ಎನ್‌ಐಎ ತನಿಖೆಗೆ ಹೈಕೋರ್ಟ್‌ ಅಸ್ತು

7
ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್‌ ಕೊಲೆ ಪ್ರಕರಣ

ಎನ್‌ಐಎ ತನಿಖೆಗೆ ಹೈಕೋರ್ಟ್‌ ಅಸ್ತು

Published:
Updated:

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತನಿಖೆ ಮುಂದುವರಿಸಲು ಹೈಕೋರ್ಟ್ ಅಸ್ತು ಎಂದಿದೆ.

ಎನ್‌ಐಎ ತನಿಖೆ ನಡೆಸುವಂತೆ ಕೇಂದ್ರ ಗೃಹ ಇಲಾಖೆ 2016ರ ಫೆಬ್ರುವರಿ 7ರಂದು ಹೊರಡಿಸಿದ್ದ ಆದೇಶವನ್ನು ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.

ಈ ಮೇಲ್ಮನವಿಯನ್ನು ಎಚ್.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದೆ. ಈ ಕುರಿತಂತೆ ಕಾಯ್ದಿರಿಸಿದ್ದ ತೀರ್ಪನ್ನು ಸೋಮವಾರ ಪ್ರಕಟಿಸಿದೆ.

‘ಕ್ರಿಮಿನಲ್‌ ಪ್ರಕರಣದಲ್ಲಿ ಯಾವ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂದು ಹೇಳುವ ಹಕ್ಕು ಆರೋಪಿಗೆ ಇಲ್ಲ. ಅದು ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. ಈ ಪ್ರಕರಣ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದು ಎಂಬ ಕೇಂದ್ರ ಸರ್ಕಾರದ ವಾದ ಗಂಭೀರ ಅಂಶ. ಆದ್ದರಿಂದ ಎನ್‌ಐಎ ತನಿಖೆ ನಡೆಸುವುದು ಸೂಕ್ತವಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಉಗ್ರರ ನಂಟು:

‘ಆರೋಪಿಗಳು ಪಾಪ್ಯುಲರ್ ಫ್ರಂಟ್ ಆಫ್‌ ಇಂಡಿಯಾ ಹಾಗೂ ಸೋಷಿಯಲ್ ಡೆಮಾಕ್ರಟಿಕ್‌ ಪಾರ್ಟಿ ಆಫ್ ಇಂಡಿಯಾ ಸಂಘಟನೆಯ ನಾಯಕರಾಗಿದ್ದಾರೆ. ಈ ಸಂಘಟನೆಗಳು ಅಂತರರಾಷ್ಟ್ರೀಯ ಉಗ್ರರ ಸಂಘಟನೆ ಜೊತೆ ನಂಟು ಹೊಂದಿವೆ’ ಎಂಬ ಹೆಚ್ಚುವರಿ ಸಾಲಿಸಿಟರ್ ಜನರಲ್‌ ಪ್ರಭುಲಿಂಗ ಕೆ.ನಾವದಗಿ ವಾದವನ್ನು ನ್ಯಾಯಪೀಠ ಎತ್ತಿಹಿಡಿದಿದೆ.

ಆಕ್ಷೇಪಣೆ ಏನಿತ್ತು?:

’ಎನ್‌ಐಎ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಅಂತಹ ಪ್ರಕರಣ ಅಕ್ರಮ ಕೂಟ ಕಾಯ್ದೆ–1967ರ ಅನುಸಾರ ಅದರಲ್ಲಿನ ಷೆಡ್ಯೂಲ್ಡ್‌ (ಪಟ್ಟಿ ಮಾಡಲಾಗಿರುವ) ಅಪರಾಧ ಪ್ರಕರಣ ಸ್ವರೂಪ ಹೊಂದಿರಬೇಕು. ಆದರೆ ಇದೊಂದು ಕೊಲೆ ಪ್ರಕರಣ. ಸುಮ್ಮನೇ ಇದಕ್ಕೆ ಭಯೋತ್ಪಾದಕರ ಬಣ್ಣ ಕಟ್ಟಲಾಗಿದೆ’ ಎಂದು ಆಕ್ಷೇಪಿಸಿ ಆರೋಪಿಗಳಾದ ಅಸೀಂ ಶರೀಫ್‌, ಇರ್ಫಾನ್‌ ಪಾಷ, ವಸೀಂ ಅಹಮದ್‌, ಮೊಹಮದ್‌ ಸಾದಿಕ್‌, ಮೊಹಮದ್‌ ಮುಜೀಬುಲ್ಲಾ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಶಿವಾಜಿ ನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿನ ಶ್ರೀನಿವಾಸ ಮೆಡಿಕಲ್‌ ಸ್ಟೋರ್ ಎದುರು ತನ್ನ ಸ್ನೇಹಿತರ ಜತೆ ನಿಂತಿದ್ದ ರುದ್ರೇಶ್‌ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಆಸಾಮಿಗಳು ಕೊಲೆ ಮಾಡಿದ್ದರು. ಈ ಘಟನೆ 2016ರ ಅಕ್ಟೋಬರ್ 16ರಂದು ಬೆಳಿಗ್ಗೆ 9 ಗಂಟೆ ಸುಮಾರು ನಡೆದಿತ್ತು.

ಎನ್‌ಐಎ ಪರ ಪಿ.ಪ್ರಸನ್ನ ಕುಮಾರ್ ವಕಾಲತ್ತು ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry