ಚಿನ್ನ ಜಯಿಸಿದ ಅನೀಶ್‌

7

ಚಿನ್ನ ಜಯಿಸಿದ ಅನೀಶ್‌

Published:
Updated:
ಚಿನ್ನ ಜಯಿಸಿದ ಅನೀಶ್‌

ಸಿಡ್ನಿ: ಶ್ರೇಷ್ಠ ಸಾಮರ್ಥ್ಯ ತೋರಿದ ಭಾರತದ ಅನೀಶ್‌ ಭಾನ್‌ವಾಲಾ, ಐಎಸ್‌ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಸೋಮವಾರ ನಡೆದ ಪುರುಷರ 25 ಮೀಟರ್ಸ್‌ ರ‍್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಅನೀಶ್‌ ಈ ಸಾಧನೆ ಮಾಡಿದರು. ಇದರೊಂದಿಗೆ ಅಂತರರಾಷ್ಟ್ರೀಯ ಕೂಟದಲ್ಲಿ ಮೊದಲ ಚಿನ್ನ ಗೆದ್ದ ಹಿರಿಮೆಯನ್ನೂ ತಮ್ಮದಾಗಿಸಿಕೊಂಡರು.

ಅರ್ಹತಾ ಸುತ್ತಿನಲ್ಲಿ 585 ಪಾಯಿಂಟ್ಸ್‌ ಸಂಗ್ರಹಿಸಿ ದಾಖಲೆ ಬರೆದಿದ್ದ 15 ವರ್ಷದ ಅನೀಶ್‌, ಫೈನಲ್‌ನಲ್ಲೂ ಮೋಡಿ ಮಾಡಿದರು. ಆರಂಭದಿಂದಲೇ ನಿಖರ ಗುರಿ ಹಿಡಿದ ಅವರು ಸುಲಭವಾಗಿ ಪಾಯಿಂಟ್ಸ್‌ ಸಂಗ್ರಹಿಸಿದರು.

ಚೀನಾದ ಚೆಂಗ್‌ ಜಿಪೆಂಗ್‌ ಈ ವಿಭಾಗದ ಬೆಳ್ಳಿ ಗೆದ್ದರು. ಇವರು ಹೋದ ವರ್ಷ ಜರ್ಮನಿಯ ಸುಹ್ಲ್‌ನಲ್ಲಿ ನಡೆದಿದ್ದ ಜೂನಿಯರ್ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಸಾಧನೆ ಮಾಡಿದ್ದರು.

ಚೀನಾದ ಮತ್ತೊಬ್ಬ ಶೂಟರ್‌ ಜಾಂಗ್‌ ಜುಯೆಮಿಂಗ್‌ ಕಂಚು ಪಡೆದರು. ಭಾರತದ ಅನಹದ್‌ ಜವಾಂಡ ನಾಲ್ಕನೇಯವರಾಗಿ ಅಭಿಯಾನ ಮುಗಿಸಿದರು. ಶನಿವಾರ ನಡೆದಿದ್ದ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಜವಾಂಡ ಏಳನೇ ಸ್ಥಾನ ಪಡೆದಿದ್ದರು. ಚೀನಾದ ಪ್ಯಾನ್‌ ಜುಂಚೆನ್‌ ಐದನೇ ಸ್ಥಾನ ಗಳಿಸಿದರು. ಭಾರತದ ರಾಜ್‌ ಕನ್ವಾರ್‌ ಸಿಂಗ್‌ ಸಂಧು ಆರನೇ ಸ್ಥಾನ ತಮ್ಮದಾಗಿಸಿಕೊಂಡರು. ತಂಡ ವಿಭಾಗದಲ್ಲಿ ಚೀನಾ, ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದಿತು. ಈ ತಂಡ 1733 ಪಾಯಿಂಟ್ಸ್‌ ಸಂಗ್ರಹಿಸಿತು.

ಭಾನ್‌ವಾಲಾ, ಅನಹದ್‌ ಜವಾಂಡ ಮತ್ತು ಆದರ್ಶ್‌ ಸಿಂಗ್‌ ಅವರಿದ್ದ ಭಾರತ ತಂಡ ಬೆಳ್ಳಿ ಗೆದ್ದಿತು. ಸಂಧು, ಜಪತೇಶ್‌ ಸಿಂಗ್‌ ಜಸ್ಪಾಲ್‌ ಮತ್ತು ಮನದೀಪ್‌ ಸಿಂಗ್‌ ಅವರನ್ನು ಒಳಗೊಂಡ ಭಾರತ ತಂಡ ಕಂಚು ತನ್ನದಾಗಿಸಿಕೊಂಡಿತು.

ಭಾರತಕ್ಕೆ ಎರಡನೇ ಸ್ಥಾನ: ಕೂಟದಲ್ಲಿ ಒಟ್ಟು 15 ಪದಕಗಳನ್ನು ಗೆದ್ದಿರುವ ಭಾರತ, ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ. ಚೀನಾ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.

ಭಾರತದ ಖಾತೆಯಲ್ಲಿ ಆರು ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚಿನ ಪದಕಗಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry