‘ನೌಕರಿ.ಕಾಮ್‌’ ಸರ್ವರ್‌ಗೆ ಕನ್ನ: ರೆಸ್ಯುಮೆ ಕಳವು

7

‘ನೌಕರಿ.ಕಾಮ್‌’ ಸರ್ವರ್‌ಗೆ ಕನ್ನ: ರೆಸ್ಯುಮೆ ಕಳವು

Published:
Updated:
‘ನೌಕರಿ.ಕಾಮ್‌’ ಸರ್ವರ್‌ಗೆ ಕನ್ನ: ರೆಸ್ಯುಮೆ ಕಳವು

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವ ನೀವೇನಾದರೂ ಜಾಲತಾಣಗಳಲ್ಲಿ ‘ರೆಸ್ಯುಮೆ’ ಅಪ್‌ಲೋಡ್‌ ಮಾಡಿದ್ದೀರಾ? ಅವುಗಳು ದುರುಪಯೋಗವಾಗುವ ಸಾಧ್ಯತೆಯೂ ಇದೆ. ಏಕೆಂದರೆ, ನೈಜೀರಿಯಾದ ಆನ್‌ಲೈನ್‌ ಖದೀಮರು ಜಾಲತಾಣಗಳ ಸರ್ವರ್‌ಗಳನ್ನು ಹ್ಯಾಕ್‌ ಮಾಡಿ ರೆಸ್ಯುಮೆಗಳನ್ನೂ ಕದಿಯುತ್ತಿದ್ದಾರೆ.

‘ನೌಕರಿ ಡಾಟ್ ಕಾಮ್‌’ (www.naukri.com) ಜಾಲತಾಣದ ಸರ್ವರ್‌ ಹ್ಯಾಕ್‌ ಮಾಡಿರುವ ಖದೀಮರು, ಅದರಲ್ಲಿದ್ದ 1 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳ ರೆಸ್ಯುಮೆಗಳನ್ನು ಕದ್ದಿದ್ದಾರೆ.

ಸರ್ವರ್‌ ನಿರ್ವಹಣೆ ಮಾಡುತ್ತಿರುವ ‘ಕ್ಲಾಸ್‌ (klaus) ಐಟಿ ಸಲ್ಯೂಷನ್ಸ್‌’ ಕಂಪನಿಯ ಪ್ರತಿನಿಧಿ, ಈ ಹ್ಯಾಕಿಂಗ್‌ ಬಗ್ಗೆ ಸಿಐಡಿ ಸೈಬರ್‌ ವಿಭಾಗಕ್ಕೆ ದೂರು ನೀಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಆ ಜಾಲತಾಣದ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ. ಮಾಹಿತಿ ಸೋರಿಕೆ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

‘ಸರ್ವರ್‌ ನಿರ್ವಹಣೆ ಮಾಡುವ ಜವಾಬ್ದಾರಿಯನ್ನು ‘ನೌಕರಿ ಡಾಟ್ ಕಾಮ್‌’ ಜಾಲತಾಣವು ನಮಗೆ ವಹಿಸಿದೆ. ವೆಬ್‌ಸೈಟ್‌ ಜಾಲಾಡುವ ಅಭ್ಯರ್ಥಿಗಳು, ಸೂಕ್ತ ಉದ್ಯೋಗಕ್ಕಾಗಿ ರೆಸ್ಯುಮೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಅವೆಲ್ಲವೂ ಈ ಸರ್ವರ್‌ನಲ್ಲಿ ಶೇಖರಣೆಯಾಗುತ್ತವೆ’ ಎಂದು ಕ್ಲಾಸ್‌ ಐಟಿ ಸಲ್ಯೂಷನ್ಸ್‌ನ ಪ್ರತಿನಿಧಿ ದೂರಿನಲ್ಲಿ ತಿಳಿಸಿದ್ದಾರೆ.

‘ಅಪ್‌ಲೋಡ್‌ ಆದ ಒಂದು ದಾಖಲೆಯ ನಿರ್ವಹಣೆಗೆ ₹3ರಿಂದ ₹5 ತೆಗೆದುಕೊಳ್ಳುತ್ತೇವೆ. ಇದೇ ಮೊದಲ ಬಾರಿಗೆ ಸರ್ವರ್‌ ಹ್ಯಾಕ್‌ ಆಗಿದೆ. ಅದು ಗಮನಕ್ಕೆ ಬರುತ್ತಿದ್ದಂತೆ, ಸರ್ವರ್‌ನಲ್ಲಿದ್ದ ದಾಖಲೆಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದೇವೆ. ಅಷ್ಟಾದರೂ ಲಕ್ಷದಷ್ಟು ರೆಸ್ಯುಮೆಗಳ ಮಾಹಿತಿ ಸೋರಿಕೆಯಾಗಿದೆ’ ಎಂದಿದ್ದಾರೆ.

ಐ.ಪಿ ವಿಳಾಸ ನೈಜೀರಿಯಾದ್ದು: ‘ಹ್ಯಾಕ್‌ ಆಗಿದ್ದ ಸರ್ವರ್ ಪರಿಶೀಲನೆ ನಡೆಸಿದ್ದೆವು. ಕೃತ್ಯಕ್ಕೆ ಲ್ಯಾಪ್‌ಟಾಪ್‌ ಬಳಸಲಾಗಿದ್ದು, ಅದರ ಇಂಟರ್‌ನೆಟ್‌ ಪ್ರೊಟೊಕಾಲ್ (ಐ.ಪಿ) ವಿಳಾಸ ನೈಜೀರಿಯಾದ್ದು ಎಂಬುದು ಗೊತ್ತಾಗಿದೆ. ಅಲ್ಲಿಂದಲೇ ಖದೀಮರು, ಈ ಕೃತ್ಯ ಎಸಗಿರುವ ಅನುಮಾನವಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಐಡಿ ಸೈಬರ್‌ ವಿಭಾಗದ ಅಧಿಕಾರಿ ತಿಳಿಸಿದರು.

ಜಾಲತಾಣದಲ್ಲಿ ‘ನ್ಯೂ ಟು ನೌಕರಿ’ ಎಂಬ ಆಯ್ಕೆ ಇದೆ. ಅಲ್ಲಿ ಗರಿಷ್ಠ 2 ಎಂ.ಬಿ ಗಾತ್ರದ ರೆಸ್ಯುಮೆ ಅಪ್‌ಲೋಡ್‌ ಮಾಡುತ್ತಿದ್ದಂತೆ, ಅದು ಸರ್ವರ್‌ಗೆ ಬರುತ್ತದೆ. ‘ಕ್ಲಾಸ್‌ ಐಟಿ ಸಲ್ಯೂಷನ್ಸ್‌’ ಕಂಪನಿ ಮೂಲಕ ಆ ರೆಸ್ಯುಮೆ ಪಡೆದುಕೊಳ್ಳುವ ನೌಕರಿ.ಕಾಮ್‌ ಪ್ರತಿನಿಧಿಗಳು, ಕಾಲಕಾಲಕ್ಕೆ ಆ ಅಭ್ಯರ್ಥಿಗಳಿಗೆ ಉದ್ಯೋಗದ ಮಾಹಿತಿ ನೀಡುತ್ತಾರೆ.

ಇದರ ಅಪ್‌ಲೋಡ್‌ ಪ್ರಕ್ರಿಯೆಯಲ್ಲಿ ಕಂಪನಿ ಸಿಬ್ಬಂದಿ ಹಸ್ತಕ್ಷೇಪ ಮಾಡಲು ಆಗುವುದಿಲ್ಲ. ಆದರೆ, ಸರ್ವರ್‌ನಲ್ಲಿ ಏನಾದರೂ ಸಮಸ್ಯೆಯಾದರೆ ಮಾತ್ರ ಅವರು ದುರಸ್ತಿ ಮಾಡುತ್ತಾರೆ. ಆರಂಭದಲ್ಲಿ ಜಾಲತಾಣದ ಹೈಪರ್‌ಟೆಕ್ಸ್ಟ್‌ ಮಾರ್ಕಪ್‌ ಲಾಂಗ್ವೇಜ್‌ (ಎಚ್‌ಟಿಎಂಎಲ್) ಕೋಡ್‌ ಕದ್ದ ಖದೀಮರು, ನಂತರ ಸರ್ವರ್‌ಗೆ ಲಗ್ಗೆ ಇಟ್ಟಿದ್ದಾರೆ. ನಂತರ, ಮೂರೇ ದಿನದಲ್ಲಿ 1 ಲಕ್ಷ ರೆಸ್ಯುಮೆಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಇ–ಮೇಲ್‌ ಕಳುಹಿಸಿ ಹಣ ವಸೂಲಿ: ಕದ್ದ ರೆಸ್ಯುಮೆನಲ್ಲಿರುವ ಮಾಹಿತಿ ಬಳಸಿ ಖದೀಮರು, ಹೆಸರಾಂತ ಕಂಪನಿ ಪ್ರತಿನಿಧಿಗಳ ಸೋಗಿನಲ್ಲಿ ಅಭ್ಯರ್ಥಿಗಳಿಗೆ ಕರೆ ಮಾಡುತ್ತಿದ್ದಾರೆ. ಅವರಿಂದ ಹಣ ವಸೂಲಿ ಮಾಡಿರುವ ಪ್ರಕರಣಗಳೂ ದಾಖಲಾಗಿವೆ.

‘ವಿಪ್ರೊ, ಬಾಷ್‌, ಏರ್‌ಟೆಲ್,  ಅಕ್ಸೆಂಚರ್ ಸೇರಿದಂತೆ ಹಲವು ಬಹುರಾಷ್ಟ್ರೀಯ ಕಂಪ‍ನಿಗಳ ಹೆಸರಿನಲ್ಲಿ ಬಹುಪಾಲು ಅಭ್ಯರ್ಥಿಗಳ ಇ–ಮೇಲ್‌ಗೆ ಉದ್ಯೋಗ ಪತ್ರಗಳು ಬರುತ್ತಿವೆ. ಅದಕ್ಕೆ ಪ್ರತಿಕ್ರಿಯಿಸಿದರೆ, ನೋಂದಣಿ ಶುಲ್ಕ ಕೇಳಲಾಗುತ್ತಿದೆ. ಉದ್ಯೋಗ ಸಿಗುವ ನಿರೀಕ್ಷೆಯಲ್ಲಿ 10 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು, ಆರೋಪಿಗಳು ಸೂಚಿಸಿದ್ದ ಬ್ಯಾಂಕ್‌ ಖಾತೆಗೆ ಹಣ ಜಮೆ ಮಾಡಿ ಮೋಸ ಹೋಗಿದ್ದಾರೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಾಹಿತಿ ಬಂದ ನಂತರವೇ ಎಫ್‌ಐಆರ್‌

‘ಕ್ಲಾಸ್‌ ಐಟಿ ಸಲ್ಯೂಷನ್ಸ್‌’ ಕಂಪನಿಯ ಪ್ರತಿನಿಧಿಯು ಮೂರನೇ ವ್ಯಕ್ತಿಯಾಗಿದ್ದು, ಅವರು ದೂರು ನೀಡಿದ ಮಾತ್ರಕ್ಕೆ ಎಫ್‌ಐಆರ್‌ ದಾಖಲಿಸಿಕೊಳ್ಳಲು ಬರುವುದಿಲ್ಲ. ‘ನೌಕರಿ.ಕಾಮ್‌’ ಜಾಲತಾಣದ ಮುಖ್ಯಸ್ಥರು ಮಾಹಿತಿ ನೀಡಿದ ನಂತರವೇ ಎಫ್‌ಐಆರ್‌ ದಾಖಲಿಸಿಕೊಳ್ಳಲಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದರು.

‘ದೂರಿನಲ್ಲಿ ನಿಜಾಂಶವಿರುವುದು ತನಿಖೆಯಿಂದ ಗೊತ್ತಾಗಿದೆ. ಆದರೆ, ಹ್ಯಾಕಿಂಗ್‌ ಆಗಿರುವ ಕುರಿತ ಮಾಹಿತಿಯನ್ನು ಜಾಲತಾಣದವರು ಇದುವರೆಗೂ ಬಹಿರಂಗಪಡಿಸಿಲ್ಲ. ನಾವು ಬರೆದಿರುವ ಪತ್ರಕ್ಕೆ ಪ್ರತಿಕ್ರಿಯೆ ಬಾರದಿದ್ದರೆ, ಸಿಬ್ಬಂದಿಯನ್ನೇ ಮುಂಬೈಗೆ ಕಳುಹಿಸಲಿದ್ದೇವೆ‘ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry