ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ವಿರುದ್ಧ ಮಹಾಮೈತ್ರಿ ಸುಳಿವು

Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಲಖನೌ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಾರದಂತೆ ತಡೆಯಲು ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಕೂಟ ರಚನೆಯಾಗಬಹುದು ಎಂಬ ಸುಳಿವನ್ನು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಲು ಎಲ್ಲ ಸಮಾನ ಮನಸ್ಕ ವಿರೋಧ ಪಕ್ಷಗಳ ಜತೆ ಸೇರಿ ಮಹಾಮೈತ್ರಿ ಕೂಟ ರಚಿಸಲು ಸಿದ್ಧವಿರುವುದಾಗಿ ಅವರು ಘೋಷಿಸಿದ್ದಾರೆ.

ಸೋಮವಾರ ನಡೆದ ಪಕ್ಷದ ವಲಯ ಸಂಯೋಜಕರು ಮತ್ತು ಹಿರಿಯ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಇಂತಹ ಮೈತ್ರಿಗೆ ಸಿದ್ಧರಾಗಿರುವಂತೆ ಬಿಜೆಪಿಯೇತರ ಪಕ್ಷಗಳ ನಾಯಕರಿಗೆ ಕರೆ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿ, ಮಾಯಾವತಿ ಅವರು ವಿರೋಧ ಪಕ್ಷಗಳ ನಾಯಕರ ಜತೆ ದೆಹಲಿಯಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ಬಿಎಸ್‌ಪಿ ಹಿರಿಯ ನಾಯಕರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಗೆಲ್ಲಬಹುದಾದ ಕ್ಷೇತ್ರಗಳ ಲೆಕ್ಕಾಚಾರ ನಡೆಯುತ್ತಿದೆ. ಅಭ್ಯರ್ಥಿಗಳ ಪಟ್ಟಿಯೂ ಬೇಗ ಸಿದ್ಧವಾಗಲಿದೆ. 30–35 ಕ್ಷೇತ್ರಗಳಲ್ಲಿ ಬಿಎಸ್‌ಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಹಾಮೈತ್ರಿಕೂಟ ಅಸ್ತಿತ್ವಕ್ಕೆ ಬರುವ ಎಲ್ಲ ಸಾಧ್ಯತೆಗಳಿದ್ದು, ವಿರೋಧ ಪಕ್ಷಗಳ ಕಾರ್ಯಕರ್ತರೊಂದಿಗೆ ಈಗಿನಿಂದಲೇ ಒಗ್ಗೂಡಿ ಕೆಲಸ ಮಾಡಲು ಮಾನಸಿಕವಾಗಿ ಸಿದ್ಧರಾಗಿರುವಂತೆ ಮತಗಟ್ಟೆ ಮಟ್ಟದ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ ಎಂದು ಬಿಎಸ್‌ಪಿ ಮೂಲಗಳು ತಿಳಿಸಿವೆ.

ವಿರೋಧ ಪಕ್ಷಗಳು ಒಗ್ಗೂಡುತ್ತಿರುವುದನ್ನು ಕಂಡು ಬಿಜೆಪಿ ವಲಯದಲ್ಲಿ ತಳಮಳ ಶುರುವಾಗಿದೆ. ಹತಾಶರಾಗಿರುವ ಬಿಜೆಪಿ ನಾಯಕರು ಜನರ ದಾರಿ ತಪ್ಪಿಸಲು ಬಿಎಸ್‌ಪಿ–ಎಸ್‌ಪಿ ಮೈತ್ರಿ ಕುರಿತು ಮನಬಂದಂತೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಮಾಯಾವತಿ ಟೀಕಿಸಿದ್ದಾರೆ.

ಗೆಳೆತನದಲ್ಲಿ ಸ್ವಾರ್ಥ ಇಲ್ಲ: ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸಮಾಜವಾದಿ ಪಕ್ಷದೊಂದಿಗೆ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದೆಯೇ ಹೊರತು ಇದರಲ್ಲಿ ಯಾವುದೇ ಸ್ವಾರ್ಥ ಅಡಗಿಲ್ಲ ಎಂದು ಬಿಜೆಪಿಗೆ ಮಾಯಾವತಿ ತಿರುಗೇಟು ನೀಡಿದ್ದಾರೆ.  ಬಿಎಸ್‌ಪಿ ಮತ್ತು ಎಸ್‌ಪಿ ಮೈತ್ರಿ 2019ರ ಲೋಕಸಭಾ ಚುನಾವಣೆಯಲ್ಲೂ ಮುಂದುವರಿಯಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ರಾಜ್ಯಸಭಾ ಚುನಾವಣಾ ಫಲಿತಾಂಶ ಎರಡೂ ಪಕ್ಷಗಳ ಸ್ನೇಹದ ಮೇಲೆ ಯಾವ ಪರಿಣಾಮವನ್ನೂ ಬೀರಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹೊಸ ರಾಜಕೀಯ ಆಶಾವಾದ: ಉತ್ತರ ಪ್ರದೇಶದಲ್ಲಿ ರೂಪುಗೊಳ್ಳಲಿರುವ ಎಸ್‌ಪಿ–ಬಿಎಸ್‌ಪಿ ಮೈತ್ರಿಯು ಅಧಿಕಾರಕ್ಕೆ ಬಾರದಂತೆ  ಬಿಜೆಪಿಯನ್ನು ಕಟ್ಟಿ ಹಾಕಲಿದೆ. ಲೋಕಸಭಾ ಉಪ ಚುನಾವಣೆಯಲ್ಲಿ ಯಶಸ್ಸು ಕಂಡ ಹೊಸ ಸೂತ್ರಕ್ಕೆ ದೇಶದಾದ್ಯಂತ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದರು.

ಈ ಯಶಸ್ಸು ರಾಷ್ಟ್ರ ರಾಜಕಾರಣದಲ್ಲೂ ಹೊಸ ರಾಜಕೀಯ ಸಾಧ್ಯತೆಗಳ ಆಶಾವಾದವನ್ನು ಹುಟ್ಟು ಹಾಕಿದೆ. ಬಿಜೆಪಿಯೇತರ ಪಕ್ಷಗಳು ಒಗ್ಗೂಡಿದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಏರದಂತೆ ತಡೆಯಬಹುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದಲಿತರ ಓಲೈಕೆಗೆ ಅಂಬೇಡ್ಕರ್‌ ಜಪ’
ಲಖನೌ: ಡಾ. ಅಂಬೇಡ್ಕರ್‌ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹರಿಹಾಯ್ದಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ನಾಲ್ಕು ವರ್ಷಗಳ ಅಧಿಕಾರ ಅವಧಿಯನ್ನು ನಾಟಕದಲ್ಲಿಯೇ ಕಳೆದಿದೆ. ದಲಿತರ ವಿಷಯದಲ್ಲಂತೂ ಅದು ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಭಾನುವಾರ ಪ್ರಸಾರವಾದ ‘ಮನದ ಮಾತು’ ರೇಡಿಯೊ ಕಾರ್ಯಕ್ರಮದಲ್ಲಿ ಮೋದಿ ಅವರು ಡಾ. ಬಿ.ಆರ್‌. ಅಂಬೇಡ್ಕರ್‌ ಹೆಸರು ಪ್ರಸ್ತಾಪಿಸಿದ್ದಾರೆ. ಆದರೆ, ಪ್ರಧಾನಿಯ ಮನಸ್ಥಿತಿ ಅಂಬೇಡ್ಕರ್‌ ಅವರ ಸಿದ್ಧಾಂತಗಳಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಮಾಯಾವತಿ ಕಿಡಿ ಕಾರಿದ್ದಾರೆ.

ದಲಿತರನ್ನು ಓಲೈಸಲು ಬಿಜೆಪಿ ನಾಯಕರು ಡಾ. ಬಾಬಾ ಸಾಹೇಬ್‌ ಹೆಸರು ಬಳಸಿಕೊಳ್ಳುತ್ತಿದ್ದಾರೆ. ದಲಿತರ ಬಗ್ಗೆ ಬಿಜೆಪಿಯವರಿಗೆ ನೈಜ ಕಾಳಜಿ ಇಲ್ಲ. ದಲಿತರನ್ನು ದಾರಿ ತಪ್ಪಿಸಲು ಅಂಬೇಡ್ಕರ್‌ ಜಪ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT