7

ಲೈಂಗಿಕ ದೌರ್ಜನ್ಯದ ವಿರುದ್ಧ ಸಿಡಿದೆದ್ದ ವಿಜ್ಞಾನಿಗಳ ಸಮೂಹ

Published:
Updated:

ನವದೆಹಲಿ: ಪ್ರಯೋಗಾಲಯಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ದೇಶದ 165 ವಿಜ್ಞಾನಿಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.

ಈಚೆಗೆ ಇಲ್ಲಿನ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಜೀವವಿಜ್ಞಾನಗಳ ವಿಭಾಗದ ಪ್ರೊಫೆಸರ್‌ ಒಬ್ಬರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಕೆಲ ವಿದ್ಯಾರ್ಥಿನಿಯರು ದೂರಿದ್ದರು. ಈ ದೂರುದಾರರನ್ನು ಬೆಂಬಲಿಸಲು ವಿಜ್ಞಾನಿಗಳು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

‘ದೂರುದಾರರನ್ನು ಬೆಂಬಲಿಸಲು ಭಾರತೀಯ ವಿಜ್ಞಾನಿಗಳು, ಅದರಲ್ಲೂ ಮಹಿಳಾ ವಿಜ್ಞಾನಿಗಳಿಗೆ ಕರೆ ಕೊಡುತ್ತಿದ್ದೇವೆ. ಅಲ್ಲದೆ, ಈ ಗಂಭೀರ ವಿಷಯದ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಇದರ ಉದ್ದೇಶ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

‘ಲೈಂಗಿಕ ದುರ್ವರ್ತನೆಯನ್ನು ಖಂಡಿಸುವುದಷ್ಟೇ ಅಲ್ಲದೆ, ಸಂಬಂಧಿಸಿದ ವ್ಯಕ್ತಿಯನ್ನು ವೈಜ್ಞಾನಿಕ ಅಧ್ಯಯನ ಸಮಿತಿಗಳಿಂದ ಹೊರಹಾಕಬೇಕು, ಅನುದಾನ ಹಾಗೂ ಪ್ರಶಸ್ತಿಗಳನ್ನು ನೀಡಬಾರದು ಮತ್ತು ವಿವಿಧ ಅಕಾಡೆಮಿಗಳಿಗೆ ನಡೆಯುವ ಚುನಾವಣೆಗಳಲ್ಲಿ ಭಾಗವಹಿಸದಂತೆ ಬಹಿಷ್ಕರಿಸಬೇಕು’ ಎಂದು ವಿಜ್ಞಾನಿಗಳು ಒತ್ತಾಯಿಸಿದ್ದಾರೆ.

ಈ ಪತ್ರಕ್ಕೆ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಫಂಡಮೆಂಟಲ್‌ ರಿಸರ್ಚ್‌, ನ್ಯಾಷನಲ್‌ ಸೆಂಟರ್‌ ಫಾರ್‌ ಬಯಾಲಜಿಕಲ್‌ ಸೈನ್ಸಸ್‌, ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (ಐಐಟಿ) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ಪ್ರಮುಖ ಶಿಕ್ಷಣಸಂಸ್ಥೆಗಳ ವಿಜ್ಞಾನಿಗಳು ಸಹಿ ಹಾಕಿದ್ದಾರೆ.

‘ಶಿಕ್ಷಣ ಸಂಸ್ಥೆಗಳಲ್ಲಿ ಮಹಿಳಾ ವಿಜ್ಞಾನಿಗಳು ಎದುರಿಸುವ ಸಮಸ್ಯೆಗಳ ಬಗ್ಗೆ ವಿಜ್ಞಾನಿಗಳಲ್ಲಿ ಅರಿವು ಮೂಡಿಸುವುದು ಮತ್ತು ಇಂತಹ ಪ್ರಕರಣಗಳ ವಿರುದ್ಧ ದೃಢವಾಗಿ ಮಾತನಾಡಲು ಮಹಿಳಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯಲ್ಲಿ ಒಗ್ಗಟ್ಟು ಮೂಡಿಸುವುದು ಈ ಪತ್ರದ ಉದ್ದೇಶ’ ಎಂದು ಜೆಎನ್‌ಯುನ ಭೌತವಿಜ್ಞಾನಗಳ ವಿಭಾಗದ ರಿದ್ಧಿ ಷಾ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry