ ಬುನಾದಿ ಹಾಕಿಕೊಡುತ್ತದೆ. ನಟನೆಯ ದೃಷ್ಟಿಯಿಂದಷ್ಟೇ ಅಲ್ಲ, ಮನೋವಿಕಾಸಕ್ಕೆ ಈ ಕ್ಷೇತ್ರ ಅತ್ಯುತ್ತಮ. ಇಂದಿನ ಮಕ್ಕಳು ಮೊಬೈಲ್‌, ಟೀವಿಯಲ್ಲಿಯೇ ಕಳೆದುಹೋಗುತ್ತಿದ್ದಾರೆ. ಆದರೆ ಅವರನ್ನು ರಂಗಭೂಮಿಯಲ್ಲಿ ತೊಡಗಿಸಿದರೆ ಬದುಕಿಗೆ ಬೇಕಾದ ಜೀವನಪಾಠವನ್ನು ಕಲಿತುಕೊಳ್ಳುತ್ತಾರೆ.ಸಂಚಾರಿ ವಿಜಯ್‌

ರಂಗಭೂಮಿ ಶ್ರದ್ಧೆಯ ಜೊತೆ ಬದ್ಧತೆಯನ್ನೂ ಕಲಿಸುತ್ತದೆ. ಉತ್ತಮ ವ್ಯಕ್ತಿತ್ವವನ್ನು ನೀಡುತ್ತದೆ. ಇನ್ನು ನಟನೆಯ ವಿಷಯಕ್ಕೆ ಬಂದರೆ ಪರಿಪೂರ್ಣ ನಟನನ್ನಾಗಿ ರೂಪಿಸುತ್ತದೆ. ರಂಗಭೂಮಿಯಲ್ಲಿ ಕಲಿತವರು ತಾವು ಯಾವುದೇ ಕ್ಷೇತ್ರಕ್ಕೆ ಹೋದರೂ ಉನ್ನತಿಯನ್ನು ಕಂಡೇ ಕಾಣುತ್ತಾರೆ.

– ಸಂಚಾರಿ ವಿಜಯ್‌, ನಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry