4

ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ಟಿಕೆಟ್‌

Published:
Updated:
ಕಾಂಗ್ರೆಸ್‌ನ ಎಲ್ಲ ಶಾಸಕರಿಗೆ ಟಿಕೆಟ್‌

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ತನ್ನ ಎಲ್ಲ ಹಾಲಿ ಶಾಸಕರಿಗೂ ಟಿಕೆಟ್‌ ನೀಡುವಂತೆ ಕಾಂಗ್ರೆಸ್‌ ಚುನಾವಣಾ ಸಮಿತಿ ಸೋಮವಾರ ಹೈಕಮಾಂಡ್‌ಗೆ ಶಿಫಾರಸು ಮಾಡಿದೆ.

ಜೆಡಿಎಸ್‌, ಬಿಜೆಪಿ ತೊರೆದು ಬಂದಿರುವ ಮಾಜಿ ಶಾಸಕರು ಹಾಗೂ ಪಕ್ಷಕ್ಕೆ ಸೇರಿರುವ ಪಕ್ಷೇತರ ಶಾಸಕರನ್ನೂ ಟಿಕೆಟ್‌ಗೆ ಪರಿಗಣಿಸುವಂತೆ ಮನವಿ ಮಾಡಿದೆ. ನಗರದ ಹೊರವಲಯದಲ್ಲಿ ಸೇರಿದ್ದ ಚುನಾವಣಾ ಸಮಿತಿ, ಯಾವುದೇ ಚರ್ಚೆ ನಡೆಸದೆ ಎಲ್ಲ ಹಾಲಿ ಶಾಸಕರ ಹೆಸರುಗಳನ್ನು ಶಿಫಾರಸು ಮಾಡುವ ತೀರ್ಮಾನ ಕೈಗೊಂಡಿತು.

ಸಮಿತಿ ಹಿಂದಿನ ಸಭೆಯಲ್ಲಿ ಹಿರಿಯ ಮುಖಂಡ ಎಂ.ವೀರಪ್ಪ ಮೊಯಿಲಿ ಮತ್ತು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ನಡುವೆ ಜಟಾ‍‍ಪಟಿ ನಡೆದಿದ್ದರಿಂದಾಗಿ, ಯಾವುದೇ ಗೊಂದಲಕ್ಕೂ ಅವಕಾಶವಿಲ್ಲದಂತೆ ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದ ಅಂತಿಮ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡಲಾಯಿತು.

ಇದೇ 23ರಂದು ನಡೆದ ರಾಜ್ಯಸಭೆ ಚುನಾವಣೆ ಬಳಿಕ ಜೆಡಿಎಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಮೀರ್‌ ಅಹಮದ್‌ ಖಾನ್‌, ಎಚ್‌.ಸಿ. ಬಾಲಕೃಷ್ಣ, ಎನ್‌. ಚೆಲುವರಾಯಸ್ವಾಮಿ, ಇಕ್ಬಾಲ್‌ ಅನ್ಸಾರಿ, ಭೀಮಾ ನಾಯ್ಕ ಮತ್ತು ರಮೇಶ್‌ ಬಂಡಿಸಿದ್ದೇಗೌಡರ ಹೆಸರನ್ನು ಅವರು ಪ್ರತಿನಿಧಿಸಿದ್ದ ಕ್ಷೇತ್ರಗಳಿಗೆ ಶಿಫಾರಸು ಮಾಡಲಾಗಿದೆ.

ಅಖಂಡ ಶ್ರೀನಿವಾಸಮೂರ್ತಿ ಹೆಸರು ಕಳುಹಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಕರ್ನಾಟಕ ಮಕ್ಕಳ ಪಕ್ಷದಿಂದ ಕಾಂಗ್ರೆಸ್‌ಗೆ ಬಂದಿರುವ ಅಶೋಕ್‌ ಖೇಣಿ ಹೆಸರನ್ನೂ ಶಿಫಾರಸು ಮಾಡಲಾಗಿದೆ. ‘ನೈಸ್‌ ಹಗರಣ’ ಕಾರಣಕ್ಕೆ ಖೇಣಿ ಅವರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡ ಸಮಯದಲ್ಲಿ ಹಲವು ಶಾಸಕರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿರೋಧ ಲೆಕ್ಕಿಸದೆ ರಾಜ್ಯ ನಾಯಕರು ಅವರನ್ನು ಪಕ್ಷಕ್ಕೆ ಕರೆತಂದಿ

ದ್ದಾರೆ ಎಂದು ಮೂಲಗಳು ವಿವರಿಸಿವೆ.

‘ಯಾವುದೇ ಶಾಸಕರ ಹೆಸರು ಬಿಟ್ಟುಹೋಗಬಾರದು ಎಂಬ ಕಾರಣಕ್ಕೆ ಎಲ್ಲರ ಹೆಸರನ್ನು ಹೈಕಮಾಂಡ್‌ಗೆ ಶಿಫಾರಸು ಮಾಡಿದ್ದೇವೆ. ಏಪ್ರಿಲ್‌ 9, 10ರಂದು ಟಿಕೆಟ್‌ ಪರಿಶೀಲನಾ ಸಮಿತಿ ದೆಹಲಿಯಲ್ಲಿ ಸಭೆ ಸೇರಲಿದೆ. ಬಳಿಕ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು,15ರೊಳಗೆ ಮೊದಲ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ’ ಎಂದು ಪರಮೇಶ್ವರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಜಿ. ಪರಮೇಶ್ವರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಕಳೆದ ಚುನಾವಣೆಯಲ್ಲಿ ಪಕ್ಷ ಸೋತಿರುವ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳ ಹೆಸರುಗಳನ್ನು ಚರ್ಚಿಸಿ ಅಖೈರುಗೊಳಿಸಲು ತೀರ್ಮಾನಿಸಿತು.

ಪಕ್ಷದ ಹಿರಿಯ ಮುಖಂಡ ಮಧುಸೂದನ ಮಿಸ್ತ್ರಿ ಮಂಗಳವಾರ ಸಂಜೆ ಬೆಂಗಳೂರಿಗೆ ಬರಲಿದ್ದು ಸಚಿವರು ಹಾಗೂ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಏಪ್ರಿಲ್‌ 3,4 ಹಾಗೂ 7,8ರಂದು ರಾಜ್ಯಕ್ಕೆ ಭೇಟಿ ನೀಡಿ ಹಿಂತಿರುಗಿದ ನಂತರ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸುವ ಪ್ರಕ್ರಿಯೆ ಚುರುಕುಗೊಳ್ಳಲಿದೆ.

ಮಗನಿಗೆ ಟಿಕೆಟ್‌ ಕೇಳದ ಮೊಯಿಲಿ

ಕಾರ್ಕಳ ವಿಧಾನಸಭೆ ಕ್ಷೇತ್ರದಿಂದ ಟಿಕೆಟ್‌ ಕೇಳದೆ ಇರಲು ಹರ್ಷ ಮೊಯಿಲಿ ನಿರ್ಧರಿಸಿದ್ದಾರೆ. ಚುನಾವಣಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ವೀರಪ್ಪ ಮೊಯಿಲಿ ತಮ್ಮ ಪುತ್ರನ ಹೆಸರನ್ನು ಟಿಕೆಟ್‌ಗೆ ಪರಿಗಣಿಸಬಾರದು ಎಂದು ಮನವಿ ಮಾಡಿದರು.

ಕಾರ್ಕಳ ಟಿಕೆಟ್‌ಗೆ ಸಂಬಂಧಿಸಿದಂತೆ ಸಚಿವ ಮಹದೇವಪ್ಪ ಹಾಗೂ ಮೊಯಿಲಿ ನಡುವೆ ಹಿಂದಿನ ಸಭೆಯಲ್ಲಿ ಜಟಾಪಟಿ ನಡೆದಿತ್ತು.

ಕಾರ್ಕಳದಲ್ಲಿ ಹರ್ಷ ಮೊಯಿಲಿ, ಉದಯಕುಮಾರ್‌ ಶೆಟ್ಟಿ, ಗೋಪಾಲ್‌ ಭಂಡಾರಿ ಅವರ ನಡುವೆ ಪೈಪೋಟಿ ನಡೆದಿತ್ತು.

ಚುನಾವಣಾ ಸಮಿತಿ ಸದಸ್ಯರಾದ ಮಹದೇವಪ್ಪ ಇಂದಿನ ಸಭೆಯಲ್ಲಿ ಭಾಗವಹಿಸದೆ ದೂರ ಉಳಿಯುವ ಮೂಲಕ ಸೂಚ್ಯವಾಗಿ ಪ್ರತಿಭಟನೆ ದಾಖಲಿಸಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry