ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಲ್ಸ್‌ ನಾಯಕತ್ವ ತೊರೆದ ಸ್ಮಿತ್

ಸನ್‌ರೈಸರ್ಸ್ ಹೈದರಾಬಾದ್‌ ತಂಡದಲ್ಲಿರುವ ವಾರ್ನರ್ ಭವಿಷ್ಯ ಅತಂತ್ರ
Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಚೆಂಡು ವಿರೂಪಗೊಳಿಸಿದ ಪ್ರಕರಣದ ರೂವಾರಿ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟೀವ್ ಸ್ಮಿತ್ ಐಪಿಎಲ್‌ನಲ್ಲಿ ಆಡುವ ರಾಜಸ್ತಾನ ರಾಯಲ್ಸ್‌ ತಂಡದ ನಾಯಕ ಸ್ಥಾನವನ್ನು ತೊರೆದಿದ್ದಾರೆ. ಅಜಿಂಕ್ಯ ರಹಾನೆ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗಿದೆ.

ಕೇಪ್‌ಟೌನ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೂರನೇ ಟೆಸ್ಟ್ ಕ್ರಿಕೆಟ್‌ ಪಂದ್ಯದ ಮೂರನೇ ದಿನ ಆಸ್ಟ್ರೇಲಿಯಾ ತಂಡದ ಕ್ಯಾಮ
ರಾನ್ ಬ್ಯಾಂಕ್ರಾಫ್ಟ್‌ ಚೆಂಡು ವಿರೂಪ ಗೊಳಿಸಿದ್ದರು. ದಿನದಾಟದ ನಂತರ ಪತ್ರಿಕಾ ಗೋಷ್ಠಿಯಲ್ಲಿ ಇದನ್ನು ಒಪ್ಪಿ ಕೊಂಡಿದ್ದ ನಾಯಕ ಸ್ಮಿತ್ ತಂಡದ ಸದಸ್ಯರೆ ಲ್ಲರೂ ಚರ್ಚಿಸಿ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದರು.

ಹೀಗಾಗಿ ಅವರನ್ನು ಮತ್ತು ಉಪ ನಾಯಕ ಡೇವಿಡ್‌ ವಾರ್ನರ್‌ ಅವರನ್ನು ತಮ್ಮ ಸ್ಥಾನಗಳಿಂದ ಕ್ರಿಕೆಟ್‌ ಆಸ್ಟ್ರೇಲಿಯಾ (ಸಿಎ) ವಜಾಗೊಳಿಸಿತ್ತು.

ಪ್ರಕರಣವನ್ನು ಗಂಭೀರವಾಗಿ ಪರಿಗ ಣಿಸಿದ್ದ ಐಸಿಸಿ, ಸ್ಮಿತ್ ಮೇಲೆ ಒಂದು ಟೆಸ್ಟ್ ಪಂದ್ಯದ ನಿಷೇಧ ಹೇರಿತ್ತು.

ಪಂದ್ಯ ಶುಲ್ಕದ ಶೇ ನೂರರಷ್ಟು ದಂಡ ಹೇರಿತ್ತು. ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ ಅವರ ಪಂದ್ಯ ಶುಲ್ಕದ ಶೇ 75ರಷ್ಟು ದಂಡ ಹೇರಿತ್ತು.

ವಾರ್ನರ್ ಭವಿಷ್ಯ ಅತಂತ್ರ: ಸನ್‌ರೈಸರ್ಸ್‌ ಹೈದರಾಬಾದ್ ತಂಡದಲ್ಲಿರುವ ಡೇವಿಡ್ ವಾರ್ನರ್ ಅವರ ಭವಿಷ್ಯವೂ ಅತಂತ್ರವಾಗಿದೆ.

ವಾರ್ನರ್‌ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ಕೈಗೊಳ್ಳುವ ಅಂತಿಮ ನಿರ್ಧಾರದ ನಂತರ ತಂಡದಲ್ಲಿ ಅವರ ಭವಿಷ್ಯದ ಕುರಿತು ತೀರ್ಮಾನಿಸಲಾಗುವುದು ಎಂದು ಸನ್‌ರೈಸರ್ಸ್‌ ತಂಡದ ಸಲಹೆಗಾರ ವಿ.ವಿ.ಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ತಂಡದ ಮೇಲೆ ಗಂಭೀರ ಪರಿಣಾಮ ಸಾಧ್ಯತೆ
ಮುಂಬೈ (ರಾಯಿಟರ್ಸ್‌):
ಚೆಂಡು ವಿರೂಪಗೊಳಿಸಿದ ಪ್ರಕರಣ ಆಸ್ಟ್ರೇಲಿಯಾ ತಂಡದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.

ತಂಡದ ಸದಸ್ಯರ ಜೊತೆಗೂಡಿ ಕೃತ್ಯಕ್ಕೆ ಸಂಚು ರೂಪಿಸಿದ್ದು ಮತ್ತು ಅದನ್ನು ಪತ್ರಿಕಾಗೋಷ್ಠಿಯಲ್ಲಿ ಅಳುಕಿಲ್ಲದೆ ಹೇಳಿಕೊಂಡದ್ದು ತಂಡದ ನಾಯಕ ಸ್ಟೀವ್ ಸ್ಮಿತ್ ಅವರ ಕುರಿತು ಕೆಟ್ಟ ಅಭಿಪ್ರಾಯ ಮೂಡಿಸಿದೆ. ನಿಯಮಗಳನ್ನು ಗಾಳಿಗೆ ತೂರುವಲ್ಲಿ ಈ ತಂಡದವರು ನಿಸ್ಸೀಮರು ಎಂಬುದು ಈಗ ಕ್ರಿಕೆಟ್ ಜಗತ್ತಿಗೆ ಸಾಬೀತಾಗಿದೆ.

ಆಸ್ಟ್ರೇಲಿಯಾದ ಮಾಧ್ಯಮಗಳು ದೇಶದ ತಂಡವನ್ನು ಹೀಯಾಳಿಸಿವೆ. ಜಗತ್ತಿನ ಮಾಧ್ಯಮಗಳ ಕ್ರೀಡಾ ಪುಟಗಳಲ್ಲೂ ಟೀಕೆಗಳು ಬಂದಿವೆ. ಪ್ರಕರಣವನ್ನು ವಿವಿಧ ಪತ್ರಿಕೆಗಳು ವಿವಿಧ ಬಗೆಯಲ್ಲಿ ಬಣ್ಣಿಸಿದ್ದು ಕೆಲವು ಪತ್ರಿಕೆಗಳು ಆಸ್ಟ್ರೇಲಿಯಾ ಹಳೆಯ ಚಾಳಿಯನ್ನೇ ಮುಂದುವರಿಸುತ್ತಿದೆ ಎಂದು ಹೇಳಿವೆ.

ಎದುರಾಳಿ ತಂಡದ ಆಟಗಾರರನ್ನು ಕೆಣಕುವುದು ಮತ್ತು ಅತಿಯಾದ ಆಕ್ರಮಣಕಾರಿ ಸ್ವಭಾವ ಪ್ರದರ್ಶಿಸುವ ಮೂಲಕ ಆಸ್ಟ್ರೇಲಿಯಾ ಆಟಗಾರರು ಈಗಾಗಲೇ ಅನೇಕ ತಂಡಗಳ ಕೋಪಕ್ಕೆ ತುತ್ತಾಗಿದ್ದಾರೆ. ಅವರು ಅಂಗಣದಲ್ಲಿ ಮೇರೆ ಮೀರಿ ವರ್ತಿಸುತ್ತಾರೆ ಎಂಬ ಆರೋಪ ನಿರಂತರವಾಗಿ ಕೇಳಿ ಬಂದಿದೆ.

‘ಅಂಗಣದಲ್ಲಿ ಅತಿಯಾದ ವರ್ತನೆ ಇತ್ತೀಚೆಗೆ ಆಸ್ಟ್ರೇಲಿಯಾ ತಂಡದವರ ರಕ್ತದಲ್ಲೇ ಸೇರಿಕೊಂಡಿದೆ ಎನ್ನುವಂತಾಗಿದೆ’ ಎಂದು ವೀಕ್ಷಕ ವಿವರಣೆಗಾರ ಸಂಜಯ್‌ ಮಾಂಜ್ರೇಕರ್‌ ಅಭಿಪ್ರಾಯ ಪಡುತ್ತಾರೆ.

ಅಂಗಣಕ್ಕೆ ಬಂದ ವಾಕಿ ಟಾಕಿ?
ಚೆಂಡು ವಿರೂಪಗೊಳಿಸಿದ ಆರೋಪದ ಬೆನ್ನಲ್ಲೇ ಆಸ್ಟ್ರೇಲಿಯಾ ತಂಡ ಮತ್ತೊಂದು ಆರೋಪಕ್ಕೆ ಸಿಲುಕಿದೆ. ತಂಡದ ಕಾಯ್ದಿರಿಸಿದ ಆಟಗಾರ ಪೀಟರ್‌ ಹ್ಯಾಂಡ್ಸ್‌ಕಂಬ್‌ ಅಂಗಣಕ್ಕೆ ವಾಕಿ ಟಾಕಿ ಜೊತೆ ತೆರಳಿದ್ದು ಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಚೆಂಡು ವಿರೂಪಗೊಳಿಸಲು ಬಳಸಿದ ವಸ್ತುವನ್ನು ಒಳ ಉಡುಪಿನ ಒಳಗೆ ಬಚ್ಚಿಡುವಂತೆ ಕೋಚ್ ಡರೆನ್ ಲೆಹ್ಮನ್ ಸೂಚಿಸಿದ್ದರು.

ಪಾನೀಯ ವಿರಾಮದ ಸಂದರ್ಭದಲ್ಲಿ ಬ್ಯಾಂಕ್ರಾಫ್ಟ್ ಅವರಿಗೆ ಈ ಮಾಹಿತಿಯನ್ನು ಪೀಟರ್‌ ಹ್ಯಾಂಡ್ಸ್‌ಕಂಬ್‌ ತಲುಪಿಸಿದ್ದರು. ಈ ಸಂದರ್ಭದಲ್ಲಿ ಅವರು ವಾಕಿಟಾಕಿ ಜೊತೆ ಬಂದಿರುವುದು ದೃಶ್ಯಾವಳಿಗಳಲ್ಲಿ ಕಾಣಿಸಿದೆ. ಈ ದೃಶ್ಯಾವಳಿಗಳನ್ನು ದೃಶ್ಯ ಮಾಧ್ಯಮಗಳು ಸೋಮವಾರ ನಿರಂತರವಾಗಿ ಪ್ರಸಾರ ಮಾಡಿವೆ.

ತನಿಖೆ ಆರಂಭಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ
ಕೇಪ್‌ಟೌನ್‌ (ಎಪಿ):
ಚೆಂಡು ವಿರೂಪಗೊಳಿಸಿದ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ (ಸಿಎ) ನಿರ್ಧರಿಸಿದೆ.

ಸಿಎ ಸೌಹಾರ್ದ ಘಟಕದ ಮುಖ್ಯಸ್ಥ ಇಯಾನ್ ರಾಯ್‌ ಮತ್ತು ಹೈ ಪರ್ಫಾರ್ಮೆನ್ಸ್‌ ವ್ಯವಸ್ಥಾಪಕ ಪ್ಯಾಟ್ ಹೊವಾರ್ಡ್ ಅವರನ್ನು ತನಿಖಾಧಿಕಾರಿಗಳನ್ನಾಗಿ ನೇಮಕ ಮಾಡಿದ್ದು ಅವರು ಸೋಮವಾರ ಕೇಪ್‌ಟೌನ್‌ ತಲುಪಿದ್ದಾರೆ.

ತಂಡ ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಆಟಗಾರರನ್ನು ವಿಚಾರಣೆಗೆ ಒಳಪಡಿಸಲಿರುವ ಅಧಿಕಾರಿಗಳು ನಾಲ್ಕನೇ ಟೆಸ್ಟ್‌ಗಾಗಿ ತಂಡ ಜೊಹಾನ್ಸ್‌ಬರ್ಗ್‌ಗೆ ತೆರಳುವ ಮುನ್ನ ಮಾಹಿತಿ ಕಲೆ ಹಾಕಲಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT