ಆ್ಯಪ್‌ ಸಮರ ತೀವ್ರ

7
ಪ್ರಧಾನಿ ಸ್ಥಾನ ದುರ್ಬಳಕೆ: ರಾಹುಲ್‌ ಗಾಂಧಿ ಆರೋಪ

ಆ್ಯಪ್‌ ಸಮರ ತೀವ್ರ

Published:
Updated:
ಆ್ಯಪ್‌ ಸಮರ ತೀವ್ರ

ನವದೆಹಲಿ: ಆ್ಯಪ್‌ ಮೂಲಕ ಬಳಕೆದಾರರ ಮಾಹಿತಿ ಸೋರಿಕೆಗೆ ಸಂಬಂಧಿಸಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಣ ವಾಕ್ಸಮರ ಎರಡನೇ ದಿನವೂ ಮುಂದುವರಿದಿದೆ.

‘ಭಾರತೀಯರ ಮೇಲೆಯೇ ಬೇಹುಗಾರಿಕೆ ಮಾಡಲು ಬಯಸುವ ದೊಡ್ಡಣ್ಣ’ ಎಂದು ‍ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಣ್ಣಿಸಿದ್ದಾರೆ. ಇದು ಗೂಢಚರ್ಯೆ ಅಲ್ಲ ಎಂಬುದು ‘ಛೋಟಾ ಭೀಮ್‌’ಗೂ ಗೊತ್ತು ಎಂದು ಹೇಳುವ ಮೂಲಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ನ ಆ್ಯಂಡ್ರಾಯ್ಡ್‌ ಆ್ಯಪ್‌ ಸ್ಥಗಿತಗೊಂಡಿರುವುದು ಬಿಜೆಪಿಗೆ ಪ್ರತಿದಾಳಿಯ ಅಸ್ತ್ರ ಒದಗಿಸಿದೆ.

ಆ್ಯಪ್‌ ಮೂಲಕ ಕಾಂಗ್ರೆಸ್‌ ಪಕ್ಷವು ಮಾಹಿತಿ ಕಳ್ಳತನ ಮಾಡಿದೆ. ಇದು ಬಯಲಾದ ಬಳಿಕ ಆ್ಯ‍ಪ್‌ ಅನ್ನು ಸ್ಥಗಿತಗೊಳಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಆರೋಪವನ್ನು ಕಾಂಗ್ರೆಸ್‌ ಅಲ್ಲಗಳೆದಿದೆ. ಎಲ್ಲ ಸದಸ್ಯರನ್ನು ಪಕ್ಷದ ಅಧಿಕೃತ ವೆಬ್‌ಸೈಟ್‌ ಮೂಲಕವೇ ನೋಂದಾಯಿಸಿಕೊಳ್ಳಲಾಗಿದೆ. ‘ವಿದ್‌ ಐಎನ್‌ಸಿ (ಇಂಡಿಯನ್‌ ನ್ಯಾಷನಲ್ ಕಾಂಗ್ರೆಸ್‌) ಆ್ಯಪ್‌’ ಹಿಂದೆಯೇ ಸ್ಥಗಿತವಾಗಿದೆ ಎಂದು ಸಮಜಾಯಿಷಿ ನೀಡಿದೆ.

ಪ್ರಧಾನಿಯ ಅಧಿಕೃತ ಆ್ಯಪ್‌ ಮೂಲಕ ಬಳಕೆದಾರರ ಅನುಮತಿ ಇಲ್ಲದೆಯೇ ಅವರಿಗೆ ಸಂಬಂಧಿಸಿದ ಮಾಹಿತಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲಾಗುತ್ತಿದೆ ಎಂಬ ಆರೋಪ ಇತ್ತೀಚೆಗೆ ಕೇಳಿ ಬಂದಿತ್ತು. ಈ ಆರೋಪದ ಆಧಾರದಲ್ಲಿ ಬಿಜೆಪಿ ಮೇಲೆ ಮುಗಿಬಿದ್ದಿರುವ ರಾಹುಲ್‌, ‘ಪ್ರಧಾನಿ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

‘ನಮೋ ಆ್ಯಪ್‌’ ಮೂಲಕ ಬಳಕೆದಾರರ ಮೊಬೈಲ್‌ನಲ್ಲಿರುವ ಆಡಿಯೊ, ವಿಡಿಯೊ ಮತ್ತು ಸಂಪರ್ಕ ಸಂಖ್ಯೆಗಳನ್ನು ರಹಸ್ಯವಾಗಿ ದಾಖಲಿಸಿಕೊಳ್ಳಲಾಗಿದೆ. ಈಗ ಜಿಪಿಎಸ್‌ ಮೂಲಕ ನೀವು ಎಲ್ಲಿದ್ದೀರಿ ಎಂಬುದರ ಮೇಲೆಯೂ ಅವರು ನಿಗಾ ಇರಿಸುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.

ಈಗ ದೇಶದಲ್ಲಿರುವ ಮಕ್ಕಳ ಬಗೆಗಿನ ಮಾಹಿತಿಯನ್ನೂ ಪ್ರಧಾನಿ ಬಯಸುತ್ತಿದ್ದಾರೆ. ಎನ್‌ಸಿಸಿಯಲ್ಲಿರುವ 13 ಲಕ್ಷ ಮಕ್ಕಳು ನಮೋ ಆ್ಯಪ್‌ ಡೌನ್‌ಲೋಡ್‌ ಮಾಡುವಂತೆ ಬಲವಂತ ಮಾಡಲಾಗುತ್ತಿದೆ ಎಂದಿದ್ದಾರೆ.

ರಾಹುಲ್‌ ಆರೋಪಗಳಿಗೆ ವ್ಯಂಗ್ಯದ ಟ್ವೀಟ್‌ಗಳ ಮೂಲಕವೇ ಸ್ಮೃತಿ ಪ‍್ರತಿಕ್ರಿ ಯಿಸಿದ್ದಾರೆ. ನಮೋ ಆ್ಯಪ್‌ನಿಂದಾಗಿ ಈಗ ರಾಹುಲ್‌ಗೆ ಎನ್‌ಸಿಸಿ ಬಗ್ಗೆ ಗೊತ್ತಾಗಿದೆ ಎಂದು ಹೇಳಿದ್ದಾರೆ.

‘ನೀವು ಏನನ್ನು ಹೇಳುತ್ತಿದ್ದೀರೋ ಅದಕ್ಕೆ ತದ್ವಿರುದ್ಧವಾದುದನ್ನು ನಿಮ್ಮ ತಂಡ ಮಾಡುತ್ತಿದೆ. ‘#ಡಿಲೀಟ್‌ ನಮೋ ಆ್ಯಪ್‌’ ಎಂದು ನೀವು ಕರೆಕೊಟ್ಟಿದ್ದೀರಿ. ಆದರೆ ನಿಮ್ಮ ತಂಡದವರು ಕಾಂಗ್ರೆಸ್‌ ಆ್ಯಪ್‌ ಅನ್ನೇ ಸ್ಥಗಿತಗೊಳಿಸಿದ್ದಾರೆ’ ಎಂದು ಸ್ಮೃತಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ರಾಹುಲ್‌ ಗಾಂಧಿ ಅವರು ಭಾನುವಾರ ಮಾಡಿದ್ದ ಟ್ವೀಟನ್ನೇ ಅಣಕಿಸಿ ಬಿಜೆಪಿ ಮಾಹಿತಿ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಟ್ವೀಟ್‌ ಮಾಡಿದ್ದಾರೆ. ‘ಹಾಯ್‌! ನನ್ನ ಹೆಸರು ರಾಹುಲ್‌ ಗಾಂಧಿ. ನಾನು ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷದ ಮುಖ್ಯಸ್ಥ. ನೀವು ನಮ್ಮ ಅಧಿಕೃತ ಆ್ಯಪ್‌ಗೆ ಪ್ರವೇಶಿಸಿದರೆ ನಿಮ್ಮ ಎಲ್ಲ ಮಾಹಿತಿಯನ್ನು ಸಿಂಗಪುರದಲ್ಲಿರುವ ಸ್ನೇಹಿತರಿಗೆ ಕಳುಹಿಸುತ್ತೇನೆ’ ಎಂದು ಟ್ವೀಟ್‌ನಲ್ಲಿ ಮಾಳವೀಯ ಹೇಳಿದ್ದಾರೆ.

‘ಅಡಗಿಸಿಡುತ್ತಿರುವುದು ಏನನ್ನು’

ಕಾಂಗ್ರೆಸ್‌ನ ಸದಸ್ಯತ್ವದ ವೆಬ್‌ಸೈಟ್‌ ಸ್ಥಗಿತಗೊಂಡಿದೆ ಎಂದು ಬಿಜೆಪಿ ಮಾಹಿತಿ ತಂತ್ರಜ್ಞಾನ (ಐಟಿ) ಘಟಕದ ಮುಖ್ಯಸ್ಥ ಅಮಿತ್‌ ಮಾಳವೀಯ ಹೇಳಿದ್ದಾರೆ.

‘ಈ ವೆಬ್‌ಸೈಟ್‌ಗೆ ಹೋದರೆ, ‘ವೆಬ್‌ಸೈಟ್‌ನಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸದಸ್ಯತ್ವಕ್ಕಾಗಿ ಸ್ವಲ್ಪ ಕಾಲದ ಬಳಿಕ ಭೇಟಿ ನೀಡಿ...’ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್‌ ಏನನ್ನು ಅಡಗಿಸಿಡಲು ಯತ್ನಿಸುತ್ತಿದೆ’ ಎಂದು ಮಾಳವೀಯ ಪ್ರಶ್ನಿಸಿದ್ದಾರೆ.

‘ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿಲ್ಲ’

‘ಐಎನ್‌ಸಿ ಆ್ಯಪ್‌ ಮೂಲಕ ನಾವು ಯಾವುದೇ ವೈಯಕ್ತಿಕ ಮಾಹಿತಿ ಸಂಗ್ರಹಿಸುತ್ತಿಲ್ಲ. ಈ ಆ್ಯಪ್‌ ಅನ್ನು ಬಹಳ ಹಿಂದೆಯೇ ಸ್ಥಗಿತಗೊಳಿಸಲಾಗಿದೆ. ಸದಸ್ಯತ್ವ ಪಡೆಯುವವರ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಆದರೆ ಅದನ್ನು ವೆಬ್‌ಸೈಟ್‌ ಮೂಲಕ ಮಾಡಲಾಗುತ್ತಿದೆ. ಈ ವೆಬ್‌ಸೈಟ್‌ನಲ್ಲಿ ಸಂಗ್ರಹಿಸಲಾಗುವ ಮಾಹಿತಿ ಗೂಢಲಿಪಿಯಲ್ಲಿರುತ್ತದೆ’ ಎಂದು ಕಾಂಗ್ರೆಸ್‌ನ ಐಟಿ ವಿಭಾಗದ ಮುಖ್ಯಸ್ಥೆ ದಿವ್ಯ ಸ್ಪಂದನ (ರಮ್ಯಾ) ಹೇಳಿದ್ದಾರೆ.

ಕಾಂಗ್ರೆಸ್‌ಗೆ ಹ್ಯಾಕರ್‌ ಭೀತಿ?

ಕಾಂಗ್ರೆಸ್‌ ಪಕ್ಷದ ‘ಐಎನ್‌ಸಿ ಇಂಡಿಯಾ ಆ್ಯಂಡ್ರಾಯ್ಡ್‌ ಆ್ಯಪ್‌’ ಬಗ್ಗೆ ಕೆಲವು ಮಾಹಿತಿ ಬಹಿರಂಗಪಡಿಸಲಾಗುವುದು ಎಂದು ಎಲಿಯಟ್‌ ಆಲ್ಡರ್‌ಸನ್‌ ಎಂಬ ಹೆಸರಿನಲ್ಲಿ ಗುರುತಿಸಿಕೊಳ್ಳುವ ಫ್ರಾನ್ಸ್‌ನ ಹ್ಯಾಕರ್‌ ಹೇಳಿದ ಬಳಿಕ ತನ್ನ ಆ್ಯಪ್‌ ಅನ್ನು ಕಾಂಗ್ರೆಸ್‌ ಸ್ಥಗಿತಗೊಳಿಸಿದೆ ಎಂದು ಹೇಳಲಾಗಿದೆ. ಬಳಕೆದಾರರ ಅನುಮತಿ ಇಲ್ಲದೆಯೇ ಅವರ ಮಾಹಿತಿಯನ್ನು ‘ನಮೋಆ್ಯಪ್‌’ ಪಡೆಯುತ್ತಿದೆ ಎಂದು ಆಲ್ಡರ್‌ಸನ್‌ ಹಿಂದೆ ಆರೋಪ ಮಾಡಿದ್ದರು. ಅವರ ಈ ಆರೋಪವೇ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿತ್ತು.

‘ಕಾಂಗ್ರೆಸ್‌ ಆ್ಯಪ್‌ನ ಸರ್ವರ್‌ ಸಿಂಗಪುರದಲ್ಲಿದೆ. ನೀವು ಭಾರತದ ರಾಜಕೀಯ ಪಕ್ಷವಾಗಿರುವುದರಿಂದ ಭಾರತದಲ್ಲಿಯೇ ಸರ್ವರ್‌ ಇರಿಸಿಕೊಳ್ಳುವುದು ಒಳ್ಳೆಯದು’ ಎಂದು ಆಲ್ಡರ್‌ಸನ್‌ ಸೋಮವಾರ ಟ್ವೀಟ್‌ ಮಾಡಿದ್ದಾರೆ. ‘ನನ್ನ ಟ್ವೀಟ್‌ಗೆ ಸ್ವಲ್ಪ ಮೊದಲು ಪ್ಲೇಸ್ಟೋರ್‌ನಿಂದ ತನ್ನ ಆ್ಯಂಡ್ರಾಯ್ಡ್‌ ಆ್ಯಪ್‌ ಅನ್ನು ಕಾಂಗ್ರೆಸ್‌ ತೆಗೆದು ಹಾಕಿತೇ’ ಎಂದೂ ಅವರು ಪ್ರಶ್ನಿಸಿದ್ದಾರೆ.

*

ಸರ್ಕಾರವೇ ಪ್ರಾಯೋಜಿಸುತ್ತಿರುವ ನಮೋ ಆ್ಯಪ್‌ ಮೂಲಕ ಲಕ್ಷಾಂತರ ಭಾರತೀಯರ ಮಾಹಿತಿ ಸಂಗ್ರಹಿಸಿ ತಮ್ಮದೇ ಆದ ದತ್ತಾಂಶ ಕೇಂದ್ರವನ್ನು ಮೋದಿ ರೂಪಿಸುತ್ತಿದ್ದಾರೆ.

-ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

*

ಆ್ಯಪ್‌ನಲ್ಲಿ ಸಂಗ್ರಹವಾಗುವ ಮಾಹಿತಿಯನ್ನು ಕಾಂಗ್ರೆಸ್‌ ಸಿಂಗಪುರಕ್ಕೆ ಕಳುಹಿಸುತ್ತಿರುವುದು ಯಾಕೆ?

-ಸ್ಮೃತಿ ಇರಾನಿ, ಕೇಂದ್ರ ಸಚಿವೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry